ಚಿನ್ನದ ಅದಿರು ಕಳವು ಮತ್ತೊಬ್ಬ ಆರೋಪಿ ಬಂಧನ
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿ ಮೈಸೂರು ಮಿಲ್ನಲ್ಲಿ ಚಿನ್ನದ ಅದಿರು ಕಳವು ಮಾಡಲು ಸಹಕರಿಸಿದ ಮತ್ತೊಬ್ಬ ಬಿಜಿಎಂಎಲ್ ಭದ್ರತಾ ಸಿಬ್ಬಂದಿ ಎಂ.ಮೇಶಕ್ನನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಮಧ್ಯ ರಾತ್ರಿ ಮೈಸೂರು ಮಿಲ್ನೊಳಗೆ ಕಳವು ಮಾಡಲು ಯತ್ನಿಸಿದ ಮೂವರು ಬಿಜಿಎಂಎಲ್ ಭದ್ರತಾ ಸಿಬ್ಬಂದಿಯೊಂದಿಗೆ 14 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ಮತ್ತೊಬ್ಬ ಭದ್ರತಾ ಸಿಬ್ಬಂದಿ ಕಳ್ಳರೊಂದಿಗೆ ಶಾಮೀಲಾಗಿ ಅವರ ಬಳಿ ಹಣ ಪಡೆದು ಕಳುವಿಗೆ ಸಹಕರಿಸಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಮಾರಿಕುಪ್ಪಂ ಠಾಣಾ ಪಿಎಸ್ಐ ಅವರು ಮೇಶಕ್ನನ್ನು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಕಳ್ಳರಿಂದ ಪಡೆದ 5 ಸಾವಿರ ಹಣ ಮತ್ತು ಮೊಬೈಲ್ನ್ನು ಅಮಾನತು ಪಡಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೈಕ್ ಕಳ್ಳತನ
ಕೆಜಿಎಫ್: ಬೆಮೆಲ್ ಕಾರ್ಖಾನೆ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾದ ಘಟನೆ ನಡೆದಿದೆ. ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ವಿ. ನಗರದ ನಿವಾಸಿ ಶೇಷಗಿರಿ ಎಂಬುವರು ಬೆಮೆಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ 6.30ರ ಸಮಯದಲ್ಲಿ ಬೆಮೆಲ್ನ ಟೆಕ್ನಿಕಲ್ ಗೇಟ್ ಮುಂಭಾಗ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹೋಗಿದ್ದರು. 11.30ಕ್ಕೆ ಕೆಲಸ ಮುಗಿಸಿಕೊಂಡು ಬಂದು ನೋಡಿದಾಗ ದ್ವಿಚಕ್ರ ನಾಪತ್ತೆಯಾಗಿತ್ತು. ಬೆಮೆಲ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ; ಗೃಹಿಣಿ ನೇಣಿಗೆ
ಗೌರಿಬಿದನೂರು: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಗೌರಿಬಿದನೂರು ತಾಲೂಕು ಮಂಚೇನಹಳ್ಳಿಯಲ್ಲಿ ಸಂಭವಿಸಿದೆ. ಜಯಂತಿ (26) ಮೃತ ದುರ್ದೈವಿಯಾಗಿದ್ದು ಕೌಟುಂಬಿಕ ಕಲಹದಿಂದ ಬೇಸತ್ತು ಮನೆಯ ರೂಮಿನ ಫ್ಯಾನಿಗೆ ಸೀರೆಯಿಂದ ಬಿಗಿದು ನೇಣಿಗೆ ಶರಣಾಗಿದ್ದಾರೆ. ಮೃತ ಜಯಂತಿಯ ಸೋದರ ಗಣೇಶ ನೀಡಿದ ದೂರಿನನ್ವಯ ಮಂಚೇನಹಳ್ಳಿ ಪಿಎಸ್ಐ ಸುಧಾಕರರೆಡ್ಡಿ ವರದಕ್ಷಿಣೆ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪತಿ ಮಹೇಂದ್ರಬಾಬುವನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಪತಿಯಿಂದ ಕೊಲೆ ಬೆದರಿಕೆ: ಪತ್ನಿ ದೂರು
ಕೆಜಿಎಫ್: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಬೇತಮಂಗಲ ಗ್ರಾಮದಲ್ಲಿ ನಡೆದಿದೆ. ಬೇತಮಂಗಲ ಪೊಲೀಸ್ ಠಾಣೆಯ ನ್ಯೂ ಟೌನ್ ಬಡಾವಣೆಯ ನಿವಾಸಿ ರವಿ ಎಂಬುವರೊಂದಿಗೆ ಕಳೆದ 8 ವರ್ಷಗಳ ಹಿಂದೆ ಸರಸ್ವತಿಯನ್ನು ಮದುವೆಮಾಡಿ ಕೊಡಲಾಗಿತ್ತು. ಮದುವೆಯ ಆರಂಭದ 2 ವರ್ಷಗಳು ದಂಪತಿಗಳಿಬ್ಬರು ಅನ್ಯೋನ್ಯವಾಗಿ ಸಂಸಾರ ನಡೆಸಿಕೊಂಡು ಬರುತ್ತಿದ್ದರು.
