ಕೋಲಾರ

ರೈಲು ಸಂಚಾರ ವೇಳೆ ಬದಲಿಗೆ ಒತ್ತಾಯ

Published On :

ಕೋಲಾರ: ಕಳೆದ ನವೆಂಬರ್ 8 ರಂದು ಉದ್ಘಾಟನೆಗೊಂಡ ಕೋಲಾರ-ಚಿಕ್ಕಬಳ್ಳಾಪುರ ನಡುವಿನ ಹೊಸ ರೈಲು ಸಂಚಾರದ ವೇಳೆಯನ್ನು ಬದಲಾಯಿಸಿ ಎಲ್ಲ ವರ್ಗದ ಪ್ರಯಾಣಿಕರಿಗೆ ಅನುಕೂಲ ಮಾಡಬೇಕೆಂದು ರೇಲ್ವೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಕೋಲಾರ ಸಂಸದರು ಹಾಗೂ ಕೇಂದ್ರ ಸಚಿವರೂ ಆದ ಕೆ.ಹೆಚ್. ಮುನಿಯಪ್ಪನವರು ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗ ಪುನರಾರಂಭಕ್ಕೆ ಚಾಲನೆ ದೊರಕಿಸಿ ಕೊಟ್ಟಿದ್ದಾರೆ. ಆದರೆ, ಎಲ್ಲ ವರ್ಗದ ರೈಲು ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರೈಲು ಸಂಚಾರ ವೇಳೆ ನಿಗದಿ ಮಾಡದಿರುವುದರಿಂದ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಪ್ರಯೋಜನವಾಗುತ್ತಿಲ್ಲವೆಂದು ರೇಲ್ವೆ ಪ್ರಯಾಣಿಕರ ಪರವಾಗಿ ಟಿ.ಪಿ. ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗಕ್ಕೆ ಕೇಂದ್ರ ರೇಲ್ವೆ ಇಲಾಖೆಯು 440 ಕೋಟಿ ಖರ್ಚು ಮಾಡಿದೆ, ಪ್ರತಿದಿನ ಒಂದು ರೈಲು ಸಂಚರಿಸುತ್ತಿದೆ. ಆದರೆ, ಈ ರೈಲು ಸಂಚಾರದಿಂದ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ರೀತಿಯಲ್ಲೂ ಪ್ರಯೋಜನವಾಗುತ್ತಿಲ್ಲವೆಂದು ತಿಳಿಸಿದ್ದಾರೆ.
ಬೆಂಗಳೂರಿನಿಂದ ಬೆಳಿಗ್ಗೆ ಹೊರಟು ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರ ಮೂಲಕ ಕೋಲಾರಕ್ಕೆ ಮಧ್ಯಾಹ್ನ ಒಂದು ಗಂಟೆಗೆ ತಲುಪುವ ರೈಲು ಮತ್ತೆ ಕೋಲಾರದಿಂದ ಮಧ್ಯಾಹ್ನ 1.45ಕ್ಕೆ ಬಿಟ್ಟು ಬೆಂಗಳೂರಿಗೆ ತಲುಪುವುದು ರಾತ್ರಿಗೆ. ಈ ವೇಳಾಪಟ್ಟಿಯಿಂದ ವಿದ್ಯಾರ್ಥಿಗಳಿಗಾಗಲಿ, ಕಾರ್ಮಿಕರಿಗಾಗಲಿ ಪ್ರಯೋಜನವಾಗುತ್ತಿಲ್ಲ. ಕೋಲಾರದಿಂದ ಮತ್ತೊಂದು ರೈಲನ್ನು ಬೆಳಿಗ್ಗೆ 7.30 ಗಂಟೆಗೆ ವ್ಯವಸ್ಥೆ ಮಾಡಿದಲ್ಲಿ ಶ್ರೀನಿವಾಸಪುರ, ಚಿಂತಾಮಣಿ ಮೂಲಕ ಚಿಕ್ಕಬಳ್ಳಾಪುರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಕೂಲಿ ಕಾರ್ಮಿಕರಿಗೆ ಮಾತ್ರವಲ್ಲದೆ ರೈತರು ಬೆಳೆಯುವ ಉತ್ಪನ್ನಗಳನ್ನು ಸಾಗಾಣೆ ಮಾಡಲು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಿಂದ ಕೋಲಾರಕ್ಕೆ ಮಧ್ಯಾಹ್ನ 1 ಗಂಟೆಗೆ ಬಂದು ತಲುಪುವ ರೈಲನ್ನು ಬಂಗಾರಪೇಟೆವರೆಗೆ ವಿಸ್ತರಣೆ ಮಾಡಬೇಕೆಂದು ಪ್ರಯಾಣಿಕರು ನ. 8ರಂದೇ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಮನವಿ ಮಾಡಿದ್ದಾರೆ, ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಹ ಒತ್ತಾಯಿಸಿದ್ದರೂ ಬೇಡಿಕೆ ಈಡೇರಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತೊಮ್ಮೆ ರೇಲ್ವೆ ಸಚಿವರಲ್ಲಿ ಮನವಿ ಮಾಡಿ ಪ್ರಯಾಣಿಕರ ಒತ್ತಾಸೆಯನ್ನು ಈಡೇರಿಸಬೇಕೆಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.