ಮೋಸ ಮಾಡಿದ ಯುವಕ: ಯುವತಿ ಧರಣಿ
ಕ.ಪ್ರ.ವಾರ್ತೆ ಚಿಂತಾಮಣಿ ಆ.29
ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ಪ್ರಿಯಕರನ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ತಾಪಂ ಕಚೇರಿ ಎದುರು ಧರಣಿ ನಡೆಸುತ್ತಿರುವ ಯುವತಿಗೆ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಘಟನೆ ವಿವರ: ತಾಲೂಕಿನ ಕೈವಾರ ಹೋಬಳಿ ಹುಲ್ಲುಗುಮ್ಮನಹಳ್ಳಿ ಗ್ರಾಮದ ಯುವತಿಯೊಬ್ಬಳು ಕಳೆದ ಹಲವು ತಿಂಗಳ ಹಿಂದೆ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು, ವ್ಯಾಸಂಗಕ್ಕಾಗಿ ನಿತ್ಯ ಗ್ರಾಮದಿಂದ ಚಿಂತಾಮಣಿಗೆ ಹೋಗಿ ಬರುತ್ತಿದ್ದಳು. ಇದೇ ಗ್ರಾಮದ ಚಂದ್ರಶೇಖರ್ ಬಿನ್ ವೆಂಕಟೇಶ್ ಎಂಬ ಯುವಕನು ಆ ಯುವತಿಯನ್ನು ಪ್ರೀತಿಸುತ್ತಿದ್ದ.
ಯುವತಿಯನ್ನು ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ದಾನೆಂದು ಯುವತಿಯ ಅಳಲು. ಯುವತಿ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರಾಘವೇಂದ್ರ ಮೋಸದ ಕೇಸ್(420) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಬಲ: ಗರ್ಭಿಣಿ ಯುವತಿ ಹಾಗೂ ಪೋಷಕರು ಮತ್ತು ಸಂಬಂಧಿಕರು ತಾಲೂಕು ಕಚೇರಿ ಮುಂಭಾಗದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಹಾಗೂ ಚಂದ್ರಶೇಖರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಧರಣಿ ನಡೆಸಿದರು. ಈ ಸುದ್ದಿ ತಿಳಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮಾದಿಗ ದಂಡೋರ ಹೋರಾಟ ಸಮಿತಿ, ಕುರುಬರ ಸಂಘ ಸೇರಿದಂತೆ ಇನ್ನೂ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಸ್ಥಳಕ್ಕಾಗಮಿಸಿದ ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್ ಮತ್ತು ವೃತ್ತ ನಿರೀಕ್ಷಕ ನಂಜಪ್ಪ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಸಾದ್ ಜತೆ ಮೊಬೈಲ್‌ನಲ್ಲಿ ಮಾತನಾಡಿ, ಶನಿವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುವಕ- ಯುವತಿಯರ ಪೋಷಕರನ್ನು ಕರೆದು ಚರ್ಚಿಸಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳಾದ ಮಂಜುನಾಥರೆಡ್ಡಿ, ಜಂಗಮಶೀಗೇನಹಳ್ಳಿ ದೇವರಾಜ್, ಶ್ಯಾಮರಾಜ್, ವೆಂಕಟಗಿರಿಕೋಟೆ ಮಾಸ್ಟರ್ ವೆಂಕಟರವಣಪ್ಪ ಸೇರಿದಂತೆ ಯುವತಿ ಕಡೆಯ ಪೋಷಕರು ಹಾಗೂ ನೂರಾರು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

