24 ಗಂಟೆಯಲ್ಲಿ ಕೊಲೆಗಾರನ ಬಂಧಿಸಿ
ಕ.ಪ್ರ.ವಾರ್ತೆ ಕೋಲಾರ ಆ. 22
ಹೆಚ್ಚಿನ ವರದಕ್ಷಿಣೆಗಾಗಿ ಮತ್ತು ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಪತ್ನಿ ಸಿ.ಬಿ.ವೀಣಾ(23) ಹಾಗೂ ಪುಟ್ಟ ಮಗಳು ದೀಪ್ತಿ(2)ಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿ ಎಸ್.ಕೆ.ಸಂತೋಷ್ಕುಮಾರ್ ಅವರನ್ನು 24 ಗಂಟೆಯೊಳಗೆ ಬಂಧಿಸಬೇಕೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜು.10 ರಂದು ಕೋಲಾರ ನಗರದ ಕೀಲುಕೋಟೆಯಲ್ಲಿ ವೀಣಾ ಮತ್ತು ದೀಪ್ತಿಯ ಕೊಲೆ ನಡೆದಿದೆ. ಆರೋಪಿ ವಿರುದ್ಧ ಮೃತರ ಕಡೆಯವರು ಪೊಲೀಸರಿಗೆ ದೂರು ನೀಡಿ 42 ದಿನಗಳು ಕಳೆದರೂ ಪೊಲೀಸರು ಆರೋಪಿಯ ಬಂಧನ ಮಾಡಿಲ್ಲ, ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು.
ಆರೋಪಿಯು ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿದ್ದಾರೆ. ಕಳೆದ 42 ದಿನಗಳಿಂದ ಕೆಲಸಕ್ಕೆ ಹೋಗದೆ ತಪ್ಪಿಸಿಕೊಂಡು ತಿರುಗುತ್ತಿರುವುದರಿಂದ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಪ್ರಸ್ತಾವ ಕಳುಹಿಸಬೇಕಾಗಿತ್ತು. ಆದರೆ, ಒತ್ತಡಗಳಿಗೆ ಮಣಿದು ಈ ಕೆಲಸ ಸಹ ಮಾಡಿಲ್ಲವೆಂದು ದೂರಿದರು.
24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲೇಬೇಕು, ಇಲ್ಲದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.
ಸಂದೇಹಾಸ್ಪದ: ಕಳೆದ ಎರಡು ದಿನಗಳಿಂದ ವೀಣಾ ಮತ್ತು ದೀಪ್ತಿಯ ಕೊಲೆ ಆರೋಪಿಯ ಬಂಧನಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವಿ.ಗೀತಾ ಮಾತನಾಡಿ, ಪೊಲೀಸರಿಗೆ ಆರೋಪಿ ಎಲ್ಲಿದ್ದಾನೆಂಬುದು ಗೊತ್ತಿತ್ತು. ತಕ್ಷಣ ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ. 10 ದಿನಗಳ ಕೋಲಾರ ತಾಲೂಕಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಅಡಗಿದ್ದ ಆರೋಪಿಯು ಕೋಲಾರದಿಂದ ಹೊರಗಡೆ ಹೋಗುವತನಕ ಪೊಲೀಸರು ಮೌನವಾಗಿದ್ದದ್ದು ಏಕೆ ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಪ್ರತಿಭಟನೆಯನ್ನು ನಿಲ್ಲಿಸುವ ಉದ್ದೇಶದಿಂದ ಪೊಲೀಸರು ಸಂಘಟನೆಯ ಮುಖಂಡರೊಂದಿಗೆ ಮಾತನಾಡಿ, ಒಂದು ವಾರ ಕಾಲಾವಕಾಶ ಕೇಳುತ್ತಿದ್ದಾರೆ. ಇದಕ್ಕೆ ನಾವು ಒಪ್ಪುವುದಿಲ್ಲ, ಬುಧವಾರ ರಾತ್ರಿ ಜಿಲ್ಲಾಧಿಕಾರಿಗಳು ಮತ್ತು ಡಿವೈಎಸ್ಪಿ ಪ್ರತಿಭಟನಾಕರರ ಬಳಿಗೆ ಬಂದು ಆರೋಪಿಯ ಬಂಧನಕ್ಕೆ ತಂಡ ರಚಿಸಿರುವುದಾಗಿ ಹೇಳಿದ್ದಾರೆ. ಆದರೆ ಅಧಿಕಾರಿಗಳ ಮಾತಿನಲ್ಲಿ ನಮಗೆ ನಂಬಿಕೆ ಇಲ್ಲದಂತಾಗಿದೆ, ಪೊಲೀಸರಿಗೆ ಆರೋಪಿಯ ಬಂಧನಕ್ಕೆ ಮುಕ್ತ ಅವಕಾಶ ಕಲ್ಪಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕೆಂದರು.