ಆದರೆ ನಂತದ ದಿನಗಳಲ್ಲಿ ರವಿ ಮನೆಯಲ್ಲಿ ಪತ್ನಿ ಸರಸ್ವತಿಯೊಂದಿಗೆ ಜಗಳ ಕಾದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಅಲ್ಲದೆ, ಬೇರೆ ಮದುವೆಯಾಗುವುದಾಗಿಯೂ ಬೆದರಿಕೆ ಹಾಕುತ್ತಿದ್ದನೆನ್ನಲಾಗಿದೆ. ಅದೇ ರೀತಿ ಈಗಲೂ ಸರಸ್ವತಿಯೊಂದಿಗೆ ಜಗಳ ಕಾದು, ಮರದ ರೀಪರ್ ತಂದು ಹೊಡೆದು ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆಂದು ಸರಸ್ವತಿಯು ಬೇತಮಂಗಲ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಾಸಕ ಕೃಷ್ಣಾರೆಡ್ಡಿಗೆ ಪ್ರಾಣ ಬೆದರಿಕೆ: ಯುವಕ ಸೆರೆ
ಚಿಂತಾಮಣಿ: ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ಮೊಬೈಲ್ಗೆ ಯುವಕನೊಬ್ಬ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಮಂಗಲ ಗ್ರಾಮದಲ್ಲಿ ವರದಿಯಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತಿಕೆರೆಯಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಗುತ್ತಿಗೆ ಆಧಾರದ ಮೇಲೆ ನೌಕರನಾಗಿ ಕೆಲಸ ಮಾಡುತ್ತಿರುವ ತಾಲೂಕಿನ ಮಾದಮಂಗಲ ಗ್ರಮಾಮದ ಮಂಜುನಾಥ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು?: ಕಳೆದ ಒಂದು ವಾರದಿಂದ ಮುಂಗಾನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪ್ರವಾಸ ಕೈಗೊಂಡು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಅದರಂತೆ ಕಳೆದ ಬುಧವಾರ ವೆಂಕಟರಾಯನಕೋಟೆ ಗ್ರಾಮದಲ್ಲಿ ಪ್ರವಾಸ ಕೈಗೊಂಡಿರುವಾಗ ಮಾದಮಂಗಲ ಗ್ರಾಮದ ಮಂಜುನಾಥ್ ಶಾಸಕ ಕೃಷ್ಣಾರೆಡ್ಡಿ ಅವರಿಗೆ ಕರೆ ಮಾಡಿ, 'ಹಲವು ದಿನಗಳಿಂದ ಗ್ರಾಮಕ್ಕೆ ಬಸ್ ಸೌಲಭ್ಯ ಹಾಗೂ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೂ, ಶಾಸಕರಾಗಿ ನೀವು ಜನಸಾಮಾನ್ಯರಿಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿದ್ದೀರಿ' ಎಂದು ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ತಿಳಿಸಿದ್ದಾರೆ. ಅಲ್ಲದೆ, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಕುಡಿದು ಬೆದರಿಕೆ: ಕಂಠ ಪೂರ್ತಿ ಕುಡಿದು ತನ್ನ ಸ್ನೇಹಿತರ ಜತೆ ರಾಜಕೀಯ ವಿಷಯವಾಗಿ ಮಾತನಾಡುತ್ತಾ ತನ್ನ ಮೊಬೈಲ್ನಿಂದ ನೇರವಾಗಿ ಶಾಸಕರಿಗೆ ಯುವಕ ಕರೆಮಾಡಿ ಅಭಿವೃದ್ಧಿ ವಿಷಯದಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತರು ಪ್ರಚೋದಿಸಿದ್ದೇ ಈ ಅನಾಹುತಕ್ಕೆ ಕಾರಣವಾಯಿತೆಂದು ಅಳುತ್ತಾ ವಿವರಿಸಿದ್ದಾನೆ.
25 ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ
ಕೋಲಾರ: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಇಲ್ಲಿನ ಎಲೈಟ್ ಜಿಮ್ ಮತ್ತು ಫಿಟ್ನೆಸ್ ಜೋನ್ ವತಿಯಿಂದ ಆ.25 ರಂದು ಸಂಜೆ 4 ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೋನ್ ಮಾಲೀಕ ಮೇಸ್ತ್ರಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಯುವಜನತೆಯನ್ನು ಹುರಿದುಂಬಿಸುವ ಜತೆಗೆ ಯುವಕರಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸಲು ತಾವು ದೇಹದಾರ್ಢ್ಯ ಸ್ಪರ್ಧೆಯನ್ನು ಏರ್ಪಡಿಸಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

