ಕೋಲಾರ

ಆಡಳಿತ ಸುಧಾರಣೆಗೆ ಸದಸ್ಯರ ಆಗ್ರಹ

Published On :

ಕ.ಪ್ರ.ವಾರ್ತೆ ಕೋಲಾರ ಆ.27
ಇಲ್ಲಿನ ನಗರಸಭೆಯ ಆಡಳಿತ ವ್ಯವಸ್ಥೆ ಸುಧಾರಣೆ ಮಾಡಿ ಜನತೆಗೆ ಮೂಲ ಸೌಕರ್ಯಗಳು ಸಕಾಲಕ್ಕೆ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜೆಡಿಎಸ್ ಮತ್ತು ಸಿಪಿಎಂನಿಂದ ಗೆದ್ದಿರುವ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಏಳೆಂಟು ತಿಂಗಳಿಂದ ನಗರಸಭೆ ಆಡಳಿತ ಸಂಪೂರ್ಣ ಕುಸಿದು ದಿಕ್ಕೆಟ್ಟ ಪರಿಸ್ಥಿತಿಯಲ್ಲಿದೆ. ನಗರಸಭಾ ಸದಸ್ಯರು ಆಯ್ಕೆಯಾಗಿ ಆರು ತಿಂಗಳಾದರೂ ಮೀಸಲಾತಿ ವಿಳಂಬದಿಂದ ನಾಗರಿಕರಿಗೆ ಸ್ಪಂದಿಸಲು ಹಾಗೂ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲು ಸಾಧ್ಯವಾಗಿಲ್ಲದ ಕಾರಣ ಮಧ್ಯ ಪ್ರವೇಶ ಮಾಡಿ ಆಡಳಿತ ವ್ಯವಸ್ಥೆ ಸುಧಾರಣೆ ಮಾಡುವಂತೆ ನಗರಸಭಾ ಸದಸ್ಯರ ನಿಯೋಗ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರನ್ನು ಒತ್ತಾಯಿಸಿತು.
ಕೋಲಾರ ನಗರಸಭೆ ವ್ಯಾಪ್ತಿಗೆ 35 ವಾರ್ಡುಗಳು ಬರಲಿದ್ದು ಸುಮಾರು 1.50 ಲಕ್ಷ ಜನಸಂಖ್ಯೆ ವಾಸ ಮಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ಹಲವಾರು ತಿಂಗಳುಗಳಿಂದ ತೀವ್ರ ಬವಣೆಯನ್ನು ಅನುಭವಿಸುತ್ತಿದ್ದಾರೆ. ಕೊಳವೆ ಬಾವಿಗಳ ನೀರನ್ನು ಅವಲಂಬಿಸಿದ್ದರೂ ಮಳೆಯಿಲ್ಲದೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಜನತೆ ಹಣ ಕೊಟ್ಟು ನೀರು ಖರೀದಿ ಮಾಡುವಂತಾಗಿದೆ. ಹೀಗಾಗಿ ಕೂಡಲೇ ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳನ್ನು ಉತ್ತಮ ಆಡಳಿತಕ್ಕೆ ಸಜ್ಜುಗೊಳಿಸಬೇಕು. ತುರ್ತಾಗಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಕ್ಕೆ ಚಾಲನೆ ದೊರಕಿಸಿಕೊಡಬೇಕೆಂದು ಸದಸ್ಯರು ಮನವಿ ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ಬಿಲ್ ಪಾವತಿಯ ಬೇಡಿಕೆ ಇಟ್ಟು ನೀರಿನ ಟ್ಯಾಂಕರ್ ಮಾಲೀಕರು ನೀರು ಸರಬರಾಜು ನಿಲ್ಲಿಸಿದ್ದಾರೆ. ಇದರಿಂದ ನಾಗರಿಕರಿಗೆ ತೊಂದರೆ ಆಗುತ್ತಿದೆ. ನೀರಿನ ಸಮಸ್ಯೆ ಜೊತೆಗೆ ಸ್ವಚ್ಛತೆ, ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ನಗರಸಭೆ ಆಡಳಿತಾಧಿಕಾರಿಗಳಾಗಿರುವ ತಾವು ಜನತೆಯ ಸಮಸ್ಯೆ ನಿವಾರಣೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ನಗರಸಭೆಯಲ್ಲಿ ನಡೆದ ಒಂದು ಅಚಾತುರ್ಯ ಘಟನೆಯಿಂದ ಆಯುಕ್ತರಾದ ಮಹೇಂದ್ರ ಕುಮಾರ್ ಅಮಾನತುಗೊಂಡಿದ್ದಾರೆ. ನಗರಸಭೆ ಆಡಳಿತ ಉಸ್ತುವಾರಿಯನ್ನು ಪ್ರಭಾರಿಯಾಗಿ ಕೋಲಾರದ ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿತ್ತು. ಈಗ ಅವರು ಸಹ ವರ್ಗಾವಣೆ ಆಗಿರುವುದರಿಂದ ಪ್ರಸ್ತುತ ನಗರಸಭೆ ಆಡಳಿತಕ್ಕೆ ದಿಕ್ಕು ಕಾಣಾದಾಗಿದೆ. ಕೂಡಲೇ ನಗರಸಭೆಗೆ ಭೇಟಿ ನೀಡಿ ಇರುವ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲು ತಾಕೀತು ಮಾಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವೆಂಕಟಪತಿ, ಗಾಂಧಿನಗರ ನಾರಾಯಣಸ್ವಾಮಿ, ಬಿ.ಎಂ.ಮುಬಾಕರ್, ವಿ.ಶೋಭಾ, ಅಸ್ಲಾಂ, ಸಿ.ವಿ.ರಾಧಾಕೃಷ್ಣ, ನಾರಾಯಣಮ್ಮ, ಸಾಕಮ್ಮ, ಸುಕುಮಾರ್, ಮುರಳಿಗೌಡ, ರವೀಂದ್ರ, ಅಪ್ರೋಜ್ ಪಾಷಾ ಸೇರಿದಂತೆ 13ಕ್ಕೂ ಹೆಚ್ಚು ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.