ಕೋಲಾರ

ಕೆಂಪೇಗೌಡ ಬ್ಯಾನರ್‌ಗೆ ಬೆಂಕಿ; ಪ್ರತಿಭಟನೆ

Published On :

ಚಿಕ್ಕಬಳ್ಳಾಪುರ: ಕಿಡಿಗೇಡಿಗಳು ನಾಡಪ್ರಭು ಕೆಂಪೇಗೌಡ ಬ್ಯಾನರ್‌ಗೆ ಬೆಂಕಿ ಹಚ್ಚಿ ಸಗಣಿ ಎರಚಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಒಕ್ಕಲಿಗರ ಯುವಸೇನೆ ಸಂಘಟನೆಯ ಮುಖಂಡರು, ದುಷ್ಕರ್ಮಿಗಳನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದ ಪ್ರಮುಖ ಸಾರ್ವಜನಿಕ ರಸ್ತೆಗಳಲ್ಲಿ ಅವಾಚ್ಯ ಶಬ್ದಗಳಿಂದ ಕಟುವಾಗಿಯೇ ನಿಂದಿಸುತ್ತ ಪ್ರತಿಭಟನಾ ಮೆರವಣಿಗೆ ಹೊರಟರು. ನಾಡಪ್ರಭು ಕೆಂಪೇಗೌಡ ಅವರಿಗೆ ಅವಮಾನ ಮಾಡಿದವರ ಕೈ ಕತ್ತರಿಸಬೇಕೆನ್ನುವುದರ ಜತೆಗೆ ಅತಿರೇಕದ ಬೈಗುಳಗಳ ಸುರಿಮಳೆಗೈಯುತ್ತ ಧಿಕ್ಕಾರದ ಘೋಷಣೆಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಚೀಮನಹಳ್ಳಿಯಲ್ಲಿ ಒಕ್ಕಲಿಗರ ಯುವ ಸೇನೆಯ ಉದ್ಘಾಟನೆ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಂಡಿದ್ದರ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರವನ್ನೊಳಗೊಂಡ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಲಾಗಿತ್ತು. ಈ ನಡುವೆ ಬೆಳಗಿನ ಜಾವ ಸುಮಾರು 2 ಗಂಟೆ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಗ್ರಾಮದಲ್ಲಿ ಹಾಕಿದ್ದ ಬ್ಯಾನರ್‌ಗಳಿಗೆ ಸಗಣಿ ಎರಚಿದ್ದಾರೆ. ಅಲ್ಲದೇ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಬ್ಯಾನರ್‌ಗಳನ್ನು ಸುಟ್ಟಿದ್ದಾರೆ. ಇದು ಒಕ್ಕಲಿಗ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು.
ಚೀಮನಹಳ್ಳಿ ಗ್ರಾಮದಲ್ಲಿ ಶಾಖೆಯ ಉದ್ಘಾಟನೆ ನೆರವೇರಿಸಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಕಚೇರಿಯ ಮುಂಭಾಗದ ಎಂ.ಜಿ. ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆದು ರಸ್ತೆಯ ಮಧ್ಯೆದಲ್ಲಿಯೇ ಧರಣಿ ಕುಳಿತರು. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ಒಕ್ಕಲಿಗ ಸಂಘಟನೆಯ ಮುಖಂಡ ಯಲುವಹಳ್ಳಿ ರಮೇಶ್, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರು ರಾಜ್ಯದ ಮಹಾನ್ ನಾಯಕರುಗಳಲ್ಲಿ ಒಬ್ಬರಾಗಿದ್ದಾರೆ. ಜನಪರವಾಗಿ ಕೈಗೊಂಡ ಉತ್ತಮ ಆಡಳಿತ, ಸುಧಾರಣೆಗಳು ಶ್ಲಾಘನೀಯ. ಮಹಾನ್ ನಾಯಕರ ಸಾಲಿನಲ್ಲಿ ಇವರನ್ನು ಸಹ ಗುರುತಿಸಿ ಗೌರವಿಸಲಾಗುತ್ತಿದೆ. ಇದಕ್ಕೆ ಮಹಾನ್ ವ್ಯಕ್ತಿ ಕೆಂಪೇಗೌಡ ಹೆಸರನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಟ್ಟಿರುವುದು ಸಹ ಒಂದು ನಿದರ್ಶನ. ಹೀಗಿರುವಾಗ ಕೆಂಪೇಗೌಡ ಅವರ ಭಾವಚಿತ್ರಕ್ಕೆ ಬೆಂಕಿಯಿಟ್ಟು ಸಗಣಿ ಎರಚಿ ಅವಮಾನ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಅಣ್ಣ-ತಮ್ಮಂದಿರಂತೆ ಎಲ್ಲರೂ ಜೀವನ ನಡೆಸಬೇಕು. ಆದರೆ, ಚೀಮನಹಳ್ಳಿಯಲ್ಲಿ ಕೆಲ ದುಷ್ಕರ್ಮಿಗಳು ಜಾತಿ ಹೆಸರಿನಲ್ಲಿ ಅಶಾಂತಿ ಉಂಟು ಮಾಡಿ, ಎರಡು ವರ್ಗಗಳ ನಡುವೆ ಜಗಳ ನಡೆಯುವಂತಾಗಲಿ ಎಂದು ನಾಡಪ್ರಭು ಕೆಂಪೇಗೌಡ ಅವರಿಗೆ ಅವಮಾನ ಮಾಡಿದ್ದಾರೆ. ಇದನ್ನು ಹೀಗೆ ಬಿಟ್ಟರೆ ಮುಂದೆ ಉತ್ತಮ ಸಮಾಜವನ್ನು ಕೆಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಶಾಂತಿಯನ್ನು ಕಾಪಾಡಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಮುಖಂಡ ತಮ್ಮೇಶಗೌಡ ಮಾತನಾಡಿ, ಚೀಮನಹಳ್ಳಿಯಲ್ಲಿ ಕೆಂಪೇಗೌಡಗೆ ಮಾಡಿದ ಅವಮಾನವನ್ನು ಪ್ರತಿಯೊಬ್ಬರು ಖಂಡಿಸಬೇಕು. ಗ್ರಾಮದಲ್ಲಿನ ಭಿನ್ನಾಭಿಪ್ರಾಯಗಳಿಗಾಗಿ ಮಹಾನ್ಪುರುಷರ ಬ್ಯಾನರು, ಫ್ಲೆಕ್ಸ್ಗ್‌ಳಿಗೆ ಬೆಂಕಿ ಹಚ್ಚುವುದು. ಸಗಣಿ ಎರಚುವುದು ನಾಚಿಕೆಗೇಡು. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಇಂತಹ ಘಟನೆಗಳು ಮುಂದೆ ನಡೆಯದಂತೆ ನೋಡಿಕೊಳ್ಳಬೇಕು. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದ ಡಿವೈಎಸ್‌ಪಿ ದೇವಯ್ಯ, ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ತಪ್ಪಿತಸ್ಥರನ್ನು ಬಂಧಿಸಲು ಮುಂದಾಗಿರುವುದಾಗಿ ಭರವಸೆ ನೀಡಿ ಸಮಾಧಾನಪಡಿಸಿದರು.
ಪ್ರತಿಭಟನೆಯಲ್ಲಿ ಒಕ್ಕಲಿಗ ಸಂಘಟನೆಯ ಮುಖಂಡರಾದ ಚಲಪತಿ, ಮುನೇಗೌಡ, ರವಿ, ಯಲುವಹಳ್ಳಿ ಸೊಣ್ಣೇಗೌಡ, ನಾರಾಯಣಸ್ವಾಮಿ, ಮಂಚನಬಲೆ ಶ್ರೀನಿವಾಸ್, ರಾಮಚಂದ್ರಗೌಡ, ಬಾಬು ಮುಂತಾದವರು ಭಾಗವಹಿಸಿದ್ದರು.
ಘಟನೆ ಹಿನ್ನೆಲೆ: ತಾಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಆಸ್ತಿಯನ್ನು ಲಪಟಾಯಿಸಲು ಕೆಲ ಸಂಘಟನೆಗಳು ಮುಂದಾಗಿದ್ದು, ಇದರಿಂದ ಆಕ್ರೋಶಗೊಂಡ ಒಕ್ಕಲಿಗರ ಸಂಘಟನೆಯ ಕೆಲ ಮುಖಂಡರು ಭೂಮಿಯ ಅಕ್ರಮ ಸ್ವಾಧೀನದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತ ಬಂದಿದ್ದರು. ಇದರಿಂದ ಗ್ರಾಮದಲ್ಲಿ ಎರಡು ವರ್ಗಗಳ ನಡುವೆ ಕದನಕ್ಕೆ ಕಾರಣವಾಗಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಇದು ಜಾತಿ ನಿಂದನೆ, ಹಲ್ಲೆ ಸೇರಿದಂತೆ ಬೇರೆ ಬೇರೆ ಹೆಸರಿನಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರುವವರೆಗೂ ಹೋಗಿತ್ತು.
ಈ ನಡುವೆ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಒಂದು ವರ್ಗದವರು ಅಡ್ಡಿಪಡಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು ಭೂಮಿಯ ವಿಷಯ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿ ನಾಡಪ್ರಭು ಕೆಂಪೇಗೌಡ ಅವರಿಗೆ ಅವಮಾನ ಮಾಡುವವರೆಗೂ ಹೋಗಿದೆ. ಈ ನಡುವೆ ಒಕ್ಕಲಿಗ ಸಂಘಟನೆಯ ಮುಖಂಡರು ಗ್ರಾಮದ ಈರಪ್ಪ, ಹನುಮಪ್ಪ, ಜಯಪ್ಪ, ಮಹದೇವ, ನರಸಿಂಹಪ್ಪ ವಿರುದ್ಧ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.