ಮಹಿಳಾ ಸದಸ್ಯರಲ್ಲಿ ಪೈಪೋಟಿ ಶುರು
ಬಂಗಾರಪೇಟೆ: ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರದ ಮೀಸಲಾತಿ ಸಾಮಾನ್ಯ ಮಹಿಳೆ ಮತ್ತು ಎಸ್ಸಿ ಪ್ರಕಟವಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೇರಲು ಮಹಿಳಾ ಸದಸ್ಯರಲ್ಲಿ ಪ್ರಬಲ ಪೈಪೋಟಿ ಸದ್ದಿಲ್ಲದೆ ಶುರುವಾಗಿದ್ದು ದಶಕದ ಬಳಿ ಪುರಸಭೆಯಲ್ಲಿ ಮತ್ತೆ ಮಹಿಳೆಯರ ದರ್ಬಾರ್ ಪ್ರಾರಂಭಕ್ಕೆ ಕ್ಷಣಗಣನೆ ಆರಂಬವಾಗಿದೆ.
ಪುರಸಭೆಗೆ ಚುನಾವಣೆ ನಡೆದ ನಾಲ್ಕೈದು ತಿಂಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟವಾಗಿದ್ದು ಈ ಮೀಸಲಾತಿಗಾಗಿ ಕೆಲವು ಪ್ರಭಾವಿ ಸದಸ್ಯರು 5 ತಿಂಗಳಿಂದ ತಮ್ಮ ಪರವಾಗಿ ಮೀಸಲಾತಿ ಬರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರು. ಇದಕ್ಕಾಗಿ ಲಾಬಿ ಸಹ ಜೋರಾಗಿತ್ತು. ಅಂತಿಮವಾಗಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಬಂದಿರುವುದು ಪುರುಷ ಸದಸ್ಯರಲ್ಲಿ ನಿರಾಶೆ ಮೂಡಿಸಿದೆ.
ಇಲ್ಲಿನ ಪುರಸಭೆ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ನಾಲ್ಕೈದು ತಿಂಗಳ ಹಿಂದೆ ನಡೆದ ಹೊಸ ಆಡಳಿತ ಮಂಡಳಿಗೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಬ್ಬರದ ಪ್ರಚಾರದ ನಡುವೆಯೂ ಪಟ್ಟಣ ಮತದಾರರು ಕೈ ಹಿಡಿದು ಇದು ಕಾಂಗ್ರೆಸ್ ಕೋಟೆ ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾರೆ. 23 ಸದಸ್ಯರ ಪೈಕಿ 15 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದರೆ ಜೆಡಿಎಸ್ 5, ಬಿಜೆಪಿ 2 ಹಾಗೂ ಪಕ್ಷೇತರ ಸದಸ್ಯರೊಬ್ಬರು ಚುನಾಯಿತರಾಗಿದ್ದಾರೆ. ಜಿದ್ದಾಜಿದ್ದಿನ ಹೋರಾಟ ಪ್ರಾರಂಭವಾಗಿ ಗಂಗಮ್ಮ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿ ಪುರಸಭೆಗೆ ಹಿರಿಯ ತಲೆ ಸದಸ್ಯರು ಎಂಬ ಖ್ಯಾತಿ ಹೊಂದಿದ್ದು, ಸದಸ್ಯರ ವಿಶ್ವಾಸ ಗಳಿಸಲು ಮುಂದಾಗಿ ಶಾಸಕ ನಾರಾಯಣಸ್ವಾಮಿರವರ ಮೇಲೂ ಒತ್ತಡ ಹೇರುತ್ತಿದ್ದಾರೆ.
ಹದಗೆಟ್ಟ ರಸ್ತೆಯಲ್ಲಿ ಸಚಿವ ದೇಶಪಾಂಡೆ ಪರದಾಟ
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರು ಸಹ ಶುಕ್ರವಾರ ಎದುರಿಸಿದರು.
ಐತಿಹಾಸಿಕ ಪ್ರವಾಸಿ ತಾಣ ನಂದಿ ಗಿರಿಧಾಮ ಮತ್ತು ನಂದಿಯ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಕಂದವಾರ ಮಾರ್ಗವಾಗಿ ನಗರವನ್ನು ಪ್ರವೇಶಿಸಿದ ಸಚಿವರ ಕಾರು, ಕಂದವಾರ ಬಾಗಿಲುಪೇಟೆ ಬಳಿಗೆ ಆಗಮಿಸುತ್ತಿದ್ದಂತೆ ರಸ್ತೆಯಲ್ಲಿ ತುಂಬಿದ್ದ ಕೆಸರು ನೀರಿನ ಗುಂಡಿಯಲ್ಲಿ ಸಿಲುಕಿಕೊಂಡಿತು.
ಸಚಿವರ ಕಾರಿನ ಚಾಲಕ ಎಷ್ಟೇ ಪ್ರಯತ್ನಿಸಿದರೂ ವಾಹನ ಮುಂದಕ್ಕೆ ಹೋಗಲಿಲ್ಲ. ಇದರಿಂದ ಸಚಿವ ಆರ್.ವಿ. ದೇಶಪಾಂಡೆ ಕಾರಿನಿಂದಿಳಿದು ಕಾಯುತ್ತ ನಿಂತುಕೊಳ್ಳಬೇಕಾಯಿತು. ಕೊನೆಗೆ ರಸ್ತೆಯ ಗುಂಡಿಗೆ ಸಿಲುಕಿಕೊಂಡಿದ್ದ ಕಾರಿನ ಚಕ್ರವನ್ನು ಸರಿಪಡಿಸಿ ವಾಹನ ಮುಂದಕ್ಕೆ ಹೋಗುವಂತೆ ಮಾಡಲು ಸುಮಾರು 20 ನಿಮಿಷಕ್ಕೂ ಹೆಚ್ಚು ಸಮಯ ಹಿಡಿಯಿತು. ಇದರಿಂದ ಸ್ಥಳೀಯ ಜನರು ಸಮಯ ಸದುಪಯೋಗಪಡಿಸಿಕೊಂಡು ಸಚಿವರನ್ನು ಮುತ್ತಿಕೊಂಡರು.
ಕೇವಲ ಒಂದು ದಿನ ಓಡಾಡಿದ ನೀವು ಇಷ್ಟು ತೊಂದರೆಯನ್ನು ಅನುಭವಿಸಿದರೆ, ಪ್ರತಿದಿನ ಓಡಾಡುವ ನಮ್ಮ ಪರಿಸ್ಥಿತಿ ಹೇಗಿರಬೇಕು ಕೇವಲ ಇಲ್ಲಿ ಮಾತ್ರವಲ್ಲ. ನಗರದ ಬಹುತೇಕ ರಸ್ತೆಗಳ ದುಸ್ಥಿತಿ ಹೀಗೆಯೇ ಇದೆ. ಈಗಲಾದರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಸೂಕ್ತ ಕ್ರಮ ಕೈಗೊಂಡು ಹದಗೆಟ್ಟ ರಸ್ತೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

