ಕೋಲಾರ

ಮಚ್ಚು ಹಿಡಿದು ಪ್ರಾಣ ಬೆದರಿಕೆ

Published On :

ಕೆಜಿಎಫ್: ಬೆಂಗಳೂರು ಮೂಲದವರ ಹತ್ತು ಮಂದಿಯ ಗುಂಪೊಂದು ಲಾಂಗ್ ಮತ್ತು ಮಚ್ಚನ್ನು ಹಿಡಿದು ಪ್ರಾಣ ಬೆದರಿಕೆ ಹಾಕಿದ್ದಲ್ಲದೆ ಜಾತಿ ನಿಂದನೆ ಮಾಡಿರುವ ಘಟನೆ ಬೆಮೆಲ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾರತ್‌ನಗರದ ಸಮೀಪವಿರುವ ಮೋರಿಟ್ ಫಾರ್ಮ್ ಪ್ಲೋನ್ಟೇಶನ್‌ನಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿರುವ ಭಾಸ್ಕರನ್ ಎಂಬವರು ಪ್ಲೋನ್ಟೇಶನ್‌ಗೆ ಹೊಂದಿಕೊಂಡಿರುವ ಕೆ.ಕೆ.ದಿಲೀಪ್‌ರೆಡ್ಡಿ ಅವರಿಗೆ ಸೇರಿದ 4 ಎಕರೆ ಜಮೀನನ್ನು ನೋಡಿಕೊಳ್ಳುತ್ತಿದ್ದು ಅದರಲ್ಲಿ ಟೋಮೆಟೋ ಬೆಳೆ ಹಾಕಿದ್ದರು. ಬೆಂಗಳೂರು ನಿವಾಸಿಗಳಾದ ನಸೀಮ್‌ತಾಜ್ ಅವರ ಸಂಬಂಧಿಕರಾದ ಮುಜಾಹಿದ್ ಮತ್ತು ಮೊಹ್ಮದ್ ನದೀಮ್‌ಪಾಷಾ ಅವರೊಂದಿಗೆ ಇತರೆ 10 ಮಂದಿ ಗುಂಪೊಂದು ಟೆಂಪೋದಲ್ಲಿ ಬಂದಿದ್ದಾರೆ. ಗೇಟಿನ ಮತ್ತು ಸಿಬ್ಬಂದಿಯ ಕೊಠಡಿಯ ಬೀಗ ಮುರಿದು ಸುಮಾರು 20 ಸಾವಿರ ಮೌಲ್ಯದ ಟೋಮೆಟೋ ಬೆಳೆ ನಾಶಪಡಿಸಿದ್ದು ಅದನ್ನು ಪ್ರಶ್ನಿಸಿದ ಭಾಸ್ಕರ್ ಅವರಿಗೆ ಲಾಂಗ್, ಮಚ್ಚು ಮತ್ತು ಕಬ್ಬಿಣದ ರಾಡನ್ನು ತೋರಿಸಿ ನೀನು ಮತ್ತೊಮ್ಮೆ ಇಲ್ಲಿ ಕಾಣಿಸಿಕೊಂಡರೆ ನಿನ್ನನ್ನು ಮತ್ತು ನಿಮ್ಮ ಆಳುಗಳನ್ನು ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಜೊತೆಗೆ ತಮ್ಮನ್ನು ಕುರಿತು ಜಾತಿ ನಿಂದನೆ ಮಾಡಿದ್ದಾರೆ ಎಂದು ಭಾಸ್ಕರ್ ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಖೋ ಖೋ ಪಂದ್ಯ
ಕೋಲಾರ:
ಬೆಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಖೋ ಖೋ ಪಂದ್ಯಾವಳಿಯನ್ನು ಇಲ್ಲಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸೆ. 3 ರಂದು ಆಯೋಜಿಸಲಾಗಿದೆ. ವಿವಿಧ ಕಾಲೇಜುಗಳಿಂದ 21 ತಂಡಗಳು ಭಾಗವಹಿಸಲಿವೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಕ್ಕಲಿಗರು ಒಗ್ಗಟಾಗಲಿ: ರಮೇಶ್  ಸಲಹೆ
ಚಿಕ್ಕಬಳ್ಳಾಪುರ:
