ಕೋಲಾರ

ಅರಸು ಜನ್ಮದಿನ ಬೇಕಾಬಿಟ್ಟಿ ಆಚರಣೆ; ಶಾಸಕರ ಆಕ್ರೋಶ

Published On :

ಬಂಗಾರಪೇಟೆ: ಹಿಂದುಳಿದ ವರ್ಗಗಳ ಹರಿಕಾರ ಎಂದೇ ಪ್ರಸಿದ್ಧರಾಗಿರುವ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಜನ್ಮ ದಿನಾಚರಣೆಯನ್ನು ಬೇಕಾಬಿಟ್ಟಿಯಾಗಿ ಆಚರಣೆ ಮಾಡಿದ್ದನ್ನು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ ಸಂಭಾಗದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಇಬ್ಬರ ಮಹಾನ್ ವ್ಯಕ್ತಿಗಳ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ಇದೇ ಮೊದಲು, ಕೊನೆ. ಮುಂದೆ ಇಂತಹ ತಪ್ಪುಗಳು ಮರುಕಳಿಸಿದಂತೆ ಎಚ್ಚರ ವಹಿಸಿ ಎಂದು ಸೂಕ್ಷ್ಮವಾಗಿ ಹೇಳಿದರು. ತಾಪಂ ಅಧ್ಯಕ್ಷ ರೇಣುಕಾ ಬಾಲಚಂದ್ರ, ಉಪಾಧ್ಯಕ್ಷ ಸಂಪಂಗಿರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಬ್ಲಾಕ್ ಅಧ್ಯಕ್ಷ ಮಂಜುನಾಥ್, ಕಸಾಪ ಅಧ್ಯಕ್ಷ ಅಶ್ವಥ್,ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ, ಇಒ ಜಗದೀಶ್, ಬಿಇಒ ಕೆ. ಜಯರಾಜ್, ಬಿಸಿಎಂ ಇಲಾಖೆ ಅಧಿಕಾರಿ ಗಣೇಶ್ ಮತ್ತಿತರರು ಇದ್ದರು.

ಬಿಸಿಯೂಟ ಖಾಸಗೀಕರಣ
ವಿರೋಧಿಸಿ ಎಸ್‌ಎಫ್‌ಐ ಪ್ರತಿಭಟನೆ
ಮುಳಬಾಗಲು: ಬಿಸಿಯೂಟವನ್ನು ಕಾರ್ಪೋರೆಟ್ ಸಂಸ್ಥೆಗಳಿಗೆ ವಹಿಸಲು ಸರ್ಕಾರ ಮಾಡಿರುವ ನಿರ್ಧಾರವನ್ನು ವಿರೋಧಿಸಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳ ಮುಂದೆ ಎಸ್‌ಎಫ್‌ಐ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬಿಸಿಯೂಟದಿಂದ ಮಕ್ಕಳ ಹಾಜರಾತಿ ಹೆಚ್ಚಿದೆ, ಎಸ್‌ಎಫ್‌ಐ ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಗಳ ಹೋರಾಟದ ಫಲವಾಗಿ ಮಕ್ಕಳಿಗೆ ಶಾಲೆಗಳಲ್ಲಿ ಮಧ್ಯಾಹ್ನದ ಊಟ ನೀಡುವ ಪದ್ಧತಿ ಜಾರಿಗೆ ಬಂದಿದೆ, ರಾಜ್ಯ ವ್ಯಾಪ್ತಿಯಲ್ಲಿ ಸುಮಾರು 61 ಲಕ್ಷ ಮಂದಿ ಮಕ್ಕಳು ಬಿಸಿಯೂಟದ ಉಪಯೋಗ ಪಡೆಯುತ್ತಿದ್ದು ಮಕ್ಕಳ ಹಾಜರಾತಿ ಹೆಚ್ಚಿದೆ.
ಯಾವುದೇ ಕಾರಣಕ್ಕೂ ಬಿಸಿಯೂಟವನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಒಪ್ಪಿಸಬಾರದು ಹಾಗೂ ಬಿಸಿಯೂಟ ಪ್ರಾಧಿಕಾರವನ್ನು ರಚಿಸಬೇಕು ಎಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ವಾಸುದೇವರೆಡ್ಡಿ, ಸುನೀಲ್ ಇತರರು ಭಾಗವಹಿಸಿದ್ದರು.