ಆರೋಪಿಯ ತಂದೆ, ತಾಯಿ ಇನ್ನಿತರರಿಗೆ ಈಗಾಗಲೇ ಜಾಮೀನು ಸಿಕ್ಕಿದೆ, ಆರೋಪಿ ಸಂತೋಷ್ಕುಮಾರ್ನನ್ನು ಕೂಡಲೇ ಬಂಧಿಸದಿದ್ದರೆ ಜಾಮೀನು ಪಡೆಯುವ ಸಾಧ್ಯತೆಗಳು ಇರುವುದಲ್ಲದೆ, ಕೊಲೆ ಪ್ರಕರಣ ಮುಚ್ಚಿ ಹೋಗುತ್ತದೆ ಎಂದು ವಿ.ಗೀತಾ ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೃತ ವೀಣಾ ತಂದೆ ಬೀರಪ್ಪ, ಆರೋಪಿಯ ಬಂಧನವಾಗಲೇಬೇಕು, ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲುವುದಿಲ್ಲವೆಂದರು. ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಈಶ್ವರಮ್ಮ, ಮೃತ ವೀಣಾ ತಾಯಿ ಸುನಂದಮ್ಮ, ಮುಖಂಡರಾದ ಸುಶೀಲ, ಆಂಜಿನಮ್ಮ ಪತ್ರಿಕಾಗೋಷ್ಠಿಯಲ್ಲಿದ್ದರು.
ಮೂರನೇ ದಿನಕ್ಕೆ ಪ್ರತಿಭಟನೆ: ಶ್ರೀನಿವಾಸಪುರ ತಾಲೂಕಿನ ಯಲದೂರು ಹೋಬಳಿಯ ನೀಲಟೂರು ಗ್ರಾಮದ ಬೀರಪ್ಪ ಎಂಬುವರ ಪುತ್ರಿ ವೀಣಾ ಹಾಗೂ ಮೊಮ್ಮಗಳು ದೀಪ್ತಿಯ ಕೊಲೆ ಮಾಡಿರುವ ಸಂತೋಷ್ಕುಮಾರ್ನನ್ನು ಬಂಧಿಸಲು ಒತ್ತಾಯಿಸಿ ಬುಧವಾರದಿಂದ ಪ್ರತಿಭಟನೆ ನಡೆಸುತ್ತಿರುವ ಜನವಾದಿ ಮಹಿಳಾ ಸಂಘಟನೆಗೆ ಗುರುವಾರ ಮತ್ತಷ್ಟು ಸಂಘಟನೆಗಳು ಬೆಂಬಲ ನೀಡಿದವು.
ಸಿಪಿಎಂ ಮುಖಂಡ ಹಾಗೂ ನಗರಸಭೆ ಸದಸ್ಯರಾದ ಗಾಂಧಿನಗರ ನಾರಾಯಣಸ್ವಾಮಿ, ಜೆಡಿಎಸ್ ಮುಖಂಡ ಮುಬಾರಕ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿ ಆರೋಪಿಯ ಬಂಧನಕ್ಕೆ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

