6 ವರ್ಷವಾದರೂ ಅಭಿವೃದ್ಧಿ ಕಾಣದ ಚಿಕ್ಕಬಳ್ಳಾಪುರ ಜಿಲ್ಲೆ
ಕ.ಪ್ರ.ವಾರ್ತೆ ಕೋಲಾರ ಆ.22
ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಸ್ವತಂತ್ರ ಜಿಲ್ಲೆಯಾಗಿ ಆರು ವರ್ಷವಾಗುತ್ತಿದೆ. ಈ ನಡುವೆ ಜಿಲ್ಲೆಯ ಪ್ರಗತಿಯ ಬಗ್ಗೆ ಗಮನ ಹರಿಸಿದರೆ ಭ್ರಮನಿರಸನವಾಗುತ್ತದೆ. ಏಕೆಂದರೆ ಗುರುತಿಸಬಲ್ಲ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ.
2007ರ ಆ.23ರಂದು ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಯಿತು. ಆದರೆ ಇಂದಿಗೂ ಇದನ್ನೊಂದು ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿಸುವ ಯತ್ನವೇ ಆಗಿಲ್ಲ. ಹಿಂದಿನ ಸರ್ಕಾರಗಳು ಮಾಡಿದ ಪ್ರಗತಿಯೆಲ್ಲಾ, ಜಾರಿಗೆ ತಂದ ಯೋಜನೆಗಳೆಲ್ಲಾ ಕಡತದಲ್ಲಿ ಮಾತ್ರ ರಾರಾಜಿಸುತ್ತಿವೆ.
ಬೆಂಗಳೂರು ಮಹಾನಗರಕ್ಕೆ ಹತ್ತಿರ, ಆಂಧ್ರಪ್ರದೇಶ ಗಡಿಭಾಗ, ಅಭಿವೃದ್ಧಿಗೆ ಸರ್ವರೀತಿಯ ಮೂಲಸೌಕರ್ಯ ಕಲ್ಪಿಸಲು ಅವಕಾಶವಿರುವ ಪ್ರದೇಶ ಇಷ್ಟೊಂದು ಹಿಂದುಳಿದಿರುವಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ ಎನ್ನುವುದು ಸ್ಪಷ್ಟ.
ಆದರೆ ಜಿಲ್ಲೆಯ ಅಭಿವೃದ್ಧಿ ಹಿನ್ನಡೆಗೆ ಇಚ್ಛಾಶಕ್ತಿ ಕೊರತೆ ಮಾತ್ರ ಕಾರಣವಲ್ಲ. ಬರ ಹಾಗೂ ನೀರಿನ ಸಮಸ್ಯೆಯೂ ತೊಡಕಾಗಿದೆ. ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸಬೇಕಿದ್ದವರ ನಿರ್ಲಕ್ಷ್ಯದ ಜತೆಗೆ ಪ್ರಾಕೃತಿಕ ಮುನಿಸು ಕೂಡ ಕ್ಷೇತ್ರವನ್ನು ಎಡಬಿಡದೇ ಕಾಡುತ್ತಿದೆ. ರಾಜ್ಯಾದ್ಯಂತ ಸಾಕಷ್ಟು ಮಳೆ ಆದರೂ ಚಿಕ್ಕಬಳ್ಳಾಪುರ ಮಾತ್ರ ವರುಣನ ಅವಕೃಪೆಗೆ ಗುರಿಯಾಗಿದೆ. ಇದರಿಂದ ಇಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ನೀರಾವರಿಗೆ ಅಂತರ್ಜಲ ವೃದ್ಧಿಸಿಕೊಡುವ ಕಾರ್ಯ ಬಹುಬೇಗ ಆಗಬೇಕಿದೆ. ಇದಕ್ಕೆ ಬೇರೆಡೆಯಿಂದ ನೀರು
ತರುವ ಕಾರ್ಯ ವ್ಯವಸ್ಥಿತವಾಗಿ ಆಗಬೇಕಿದೆ. ಈ ಸಮಸ್ಯೆ ನಡುವೆಯೂ ಜಿಲ್ಲೆಯನ್ನು ಬೆಳೆಸುವ ಅವಕಾಶ ಇದೆ. ನೀರು ಕಡಿಮೆ ಬಳಸಿ ನಡೆಯುವ ಕೈಗಾರಿಕೆಗಳನ್ನು ಇಲ್ಲಿ ಪರಿಚಯಿಸುವ ಕಾರ್ಯ ಆಗಬೇಕು. ಆಗ ಕೈಗಾರಿಕಾ ಪ್ರಗತಿ ಉಂಟಾಗಿ ಸ್ಥಳೀಯ ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗಾವಕಾಶ ಲಭಿಸುತ್ತದೆ. ಈ ಮೂಲಕ ಜೀವನ ಗುಣಮಟ್ಟ ವೃದ್ಧಿಸುತ್ತದೆ. ತನ್ಮೂಲಕ ಇಡೀ ಪ್ರದೇಶ ಅಭಿವೃದ್ಧಿಯ ಪ್ರತೀಕವಾಗಿ ಬೆಳೆಯುವಲ್ಲಿ ಸಂಶಯವಿಲ್ಲ.
