ಕೂಲಿಯಾಳಾಗುತ್ತಿರುವ ಅನ್ನದಾತ!
ಕ.ಪ್ರ.ವಾರ್ತೆ , ಚಿಕ್ಕಬಳ್ಳಾಪುರ , ಆ.30
ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಫಲವತ್ತಾದ ಕೃಷಿ ಭೂಮಿ ಬಿಟ್ಟುಕೊಟ್ಟಿರುವ ರೈತರಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾಡಳಿತ ಕಳೆದ ಐದಾರು ವರ್ಷಗಳಿಂದಲೂ ಹೆಣಗಾಡುತ್ತಿದೆ. ಇದರಿಂದ ಪರಿಹಾರ ಸಿಗದೆ ಅನೇಕ ಮಂದಿ ರೈತರು ಬೀದಿಪಾಲಾಗುತ್ತಿದ್ದಾರೆ.
ಈಗಾಗಲೇ ಪೂರ್ತಿ ಜಮೀನನ್ನು ಕಳೆದುಕೊಂಡ ಹಲವರು ಕೃಷಿ ಕ್ಷೇತ್ರದಿಂದ ದೂರವಾಗಿ ಬೇರೆಯವರ ಬಳಿ ಕೆಲಸ ಮಾಡುತ್ತಿದ್ದು, ಈ ಮೂಲಕ ಹಿಂದೆ ಭೂ ಒಡೆಯರಾಗಿ ಬಾಳಿದ ಅನೇಕರು ಇದೀಗ ಕೂಲಿಕಾರ್ಮಿಕರಾಗುತ್ತಿದ್ದಾರೆ.
ಕಳೆದ 2007 ರಲ್ಲಿ ಚಿಕ್ಕಬಳ್ಳಾಪುರ- ಬಾಗೇಪಲ್ಲಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ ಸುಮಾರು 578 ಎಕರೆ ಕೃಷಿ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿತ್ತು. ಆಗ ಭೂಮಿಯನ್ನು ಕಳೆದುಕೊಳ್ಳುತ್ತಿದ್ದ ರೈತರಿಗೆ ರಸ್ತೆ ನಿರ್ಮಾಣ ಕಾಮಗಾರಿ ಮುಗಿಯುವುದರೊಳಗಾಗಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಪ್ರಾರಂಭದಲ್ಲಿ ಕೆಲ ರೈತರಿಗೆ ಮಾತ್ರ ಸ್ವಲ್ಪ ಹಣ ಕೊಟ್ಟಿದ್ದು, ಮತ್ತೆ ಅನೇಕರಿಗೆ ಇದುವರೆಗೂ ಪರಿಹಾರವನ್ನೇ ನೀಡಿಲ್ಲ. ಹಿಂದೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದರಿಂದ ಆಕ್ರೋಶಗೊಂಡ ಕೆಲ ರೈತರು ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಅಡ್ಡಿಯನ್ನುಂಟು ಮಾಡಿದ್ದರು.
ಆಗ ಸಕಾರಾತ್ಮಕ ಭರವಸೆ ಕೊಟ್ಟು ರೈತರು ತಣ್ಣಗಾಗುವಂತೆ ಮಾಡಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡು ವರ್ಷಗಳು ಕಳೆಯುತ್ತಿವೆ. ರೈತರ ಜಮೀನಿನಲ್ಲಿ ನಿರ್ಮಾಣವಾಗಿರುವ ಬೈಪಾಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಲೇ ಇವೆ. ಆದರೆ, ಚಾತಕ ಪಕ್ಷಿಗಳಂತೆ ನಿರೀಕ್ಷೆಯಲ್ಲಿ ಕಾಯುತ್ತಿರುವ ರೈತರಿಗೆಲ್ಲಾ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ. ಕೇವಲ ಮಾತುಕತೆಗಳಲ್ಲಿಯೇ ಕಾಲಹರಣವಾಗುತ್ತಿದ್ದು, ರೈತರಿಗೆ ಭರವಸೆ ನೀಡಿ ಜಿಲ್ಲಾಧಿಕಾರಿಗಳು ವರ್ಗಾವಣೆಯಾಗುತ್ತಿದ್ದಾರೆ.
