ಕುಸಿದ ಆಡಳಿತ ಯಂತ್ರ; ಆಗದ ಅಭಿವೃದ್ಧಿ ಮಂತ್ರ
ಕೋಲಾರ: ಇಲ್ಲಿನ ನಗರಸಭೆಯಲ್ಲಿ ಆಡಳಿತ ಯಂತ್ರ ಕುಸಿತದಿಂದ ಸಾರ್ವಜನಿಕರ ಗೋಳು ಕೇಳುವವರಿಲ್ಲದಂತಾಗಿದೆ.
ಈ ಹಿಂದಿನ ಆಯುಕ್ತರು ಚೆಕ್ ಪ್ರಕರಣದಲ್ಲಿ ಅಮಾನತುಗೊಂಡ ನಂತರ ಉಪವಿಭಾಗಾಧಿಕಾರಿಯನ್ನು ಪ್ರಭಾರ ಆಯುಕ್ತರನ್ನಾಗಿ ನಿಯೋಜಿಸಲಾಗಿದೆಯಾದರೂ ಸ್ವತಂತ್ರವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಿರುವುದರಿಂದ ಖಾತೆ ಬದಲಾವಣೆ, ಪರವಾನಗಿ, ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದ ಕಡತಗಳು ವಿಲೇವಾರಿ ಆಗದೆ ಧೂಳು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದಿನ ಆಯುಕ್ತ ಮಹೇಂದ್ರಕುಮಾರ್ ಒರಟು ಮಾತಿನ ಸ್ವಭಾವದವರಾದರೂ ಕಾನೂನು ಪಂಡಿತರಾಗಿದ್ದರು. ಪೌರಕಾರ್ಮಿಕರ ಸಮಸ್ಯೆ, ತೆರಿಗೆ ಸಂಗ್ರಹ, ಬಾಕಿ ಬಿಲ್ಗಳ ಪಾವತಿ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಾಗದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ನಾನೇ ಅತಿ ಬುದ್ಧಿವಂತನೆಂದು ಭಾವಿಸಿ ತಾವೇ ತೋಡಿದ ಖೆಡ್ಡಾಕ್ಕೆ ಸಿಕ್ಕಿ ಅಮಾನತುಗೊಂಡ ನಂತರ ನಗರಸಭೆಯ ಆಡಳಿತ ಅನಾಥವಾಗಿದೆ.
ಟ್ಯಾಂಕರ್ ಮಾಲೀಕರ ಸಮಸ್ಯೆ: ನಗರಸಭೆಯ ಮೂಲಕ ಪ್ರತಿನಿತ್ಯ ಟ್ಯಾಂಕರ್ಗಳ ಮೂಲಕ ವಿವಿಧ ವಾರ್ಡುಗಳಿಗೆ ಕುಡಿಯುವ ನೀರು ಸರಬರಾಜು ಮಾಡಿರುವ ಮಾಲೀಕರಿಗೆ 1.30 ಕೋಟಿ ಬಾಕಿ ನೀಡಬೇಕಾಗಿದೆ ಎಂದು ಕಳೆದ ನಾಲ್ಕೈದು ದಿನಗಳಿಂದ ಟ್ಯಾಂಕರ್ ಮಾಲೀಕರು ಮುಷ್ಕರ ನಡೆಸುತ್ತಿರುವುದರಿಂದ ಜನತೆ ನೀರಿಗಾಗಿ ಪರದಾಡುವಂತಾಗಿದೆ. ಖಾಸಗಿ ಟ್ಯಾಂಕರ್ಗಳ ಮೂಲಕ ಒಂದು ಬಿಂದಿಗೆ ನೀರಿಗೆ 7 ರಿಂದ 8 ನೀಡಿ ಖರೀದಿಸಲಾಗುತ್ತಿದೆ. ಮಳೆ ಕೈಕೊಟ್ಟಿರುವುದರಿಂದ ಅನೇಕ ಕಡೆ ಶುದ್ಧ ಕುಡಿಯುವ ನೀರು ಸಿಗದೆ ಜನತೆಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ದಿನ ಬಳಿಕೆಯ ನೀರು ಪೂರೈಕೆಗೂ ಸಮಸ್ಯೆ ಎದುರಾಗಿದೆ. ಕೊಳವೆ ಬಾವಿಗಳಲ್ಲಿ ನೀರಿನ ಇಳಿಮುಖವಾಗಿರುವುದರಿಂದ ಜನತೆ ಹಣ ಕೊಟ್ಟು ಖಾಸಗಿಯವರಿಂದ ನೀರು ಖರೀದಿ ಮಾಡುವಂತಾಗಿದೆ. ನೀರಿನ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಟ್ಯಾಂಕರ್ ಮಾಲೀಕರು ಒಂದು ಟ್ಯಾಂಕರ್ಗೆ 750 ರಿಂದ 1000ವರೆಗೆ ವಸೂಲಿ ಮಾಡುತ್ತಿದ್ದಾರೆ.