ಶಾಸಕನಾಗಿ ಆಯ್ಕೆಯಾದಂದಿನಿಂದ ಇಲ್ಲಿನ ಅಭಿವೃದ್ಧಿಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಜಿಲ್ಲೆಯ ಅಭಿವೃದ್ಧಿ ಕುರಿತ ಸಮಗ್ರ ಚರ್ಚೆ ನಡೆಯಬೇಕಿದೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೂ ಅಭಿವೃದ್ಧಿ ದೊಡ್ಡ ಸವಾಲಾಗಿದ್ದು, ಛಲದಿಂದ ಅಭಿವೃದ್ಧಿ ಪಥದಲ್ಲಿ ಸಾಗಿದರೆ ಜನರ ನೆಮ್ಮದಿಯ ಬದುಕು ರೂಪಿಸಲು ಅವಕಾಶ ಆಗುತ್ತದೆ. ಪ್ರಗತಿ ಸಾಧಿಸುವುದು ಇಲ್ಲಿ ಕಷ್ಟವಲ್ಲ.
ಆದರೆ ಅದಕ್ಕೆ ಪೂರಕ ಅವಕಾಶ ಕಲ್ಪಿಸಿಕೊಳ್ಳುವುದು ಬಹುಮುಖ್ಯ. ಆ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಸಾಕಾರಗೊಂಡರೆ ಕ್ಷೇತ್ರ ಮಾದರಿಯಗುವಲ್ಲಿ ಸಂಶಯವಿಲ್ಲ ಅನ್ನುವುದು ನನ್ನ ಭಾವನೆ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ ತಾಲೂಕುಗಳನ್ನು ಒಳಗೊಂಡಿರುವ ಜಿಲ್ಲೆಯ ಯಾವ ಭಾಗವೂ ಅಭಿವೃದ್ಧಿಯನ್ನು ಕಂಡಿಲ್ಲ. ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಹೈನುಗಾರಿಕೆಯನ್ನು ಪ್ರಮುಖವಾಗಿ ಆಧರಿಸಿರುವ ಇಲ್ಲಿನ ರೈತರು ಸಾಕಷ್ಟು ಮೂಲಭೂತ ಹಾಗೂ ಉತ್ತೇಜನ ವ್ಯವಸ್ಥೆ ಕೊರತೆ ಎದುರಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ನಿಸರ್ಗದತ್ತ ಹಲವು ತಾಣಗಳನ್ನು ಹೊಂದಿದೆ. ಇಲ್ಲಿ ಭೇಟಿ ನೀಡಲು ಸಾಕಷ್ಟು ಪ್ರವಾಸಿತಾಣಗಳಿವೆ. ನಂದಿ ಬೆಟ್ಟ, ನಂದಿಗ್ರಾಮ, ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ಜನಿಸಿದ ಗ್ರಾಮವಾದ ಮುದ್ದೇನಹಳ್ಳಿ, ಪಾಪಾಗ್ನಿ, ರಂಗಸ್ಥಳ, ಶ್ರೀನಿವಾಸಸಾಗರ ಸೇರಿದಂತೆ ಹಲವು ಪ್ರಮುಖ ತಾಣಗಳು ಚಿಕ್ಕಬಳ್ಳಾಪುರದಲ್ಲಿದ್ದರೆ, ಗೌರಿಬಿದನೂರಿನಲ್ಲಿ ಶ್ರೀ ಕ್ಷೇತ್ರ ಮಿಣಕನಗುಕರ್, ವಿಧುರಾಶ್ವತ್ಥ, ಚಿಂತಾಮಣಿಯ ಕೈಲಾಸಗಿರಿ, ಕೈವಾರ ಕ್ಷೇತ್ರ, ಶಿಡ್ಲಘಟ್ಟದ ತಲಕಾಯಲಬೆಟ್ಟ, ಬಾಗೇಪಲ್ಲಿಯ ಚಿತ್ರಾವತಿ ಅಣೆಕಟ್ಟು