ನೆನೆಗುದಿಗೆ ಬಿದ್ದಿದೆ ಅರಸು ಭವನ ಕಾಮಗಾರಿ
ಕ.ಪ್ರ.ವಾರ್ತೆ , ಕೋಲಾರ , ಆ. 19
ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ್ ಅರಸು ಅವರ ನೆನಪು ಉಳಿಸಲು ನಗರದ ಕೋಲಾರಮ್ಮ ಕೆರೆಯಲ್ಲಿ ನಿರ್ಮಿಸಲಾಗುತ್ತಿರುವ ಅರಸು ಭವನದ ಕಾಮಗಾರಿ ಐದು ವರ್ಷಗಳಾದರೂ ಪೂರ್ಣಗೊಳಿಸದೆ ಸರ್ಕಾರ ನಿರ್ಲಕ್ಷ್ಯ ತೋರಿದೆ.
2008ರಲ್ಲಿ ಅರಸು ಭವನ ನಿರ್ಮಾಣಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅಡಿಗಲ್ಲು ಹಾಕಿದ್ದರು. ಆದರೆ ಕಾಮಗಾರಿ ಪ್ರಾರಂಭಿಸಿದ್ದು 2009-10ನೇ ಸಾಲನಲ್ಲಿ. ಸುಮಾರು 85 ಲಕ್ಷ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಾಯಿತು.
ಪ್ರಸ್ತುತ ಶೇ.60ರಷ್ಟು ಕಟ್ಟಡ ಕಾಮಗಾರಿ ಮುಗಿದಿದ್ದು ನಿರ್ಮಾಣ ವೆಚ್ಚ ದುಬಾರಿಯಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಕ್ಕೆ ಮತ್ತೆ 36 ಲಕ್ಷಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಿಟಕಿ, ಬಾಗಿಲುಗಳನ್ನೂ ಭವನದಲ್ಲಿ ಅಳವಡಿಸದ ಕಾರಣ ದನ-ಕರುಗಳಿಗೆ ಆಶ್ರಯ ತಾಣವಾಗಿರುವುದಲ್ಲದೆ, ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ.
ಅನುದಾನಕ್ಕಿಲ್ಲ ಕೊರತೆ: ಈ ಭವನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 10 ಲಕ್ಷ, ಬಂಗಾರಪೇಟೆಯ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಮಾಲೂರು ಎಸ್.ಎನ್.ಕೃಷ್ಣಯ್ಯಶೆಟ್ಟಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಆರ್.ಸುದರ್ಶನ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ತಲಾ 10 ಲಕ್ಷ ಅನುದಾನ ನೀಡಿದ್ದರು. ಕೋಲಾರ ಕ್ಷೇತ್ರದ ಹಾಲಿ ಶಾಸಕ ಆರ್. ವರ್ತೂರ್ ಪ್ರಕಾಶ್ ಸಹ ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೇ 10 ಲಕ್ಷವನ್ನು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಬಿಡುಗಡೆ ಮಾಡಿಸಿದ್ದಾರೆ. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕೋಲಾರ ಲೋಕಸಭಾ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀಡಿರುವ 10 ಲಕ್ಷ ಸೇರಿದಂತೆ ಒಟ್ಟು 60 ಲಕ್ಷ ಬಿಡುಗಡೆಯಾಗಿ ಈಗಾಗಲೇ ನಡೆದ ಕಾಮಗಾರಿಗಳಿಗೆ ವ್ಯಯಿಸಲಾಗಿದೆ.
ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಂಗಯ್ಯನವರು ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಪ್ರಸಕ್ತ ಶಾಸಕರು ಆಸಕ್ತಿ ತೋರಲಿ: ಜಿಲ್ಲೆಯಿಂದ ವಿಧಾನಸಭೆಗೆ ಪ್ರವೇಶಿಸಿರುವ ಮಾಲೂರಿನ ಶಾಸಕ ಕೋಡಿಹಳ್ಳಿ ಮಂಜುನಾಥಗೌಡ, ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಕೆಜಿಎಫ್ನ ವೈ.ರಾಮಕ್ಕ, ಬಂಗಾರಪೇಟೆಯ ಕೆ.ಎಂ.ನಾರಾಯಣಸ್ವಾಮಿ ಅರಸು ಭವನ ನಿರ್ಮಾಣಕ್ಕೆ ತಲಾ 10 ಲಕ್ಷ ನೀಡಿದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಯುವುದರಲ್ಲಿ ಅನುಮಾನವಿಲ್ಲ. ಸರ್ಕಾರದ ಹಣ ನಿರೀಕ್ಷಿಸುವುದರಿಂದ ಭವನ ನಿರ್ಮಾಣ ಮತ್ತಷ್ಟು ವಿಳಂಬವಾಗಿ ನಿರ್ಮಾಣ ವೆಚ್ಚ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಗಳು ಇರುವುದರಿಂದ ಜಿಲ್ಲಾ ಆಡಳಿತ ಕೂಡಲೇ ಶಾಸಕರಿಂದ ಅನುದಾನ ಪಡೆದು ಕಾಮಗಾರಿ ಮುಗಿಸಬೇಕೆಂಬುದು ಎಲ್ಲರ ಆಶಯವಾಗಿದ್ದು, ಮಂಗಳವಾರ ನಡೆಯುವ ಅರಸು ಜನ್ಮದಿನಾಚರಣೆಯ ಸಂದರ್ಭದಲ್ಲಿ ಜನತೆಯ ಆಸೆಯನ್ನು ಜನಪ್ರತಿನಿಧಿಗಳು ಈಡೇರಿಸುವರೇ ಎಂಬುದು ಕಾದು ನೋಡಬೇಕಾಗಿದೆ.
ಹಾಸ್ಟೆಲ್ಗಳಿಗಿಲ್ಲ ಕಟ್ಟಡ
ಜಿಲ್ಲೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ 48 ವಿದ್ಯಾರ್ಥಿ ನಿಲಯಗಳಿದ್ದು ಈ ಪೈಕಿ 28ಕ್ಕೆ ಮಾತ್ರ ಸ್ವಂತ ಕಟ್ಟಡಗಳಿದ್ದರೆ, ಉಳಿದವುಗಳು ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿವೆ.
ಇಲಾಖೆಯ ಪ್ರಭಾರಿ ಅಧಿಕಾರಿ ರಂಗಯ್ಯನವರು ಹಾಸ್ಟೆಲ್ ನಿರ್ಮಾಣಕ್ಕೆ ನಿವೇಷನ ಮಂಜೂರು ಮಾಡುವಂತೆ ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರ್ಗಳಿಗೆ ಮನವಿ ಮಾಡಿದ್ದಾರೆ. ಇನ್ನು ರಾಜ್ಯ ಸರ್ಕಾರ ಬಿಸಿಎಂ ಹಾಸ್ಟೆಲ್ನಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಿಬಿ ಯೋಜನೆ (ಡೈರೆಕ್ಟ್ ಬೆನಿಫಿಷಿಯರ್) ಯಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಸೂಚಿಸಿದ್ದು ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರತಿ ವಿದ್ಯಾರ್ಥಿಗೆ 1500 ಪ್ರೋತ್ಸಾಹ ಧನ ನೀಡಲಿದ್ದು ಇದರಿಂದ ಹಿಂದುಳಿದ ವರ್ಗಗಳ ಹಾಸ್ಟೆಲ್ನ ಶೈಕ್ಷಣಿಕ ಗುಣಮಟ್ಟ ಹೆಚ್ಚುವುದಲ್ಲದೆ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಸರ್ಕಾರದ ಹಣ ನೇರವಾಗಿ ಜಮಾ ಆಗುವುದರಿಂದ ಹಣ ದುರ್ಬಳಕೆ ಹಾಗೂ ಪಾವತಿ ವಿಳಂಬ ನಿವಾರಣೆ ಆಗುತ್ತದೆ. ಈ ಯೋಜನೆ ಸೆಪ್ಟೆಂಬರ್ನಲ್ಲಿ ಜಾರಿಗೆ ಬರುವುದರಿಂದ ಇಲಾಖೆಯು ಸಿದ್ಧತಾ ಕಾರ್ಯಗಳು ನಡೆಸುತ್ತಿದೆ.
-ಪಾ.ಶ್ರೀ.ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

