ಕೋಲಾರ

ಮುನಿದ ವರುಣ; ತೋರೋ ಕರುಣೆ...

Published On :

-ಪಾ.ಶ್ರೀ. ಅನಂತರಾಮ್
ಕೋಲಾರ:
ಮಳೆರಾಯನ ಮುನಿಸಿನಿಂದ ಜಿಲ್ಲೆಯ ಬಹುತೇಕ ಕೃಷಿ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿದೆ.
ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಕೊರತೆ ಬಾರದಂತೆ ಸಾಕಷ್ಟು ದಾಸ್ತಾನು ಮಾಡಿದೆಯಾದರೂ ಮಳೆ ಇಲ್ಲದ ಕಾರಣ ಗೋದಾಮುಗಳಲ್ಲಿ ಸರಕು ಖಾಲಿಯಾಗದೆ ಹಾಗೆಯೇ ಉಳಿದಿದೆ.
ಜಿಲ್ಲೆಯ 1.2 ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ಬಿದ್ದ ಸಣ್ಣ ಮಳೆಯನ್ನು ನಂಬಿ ರೈತರು ರಾಗಿ, ನೆಲಗಡಲೆ, ಜೋಳ, ಅವರೆ, ಹಲಸಂದಿ ಬಿತ್ತನೆ ಮಾಡಿದ್ದರೂ ಮಳೆ ಸಕಾಲಕ್ಕೆ ಆಗದಿರುವುದರಿಂದ ರೈತರು ಬೆಳೆ ನಷ್ಟ ಹೊಂದುವ ಭೀತಿಯಲ್ಲಿದ್ದಾರೆ.
ಜಿಲ್ಲೆಯ ಮಳೆ ಹಾಗೂ ಬೆಳೆ ಪರಿಸ್ಥಿತಿಯ ಬಗ್ಗೆ ಜಿಲ್ಲಾ ಆಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಮಾಹಿತಿ ಹೋಗಿದ್ದು, ಎಲ್ಲಾ 27 ಹೋಬಳಿಗಳಲ್ಲಿ ಬರದ ಛಾಯೆ ಇರುವುದರಿಂದ ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸರ್ಕಾರ ಕಂಗೆಟ್ಟಿರುವ ರೈತರಿಗೆ ಸಹಾಯಾಸ್ತ ನೀಡದಿದ್ದರೆ ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ.
ಬರ ಪೀಡಿತ ಪ್ರದೇಶ:  ಜಿಲ್ಲೆಯವರೇ ಆದ ಕೃಷಿ ಸಚಿವ ಕೃಷ್ಣಬೈರೇಗೌಡರೇ ಇತ್ತೀಚೆಗೆ ಕೋಲಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಮರು ನಾಮಕರಣ ಮಾಡಬೇಕೆಂದು ಹೇಳಿರುವುದು ಜಿಲ್ಲೆಯ ಶೋಚನಿಯ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಜಿಲ್ಲಾ ಆಡಳಿತವೂ ಇದೇ ಅಭಿಪ್ರಾಯ ಹೊಂದಿ ಸರ್ಕಾರಕ್ಕೆ ವರದಿ ನೀಡಿರುವುದರಿಂದ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸದಿದ್ದರೆ ರೈತರು, ಕೂಲಿ ಕಾರ್ಮಿಕರು ಗುಳೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಬಹುದು.
