ಕೋಲಾರ

ಕಾಮಗಾರಿ ಗುಣಮಟ್ಟದೆಡೆ ಗಮನವಿರಲಿ: ರಾಜಣ್ಣ

Published On :

ಶಿಡ್ಲಘಟ್ಟ: ತಮ್ಮ ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಗ್ರಾಮಸ್ಥರು ಗಮನಿಸಿಕೊಳ್ಳಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು. ತಾಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಮಂಗಳವಾರ ಸುವರ್ಣ ಗ್ರಾಮ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಮಾರು 26 ಲಕ್ಷ ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಸುವರ್ಣ ಗ್ರಾಮ ಯೋಜನೆಯು ಒಳಗೊಂಡಿದೆ. ಗುಣಮಟ್ಟಕ್ಕೆ ರಾಜಿಯಾಗದೆ ಕೆಲಸ ಮಾಡಬೇಕಿದೆ. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪಕ್ಷಾತೀತವಾಗಿ ದುಡಿಯಬೇಕು. ನಮ್ಮ ಗ್ರಾಮ ನಮ್ಮ ಕೆಲಸ ಎಂಬ ಭಾವನೆಯಿಂದ ಎಲ್ಲರೂ ಒಗ್ಗೂಡಿ ಗ್ರಾಮದ ಕೆಲಸಗಳನ್ನು ಉತ್ತಮವಾಗಿ ಮಾಡಿಸಿಕೊಳ್ಳಲು ತಿಳಿಸಿದರು. ಮುಖಂಡರಾದ ಬಂಕ್ ಮುನಿಯಪ್ಪ, ಪಿ.ವಿ.ನಾಗರಾಜ್, ರವಿ, ಶ್ರೀನಿವಾಸಗೌಡ ಮತ್ತಿತರರು ಹಾಜರಿದ್ದರು.

ಅವಿರೋಧ ಆಯ್ಕೆ
ಮಾಲೂರು:
ತಾಲೂಕಿನ ದೊಡ್ಡಶಿವಾರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಆಡಳಿತಮಂಡಳಿಯ ಹತ್ತು ಸ್ಥಾನಕ್ಕೂ ಅವಿರೋಧ ಆಯ್ಕೆಯಾಗಿದ್ದಾರೆ.
ಸೆ.1 ರಂದು ಚುನಾವಣೆ ನಡೆಯಬೇಕಾಗಿದ್ದು, ಪ್ರತಿ ಕ್ಷೇತ್ರಕ್ಕೂ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದ ಕಾರಣ ಸಾಲಗಾರರ ಕ್ಷೇತ್ರಕ್ಕೆ ಎಸ್.ವಿ.ಗೋವರ್ಧನ್ ರೆಡ್ಡಿ, ಹೆಚ್.ಆರ್.ಗೋಪಿನಾಥ್, ಶಿವಶಂಕರ್ ರೆಡ್ಡಿ, ಕೆ.ವಿ.ಚಂದ್ರಶೇಖರ್, ವಿ.ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಲಗಾರರ ಮಹಿಳಾ ಕ್ಷೇತ್ರಕ್ಕೆ ಸುಜಾತಮ್ಮ, ರುಕ್ಮಣಿಯಮ್ಮ ಹಾಗೂ ಹಿಂದುಳಿದ ವರ್ಗದಲ್ಲಿ ವೆಂಕಟಪ್ಪ, ಪರಿಶಿಷ್ಟ ಜಾತಿಯಡಿಯಲ್ಲಿ ಬಿ.ವಿ.ಹಂಸ ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ ಎಸ್.ಸಿ.ಗೋಪಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹೆಚ್.ವಿ.ವಸಂತ್ ಕುಮಾರ್ ತಿಳಿಸಿದ್ದಾರೆ. ಜಿ.ಪಂ.ಸದಸ್ಯ ಎ.ರಾಮಸ್ವಾಮಿ ರೆಡ್ಡಿ, ತಾ.ಪಂ.ಮಾಜಿ ಅಧ್ಯಕ್ಷ ಸಿ.ರಾಜಣ್ಣ, ಎ.ವೆಂಕಟಸ್ವಾಮಿ ಇದ್ದರು.