ಅಕ್ರಮ; ಎನ್‌ಜಿಒ ಕಾರ್ಯದರ್ಶಿಗೆ ಎಚ್ಚರಿಕೆ
ಶ್ರೀನಿವಾಸಪುರ: ತಾಲೂಕು ಪಂಚಾಯ್ತಿಯ 1ನೇ ಮತ್ತು 3ನೇ ಸುವರ್ಣ ಗ್ರಾಮ ಯೋಜನೆಯಲ್ಲಿ ಬಡ ನಿರುದ್ಯೋಗಿಗಳಿಗೆ ಕಂಪ್ಯೂಟರ್, ಫ್ಯಾಷನ್ ಡಿಸೈನಿಂಗ್ ತರಬೇತಿ ನೀಡುವಂತೆ ಕೋಲಾರದ ಎನ್‌ಜಿಒಗೆ ಆದೇಶ ನೀಡಿದರೆ ಎನ್‌ಜಿಒ ಸಂಸ್ಥೆಯವರು ತರಬೇತಿಯನ್ನು ಪಡೆದುಕೊಂಡಿರುವವರಿಗೆ ಸ್ಪೈಫಂಡ್ ನೀಡದೆ ವಂಚನೆ ಎಸಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಎನ್‌ಜಿಒ 1ನೇ ಮತ್ತು 3 ಹಂತದ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಎರಡು ಹಂತಗಳಲ್ಲಿ 180 ಮತ್ತು 240 ಮಂದಿ ಒಟ್ಟು 420 ಮಂದಿಗೆ ಸೇರಿ ಚೆಕ್ ನೀಡಿದ್ದಾರೆ. ಅದರಲ್ಲಿ 50-60 ಮಂದಿ ನಿರುದ್ಯೋಗಿಗಳಿಗೆ ಮಾತ್ರ ಸ್ಪೈಫಂಡ್ ನೀಡಿ ಉಳಿದ ಹಣವನ್ನು ತಿಂದು ತೇಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ಸತೀಶ್‌ಕುಮಾರ್ ನಿರುದ್ಯೋಗಗಳ ಮನವಿಯನ್ನು ಆಲಿಸಿದ ಬಳಿಕ ವಂಚನೆ ಎಸಗಿರುವ ಎನ್‌ಜಿಒ ಕಾರ್ಯದರ್ಶಿಗೆ ನೋಟಿಸ್ ನೀಡಿ ಕಾನೂನಿನ ರೀತಿಯಲ್ಲಿ ಕ್ರಮವನ್ನು ವಹಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಬೈಕೊತ್ತೂರು ಶಾಲೆಯಲ್ಲಿ ರಕ್ಷಾ ಬಂಧನ
ಶ್ರೀನಿವಾಸಪುರ: ದ್ವೇಷ, ಅಸೂಯೆ ಪಕ್ಕಕ್ಕಿಟ್ಟು ಪರಸ್ಪರ ಅಣ್ಣ-ತಮ್ಮಂದಿರಂತೆ ಬಾಳಿ ಬದುಕಬೇಕೆಂದು ಮುಖ್ಯಗುರು ಎಂ. ವೆಂಕಟರವಣಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಾಲೂಕಿನ ರಾಯಲ್ಪಾಡು ಹೋಬಳಿಯ ಬೈಕೊತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕ ಕೆ. ರಘುನಾಥರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ವಿ.ಆರ್. ಕಲಾವತಿ ಸ್ವಾಗತಿಸಿದರು. ಕೆ. ವಿಶ್ವನಾಥ ವಂದಿಸಿದರು. ಕುಮಾರಿ ಆರ್. ಸರೀಷಾ, ಲಾವಣ್ಯ ಪ್ರಾರ್ಥಿಸಿದರು.

ಶೀಘ್ರ ಲಿಪಿಗಾರರ ಹುದ್ದೆಗೆ ಅರ್ಜಿ
ಚಿಕ್ಕಬಳ್ಳಾಪುರ: ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ 9 ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಮುಖ್ಯ ಆಡಳಿತಾಧಿಕಾರಿಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ ಇವರಲ್ಲಿ ಪಡೆದು ಅಕ್ಟೋಬರ್ 5ರೊಳಗೆ ಸಲ್ಲಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಜೆ.ಚಂದ್ರಶೇಖರಯ್ಯ ತಿಳಿಸಿದ್ದಾರೆ. ಮಾಹಿತಿಗಾಗಿ ಮುಖ್ಯ ಆಡಳಿತಾಧಿಕಾರಿಗಳು, ಚಿಕ್ಕಬಳ್ಳಾಪುರ ಇಲ್ಲಿಗೆ ಸಂಪರ್ಕಿಸಬಹುದು.

ದೊಡ್ಡನಾಯಕನಹಳ್ಳಿ; ಕಾಲೇಜಿನಲ್ಲಿ ರಕ್ಷಾ ಬಂಧನ
ಟೇಕಲ್: ದೊಡ್ಡನಾಯಕನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಣ್ಣ-ತಂಗಿಯರ ಅನುಬಂಧವು ರಕ್ಷಾ ಬಂಧನದ ಪ್ರಯುಕ್ತ ಸಾಮೂಹಿಕವಾಗಿ ಮಕ್ಕಳಲ್ಲಿ ಸಂಬಂಧ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಶಿಕ್ಷಕ ಜಿ.ಟಿ. ರಾಮಚಂದ್ರಪ್ಪ ಮಾತನಾಡಿ, ಇಂದಿನ ಪೀಳಿಗೆಯವರಿಗೆ ಅಣ್ಣ-ತಂಗಿಯರ ಸಂಬಂಧ ತಮ್ಮ ಬಂಧು-ಬಳಗ ಎನ್ನುವ ಬಾಂಧವ್ಯ ಮರೆಮಾಚಿದಂತಾಗಿದೆ. ಈ ಮಕ್ಕಳಿಗೆ ಹಿರಿಯರು ಗುರುಗಳು ಮಕ್ಕಳಲ್ಲಿ ಇಂತಹ ಒಂದು ನೀತಿಗಳನ್ನು ಪ್ರತ್ಯಕ್ಷ್ಯವಾಗಿ ಮಾಡಿ ತೋರಿಸಿದರೆ ಶಾಲೆಗಳಲ್ಲಿ ಉತ್ತಮ ರೀತಿಯ ಶಿಕ್ಷಣವನ್ನು ಕೊಡಬಹುದು ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ವೆಂಕಟೇಶ್, ರಾಮಚಂದ್ರಪ್ಪ, ಅಮರಾವತಿ, ರಾಧಾ, ಚೈತ್ರ, ಲತಾ, ಸುಮಾಶ್ರೀ ಹಾಗೂ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಬಸ್‌ಗೆ ಬೈಕ್ ಡಿಕ್ಕಿ: ಒಬ್ಬ ಸಾವು
ಕೆಜಿಎಫ್: ದ್ವಿಚಕ್ರ ವಾಹನಕ್ಕೆ ರಾಜ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ರಾಬರ್ಟ್‌ಸನ್‌ಪೇಟೆ ಠಾಣೆ ವ್ಯಾಪ್ತಿಯ ನಿವಾಸಿಗಳಾದ ವಿಜಯಕುಮಾರ್ ಎಂಬವರ ಪುತ್ರ ಲಾವೇಶ್(19) ಮೃತಪಟ್ಟಿದ್ದು, ಪ್ರಸನ್ನಕುಮಾರ್ ಅವರ ಪುತ್ರ ತರುಣ್(19) ಗಂಭೀರವಾಗಿ ಗಾಯಗೊಂಡು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾವೇಶ್ ಮತ್ತು ತರುಣ್ ಇಬ್ಬರೂ ಕೆಜಿಎಫ್‌ನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಮಂಗಳವಾರ ರಾತ್ರಿ ಲಾವೇಶ್ ಮತ್ತು ತರುಣ್ ಬಂಗಾರಪೇಟೆಯಿಂದ ಕೆಜಿಎಫ್‌ಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಉರಿಗಾಂ ರೇಲ್ವೆ ರಸ್ತೆ ಸಮೀಪ ಕೆಜಿಎಫ್‌ನಿಂದ ಬಂಗಾರಪೇಟೆಗೆ ಹೋಗುತ್ತಿದ್ದ ಸರ್ಕಾರಿ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ಗಂಭೀರವಾಗಿ ಪೆಟ್ಟುಬಿದ್ದಿದೆ. ತಕ್ಷಣ ಇಬ್ಬರನ್ನೂ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಮತ್ತು ಕೋಲಾರದ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದಾರೆ. ಅದರಂತೆ ಲಾವೇಶ್ ಅವರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗುತ್ತಿದ್ದಾಗ ಕೆ.ಆರ್.ಪುರಂ ಮಾರ್ಗದಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಾಲಕನನ್ನು ಬಂಧಿಸಿರುವ ಉರಿಗಾಂ ಠಾಣೆ ಪಿಎಸ್‌ಐ ಮಾರ್ಕೊಂಡಪ್ಪ ಬಸ್‌ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸತ್ಸಂಗದಿಂದ ಸತ್ಯದ ಅರಿವು: ಆನಂದ್
ಚಿಂತಾಮಣಿ: ಹಚ್ಚ ಹಸಿರು ವೃಕ್ಷವು ಒಮ್ಮೆ ಒಣಗಿ ಕಟ್ಟಿಗೆಯಾಗುವಂತೆ ಶರೀರವೂ ನಶ್ವರ ಎಂಬ ಸತ್ಯದ ಅರಿವನ್ನು ಸತ್ಸಂಗವು ಮೂಡಿಸುತ್ತಿದೆ. ಸತ್ಸಂಗದಿಂದ ಸತ್ಯದ ಅರಿವಾಗುತ್ತದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು. ಕೈವಾರ ಯೋಗಿ ನಾರೇಯಣ ಮಠದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸತ್ಸಂಗದ ಮಹತ್ವ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ನಮ್ಮಲ್ಲಿರುವ ಅಹಂಕಾರವನ್ನು ಹೊಡೆಯಲು ಉತ್ತಮ ಬಾಣ ಎಂದರೆ ಭಗವಂತನ ಸ್ಮರಣೆ ಈ ಬಾಣವು ಒಂದು ಕಡೆಯಿಂದ ಭಾವನೆಯಿಂದ ಸದಾ ವಿನಮ್ರನಾಗಿ ಸಾಕಷ್ಟು ಪರೋಪಕಾರ ಮಾಡುತ್ತಾ, ಎಲ್ಲರಲ್ಲೂ ವಿನಯದಿಂದ ವರ್ತಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕು. ಇಲ್ಲವಾದಲ್ಲಿ ತನ್ನನ್ನು ತಾನೇ ಸಂಕಷ್ಟಕ್ಕೆ ಗುರಿ ಮಾಡಿಕೊಳ್ಳುತ್ತಾನೆ ಎಂಬ ಸತ್ಯಗಳನ್ನು ಸತ್ಸಂಗ ತಿಳಿಸುತ್ತದೆ ಎಂದರು. ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಅಷ್ಟಾವಧಾನ ಸೇವೆಯನ್ನು ನೆರವೇರಿಸಿ, ರಥೋತ್ಸವ ನಡೆಸಲಾಯಿತು. ರಥೋತ್ಸವದಲ್ಲಿ ಅಸಂಖ್ಯ ಭಕ್ತಾದಿಗಳು ಭಾಗವಹಿಸಿದ್ದರು. ತಾತಯ್ಯನವರ ಮೂಲ ಬೃಂದಾವನವನ್ನು ವಿಶೇಷ ಹೂಗಳಿಂದ ಸಿಂಗರಿಸಲಾಗಿತ್ತು. ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ವೇದಿಕೆಯಲ್ಲಿ ಅಖಂಡ ಸಂಕೀರ್ತನೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.