ವಿದ್ಯುತ್ ಸಮಸ್ಯೆ, ಡೀಸೆಲ್ ದರ ಏರಿಕೆ, ಖಾಸಗಿ ಕೊಳವೆ ಬಾವಿಗಳ ಮಾಲೀಕರು ನೀರಿನ ದರ ಹೆಚ್ಚಿಸಿರುವುದರಿಂದ ಅನಿವಾರ್ಯವಾಗಿ ನಾವು ಬೆಲೆ ಹೆಚ್ಚಿಸಿದ್ದೇವೆಂದು ಖಾಸಗಿ ಟ್ಯಾಂಕರ್ ಮಾಲೀಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಅಸಮಾಧಾನ: ಕೋಲಾರ ನಗರಸಭೆಗೆ ಕಳೆದ 20 ವರ್ಷಗಳಿಂದ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಮೂಲ ಸೌಕರ್ಯ ನೀಡಿ ತೆರಿಗೆ ವಸೂಲಿ ಮಾಡಿ ಎಂದು ಕೆಲವು ವಾರ್ಡುಗಳ ಜನತೆ ಹೇಳುತ್ತಿದ್ದರೆ, ಕೆಲವು ವಾರ್ಡುಗಳಲ್ಲಿ ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿದ್ದರೂ ನಗರಸಭೆಯಿಂದ ಯಾವುದೇ ಸೌಲಭ್ಯ ಸಿಗದಿರುವುದರಿಂದ ತೆರಿಗೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೆರಿಗೆ ಸಂಗ್ರಹ ಕುಸಿತ: ಸ್ವಚ್ಛತೆ, ನೀರು, ದೀಪ ಇನ್ನಿತರ ವ್ಯವಸ್ಥೆ ಇಲ್ಲದಿದ್ದರೂ ಕೆಲವು ವಾರ್ಡುಗಳಲ್ಲಿ ಜನತೆ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಮಹೇಂದ್ರ ಕುಮಾರ್ ಅಮಾನತುಗೊಂಡ ನಂತರ ತೆರಿಗೆ ಸಂಗ್ರಹಣೆಯಲ್ಲಿ ತೀರಾ ಕುಸಿತವಾಗಿದೆ. ಪ್ರತಿನಿತ್ಯ 50 ರಿಂದ 1.50 ಲಕ್ಷ ತೆರಿಗೆ ಸಂಗ್ರಹ ಆಗುತ್ತಿತ್ತು. ಈಗ ತೆರಿಗೆ ವಸೂಲಾತಿಗೆ ಕ್ರಮ ಕೈಗೊಳ್ಳದಂತಾಗಿದೆ ಎಂದು ನಗರಸಭಾ ಸದಸ್ಯರು ಕೆಲವರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದಾರೆ.
ನೀರಿನ ಸಮಸ್ಯೆಗೆ ಕ್ರಮ ಕೈಗೊಳ್ಳಿ: ಪ್ರಭಾರ ಆಯುಕ್ತರಿಂದ ಸಮಸ್ಯೆ ನಿವಾರಣೆ ಕಷ್ಟ. ಕೂಡಲೇ ದಕ್ಷ ಹಾಗೂ ಪ್ರಾಮಾಣಿಕ ಆಯುಕ್ತರನ್ನು ನೇಮಕ, ನೀರಿನ ಸಮಸ್ಯೆ ತ್ವರಿತಗತಿಯಲ್ಲಿ ನಿವಾರಣೆ ಹಾಗೂ ಮುಷ್ಕರ ನಡೆಸುತ್ತಿರುವ ಟ್ಯಾಂಕರ್ ಮಾಲೀಕರ ಮನವೊಲಿಸಿ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ನದಸ್ಯರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.
ಕಳೆದ ಒಂದು ವಾರದಿಂದ ಯಾವುದೇ ಖಾತೆಗಳು ಆಗುತ್ತಿಲ್ಲ. ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ. ನಗರಸಭೆ ಕಚೇರಿಯಲ್ಲಿ ಜನತೆಯ ಕೆಲಸ ಸ್ತಬ್ಧವಾಗಿದೆ. ಅನಾಥ ರೀತಿಯಲ್ಲಿ ಕಾಣುತ್ತಿರುವ ನಗರಸಭೆಗೆ ಸೂಕ್ತ ಸರ್ಜರಿ ಮಾಡಿ ಎಂದು ಸದಸ್ಯರು ಕೇಳಿಕೊಂಡಿದ್ದು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಆಡಳಿತಕ್ಕೆ ಚುರುಕು ಮುಟ್ಟಿಸದಿದ್ದರೆ ಜನತೆಯ ಗೋಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
-ಪಾ.ಶ್ರೀ. ಅನಂತ್ರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

