ಜೆಡಿಎಸ್ ಪ್ರವಾಸಕ್ಕೆ ಆನಂದ್ ಗೈರು
ಕೋಲಾರ: ಮುಂದಿನ ತಿಂಗಳು ಸೆ.6ರಂದು ನಡೆಯಲಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ 16 ಮಂದಿ ಸದಸ್ಯರು ಕೈಗೊಂಡಿರುವ ಪ್ರವಾಸಕ್ಕೆ ಬಿಜೆಪಿ ಮುಖಂಡ, ಬಂಗಾರಪೇಟೆ ತಾಲೂಕಿನ ಜಿಪಂ ಸದಸ್ಯ ಎಂ.ಎಸ್.ಆನಂದ್ ಗೈರಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ ನೀಡದ ಕಾರಣ, ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ವಿರುದ್ಧ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಎಂ.ಎಸ್.ಆನಂದ್ ನಂತರ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು.
ಬಿಜೆಪಿಯ ಮಂಜುಳಾ ವೆಂಕಟೇಶ್ ಅಧ್ಯಕ್ಷಗಿರಿಯ ಅವಧಿ ಮುಗಿದ ನಂತರ ನಡೆದ ಎರಡನೇ ಅವಧಿಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟು, ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಮನೆಯಲ್ಲಿ ನಡೆದ ರಾಜಿ ಸಂಧಾನದಲ್ಲಿ ಭಾಗಿಯಾಗಿ ಆಗ ತಾನೇ ಶಾಸಕ ವರ್ತೂರ್ ಪ್ರಕಾಶ್ ಬಣದಿಂದ ಜೆಡಿಎಸ್‌ಗೆ ಜಿಗಿದಿದ್ದ ಚೌಡೇಶ್ವರಿ ರಾಮಚಂದ್ರ ಪರವಾಗಿ ಮತ ಹಾಕಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದರು.
ಪಕ್ಷಾಂತರ ಕರತಲಾಮಲಕ: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ತಯಾರಿ ನಡೆಸಿ, ಅಲ್ಲೂ ಸಲ್ಲದೆ ಬಿಜೆಪಿ ಸೇರಿ ಅಭ್ಯರ್ಥಿಯಾದ ಆನಂದ್ ಹೀನಾಯ ಸೋಲು ಕಂಡ ನಂತರ ಚೌಡೇಶ್ವರಿ ಅವಧಿಯಲ್ಲಿ ಜಿಪಂ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು.
ಪ್ರತಿ ಚುನಾವಣೆಯ ಸಂದರ್ಭದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳುವ ಆನಂದ್ ಅವರನ್ನು ಯಾವುದೇ ಕಾರಣಕ್ಕೂ ನಂಬಬಾರದು, ಜೆಡಿಎಸ್ ಜೊತೆ ಸ್ವಪ್ರೇರಣೆಯಿಂದ ಗುರುತಿಸಿಕೊಂಡು ಯಾವುದೇ ಬೇಡಿಕೆ ಇಲ್ಲದೆ ಬೆಂಬಲ ನೀಡಿದಲ್ಲಿ ಮಾತ್ರ ತಂಡಕ್ಕೆ ಸೇರಿಸಿಕೊಳ್ಳೋಣ, ಬಲವಂತವಾಗಿ ಬೆಂಬಲ ಪಡೆಯುವುದು ಬೇಡವೆಂದು ಜೆಡಿಎಸ್ ಮುಖಂಡರು ದೃಢ ನಿರ್ಧಾರ ಕೈಗೊಂಡ ಹಿನ್ನಲೆಯಲ್ಲಿ ಆನಂದ್ ಗುರುವಾರ ತಾಲೂಕಿನ ನರಸಾಪುರ ಸಮೀಪದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಭೆಗೆ ಗೈರು ಹಾಜರಾಗಿದ್ದರಿಂದ ಜೆಡಿಎಸ್‌ನ13 ಹಾಗೂ ಬಿಜೆಪಿ 3 ಸದಸ್ಯರು ಆನಂದ್ ಅವರನ್ನು ಕೈಬಿಟ್ಟು ಪ್ರವಾಸ ತೆರಳಿದ್ದಾರೆ.
ಎಂ.ಎಸ್.ಆನಂದ್ ಬೆಂಬಲ ಈಗ ಜೆಡಿಎಸ್‌ಗೆ ಬೇಕಾಗಿಲ್ಲ, ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಸೆ.6ರಂದು ನಡೆಯುವ ಚುನಾವಣೆಯಲ್ಲಿ ಅವರಾಗಿಯೇ ಜೆಡಿಎಸ್ ಪರ ಮತ ಹಾಕಬಹುದು. ಇಲ್ಲದಿದ್ದಲ್ಲಿ ಯಾವುದೇ ಬಲವಂತ ಇಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಏಕಾಂಗಿ ಪ್ರವಾಸ: ಈ ಮಧ್ಯೆ ಎಂ.ಎಸ್.ಆನಂದ್ ಯಾರ ಕೈಗೂ ಸಿಗದೆ ಏಕಾಂಗಿಯಾಗಿ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷ ಜಿಪಂ ಅಧಿಕಾರ ಹಿಡಿಯಲು ತಂತ್ರಗಾರಿಕೆ ರೂಪಿಸುತ್ತಿದ್ದು ಆನಂದ್ ಬೆಂಬಲ ಕೋರಿದ್ದಾರೆ ಎನ್ನಲಾಗಿದೆ.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮನಸ್ಸು ಮಾಡಿದಲ್ಲಿ ಮಾತ್ರ ಜಿಪಂ ಅಧಿಕಾರ ಹಿಡಿಯಲು ಸಾಧ್ಯ. ಕೇರಳ ರಾಜ್ಯದ ಪ್ರವಾಸದಲ್ಲಿರುವ ಜೆಡಿಎಸ್ ಸದಸ್ಯರಲ್ಲಿ ಕೆಲವರನ್ನು ಮನವೊಲಿಸುವ ಶಕ್ತಿ ಕೆ.ಎಚ್.ಮುನಿಯಪ್ಪನವರಿಗೆ ಇದೆ. ಜೊತೆಗೆ ಶಾಸಕರಾದ ರಮೇಶ್‌ಕುಮಾರ್, ಕೆ.ಎಂ.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್ ಸಹಾಯದಿಂದ ಅವರವರ ಕ್ಷೇತ್ರದ ಜಿಪಂ ಸದಸ್ಯರನ್ನು ಹಾಗೂ ಮಾಲೂರು ತಾಲೂಕಿನ ಸದಸ್ಯರನ್ನು ಒಗ್ಗೂಡಿಸಿ ರಾಜಕೀಯ ರಣತಂತ್ರ ರೂಪಿಸಿದಲ್ಲಿ ಅಧಿಕಾರ ಹಿಡಿಯಲು ಸುಲಭವಾಗುತ್ತದೆ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.
ಶಾಸಕ ವರ್ತೂರ್ ಪ್ರಕಾಶ್ ಬಣಕ್ಕೆ ಬಹುಮತ ಇಲ್ಲದಿರುವುದರಿಂದ ಇನ್ನು ಎರಡು ದಿನ ರಾಜಕೀಯ ಬೆಳವಣಿಗೆ ಗಮನಿಸಿ ನಂತರ ಆಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