ನಗರಸಭೆಗೆ ಸಿಬ್ಬಂದಿಗೆ ಡಿಸಿ ಸೂಚನೆ
ಕೋಲಾರ:
ನಗರಸಭೆಯಲ್ಲಿ ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳಿ ಎಂದು ಸದಸ್ಯರ ನಿಯೋಗ ಮನವಿ ಪತ್ರ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ನಗರಸಭೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಜನತೆಯ ಸಮಸ್ಯೆಗೆ ಸ್ಪಂದಿಸುವಂತೆ ತಾಕೀತು ಮಾಡಿದರು. ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲವೆಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ತೋರಬಾರದು, ಜನತೆಯ ಅಹವಾಲು ಅರಿತು ತಕ್ಷಣ ಪರಿಹಾರ ಕಲ್ಪಿಸಲು ಮುಂದಾಗಬೇಕು, ನಗರಸಭೆಗೆ ಶೀಘ್ರವೇ ಆಯುಕ್ತರ ನೇಮಕವಾಗಲಿದೆ, ಅಲ್ಲಿಯವರೆಗೆ ಪ್ರಭಾರ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ, ನಾನೇ ಆಡಳಿತಾಧಿಕಾರಿ ಆಗಿದ್ದು ಏನೇ ಸಮಸ್ಯೆ ಇದ್ದರೂ ತಮ್ಮ ಗಮನಕ್ಕೆ ತಂದು ಜನತೆಯ ಕೆಲಸ ಮಾಡಿ ಎಂದು ಸೂಚಿಸಿದರು. ನೀರಿನ ವ್ಯವಸ್ಥೆ ಸರಿಯಾಗಿರಬೇಕು, ಸ್ವಚ್ಛತೆ ಹಾಗೂ ಇನ್ನಿತರ ಮೂಲ ಸೌಕರ್ಯದ ಕೊರತೆ ಇರಬಾರದು, ತೆರಿಗೆ ಸಂಗ್ರಹಣೆ ಕಡೆ ವಿಶೇಷ ಗಮನ ನೀಡಿ ಎಂದು ಕಂದಾಯ ವಿಭಾಗ, ಆರೋಗ್ಯ ವಿಭಾಗಕ್ಕೆ ಆದೇಶಿಸಿದರು. ಯಾವುದೇ ಕಡತ ವಿಲೇವಾರಿ ವಿಳಂಬವಾಗಬಾರದು, ಕಾನೂನು ಪ್ರಕಾರ ಕೆಲಸ ಮಾಡಿ, ಜನತೆಯಿಂದ ದೂರು ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ
ಕೆಜಿಎಫ್:
ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಖಿತ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿ ನಿಲಯದಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಪಾದಿಸಿದರು. 270 ವಿದ್ಯಾರ್ಥಿಗಳ ಪೈಕಿ ಈಗ 70 ವಿದ್ಯಾರ್ಥಿಗಳು ಮಾತ್ರ ಈ ಹಾಸ್ಟೆಲ್‌ನಲ್ಲಿದ್ದು, ಉಳಿದವರೆಲ್ಲರೂ ಇಲ್ಲಿನ ವಿದ್ಯಾರ್ಥಿ ನಿಲಯ ತೊರೆದು ಬೇರೆಡೆ ಹೋಗಿದ್ದಾರೆ. ಆದರೂ ಇಲ್ಲಿನ ಆಡಳಿತ ಮಂಡಳಿಯ ಅಧಿಕಾರಿಗಳು ಒಟ್ಟು 270 ಮಂದಿ ವಿದ್ಯಾರ್ಥಿಗಳನ್ನು ಸೇರಿಸಿ ಬಿಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ವಾರ್ಡನ್ ನಾರಾಯಣಪ್ಪ ಕಳೆದ ಒಂದು ತಿಂಗಳ ರಜೆ ಹೋಗಿದ್ದು, ರಮೇಶ್ ಅವರಿಗೆ ಅಧಿಕಾರ ವಹಿಸಲಾಗಿದೆ. ಆದರೂ ಯಾವೊಬ್ಬ ಅಧಿಕಾರಿಯೂ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಎಬಿವಿಪಿ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್, ಹನುಮಂತು, ರಾಜೇಂದ್ರ, ಯಶವಂತ್, ನವೀನ್, ಅಭಿಷೇಕ್, ಸುಬ್ರಮಣಿ, ಮಂಜುನಾಥ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.