'ಪ್ರಕೃತಿ ಕಾಪಾಡುವುದು ಮಾನವನ ಕರ್ತವ್ಯ'
ಕೋಲಾರ: ಪ್ರಕೃತಿ ಮತ್ತು ಮನುಷ್ಯರ ನಡುವೆ ಇರುವ ಸಂಬಂಧ ತಾಯಿ- ಮಗುವಿನ ರೀತಿ. ಆದರೆ ಮಾನವ ಪ್ರಕೃತಿಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ವಿನಾಶಗಳು ಸಂಭವಿಸುತ್ತಿವೆ ಎಂದು ತುಮಕೂರಿನ ಕಾಳಿದಾಸ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ.ಯತಿರಾಜು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕಾಂ.ಹೋಳೂರು ಶಂಕರ್ ಸ್ಮಾರಕ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲೆಯ ಬರಗಾಲ ಪ್ರಕೃತಿ ಮುನಿಸೋ- ಮಾನವ ನಿರ್ಮಿತವೂ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡಿದರು.
ತಾಯಿ ತನ್ನ ಮಗು ದಾರಿ ತಪ್ಪಿದಾಗ ಎಚ್ಚರಿಕೆ ನೀಡುತ್ತಾಳೆ. ಅಂತೆಯೇ ಪ್ರಕೃತಿ ನಮಗೆ ಎಚ್ಚರಿಕೆ ನೀಡುತ್ತಾ ಬಂದಿದೆ. ಆದರೆ ಪ್ರಕೃತಿಯ ಜತೆಗೆ ಸಹಬಾಳ್ವೆ ನಡೆಸದ ನಮ್ಮ ನಡವಳಿಕೆ ವಿನಾಶಕಾರಿ ಬೆಳವಣಿಗೆ, ಈ ಬಗ್ಗೆ ಇಡೀ ಸಮಾಜ ಆಲೋಚಿಸಬೇಕು ಎಂದರು.
ಪ್ರಕಣತಿಕ ವಿಕೋಪಗಳಿಗೆ ಜಾಗತಿಕ ತಾಪಮಾನ ಏರಿಕೆಯೇ ಕಾರಣ. ಇದರ ಪರಿಣಾಮ ಋತುಚಕ್ರದಲ್ಲಿ ಏರುಪೇರಾಗಿ ಬೀಳುವ ಮಳೆ ಪ್ರಾದೇಶಿಕವಾರು, ಕಾಲಮಾನವಾರು ವೈಪರೀತ್ಯಕ್ಕೆ ಕಾರಣವಾಗಿ ಭೂಮಿಯ ತೇವಾಂಶದ ಪ್ರಮಾಣ ಕುಸಿಯುತ್ತದೆ. ರೋಗ ರುಜಿನಗಳು ಹೆಚ್ಚುತ್ತದೆ. ಬಿಸಿಯೇರಿಕೆಯಿಂದ ಅನೇಕ ಜೀವ ಪ್ರಬೇಧಗಳು ನಶಿಸುವ ಹಾದಿ ಹಿಡಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ, ತೋಟಗಾರಿಕೆ ಇಲಾಖೆಗಳು ರೈತರನ್ನು ದಿಕ್ಕು ತಪ್ಪಿಸುತ್ತಿದೆ. ಕೃಷಿ ಪದ್ಧತಿ ಅನೇಕ ವಿಕೃತಿಗಳಿಗೆ ಒಳಗಾಗುತ್ತಿದೆ. ಆಯಾ ಪ್ರದೇಶದಲ್ಲಿ ಇಲ್ಲದ ಬೆಳೆ ತಂದು ಕಣಷಿ ಮಾಡುತ್ತಿದ್ದೇವೆ. ನಮ್ಮ ಪ್ರದೇಶದ ಕೃಷಿ ಪದ್ಧತಿ ಬೀಳುವ ಮಳೆಗೆ ಲಾಭದಾಯಕ ಯಾವುದು ಎಂದು ಆಲೋಚಿಸಿ ರೈತ ತೀರ್ಮಾನ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು.
ರಾಜ್ಯದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ನಗರ-ಗ್ರಾಮಾಂತರ ಜಿಲ್ಲೆ ಒಣ ವಲಯ ಕೃಷಿ ಪ್ರದೇಶಗಳು. ಇಲ್ಲಿ ಮಳೆಯಲ್ಲಿ ಪ್ರದೇಶವಾರು, ಹೋಬಳಿವಾರು ಏರು ಪೇರುಗಳನ್ನು ಕಾಣಬಹುದು. 2004ರಲ್ಲಿ ನಡೆದ ಅಧ್ಯಯನದ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಬಳಕೆ ಶೇ. 196ರಷ್ಟಿದ್ದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ. 199ರಷ್ಟಿದೆ. ರಾಜಸ್ಥಾನದ ನಂತರ ಮರಳುಗಾಡಾಗುವ ಹಾದಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕೋಲಾರ ಜಿಲ್ಲೆ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಂ.ಹೋಳೂರು ಶಂಕರ್ ಸ್ಮಾರಕ ಸಮಿತಿ ಅಧ್ಯಕ್ಷ ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಬಯ್ಯಾರೆಡ್ಡಿ, ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ಸಮಿತಿ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ದೇವರಾಜ್, ಗಂಗಮ್ಮ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವಿ. ಗೀತಾ, ಪಿ.ಆರ್. ನವೀನ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

