ಕೋಲಾರ

ಮುಳಬಾಗಿಲು ಎಂಎಲ್‌ಎ ಕಾಂಗ್ರೆಸ್ ಸಹ ಸದಸ್ಯ

Published On :

ಕನ್ನಡಪ್ರಭ ವಾರ್ತೆ, ಕೋಲಾರ, ಆ.28
ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಕೊತ್ತೂರು ಮಂಜುನಾಥ್ ಅವರು ಕಾಂಗ್ರೆಸ್ ಸೇರಲು ಪಕ್ಷಾಂತರ ನಿಷೇಧ ಕಾಯಿದೆ ಅಡ್ಡಿಯಾಗಿರುವುದರಿಂದ ಸಹ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್. ಅನಿಲ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಕೊತ್ತೂರು ಮಂಜುನಾಥ್ ಅವರು ಕಾಂಗ್ರೆಸ್ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ ಪಕ್ಷ ಸೇರಲು ಬಯಸಿದ್ದಾರೆ. ಸಹ ಸದಸ್ಯರಾಗಿ ಪಕ್ಷದ ಕೆಲಸ ಮಾಡುವುದಕ್ಕೆ ಅವಕಾಶ ನೀಡುವಂತೆ ಹಿರಿಯ ನಾಯಕರಲ್ಲಿ ಮನವಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಸಹ ಸದಸ್ಯರಾಗುವುದಕ್ಕೆ ಅವಕಾಶ ನೀಡಲಾಗಿದೆ. ಪಕ್ಷದ ಹಿರಿಯ ಆದೇಶಗಳನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕೊತ್ತೂರು ಮಂಜುನಾಥ್ ಅವರ ವಿರುದ್ಧ ಕಾಂಗ್ರೆಸ್‌ನ ಕೆಲ ಮುಖಂಡರು ಅಸಮಾಧಾನಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಪಕ್ಷದ ವಕ್ತಾರರ ಹೆಸರಿನಲ್ಲಿ ಪತ್ರಿಕಾ ಹೇಳಿಕೆಗಳು ನೀಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅನಿಲ್‌ಕುಮಾರ್, ಜಿಲ್ಲಾ ಸಮಿತಿಯಿಂದ ನಾವು ಯಾರಿಗೂ ವಕ್ತಾರರಂತೆ ಹೇಳಿಕೆ ನೀಡುವುದಕ್ಕೆ ಅನುಮತಿ ನೀಡಿಲ್ಲ, ಕೊತ್ತೂರು ಮಂಜುನಾಥ್ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರು ತೆಗೆದುಕೊಂಡಿರುವ ನಿರ್ಧಾರದ ವಿಚಾರದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅದನ್ನು ಮಾತುಕತೆಯ ಮೂಲಕ ನಿವಾರಣೆ ಮಾಡುತ್ತೇವೆ ಎಂದು ಹೇಳಿದರು.
ಮುಖಂಡರಿಗೆ ಬುದ್ಧಿವಾದ: ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಸಹ ಸದಸ್ಯರಾಗಿರುವುದಕ್ಕೆ ವಿರೋಧಿಸುತ್ತಿರುವ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಪರಿಶಿಷ್ಟ ಜಾತಿಯ ಮುಖಂಡ ಅಶ್ವತ್ಥನಾರಾಯಣ, ಆಂಜನಪ್ಪ ಮುಂತಾದವರೊಂದಿಗೆ ಕಾಂಗ್ರೆಸ್ ಭವನದ ಬಳಿ ಮಾತನಾಡಿದ ಕೆಪಿಸಿಸಿಯ ಪ್ರತಿನಿಧಿ ಎಂ.ಆರ್. ಸೀತಾರಾಂ, ಕೊತ್ತೂರು ಮಂಜುನಾಥ್ ಕಾಂಗ್ರೆಸ್‌ಗೆ ಬೇಡವೆಂದು ಹೇಳುವ ನೀವು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಅಮರೇಶ್ ಅವರನ್ನು ಏಕೆ ಗೆಲ್ಲಿಸಲಿಲ್ಲ. ನಿಮಗೆ ಪಕ್ಷ ಬೆಳೆಯುವುದು ಬೇಡವೇ ಎಂದು ಪ್ರಶ್ನಿಸಿದರು. ಪಕ್ಷದ ಹಿತದೃಷ್ಟಿಯಿಂದ ಸಣ್ಣ ವಿಚಾರಗಳನ್ನು ದೊಡ್ಡದು ಮಾಡಬೇಡಿ, ಏನೇ ಸಮಸ್ಯೆ ಇದ್ದರೂ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಜೊತೆ ಚರ್ಚಿಸಿ ಪರಿಹಾರ ಕುಂಡುಕೊಳ್ಳಿ ಎಂದು ಸಮಾಧಾನಪಡಿಸಿದರು.