ಒಕ್ಕಲಿಗರೆಲ್ಲ ಒಗಟ್ಟಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಯಲುವಹಳ್ಳಿ ರಮೇಶ್ ಹೇಳಿದರು. ತಾಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಒಕ್ಕಲಿಗರ ಯುವ ಸೇನೆಯ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘಟನೆ ಪ್ರಾರಂಭವಾಗಿ ಒಂದು ವರ್ಷ ಕಳೆದಿದೆ. ಒಕ್ಕಲಿಗ ಜನಾಂಗದ ಏಳಿಗೆಗಾಗಿ ಸಂಘಟನೆ ಅನೇಕ ಕಾರ್ಯ ಚಟುವಟಿಕೆ ಹಮ್ಮಿಕೊಂಡಿದೆ. ತಾಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಒಕ್ಕಲಿಗರ ಯುವ ಸೇನೆಯ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದವರಿಗೆ ಪ್ರಾಣ ಬೆದರಿಕೆ ಹಾಕಿ ಹಾಗೂ ಕೆಂಪೇಗೌಡರ ಭಾವಚಿತ್ರವುಳ್ಳ ಬ್ಯಾನರ್‌ಗೆ ಕಿಡಿಗೇಡಿಗಳಿಗೆ ಬೆಂಕಿ ಹಾಕಿ ಅಪಮಾನ ಮಾಡಿರುವುದು ಖಂಡನೀಯ ಎಂದರು.   ಒಕ್ಕಲಿಗರು ರಾಜ್ಯಕ್ಕೆ ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಒಕ್ಕಲಿಗರು ಅನ್ನದಾತರು, ಆಶ್ರಯದಾತರು. ಯಾರಿಗೂ ತೊಂದರೆ ಮಾಡುವುದಿಲ್ಲ ಎಂದ ಅವರು, ನಮ್ಮ ಜನಾಂಗದಲ್ಲೇ ದ್ವೇಷದಿಂದ ಕೆಲವರನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ಅದು ನಿಲ್ಲಬೇಕು ಎಂದರು. ಒಕ್ಕಲಿಗರು ಸಂಘಟಿತರಾಗಿ ಜನಾಂಗದ ಬಡಜನರ ಪರ ಹೋರಾಟ ನಡೆಸಬೇಕು ಎಂದರು.
ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ತಮ್ಮೇಶ್‌ಗೌಡ ಮಾತನಾಡಿ, ಯುವಸೇನೆ ಜನಾಂಗದ ಬಡವರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಹಾಗೂ ಅನೇಕ ಜನಪರ ಹೋರಾಟಗಳಲ್ಲಿ ಭಾಗವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಎ.ಬಿ.ದೇವಯ್ಯ, ಸಬ್ ಇನ್ಸ್‌ಪೆಕ್ಟರ್ ನಯಾಜ್‌ಬೇಗ್, ಒಕ್ಕಲಿಗರ ಯುವ ಸೇನೆಯ ತಾಲೂಕು ಅಧ್ಯಕ್ಷ ಮುನೇಗೌಡ, ಕಸಬಾ ಯುವ ಸೇನೆಯ ಅಧ್ಯಕ್ಷ ಮೂರ್ತಿ, ಗ್ರಾ,ಪಂ ಸದಸ್ಯರಾದ ರಾಮಾಂಜಿನಪ್ಪ, ಚನ್ನಕೇಶವ ಮೂರ್ತಿ, ನಾರಾಯಣಸ್ವಾಮಿ, ಮಂಚನಬಲೆ ಶ್ರೀನಿವಾಸ್, ಯಲುವಹಳ್ಳಿ ಸೊಣೇಗೌಡ, ಉಮಾಶಂಕರ್, ನಾಯನಹಳ್ಳಿ ನವೀನ್, ಚೀಮನಹಳ್ಳಿ ನಾರಾಯಣಪ್ಪ, ಎಸ್. ಕೃಷ್ಣಪ್ಪ, ದಿಬ್ಬೂರು ರಾಮಣ್ಣ, ಅಗಲಗುರ್ಕಿ ಚಲಪತಿ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಕಿಶೋರ್, ಚೀಮನಹಳ್ಳಿ ಮುನಿರಾಜು,ದೇವರಾಜ್ ಮತರರು ಇದ್ದರು.

