ಕೋಲಾರ

ಚಿನ್ನದ ಅದಿರು ನಾಪತ್ತೆ ಪ್ರಕರಣ ಸಿಬಿಐಗೆ ವಹಿಸಿ

Published On :

ಕೆಜಿಎಫ್: ಕೋಟ್ಯಂತರ ರುಪಾಯಿ ಬೆಲೆ ಬಾಳುವ ಬಿಜಿಎಂಎಲ್ ಚಿನ್ನದ ಗಣಿ ಅದಿರನ್ನು ಕಳ್ಳರು ಲೂಟಿ ಮಾಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಅನ್ಬರಸನ್ ನೇತೃತ್ವದಲ್ಲಿ ಬಿಜಿಎಂಎಲ್ ಆಡಳಿತ ಮಂಡಳಿ ಸ್ವರ್ಣಭವನ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು.
ಇತ್ತೀಚೆಗಷ್ಟೇ ಬಿಜಿಎಂಎಲ್ ಚಿನ್ನದ ಗಣಿಯ ಮೈಸೂರ್ ಮಿಲ್‌ನಲ್ಲಿ ಚಿನ್ನ ಮಿಶ್ರಿತ ಮಣ್ಣನ್ನು ಕಳವು ಮಾಡಲು ಯತ್ನಿಸಿದ ಮೂವರು ಬಿಜಿಎಂಎಲ್ ಭದ್ರತಾ ಸಿಬ್ಬಂದಿ ಸೇರಿದಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಯಿತು.
ಬಿಜಿಎಂಎಲ್ ಚಿನ್ನದ ಗಣಿ ಮುಚ್ಚಿ 13 ವರ್ಷಗಳು ಕಳೆದಿದೆ. 2001 ರಿಂದ 2012ರ ವರೆಗೆ ಚಿನ್ನದ ಗಣಿಯಲ್ಲಿ ನಾಲ್ಕೈದು ಗುಂಪುಗಳು ಬಿಜಿಎಂಎಲ್‌ನ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಆಸ್ತಿಯನ್ನು ನಿರಂತರವಾಗಿ ಲೂಟಿ ಮಾಡುತ್ತಿದೆ. ಆದರೆ ಬಿಜಿಎಂಎಲ್ ಆಡಳಿತ ಮಂಡಳಿ ವ್ಯವಸ್ಥಾಪಕರು, ಭದ್ರತಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಬದಲು ಕಳ್ಳರೊಂದಿಗೆ ಶಾಮೀಲಾದರು ಎಂದು ಅವರು ಆರೋಪಿಸಿದರು.
ಅಲ್ಲದೆ, ಹಣದಾಸೆಗೆ ಬಿಜಿಎಂಎಲ್ ಗಣಿ ಮುಚ್ಚಿದಾಗ ಇದ್ದ ಕೋಟ್ಯಂತರ ಬೆಲೆ ಬಾಳುವ ಉಪಕರಣಗಳು, ಸಲಕರಣೆಗಳು, ಭಾರಿ ಗಾತ್ರದ ಕಬ್ಬಿಣದ ಪೈಪುಗಳು, ಚಿನ್ನ ಮಿಶ್ರಿತ ಮಣ್ಣಿನ ಅದಿರು ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳರು ಲೂಟಿ ಮಾಡಿದರು ಎಂದು ದೂರಿದರು.
ಬಾಕಿ ಹಣ ನೀಡಿ: ಬಿಜಿಎಂಎಲ್ ಕಾರ್ಮಿಕರಿಗೆ ಕೇಂದ್ರ ನಿಡಬೇಕಾದ ಶೇ.100 ವಿಆರ್‌ಎಸ್ ಬಾಕಿ ಹಣ 52 ಕೋಟಿ ಹಾಗೂ ಸರ್ವಿಸ್ ಗ್ರಾಚ್ಯುಟಿ ಬಡ್ಡಿ ಹಣ 18 ಕೋಟಿ ಹಣವನ್ನು ಗ್ಲೋಬಲ್ ಟೆಂಡರ್ ಮೂಲಕ ನೀಡುವುದಾಗಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಬಿಜಿಎಂಎಲ್‌ನ ಅಪಾರ ಆಸ್ತಿಯನ್ನು ಲೂಟಿ ಮಾಡುತ್ತಿರುವ ಕಳ್ಳರ ಗುಂಪುಗಳ ಹಿಂದೆ ಯಾವ ಯಾವ ನಾಯಕರು ಹಾಗೂ ಮುಖಂಡರ ಕೈವಾಡವಿದೆ ಮತ್ತು ಯಾರ್ಯಾರು ಹಣ್ಣ ಕೊಳ್ಳೆ ಹೊಡೆದಿದ್ದಾರೆ ಎಂದು ತಿಳಿದುಕೊಳ್ಳಲು, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಈ ಕುರಿತ ಮನವಿ ಪತ್ರವನ್ನು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿಕಟೋಚ್ ಸೆಪಟ್ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಪಟಾಕಿ ಸುರೇಶ್, ಮುಖಂಡರಾದ ಶ್ರೀಧರ್, ಯಮುನಾಗಾಂಧಿ, ಅಪ್ಪು ಜಯಕುಮಾರ್, ಓಂಪ್ರಕಾಶ್, ಕುಮರೇಶನ್, ಕೊಟ್ರಮಣಿ, ಸುಧಾಕರ್, ಸೇರಿದಂತೆ ಇತರೆ ಮುಖಂಡರು, ಕಾರ್ಯಕರ್ತರು, ಬಿಜಿಎಂಎಲ್ ಕಾರ್ಮಿಕರು ಹಾಗೂ ನೂರಾರು ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.