ಪರಿಹಾರ ಇಲ್ಲ: ಬೈಪಾಸ್ ರಸ್ತೆ ನಿರ್ಮಾಣಕ್ಕೆ ಪೂರ್ತಿ 3 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಈಗ ನಮಗೆ ಕೃಷಿ ಭೂಮಿ ಇಲ್ಲ. ಕೇವಲ ಮನೆಯಲ್ಲಿ ಎರಡು ಹಸುಗಳ ಸಾಕಾಣೆಯಿಂದ ಹಾಲು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದೇವೆ. ಕೃಷಿ ಚಟುವಟಿಕೆಗಳಲ್ಲಿ ನೆರವಾಗುತ್ತಿದ್ದ ನಮ್ಮ ಮನೆಯಲ್ಲಿನವರು ಬೇರೆ ಕಡೆಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಬೇರೆಯವರಿಗೆ ಕೆಲಸ ನೀಡುತ್ತಿದ್ದ ನಾವು ಈಗ ಬೇರೆಯವರ ಬಳಿ ಕೆಲಸ ಮಾಡಬೇಕಾಗಿದೆ. ಮತ್ತೊಂದೆಡೆ ಪರಿಹಾರ ಕೊಡುತ್ತೇವೆ ಎಂದು ಜಿಲ್ಲಾಡಳಿತ ಹೇಳುತ್ತಲೇ ಬರುತ್ತಿದೆ. ಆದರೆ, ಇದುವರೆಗೂ ನಮಗೆ ಪರಿಹಾರ ಸಿಕ್ಕಿಲ್ಲ. ಆ ಹಣವಾದರೂ ಬಂದರೆ ಬೇರೆ ಕಡೆ ಭೂಮಿಯನ್ನು ಕೊಂಡು ಕೃಷಿ ಚಟುವಟಿಕೆ ಕೈಗೊಳ್ಳಬಹುದು. ಇಲ್ಲವೇ ಸ್ವಂತ ಉದ್ಯಮ ಕೈಗೊಳ್ಳುವುದರ ಜತೆಗೆ ಮಾಡಿದ ಸಾಲವನ್ನಾದರೂ ತೀರಿಸಬಹುದು. ಈಗ ದಿನೇ ದಿನೇ ಭೂಮಿ ಬೆಲೆ ದುಪ್ಪಟ್ಟಾಗುತ್ತಿದೆ. ಇದರಿಂದ ಪರಿಹಾರ ಕೊಡಲು ವಿಳಂಬ ಮಾಡಿದಷ್ಟು ನಮಗೆ ನಷ್ಟ ಎಂದು ಬೈಪಾಸ್ ರಸ್ತೆಗೆ ಭೂಮಿ ಕಳೆದುಕೊಂಡ ತಾಲೂಕಿನ ಬೀಡಗಾನಹಳ್ಳಿ ರೈತ ಮನೋಹರ್ ಅಳಲು ತೋಡಿಕೊಳ್ಳುತ್ತಾರೆ.