ಒಕ್ಕಲಿಗ ಯುವ ಸೇನೆಗೆ ಆಯ್ಕೆ
ಚಿಕ್ಕಬಳ್ಳಾಪುರ:
ಒಕ್ಕಲಿಗ ಯುವ ಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿ ಹೊನ್ನೇನಹಳ್ಳಿ ಆರ್.ಕಿಶೋರ್‌ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸೇನೆ ಗೌರವಾಧ್ಯಕ್ಷ ಎಚ್.ಸಿ.ತಮ್ಮೇಶ್‌ಗೌಡ ತಿಳಿಸಿದ್ದಾರೆ. ಒಕ್ಕಲಿಗ ಯುವ ಸೇನೆಯು ಕಳೆದ ವರ್ಷ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದು ಜಿಲ್ಲಾ, ಘಟಕ, ಹೋಬಳಿ ಘಟಕಗಳು, ಪಂಚಾಯತಿ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲಾಧ್ಯಕ್ಷರಾಗಿ ಹೊನ್ನೇನಹಳ್ಳಿ ಆರ್.ಕಿಶೋರ್‌ಕುಮಾರ್ ಪದಾಧಿಕಾರಿಗಳ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.

ಕನಿಷ್ಠ ಕೂಲಿಗೆ ಆಗ್ರಹಿಸಿ ಸಮಾವೇಶ
ಚಿಕ್ಕಬಳ್ಳಾಪುರ:
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕನಿಷ್ಠ ಕೂಲಿ ಹಾಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಟ್ಟದ ಸಮಾವೇಶವನ್ನು ಬೆಂಗಳೂರಿನ ಸೆನೆಟ್ ಹಾಲ್, ಸೆಂಟ್ರಲ್ ಕಾಲೇಜು ಆವರಣದಲ್ಲಿ ಸೆ.1ರಂದು ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್‌ಐ ಮುಖಂಡ ಶಿವಪ್ಪ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಸಾವಿರಾರ ಮಂದಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆಯಿಲ್ಲ. ಕನಿಷ್ಠ ಕೂಲಿಯೂ ಇಲ್ಲ. ಎಲ್ಲ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳಿಗೆ ಸರ್ಕಾರದ ವತಿಯಿಂದ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಬೇಕು ಎಂದರು.

ಗಣಕಯಂತ್ರ ಉದ್ಘಾಟನೆ
ಕೋಲಾರ:
ಕಕ್ಷಿದಾರರ ಹಾಗೂ ಸಾರ್ವಜನಿಕರಿಗೆ ನ್ಯಾಯಾಲಯಗಳಲ್ಲಿನ ಮೊಕದ್ದಮೆಗಳ ಮಾಹಿತಿ ಅಥವಾ ಇತರೆ ಪ್ರಕರಣಗಳ ಮಾಹಿತಿಯನ್ನು ಅವರೇ ಖುದ್ದು ಪಡೆಯುವ ಸಲುವಾಗಿ ಕಿಯೋಸ್ಕ್ ಗಣಕ ಯಂತ್ರ ಅಳವಡಿಸಿದ್ದು, ಅದರ ಉದ್ಘಾಟನೆಯನ್ನುನ  ಸೆ.2 ರಂದು ಬೆಳಿಗ್ಗೆ 10.15 ಗಂಟೆಗೆ ಜಿಲ್ಲಾ ನ್ಯಾಯಾಲಯಗಳ ಸಮುಚ್ಚಯದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಾಂಪಿಯನ್ ಕಿಶೋರ ಶಾಲೆ
ಚಿಂತಾಮಣಿ:
ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಕ್ರೀಡಾ ಸ್ಪರ್ಧೆಗಳಲ್ಲಿ ಪಟ್ಟಣದ ಪ್ರತಿಷ್ಠಿತ ಶಾಲೆ ಕಿಶೋರ ವಿದ್ಯಾಭವನವು ಅದ್ವಿತೀಯ ಸಾಧನೆ ಮಾಡಿ ತಾಲೂಕು ಮಟ್ಟದ ಚಾಂಪಿಯನ್ ಶಾಲೆಯಾಗಿ ಹೊರಹೊಮ್ಮಿದೆ. ಪ್ರಾಥಮಿಕ ಶಾಲಾ ಹಂತದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳು 6 ಪ್ರಥಮ, 2 ದ್ವಿತೀಯ ಮತ್ತು 1 ತೃತೀಯ ಸ್ಥಾನ, ಒಟ್ಟು 43 ಅಂಕಗಳನ್ನು ಗಳಿಸಿ ಚಾಂಪಿಯನ್‌ಶಿಪ್ ಪಡೆದಿದ್ದಾರೆ. ಭಾಗವಹಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳು 25 ಪ್ರಥಮ, 13 ದ್ವಿತೀಯ ಮತ್ತು 6 ತೃತೀಯ ಸ್ಥಾನ ಗಳಿಸಿ ಒಟ್ಟು 200 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. 9 ನೇ ತರಗತಿ ವಿದ್ಯಾರ್ಥಿನಿ ಹರಿಣಿ ಜಾವಲಿಯನ್, ಹರ್ಡಲ್ಸ್, ಷಾಟ್‌ಪುಟ್ ಮತ್ತು 4 ಬೈ 100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನಗಳಿಸಿ ತಾ. ಮಟ್ಟದ ಚಾಂಪಿಯನ್ ಆಗಿರುವುದಕ್ಕೆ ಮುಖ್ಯ ಶಿಕ್ಷಕ ಕೆಂಚೇಗೌಡ ಮತ್ತು ಪ್ರಾಂಶುಪಾಲಪ್ರೊ.ಸಿರಾಜುಲ್ಲಾ ಬೇಗ್ ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.