ತಮಿಳ್ನಾಡಿನ ಅನಧಿಕೃತ ಅಕ್ಕಿ ಪಡೆಯದಿರಿ
ಬಂಗಾರಪೇಟೆ: ತಮಿಳುನಾಡಿನಿಂದ ಪಟ್ಟಣಕ್ಕೆ ಪಡಿತರ ಅಕ್ಕಿ ಅನಧಿಕೃತವಾಗಿ ಸರಬರಾಗುತ್ತಿದ್ದು ಇದನ್ನು ಅಕ್ಕಿ ಗಿರಣಿ ಮಾಲಿಕರು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು ಎಂದು ಪಡಿತರ ಅಕ್ಕಿ ಅಕ್ರಮ ತಡೆಗಟ್ಟಲು ತಮಿಳುನಾಡು ಸರ್ಕಾರ ಎಸ್ಪಿ ಸ್ವಾಮಿನಾಥನ್ ನೇತೃತ್ವದಲ್ಲಿ ನೇಮಿಸಿರುವ ವಿಶೇಷ ತಂಡದ ಬುಧವಾರ ಪಟ್ಟಣದಲ್ಲಿ ಅಕ್ಕಿ ಗಿರಣಿ ಮಾಲೀಕರ ಸಭೆಯಲ್ಲಿ ಒತ್ತಾಯಿಸಿದರು.
ತಮಿಳುನಾಡು ಸರ್ಕಾರ ಅಲ್ಲಿನ ಜನರಿಗೆ ಉಚಿತವಾಗಿ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಪೂರೈಕೆ ಮಾಡುತ್ತಿದ್ದು ಈ ಅಕ್ಕಿಯನ್ನು ಕೆಲವು ಮಾಫಿಯಾದವರು ಅರ್ಹ ಫಲಾನುಭವಿಗಳಿಗೆ ತಲುಪಿಸದೆ ಅದನ್ನು ಅಕ್ರಮವಾಗಿ ಸರ್ಕಾರದ ಕಣ್ಣು ತಪ್ಪಿಸಿ ರಾಜ್ಯದ ಹಲವು ಕಡೆ ಲಾರಿಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಅದರಲ್ಲಿ ಬಂಗಾರಪೇಟೆ ಪಟ್ಟಣಕ್ಕೆ ಅತಿ ಹೆಚ್ಚು ಅಕ್ಕಿ ಪೂರೈಕೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳ ತಂಡ ಪಟ್ಟಣಕ್ಕೆ ಭೇಟಿ ನೀಡಿ ಇಲ್ಲಿನ ಪೊಲೀಸರ ಹಾಗೂ ಅಕ್ಕಿ ಗಿರಣಿ ಮಾಲೀಕರ ಸಂಘದ ಸದಸ್ಯರ ಸೌಹಾರ್ದಯುತ ಸಭೆಯನ್ನು ಕರೆದು ತಮಿಳುನಾಡಿನಿಂದ ಬರುವ ಯಾವುದೇ ಅಕ್ಕಿಯನ್ನು ಪಡೆಯದೆ ನಿರಾಕರಿಸಬೇಕೆಂದು ಮನವರಿಕೆ ಮಾಡಿದರು.
ಈ ವೇಲೆ ಸಂಘದ ಕೆಲ ಸದಸ್ಯರು ನಾವು ವ್ಯಾವಾರಸ್ಥರು ನಮಗೆ ಇದು ಪಡಿತರ ಮತ್ತೊಂದು ಎಂದು ತಿಳಿಯುವುದಿಲ್ಲ ಮಾಲು ಬಂದರೆ ಖರೀದಿಸುವುದು ವಾಡಿಕೆ ನಿಮ್ಮ ಸರ್ಕಾರದ ಅಕ್ಕಿ ನೇರವಾಗಿ ನಮ್ಮಲ್ಲಿಗೆ ಬರುವುದು ಖಚಿತ ಎನ್ನುವ ನೀವು ಅದನ್ನು ಅಲ್ಲೇ ತಡೆಗಟ್ಟಬಹುದು ಅಲ್ಲವೆ, ನಿಮ್ಮ ಅಧಿಕಾರಿಗಳು ಮಾಫಿಯಾದವರೊಂದಿಗೆ ಶಾಮಿಲಾಗಿರುವುದರಿಂದ ಈ ದಂಧೆ ನಡೆಯಲು ಕಾರಣವಾಗಿದೆ ಅದನ್ನು ಬಿಟ್ಟು ನೀವು ಖರೀದಿಬಾರದು ಎಂದು ಹೇಳುವುದು ಸರಿಯಿಲ್ಲ ನೇರವಾಗಿ ತಮಿಳುನಾಡಿನ ಪೊಲೀಸರನ್ನು ಕೆಣಕಿದರು.ಅಲ್ಲದೆ ಕೆಲ ತಿಂಗಳಿಂದ ಪಟ್ಟಣಕ್ಕೆ ತಮಿಳುನಾಡಿನಿಂದ ಯಾವುದೇ ಅಕ್ಕಿ ಬರುತ್ತಿಲ್ಲ ಇಂತಹ ವ್ಯವಹಾರಕ್ಕೆ ನಾವು ಕೈ ಹಾಕುವುದಿಲ್ಲ ಎಂದು ಗಿರಣಿ ಮಾಲೀಕರು ಸ್ಪಷ್ಟಪಡಿಸಿದ್ದಾರೆಂದು ತಿಳಿದು ಬಂದಿದೆ.
ತಮಿಳುನಾಡಿನ ಜಾಗೃತಿ ದಳ ಲಾರಿಗಳಿಂದ ಬರುವ ಅಕ್ಕಿ ಮೇಲೆ ಕಣ್ಣಾಕಿದ್ದಾರೆ ಸರಿ, ಆದರೆ ಚೆನ್ನೈನಿಂದ ಬರುವ ಎಲ್ಲಾ ರೈಲುಗಳಲ್ಲಿ ಮಹಿಳೆಯರು ಪ್ರತಿದಿನ ನೂರಾರು ಕುಂಟಾಲ್ ಅಕ್ಕಿಯನ್ನು ತಂದು ಮಾರುವರು ಇವರುಗಳನ್ನು ಯಾಕೆ ಅವರು ನಿಯಂತ್ರಿಸುವ ಗೋಜಿ ಹೋಗುತ್ತಿಲ್ಲ ಎಂದು ಗಿರಣಿ ಮಾಲೀಕರು ದೂರಿದ್ದಾರೆ.
ನಂತರ ಗಿರಣಿ ಮಾಲಿಕರ ಸಂಘದ ಸದಸ್ಯರು ತಮುಳುನಾಡಿನ ಪಡಿತರ ಅಕ್ಕಿಯನ್ನು ಇನ್ನು ಮುಂದೆ ಖರೀದಿಸುವುದಿಲ್ಲ ಎಂದು ಸಮ್ಮತಿ ಸೂಚಿಸಿದರು ಎನ್ನಲಾಗಿದೆ. ಸಭೆಯಲ್ಲಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾದ ಶಣ್ಮುಗಂ, ಅನಿಲ್ ಸೇಗು, ಸಿಪಿಐ ವೆಂಕಟಾಚಲಪತಿ, ಪಿಎಸ್ಐ ಯೋಗಾನಂದ ಸೋನಾರ್ ಮತ್ತಿತರರು ಸಭೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