ಕೆಲವು ದಿನಗಳ ಹಿಂದೆ ಪ್ರತಿನಿತ್ಯ ಆಕಾಶದಲ್ಲಿ ಕಾಣುತ್ತಿದ್ದ ಕಪ್ಪು ಮೋಡಗಳ ಲೀಲೆ, ಮಳೆಯ ವಾತಾವರಣ ಕಂಡು ಭರವಸೆಯಲ್ಲಿದ್ದ ರೈತರು ಈಗ ಪ್ರತಿದಿನ ಬಿಸಿಲಿನ ತಾಪ ತಾಳಲಾರದೆ ಆತಂಕಗೊಂಡಿದ್ದಾರೆ. ಯಾವುದೇ ನದಿ, ನಾಲೆ ಇಲ್ಲದೆ ಮಳೆಯನ್ನು ಆಶ್ರಯಿಸಿರುವ ಕೋಲಾರ ಜಿಲ್ಲೆಯನ್ನು ಉಳಿಸಲು ಸರ್ಕಾರ ಮುಂದಾಗಬೇಕಾಗಿದೆ. ಮುಖ್ಯಮಂತ್ರಿಗಳು ಕೃಷಿ, ಕಂದಾಯ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ನೀರಾವರಿ, ಪಶುಸಂಗೋಪನೆ ಸಚಿವರೊಂದಿಗೆ ಜಿಲ್ಲೆಗೆ ಭೇಟಿ ನೀಡಿ ಬರದ ಬಗ್ಗೆ ವಿಶೇಷ ಅಧ್ಯಯನ ನಡೆಸಿದರೆ ಜನ ಮತ್ತು ಜಾನುವಾರುಗಳ ಸಂಕಷ್ಟ ಅರಿಯಲು ಸಾಧ್ಯವಾಗುತ್ತದೆ.
ಬೆಳೆ ಉಳಿಯುವುದು ಕಷ್ಟ:  ಕೋಲಾರ ತಾಲೂಕಿನಲ್ಲಿ 16707 ಹೆಕ್ಟೇರ್ (ಶೇ.87), ಬಂಗಾರಪೇಟೆ-16759 ಹೆ (ಶೇ.71), ಶ್ರೀನಿವಾಸಪುರ-9595 ಹೆ(ಶೇ.56), ಮಾಲೂರು-14885 ಹೆ(ಶೇ.93), ಮುಳಬಾಗಿಲು ತಾಲೂಕಿನಲ್ಲಿ 13039 ಹೆಕ್ಟೇರ್ (ಶೇ.50) ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ ಎಂದು ಕೃಷಿ ಇಲಾಖೆಯ ಅಂಕಿ-ಅಂಶಗಳಲ್ಲಿ ಕಾಣುತ್ತಿದೆಯಾದರೂ ಸಮರ್ಪಕವಾದ ಮಳೆ ಇಲ್ಲದೆ ಕೃಷಿ ಚಟುವಟಿಕೆಗಳ ಮೇಲೆ ಕರಾಳ ಛಾಯೆ ಅವರಿಸಿಕೊಂಡಿದೆ.
ವಿಶ್ವಕ್ಕೆ ಬಗೆ ಬಗೆಯ ಮಾವು ನೀಡುವ ಶ್ರೀನಿವಾಸಪುರ ಹಾಗೂ ಕರ್ನಾಟಕದ ಮೂಡಲ ಬಾಗಿಲು ಎಂದೇ ಪ್ರಸಿದ್ಧಿ ಪಡೆದಿರುವ ಮುಳಬಾಗಿಲು ತಾಲೂಕಿನಲ್ಲಿ ಬೆಳೆಗಳ ಪರಿಸ್ಥಿತಿ ಶೋಚನಿಯವಾಗಿರುವುದರಿಂದ ರೈತರ ಬದುಕು ದುಸ್ತರವಾಗಿದೆ. ಇನ್ನು ಮೇಲ್ನೋಟಕ್ಕೆ ಬಿತ್ತನೆ ಕಾರ್ಯ ಹೆಚ್ಚಾಗಿರುವಂತೆ ಕಾಣುವ ಬಂಗಾರಪೇಟೆ, ಮಾಲೂರು ಹಾಗೂ ಕೋಲಾರ ತಾಲೂಕಿನಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಮಳೆಯಿಲ್ಲದೆ ಅಂತರ್ಜಲ ಬತ್ತಿದೆ, 1200 ರಿಂದ 1400 ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದಕ್ಕೂ ಕಷ್ಟವಾಗುತ್ತಿದೆ. ಡಿಸೇಲ್ ಬೆಲೆ ಏರಿಕೆ, ವಿದ್ಯುತ್ ಸಮಸ್ಯೆಯಿಂದಾಗಿ ಟ್ಯಾಂಕರ್ ಮಾಲೀಕರು ಸರ್ಕಾರ ನಿಗದಿಪಡಿಸುವ ದರಕ್ಕೆ ನೀರು ಪೂರೈಕೆ ಮಾಡುವುದಕ್ಕೆ ಆಗದೆ ಕೈಚೆಲ್ಲಿ ಕುಳಿತಿದ್ದಾರೆ. ನೀರು ಸರಬರಾಜು ಮಾಡಿರುವ ಮಾಲೀಕರಿಗೆ ಬರಬೇಕಾಗಿರುವ ಬಾಕಿ ಹಣಕ್ಕೆ ಒತ್ತಾಯಿಸಿ ಪ್ರತಿಭಟನೆಗಳು ಆರಂಭವಾಗಿದೆ, ಜನಪ್ರತಿನಿಧಿಗಳು ಸಹ ಹೋರಾಟಕ್ಕೆ ಇಳಿಯುವಂತಾಗಿದೆ.