ಸಭೆಯಲ್ಲಿ ಚರ್ಚೆ: ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದರಿಂದ ಆಕ್ರೋಶಗೊಂಡಿದ್ದ ರೈತರು ಜಿಲ್ಲಾಡಳಿತಕ್ಕೆ ಕೆಲ ದಿನಗಳ ಗಡುವು ನೀಡಿ ಸಮಸ್ಯೆಯನ್ನು ಬಗೆಹರಿಸಲು ಇತ್ತೀಚೆಗೆ ಮನವಿ ಪತ್ರ ಸಲ್ಲಿಸಿದ್ದರು. ಇದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರೈತರನ್ನೊಳಗೊಂಡಂತೆ ಸಭೆ ನಡೆಸಿದ ಜಿಲ್ಲಾಧಿಕಾರಿ, ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ತಾಲೂಕಿನ ರೈತರ ಭೂಮಿಗೆ ತಲಾ ಎಕರೆಗೆ 20 ಲಕ್ಷ ಮತ್ತು ಬಾಗೇಪಲ್ಲಿ ವ್ಯಾಪ್ತಿಯಲ್ಲಿ ಬರುವ ಭೂಮಿಗೆ ತಲಾ ಎಕರೆಗೆ 15 ಲಕ್ಷ ನೀಡುವ ಅಭಿಪ್ರಾಯ ತಿಳಿಸಿದ್ದಾರೆ. ಇದಕ್ಕೆ ರೈತರು ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಕೇವಲ ಚರ್ಚೆಯಿಂದ ಕೆಲಸವಾಗದೂ ಎನ್ನುವುದನ್ನರಿತಿರುವ ರೈತರು, ಈಗ ತೀರ್ಮಾನ ಕೈಗೊಂಡಂತಾದರೂ ತ್ವರಿತವಾಗಿ ಪರಿಹಾರ ನೀಡುವಂತೆ ಮಾಡಲು ಕೇಂದ್ರ ಕೃಷಿ ಸಚಿವರು ಮತ್ತು ಪ್ರಭಾವಿ ನಾಯಕರಿಂದಲೂ ಒತ್ತಡ ಹಾಕಿಸುವ ಪ್ರಯತ್ನದಲ್ಲಿದ್ದಾರೆ.
ತ್ವರಿತ ಪರಿಹಾರ ನೀಡಲು ಆಗ್ರಹ
ಕೃಷಿ ಭೂಸ್ವಾಧೀನ, ಕೈಗಾರಿಕೆಗಳ ಸ್ಥಾಪನೆ ಮತ್ತು ಅವುಗಳಿಗೆ ಅನುಕೂಲ ಮಾಡಿಕೊಡುವ ವಿಷಯದಲ್ಲಿ ತ್ವರಿತವಾಗಿ ಸ್ಪಂದಿಸುವ ಸರ್ಕಾರ ರೈತರ ಪರವಾಗಿಯೂ ಬೇಗ ನಿರ್ಧಾರ ಕೈಗೊಳ್ಳಳಬೇಕು. ಈಗಾಗಲೇ ಕೈಕೊಡುವ ಮಳೆ, ಬೆಳೆದ ಬೆಳೆಗೆ ಅಸಮರ್ಪಕ ಬೆಲೆ, ದುಬಾರಿಯಾಗುತ್ತಿರುವ ವೆಚ್ಚ ಸೇರಿದಂತೆ ನಾನಾ ಕಾರಣಗಳಿಂದ ಬೇಸತ್ತು ಅನೇಕ ಮಂದಿ ರೈತರು ಕೃಷಿ ಕ್ಷೇತ್ರದಿಂದ ದೂರವಾಗಿ ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಸಮಸ್ಯೆಗೆ ಸಿಲುಕಿಕೊಳ್ಳದೆ ಲಾಭ ಗಳಿಸಲು ಫಲವತ್ತಾದ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನಿಧಾನವಾಗಿ ಕೃಷಿ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಒತ್ತು ಕೊಟ್ಟು ರೈತರ ನೆರವಿಗೆ ಧಾವಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಜಿಲ್ಲೆಯ ರೈತರು, ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಗೆ ತ್ವರಿತವಾಗಿ ಪರಿಹಾರ ನೀಡಬೇಕು. ಈ ಮೂಲಕ ಈಗಾಗಲೇ ಅರ್ಧ ಭೂಮಿ ಕಳೆದುಕೊಂಡಿರುವ ರೈತರು ಸಹ ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಗೆ ಬೇಸರಗೊಂಡು ಕೃಷಿಯಿಂದ ದೂರ ಉಳಿಯದಂತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
-ಎನ್. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