ಹಾಗೂ ಗಡಿದಂ ಎಲ್ಲವೂ ಒಂದಕ್ಕಿಂತ ಒಂದು ಅತ್ಯುತ್ತಮ ತಾಣಗಳು. ಇದನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶ ಇದೆ. ನಂದಿಬೆಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ನಂದಿ ಸರ್ಕ್ಯೂಟ್ ಹೆಸರಿನಲ್ಲಿ ಒಂದು ಪ್ರತ್ಯೇಕ ಜಾಲ ರಚಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕಾರ್ಯ ಸರ್ಕಾರದಿಂದ ಆಗುತ್ತಿದೆ. ನಂದಿಬೆಟ್ಟದ ಸುತ್ತಲಿನ ಪ್ರವಾಸಿತಾಣಗಳನ್ನು ಒಂದುಗೂಡಿಸಿ ಅವನ್ನು ಬೆಳೆಸುವ ನಿಟ್ಟಿನಲ್ಲಿ ಯೋಜನೆ ರೂಪುಗೊಳ್ಳುತ್ತಿದೆ. ದುರಂತವೆಂದರೆ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ನಗರ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿಲ್ಲ. ಪ್ರತ್ಯೇಕ ಜಿಲ್ಲಾಡಳಿತ ಭವನ ಇದಕ್ಕಿರಲಿಲ್ಲ. ಈಗ ಅದನ್ನು ನಿರ್ಮಿಸುವ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆಗಳನ್ನು ನಿರೀಕ್ಷಿಸಬಹುದು. ಕಿಷ್ಕಿಂದೆಯಂತ ಸ್ಥಳದಲ್ಲಿ ಈಗಲೂ ಕಾರ್ಯಚಟುವಟಿಕೆ ನಡೆಸಿಕೊಂಡು ಸಾಗಿರುವ ಜಿಲ್ಲಾಧಿಕಾರಿ ಕಚೇರಿ ಸಾಕಷ್ಟು ಒತ್ತಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ಪ್ರತ್ಯೇಕ ಕಟ್ಟಡ ಇಲ್ಲ. ವೈದ್ಯಕೀಯ ಕಾಲೇಜಿನ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಬಹುತೇಕ ಸರಕಾರಿ ಕಚೇರಿಗಳು ಚಿಕ್ಕ ಪುಟ್ಟ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಸೌಲಭ್ಯದ ಅರ್ಥವೇ ತಿಳಿದಿಲ್ಲವೇನೋ ಅನ್ನುವಂತಿದೆ. ಇದು ಕ್ಷೇತ್ರದ ಚಿತ್ರಣ. ಜಿಲ್ಲೆಯಾಗಿ ಪ್ರತ್ಯೇಕಿಸಿದ ನಂತರ ದೂರದೃಷ್ಟಿ ಹಾಗೂ ಸರಿಯಾದ ಯೋಜನೆ ರೂಪಿಸಿ ಬೆಳೆಸುವ ಕಾರ್ಯ ಆಗಿಲ್ಲ. ಅಲ್ಲದೇ ಪ್ರದೇಶವನ್ನು ವ್ಯವಸ್ಥಿತವಾಗಿ ಒಗ್ಗೂಡಿಸುವ ಯೋಜನೆ ರೂಪುಗೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

