ಕೋಲಾರ

ಜಿಲ್ಲಾ ಅಧಿಕಾರಿಗಳಿಗಿನ್ನು ಕೇಂದ್ರ ಸ್ಥಾನ ವಾಸ ಕಡ್ಡಾಯ

Published On :

ಕನ್ನಡಪ್ರಭವಾರ್ತ್ಣೆ ಕೋಲಾರ ,  ಆ.26
ಜಿಲ್ಲಾ ಮಟ್ಟದ ಪ್ರತಿಯೊಬ್ಬ ಅಧಿಕಾರಿ ಇನ್ನು ಮುಂದೆ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ ವಾಸ ಮಾಡಬೇಕು, ರಜೆ ಪಡೆದಲ್ಲಿ ತಮಗೆ ಮಾಹಿತಿ ನೀಡಬೇಕು, ಶಿಸ್ತು ಉಲ್ಲಂಘಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೂತನ ಜಿಲ್ಲಾಧಿಕಾರಿ ಡಿ.ಕೆ.ರವಿ ತಾಕೀತು ಮಾಡಿದರು.
ನಗರದ ಜಿ.ಪಂ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಪ್ರತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇಲಾಖೆಗಳಿಗೆ ಸಂಬಂಧಿಸಿದ ಏನೇ ಸಮಸ್ಯೆ ಇದ್ದರೂ ನನ್ನೊಂದಿಗೆ ಮುಕ್ತವಾಗಿ ಚರ್ಚಿಸಿ ಸಲಹೆ ಸಹಕಾರ ಪಡೆಯಬಹುದು. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ವಿಳಂಬವಾಗದ ರೀತಿಯಲ್ಲಿ ತಲುಪಿಸುವ ಹೊಣೆಗಾರಿಕೆ ಎಲ್ಲ ಅಧಿಕಾರಿಗಳ ಮೇಲಿದೆ ಎಂದು ತಿಳಿಸಿದರು.
ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು, ಶಾಶ್ವತ ನೀರಾವರಿ ಯೋಜನೆ ಜಾರಿಯಾಗುವವರೆಗೆ ತಾತ್ಕಾಲಿಕ ಯೋಜನೆಗಳ ಮೂಲಕ ಜನತೆಯ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸೂಚಿಸಿದರು.
ಮರಳು ದಂಧೆ ತಡೆಯಿರಿ: ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನದ ಮೂಲಕ ಗ್ರಾಮೀಣ ಪ್ರದೇಶದ ಬಡವರಿಗೆ ಸಹಾಯವಾಗುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ, ಕೃಷಿ ಭೂಮಿ ಮತ್ತು ಕೆರೆಗಳಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ಹಾಗೂ ಸಾಗಣೆ ತಡೆಯುವ ಮೂಲಕ ಪರಿಸರದ ಅಸಮತೋಲನ ಸರಿಪಡಿಸುವಂತೆ ಸಲಹೆ ನೀಡಿದರು. ನರೇಗಾ ಯೋಜನೆಯಲ್ಲಿ ಆಗಿರುವ ಲೋಪಗಳಿಂದಾಗಿ ರೈತರು ಉದ್ಯೋಗ ಕೇಳಲು ಹಿಂಜರಿಯುತ್ತಿದ್ದಾರೆ. ಅಪನಂಬಿಕೆ ಹೆಚ್ಚಿದ್ದು, ಇದನ್ನು ಸರಿಪಡಿಸುವ ಮೂಲಕ ಹಾಗೂ ಉದ್ಯೋಗ ಮಿತ್ರ, ಕಾಯಕ ಬಂಧು ಪರಿಕಲ್ಪನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಬೇಕೆಂದರು.
ಇಲಾಖೆಗಳ ಸಮನ್ವಯತೆ ಇರಲಿ: ಜಿಲ್ಲೆಯಲ್ಲಿ ಪರಿಸರ ಅಸಮತೋಲನ ಕಾಪಾಡುವ ಕಾರ್ಯಕ್ರಮಗಳತ್ತ ಹೆಚ್ಚು ಗಮನಹರಿಸಬೇಕು. ನೀರನ್ನು ಹೆಚ್ಚು ಇಂಗುವ ನೀಲಗಿರಿ ಬೆಳೆ ಬೆಳೆಯದಂತೆ ರೈತರಲ್ಲಿ ಅರಿವು ಮೂಡಿಸಿ ಶ್ರೀಗಂಧ ಮತ್ತು ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಿ ಎಂದ ಅವರು, ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಯನ್ನು