ಬೂದಿಕೋಟೆ ಹೋಬಳಿ ಪಿಂಚಣಿ ಅದಾಲತ್ಗೆ ಚಾಲನೆ
ಕ.ಪ್ರ.ವಾರ್ತೆ , ಬಂಗಾರಪೇಟೆ , ಆ.18
ಸಾರ್ವಜನಿಕರು ವಿನಾಕಾರಣ ತಮ್ಮ ಕೆಲಸ ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ನಿಯಂತ್ರಿಸುವ ಸಲುವಾಗಿ ಜಾರಿಗೆ ಬಂದಿರುವ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಿ ಉಪಯೋಗ ಪಡೆದುಕೊಳ್ಳಬೇಕೆಂದು ಕೋಲಾರ ಉಪವಿಭಾಗಾಧಿಕಾರಿ ಆಯಿಷಾ ಪರ್ವೀನ್ ಹೇಳಿದರು.
ತಾಲೂಕಿನ ಬೂದಿಕೋಟೆ ಹೋಬಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದ ವೃದ್ಧರು, ಅಂಗವಿಕಲರು ತಮ್ಮ ಪಿಂಚಣಿ ಆದೇಶ ಪತ್ರಗಳಿಗಾಗಿ ಅರ್ಜಿ ಹಿಡಿದು ಕಚೇರಿಗಳಲ್ಲಿ ಗಂಟೇಗಟ್ಟಲೆ ಕಾಯುವುದು ಹಾಗೂ ಇತರೇ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗದೆ ಜನರಿಗೆ ತೊಂದರೆ ಉಂಟಾಗುತ್ತಿದೆ ಎಂದು ವ್ಯಾಪಕವಾಗಿ ದೂರುಗಳು ಬರುತ್ತಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಂಚಣಿ ಅದಾಲತ್ ಜಾರಿಗೆ ತಂದಿದೆ. ಎಲ್ಲಾ ಅಧಿಕಾರಿಗಳು ನಾಡಕಚೇರಿಯಲ್ಲಿಯೇ ಸಾರ್ವಜನಿಕರ ಕೆಲಸ ಆಗುವಂತೆ ಈ ಕಾರ್ಯಕ್ರಮ ರೂಪಿಸಲಾಗಿದೆ.
ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕೆಂದು ಅವರು ಸೂಚಿಸಿದರು. ಸಾರ್ವಜನಿಕರ ಕೆಲಸಗಳು ತ್ವರಿತವಾಗಿ ಸಾಗಬೇಕು. ತಪ್ಪಿದರೆ ಕಠಿಣ ಕ್ರಮಕ್ಕೆ ಗುರಿಯಾಗಬೇಕಾದಿತು ಎಂದು ಹೇಳಿದರು.
ತಮ್ಮ ಬಳಿ ಬಂದ ಎಲ್ಲಾ ತಿದ್ದುಪಡಿ ಕಡತಗಳನ್ನು ಪರಿಶೀಲಿಸಿ ತಾಲೂಕು ಕಚೇರಿಗೆ ಕಳುಹಿಸಲಾಗಿದೆ. ಇಲ್ಲಿಯವರೆಗೂ 15 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ತಾಲೂಕಿನ ನೂರು ತಿದ್ದುಪಡಿ ಕಡತಗಳು ತಾಲೂಕು ಕಚೇರಿಯಲ್ಲೆ ಉಳಿದಿದೆ ಅದನ್ನು ತಮ್ಮ ಕಚೇರಿಗೆ ರವಾನಿಸುವಂತೆ ಸೂಚಿಸಲಾಗಿದೆ ಎಂದರು.
ಇಂದಿನ ಪಿಂಚಣಿ ಅದಾಲತ್ನಲ್ಲಿ ಒಟ್ಟು 120 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು ಸ್ಥಳದಲ್ಲೆ ಬಗೆಹರಿಸಲಾಯಿತು.
ಉಕ್ಕುಂದ ಗ್ರಾಮ ಸಮೀಪ ಬೆಟ್ಟದಲ್ಲಿ ಜೆಲ್ಲಿ ಕ್ರಷರ್ಗೆ ಅನುಮತಿ ಇಲ್ಲದೆ ಪ್ರಾರಂಭಿಸಲಾಗಿದೆ. ಇದರಿಂದ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗುತ್ತಿದೆ. ಕೂಡಲೆ ಅದನ್ನು ನಿಲ್ಲಿಸಬೇಕು. ತಪ್ಪಿದಲ್ಲಿ ಎಸಿ ಕಚೇರಿ ಮುಂದೆ ಧರಣಿ ಮಾಡುವುದಾಗಿ ಗ್ರಾಮದ ವರದಾಂಜನೇಯಗೌಡ, ವಿ.ಬ್ಯಾಟರಾಯಪ್ಪ, ಕುಚ್ಚಪ್ಪ ಮತ್ತಿತರರು ಎಸಿ ಅವರಿಗೆ ಮನವಿ ಮಾಡಿದರು.
ಪಿಂಚಣಿ ಅದಾಲತ್ ಕಾರ್ಯಕ್ರಮ ಬೆಳಗ್ಗೆ ಹತ್ತು ಗಂಟೆಗೆ ನಿಗದಿಯಾಗಿದ್ದರೂ ಉಪವಿಭಾಗಾಧಿಕಾರಿ ಆಯಿಷಾ ಪರ್ವೀನ್ ಮೂರು ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರಿಂದ ವೃದ್ಧರು, ಮಹಿಳೆಯರು, ಅಂಗವಿಕಲರು ಸೇರಿದಂತೆ ಗ್ರಾಮಸ್ಥರು ಬಿಸಿಲಲ್ಲಿ ಕಾದು ಕಾದು ಸುಸ್ತಾಗಿ ಅಧಿಕಾರಿಗಳ ವಿರುದ್ದ ಕಿಡಿಕಾರಿದರು. ಮಧ್ಯಾಹ್ನ 1 ಗಂಟೆಗೆ ಎಸಿ ಬಂದಾಗ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು. ತಾಲೂಕು ಆರ್.ಆರ್.ಶಿರಸ್ತೇದಾರ್ ದೇವರಾಜ್, ಉಪ ತಹಸೀಲ್ದಾರ್ ರಂಗನಾಥಸ್ವಾಮಿ, ರಾಜಸ್ವ ನಿರೀಕ್ಷಕ ಭಾಸ್ಕರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

