ಕೋಲಾರ

ಕಾರ್ಮಿಕರ ಪರ ನಿರಂತರ ಹೋರಾಟ

Published On :

ಕೆಜಿಎಫ್: ಬೆಮೆಲ್ ಕಾರ್ಖಾನೆ ಅಭಿವೃದ್ಧಿಗೆ ಹಾಗೂ ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟದ ಮೂಲಕ ಶ್ರಮಿಸುವುದಾಗಿ ಬೆಮೆಲ್ ನೂತನ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು. ಮಂಗಳವಾರ ಬೆಮೆಲ್ ಕಾರ್ಮಿಕ ಸಂಘದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಕಳೆದ ಅವಧಿಯಲ್ಲಿ ಕಾರ್ಮಿಕರ ಹಲವು ಬೇಡಿಕೆಗಳು ಈಡೇರದೆ ಹಾಗೇ ಉಳಿದಿದ್ದು ಅದನ್ನು ಮುನ್ನಡೆಸಿಕೊಂಡು ಹೋಗುವ ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಹಾಗೂ ಕೇಂದ್ರ ರಕ್ಷಣಾ ಮಂತ್ರಿಗಳೊಂದಿಗೆ ಚರ್ಚಿಸಿ ಬೆಮೆಲ್ ಕಾರ್ಖಾನೆಗೆ ಅಭಿವೃದ್ಧಿಗೆ ಮತ್ತು ಹೆಚ್ಚಿನ ಉತ್ಪಾದನೆ ಕುರಿತು ಮನವಿ ಸಲ್ಲಿಸಲಾಗುವುದು ಎಂದರು. ಕಾರ್ಮಿಕರಲ್ಲಿ ಯಾವುದೇ ಗುಂಪುಗಾರಿಕೆ ಮತ್ತು ಗೊಂದಲಗಳಿಗೆ ಎಡೆಮಾಡಿಕೊಡದೆ ಕಾರ್ಮಿಕರ ಬೇಡಿಕೆಯಂತೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿ, ಕಾರ್ಮಿಕರ ಹಿತಕ್ಕಾಗಿ ಎಲ್ಲರೂ ಸಹಕಾರ ನಿಡಬೇಕು. ಆಗಲೇ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದರು. ಬೆಮೆಲ್ ಕಾರ್ಮಿಕ ಸಂಘದ ಉಪಾಧ್ಯಕ್ಷರಾದ ಸಂಪತ್‌ಕುಮಾರ್, ಕಿರುಬಾಕರನ್, ಪ್ರಧಾನ ಕಾರ್ಯದರ್ಶಿ ಜಯಶೀಲನ್, ಸಹ ಕಾರ್ಯದರ್ಶಿ ಗಣೇಶ್‌ಕುಮಾರ್, ಜಂಟಿ ಕಾರ್ಯದರ್ಶಿ ರಾಮಚಂದ್ರರೆಡ್ಡಿ, ಪ್ರಕಾಶ್, ಖಜಾಂಚಿ ಸೋಮನಾಥ್ ಮಾರಡಿ, ಸೇರಿದಂತೆ ಇತರೆ ನೂತನ ಪದಾಧಿಕಾರಿಗಳು ಹಾಜರಿದ್ದರು.

ಅಪಘಾತ:  ವರ್ತೂರ್ ನೆರವು
ಕೋಲಾರ: ಕಳೆದ ಸೋಮವಾರ ಸಂಜೆ ನರಸಾಪುರ ಸಮಿಪ ಜರುಗಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಕಲ್ವಮಂಜಲಿ ಗ್ರಾಮಸ್ಥರ ಕುಟುಂಬಗಳಿಗೆ ಶಾಸಕ ವರ್ತೂರು ಪ್ರಕಾಶ್ ಸಾಂತ್ವನ ಹೇಳಿದರಲ್ಲದೆ ಮೃತಪಟ್ಟ ಕುಟುಂಬಗಳಿಗೆ ಒಟ್ಟಾರೆ 50 ಸಾವಿರ ಪರಿಹಾರ ಧನ ವಿತರಿಸಿದರು. ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ಜಿಪಂ ಸದಸ್ಯ ಅಮರನಾಥ್, ತಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥಗೌಡ, ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ, ಕಲ್ವಮಂಜಲಿ ಚಂದ್ರೇಗೌಡ ಮತ್ತಿತರರು ಹಾಜರಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ನೀರಿಗೆ ಪರದಾಟ: ಹರಿಕುಮಾರ್
ಕೆಜಿಎಫ್: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮನೆಯಿಲ್ಲದೆ, ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ತಿಳಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಕೇವಲ 1 ಸಾವಿರ ಕೊಟ್ಟು ಕೈತೊಳೆದುಕೊಂಡಿತು. ಬರಪೀಡಿತ ಮೂರು ಜಿಲ್ಲೆಗೆ ಯಾವ ಸರ್ಕಾರವೂ ಈವರೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸದೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಉದ್ಘಾಟನಾ ಸಮಾರಂಭ ಇಂದು
ತಿಪಟೂರು: ನಗರದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ವರ್ಷದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ ವೇದಿಕೆ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಯುವ ರೆಡ್ ಕ್ರಾಸ್, ಎನ್.ಎಸ್.ಎಸ್.ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಗುರುವಾರ ಬೆಳಗ್ಗೆ 11ಗಂಟೆಗೆ ಕಾಲೇಜಿನ ಆಡಿಟೋರಿಂನಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಸೈಯದ್ ಮುಷ್ತಾಕ್ ಅಹಮದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.