ದುಬಾರಿಯಾದ ಮೇವಿನ ಬೆಲೆ: ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಕೋಲಾರದಲ್ಲಿ ಒಂದು ಕಟ್ಟು ಮೇವಿಗೆ 5 ರಿಂದ 7 ರು.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಮಳೆಯಿಲ್ಲದೆ ಮೇವಿನ ದರ ಸಹ ದುಬಾರಿಯಾಗಿದೆ. ಜಾನುವಾರುಗಳನ್ನು ಸಾಕುತ್ತಿರುವ ಜನರು ಪ್ರತಿ ಕಟ್ಟಿಗೆ 10 ರು. ನೀಡಿ ಮೇವು ಖರೀದಿ ಮಾಡುವಂತಾಗಿದೆ.
ಜಿಲ್ಲಾ ಆಡಳಿತ ಮೇವು ಬೆಳೆಯಲು ರೈತರಿಗೆ ಹಾಗೂ ಹಾಲು ಉತ್ಪಾದಕರ ಸಂಘಗಳಿಗೆ ಮೇವು ಬೀಜ ನೀಡುವುದಕ್ಕೆ ಮುಂದಾಗಿದ್ದರೂ ಮಳೆಯಿಲ್ಲದ ಕಾರಣ ಸಂಕಟ ಎದುರಿಸುವಂತಾಗಿದೆ. ಆಗಸ್ಟ್‌ನಲ್ಲಿ ವಾಡಿಕೆ ಮಳೆ 87 ಮಿ.ಮಿ ಆಗಬೇಕು. ಆದರೆ ಆಗಸ್ಟ್ ಅಂತ್ಯಕ್ಕೆ ಆಗಿರುವ ಮಳೆ ಕೇವಲ 35.04 ಮಿ.ಮಿ.ರಷ್ಟು ಮಾತ್ರ. ಪ್ರತಿ ವರ್ಷ ಮಳೆ ಪ್ರಮಾಣದಲ್ಲಿ ಕುಸಿತ ಕಾಣುತ್ತಿರುವುದರಿಂದ ಕೃಷಿ ಉತ್ಪನ್ನ ಕುಂಠಿತವಾಗುತ್ತಿದೆ. ಕೊಳವೆ ಬಾವಿಗಳ ಮೂಲಕ ನೀರಾವರಿ ಸೌಕರ್ಯ ಹೊಂದಿರುವ ಬೆರಳೆಣಿಕೆಯಷ್ಟು ರೈತರು ಸಹ ಈ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿ ಹೆಚ್ಚು ತರಕಾರಿ ಬೆಳೆಯುವ ಜಿಲ್ಲೆಯಲ್ಲಿ ಈ ವರ್ಷ ಏರುಪೇರು ಉಂಟಾಗಿದೆ, ರಾಜ್ಯ ಸರ್ಕಾರ ಕೂಡಲೇ ಮೇವು ಬ್ಯಾಂಕ್, ನರೇಗಾ ಯೋಜನೆಯಡಿ ರೈತರಿಗೆ ಉಪಯುಕ್ತವಾಗುವ ಉದ್ಯೋಗ, ನಗರ ,ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ವಲಸೆ ತಪ್ಪಿಸಲು ಗಂಜಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗುವ ಮೂಲಕ ಜಿಲ್ಲೆಯನ್ನು ಉಳಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.