ಶಾಸಕ ಕೂತ್ತೂರು ಮಂಜುನಾಥ್ ಪರವಾಗಿ ಕಾಂಗ್ರೆಸ್ ಸಭೆಯಲ್ಲಿ ಜೈಕಾರ ಹಾಕಿ ಗೊಂದಲ ಸೃಷ್ಟಿಸಿದ ಹಾರೋಹಳ್ಳಿ ನಾರಾಯಣಸ್ವಾಮಿ ಹಾಗೂ ಬೆಂಬಲಿಗರಿಗೂ ಬುದ್ಧಿವಾದ ಹೇಳಿದ ಸೀತಾರಾಂ, ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿಸಬೇಕಾಗಿದೆ. ಕೆ.ಎಚ್. ಮುನಿಯಪ್ಪ ಅವರು ಮತ್ತೆ ಸಂಸತ್ತಿಗೆ ಆಯ್ಕೆಯಾಗಲು ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ.  ಕೊತ್ತೂರು ಮಂಜುನಾಥ್ ಅವರೇ ನಾನು ಸಭೆಯಲ್ಲಿ ಮಾತನಾಡುವುದಿಲ್ಲ, ಹಿರಿಯರು ಮಾತನಾಡಲಿ ಎಂದಿರುವಾಗ ತಾವು ಘೋಷಣೆಗಳ ಮೂಲಕ ಒತ್ತಾಯಿಸಿದ್ದು ಸರಿಯಲ್ಲ. ಇದರಿಂದ ಶಾಸಕ ಕೊತ್ತೂರು ಮಂಜುನಾಥ್ ಬಗ್ಗೆ ಪಕ್ಷದ ನಾಯಕರಲ್ಲಿ ತಪ್ಪು ಅಭಿಪ್ರಾಯ ಉಂಟಾಗುತ್ತದೆ ಎಂದರು.

ಕಿರಿಕಿರಿ ಮಾಡುವವರು ಸಾಧನೆ ಬಹಿರಂಗ ಪಡಿಸಲಿ
ಕೋಲಾರ: ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಲಿರುವ ಕೆ.ಹೆಚ್. ಮುನಿಯಪ್ಪನವರಿಗೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಲೀಡ್ ನೀಡುವುದು ನನ್ನ ಗುರಿಯಾಗಿದ್ದು, ಸಭೆಗಳಲ್ಲಿ ಕಿರಿಕಿರಿ ಉಂಟುಮಾಡುವ ಕಾಂಗ್ರೆಸ್ಸಿನ ಮುಖವಾಡ ಧರಿಸಿರುವ ಕೆಲವರು ಪಕ್ಷಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆಂದು ಬಹಿರಂಗಪಡಿಸಲಿ ಎಂದು ಶಾಸಕ ಕೊತ್ತೂರು ಡಾ. ಜಿ. ಮಂಜುನಾಥ್ ಪಂಥಾಹ್ವಾನ ನೀಡಿದ್ದಾರೆ.