ನಿಲ್ಲಿಸಲು ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಶೀಘ್ರವೇ ತಾವು ವಿಶೇಷ ಸಭೆ ಕರೆಯುವುದಾಗಿ ತಿಳಿಸಿದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇನ್ನು ಮುಂದೆ ತಮ್ಮ ಕಚೇರಿಯಲ್ಲಿ ಬಾಕಿ ಇರುವ ಕಡತಗಳ ಪರಿಶೀಲನೆ ಮತ್ತು ವಿಲೇವಾರಿಗಾಗಿ ಟೇಬಲ್ ಪರಿಶೀಲನೆ ಕಾರ್ಯ ಕೈಗೊಳ್ಳಬೇಕು, ಇದರಿಂದ ತಮ್ಮ ಆಧೀನದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕಾರ್ಯವೈಖರಿ ತಿಳಿಯುತ್ತದೆ. ಜತೆಗೆ ಸಾರ್ವಜನಿಕರ ಕೆಲಸ ತ್ವರಿತಗತಿಯಲ್ಲಿ ಆಗುತ್ತದೆ ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ವಿವಿಧ ಇಲಾಖೆಯ ಅಧಿಕಾರಿಗಳು ವಿವರಿಸಿದಂತೆ ಖಾಲಿ ಹುದ್ದೆಗಳ ಭರ್ತಿ ಮತ್ತು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಹೊಂದಲು ನಿವೇಶವನ್ನು ಪಡೆಯುವ ವಿಚಾರವನ್ನು ತಮ್ಮ ಹಂತದಲ್ಲಿ ಮತ್ತು ಸರ್ಕಾರದ ಹಂತದಲ್ಲಿ ಬಗೆಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
 ಎಸ್ಸೆನ್ನಾರ್ ಆಸ್ಪತ್ರೆಗೆ ಕುಡಿಯುವ ನೀರು, ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಸಂಪರ್ಕ, ಡಿಜಿಟಲ್ ಎಕ್ಸರೇ, ನೀರನ್ನು ಮೃದುವಾಗಿಸುವ ಘಟಕವನ್ನು ಅಳವಡಿಸುವ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್ ಬಾಬು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ನಗರದಲ್ಲಿ ನ್ಯಾಯಾಧೀಶರ ವಸತಿ ಸಂಕೀರ್ಣ ಮತ್ತು ಹೆಲಿಪ್ಯಾಡ್ ನಿರ್ಮಾಣ ಮಾಡಲು ಸೂಕ್ತ ಜಾಗ ಹುಡುಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 20 ಕಡೆ ಮರಳು ನಿಕ್ಷೇಪಗಳನ್ನು ಗುರುತಿಸಿದ್ದರೂ ಕೇವಲ 3 ಮಾತ್ರ ಹರಾಜು ಮಾಡಲಾಗಿದೆ. ಉಳಿದ ಕಡೆ ಮರಳು ನಿಕ್ಷೇಪ ಇಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಂಪತ್ ಕೃಷ್ಣ ಸಭೆಯ ಗಮನಕ್ಕೆ ತಂದಾಗ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ, ಪೊಲೀಸ್, ಅರಣ್ಯ, ಪರಿಸರ ನಿಯಂತ್ರಣ ಇಲಾಖೆಗಳ ಸಹಯೋಗದಲ್ಲಿ ಮರಳು ನಿಕ್ಷೇಪಗಳನ್ನು ಗುರುತಿಸಿ ಕಾನೂನು ಬದ್ಧವಾಗಿ ಹರಾಜು ಹಾಕಲು ಕ್ರಮ ಕೈಗೊಳ್ಳಬೇಕು. ಮರಳು ನಿಕ್ಷೇಪಗಳು ಸಿಗದಿದ್ದರೆ ಜಿಲ್ಲೆಯಿಂದ ಮರಳು ಸಾಗಾಣಿಕೆಯನ್ನು ನಿಷೇಧಿಸಬೇಕು ಎಂದು ಸೂಚಿಸಿದರು.  ಜಿ.ಪಂ. ಸಿಇಒ ಜುಲ್ಫೀಖಾರ್ ಉಲ್ಲಾ, ಕೋಲಾರ ಎಸ್ಪಿ ಡಾ.ರಾಮನಿವಾಸ್ ಸಫಟ್, ಕೆಜಿಎಫ್ ಎಸ್ಪಿ ರೋಹಿಣಿ ಕಚೋಟ್ ಸಫಟ್, ಜಿ.ಪಂ. ಉಪ ಕಾರ್ಯದರ್ಶಿ ಬದನೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.