ಬುಧವಾರ ನಗರದ ಕಾಂಗ್ರೆಸ್ ಭವನದಲ್ಲಿ ಲೋಕಸಭೆ ಅಭ್ಯರ್ಥಿ ಆಯ್ಕೆಗೆ ನಡೆದ ಸಭೆಯ ನಂತರ ಮಾತನಾಡಿದ ಅವರು,ಪಕ್ಷೇತರ ಶಾಸಕನಾಗಿರುವ ತಾವು ತಾಂತ್ರಿಕವಾಗಿ ಕಾಂಗ್ರೆಸ್ ಶಾಸಕನಾಗದಿದ್ದರೂ, ಸಹ ಸದಸ್ಯ ಕಾಂಗ್ರೆಸ್ಸಿಗನಾಗಿ ಪಕ್ಷದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ವಿವೇಕವಿಲ್ಲದೆ ಅಶ್ವಥ್ ನಾರಾಯಣ, ಬೆಳಗಾನಹಳ್ಳಿ ವೆಂಕಟಮುನಿಯಪ್ಪ ಅವರು ತಾವು ಪಕ್ಷದ ಸಭೆಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕಿರಿಕಿರಿ ಮಾಡುತ್ತಿರುವುದು ಅರ್ಥಹೀನ ಎಂದು ಟೀಕಿಸಿದ್ದಾರೆ.  ಇವರುಗಳ ಕ್ಷೇತ್ರಗಳಲ್ಲಿ ಯಾವ ಯಾವ ಜನಪ್ರತಿನಿಧಿಗಳಿಗೆ ಎಷ್ಟು ಮತಗಳ ಲೀಡ್ ಕೊಡಿಸಿದ್ದಾರೆಂದು ಬಹಿರಂಗ ಪಡಿಸಲಿ ಎಂದಿರುವ ಶಾಸಕರು, ಒಬ್ಬ ಕಾಂಗ್ರೆಸ್ಸಿಗ ತನ್ನ ಹೆಸರಿಗೆ ಮಾತ್ರ ದುಡಿದರೆ ಸಾಲದು. ಮತಗಳಿಸುವ ಜನಪ್ರತಿನಿಧಿಯ ಶಕ್ತಿ ರೂಢಿಸಿಕೊಳ್ಳಬೇಕೆಂದರು.
ಇಡೀ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಅತ್ಯಧಿಕ ಲೀಡ್ ಕೊಡಿಸಿರುವ ಹೆಗ್ಗಳಿಕೆ ನಮ್ಮಲ್ಲಿದೆ. ಅಲ್ಲದೆ ಬರುವ ಲೋಕಸಭೆ ಚುನಾವಣೆಯಲ್ಲಿ ಕೆ.ಹೆಚ್. ಮುನಿಯಪ್ಪರವರಿಗೆ ಒಂದು ಲಕ್ಷ ಮತಗಳ ಲೀಡ್ ದೊರಕಿಸಿಕೊಡಲು ಈಗಾಗಲೇ ಕ್ಷೇತ್ರದಾಧ್ಯಂತ ರಾಜಕೀಯ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎಲ್ಲ ಕಾಂಗ್ರೆಸ್ ಶಾಸಕರಿಗೆ ನೀಡುವಷ್ಟೇ ಗೌರವ ಮತ್ತು ಜವಾಬ್ದಾರಿ ತಮಗೂ ನೀಡಿದ್ದು, ಕಳೆದ ಅಧಿವೇಶನದ ಕಲಾಪದಲ್ಲಿ ವಿಪ್ ನೀಡಿ ಸರ್ಕಾರದ ಪರ ಮತ ಚಲಾಯಿಸಿರುವುದೇ ನನ್ನ ಅಧಿಕೃತ ಕಾಂಗ್ರೆಸಿನ ನಿಷ್ಟೆ ಎಂಬುದನ್ನು ಟೀಕೆಕಾರರು ಅರಿಯಬೇಕೆಂದು ಶಾಸಕರು ತಿಳಿಸಿದರು.
ಕಾಂಗ್ರೆಸ್ಸಿಗೆ ನಿಷ್ಟೆಯಿಂದ ದುಡಿದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಸಲಹೆ ಇತ್ತರು. ಅಶೋಕ್ ಕೃಷ್ಣಪ್ಪ, ಹಾರೋಹಳ್ಳಿ ವಿ. ನಾರಾಯಣಸ್ವಾಮಿ, ಎಂ.ಮುನಿರಾಜು, ಉತ್ತನೂರು ಶ್ರೀನಿವಾಸ್, ಜಗನ್ಮೋಹನರೆಡ್ಡಿ ಪ್ರಭಾಕರ್, ಕಾರ್ ಶ್ರೀನಿವಾಸ್, ವೆಂಕಟೇಶ್‌ಬಾಬು, ಶ್ರೀನಾಥ್, ರಾಮಲಿಂಗಾರೆಡ್ಡಿ , ಗೊಲ್ಲಹಳ್ಳಿ ವೆಂಕಟೇಶ್, ಯಾಮಣ್ಣ, ಜಮ್ಮನಹಳ್ಳಿ ಕೃಷ್ಣ ಇದ್ದರು.

'ಕೈ' ನಾಯಕರಿಗೆ ಕಗ್ಗಂಟಾದ ಸಮಸ್ಯೆ ನಿವಾರಣೆ
ಕೋಲಾರ: ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಪರ ಹಾಗೂ ವಿರೋಧಿ ಗುಂಪಿನ ನಡುವೆ ಸಂಘರ್ಷ ಮುಂದುವರೆದಿರುವುದರಿಂದ ಕಾಂಗ್ರೆಸ್ ಮುಖಂಡರಿಗೆ ಸಮಸ್ಯೆ ನಿವಾರಣೆ ಮಾಡುವುದು ಕಗ್ಗಂಟಾಗಿ ಪರಿಣಮಿಸಿದೆ.
ಕೊತ್ತರು ಮಂಜುನಾಥ್ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು ಸಹ ಸದಸ್ಯನನ್ನಾಗಿ ಸೇರಿಸಿಕೊಂಡು ಪಕ್ಷಕ್ಕೆ ಬಲ ತುಂಬಲು ಯತ್ನಿಸುತ್ತಿದ್ದಾರೆ. ಆದರೆ ಪಕ್ಷದ ಕೆಲ ಪರಿಶಿಷ್ಟ ಜಾತಿಗೆ ಸೇರಿದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ ಶಾಸಕರು ಭಾಗವಹಿಸುವ ಪಕ್ಷದ ಸಭೆಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದು ಇದಕ್ಕೆ ಪ್ರತಿಯಾಗಿ ಕೆಲವರು ಶಾಸಕರ ಬೆಂಬಲಕ್ಕೆ ನಿಂತಿರುವುದರಿಂದ ಪಕ್ಷ ಸಂಘಟನೆಗೆ ಬಿಕ್ಕಟ್ಟು ಎದುರಾಗಿದೆ.
ಬುಧವಾರ ನಗರದ ಕಾಂಗ್ರೆಸ್ ಭವನದಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕರೆದಿದ್ದ ಸಭೆಗೆ ಶಾಸಕ ಕೊತ್ತೂರು ಮಂಜುನಾಥ್ ಮುಖಂಡರ ಆಹ್ವಾನದ ಮೇರೆಗೆ ಭಾಗವಹಿಸಿದ್ದರು.
ಸಭೆಯಲ್ಲಿ ಮಂಜುನಾಥ್ ಅವರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಆರೋಪಿಸಿ ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 1 ಲಕ್ಷ ಮತವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಕಿಸುವಷ್ಟು ಬಲವನ್ನು ಹೊಂದಿರು ಕೊತ್ತೂರು ಮಂಜುನಾಥ್‌ಗೆ ಕೆಲವರು ವಿನಾಕಾರಣ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಶಾಸಕರ ಬೆಂಬಲಿಗ ನಾರಾಯಣಸ್ವಾಮಿ ದೂರಿದರು.
ಸಭೆಯ ನಂತರ ವೀಕ್ಷಕರೊಂದಿಗೆ ಮಾತನಾಡಿದ ಶಾಸಕರ ಬೆಂಬಲಿಗರು ಕೊತ್ತೂರು ಮಂಜುನಾಥ್ ಅವರನ್ನು ವಿರೋಧಿಸಲು ಯಾರಿಗೆ ಹಕ್ಕಿಲ್ಲ ಎಂದು ಗರ್ಜಿಸಿದರು.
ಕೆಪಿಸಿಸಿ ಎಸ್.ಸಿ. ಘಟಕದ ರಾಜ್ಯ ಸಂಚಾಲಕ ಬೆಳಗಾನಹಳ್ಳಿ ವಿ. ಮುನಿವೆಂಕಟಪ್ಪ, ಕಿಸಾನ್ ಕೇತ್ ಅಧ್ಯಕ್ಷ ಬುಸ್ಸನಹಳ್ಳಿ ಸಿ. ಆಂಜನಪ್ಪ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ  ಆರ್. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಕೆಪಿಸಿಸಿ ವೀಕ್ಷಕರಾದ ಎಂ.ಆರ್. ಸೀತಾರಾಮ್, ಕೆ.ಎಸ್. ಮಸೂದ್ ಹಾಗೂ ಮಾಜಿ ಸಚಿವೆ ರಾಣಿಸತೀಶ್, ಎಲ್.ಎನ್. ಮೂರ್ತಿ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಹಾಗೂ ವರಿಷ್ಠರ ಗಮನಕ್ಕೆ ತರುವುದಾಗಿ ಹೇಳಿ ಪ್ರತಿಭಟನೆಯ ಕಾವು ತಣ್ಣಗಾಗಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.