ಕೋಲಾರ

ನರೇಗಾ ನಂಬಿದರೆ ಹಳ್ಳಿ ಜನರ ಬಾಳು ಬಂಗಾರ

Published On :

ಕೋಲಾರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಹಳ್ಳಿ ಜನತೆ ಹಕ್ಕು ಚಲಾಯಿಸಿ ಸದುಪಯೋಗಪಡಿಸಿಕೊಂಡಲ್ಲಿ ಜನರ ಬಾಳು ಬಂಗಾರವಾಗುತ್ತದೆ ಎಂಬುದಕ್ಕೆ ಮುಳಬಾಗಿಲು ತಾಲೂಕಿನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳೇ ಸಾಕ್ಷಿ.
ಕೇಂದ್ರ ಸರ್ಕಾರ ಮೊದಲು ಕಡಿಮೆ ಅವಧಿ ಮತ್ತು ಕಡಿಮೆ ಕೂಲಿ ನೀಡುತ್ತಿದ್ದರಿಂದ ನರೇಗಾ ಯೋಜನೆ ಜಿಲ್ಲೆಯಲ್ಲಿ ಫಲಪ್ರಧವಾಗಿರಲಿಲ್ಲ. ಜೊತೆಗೆ ಗ್ರಾಮೀಣ ಜನತೆಯಲ್ಲಿ ಅರಿವು ಇರಲಿಲ್ಲವಾದ್ದರಿಂದ ದಲ್ಲಾಳಿಗಳು, ಪಟ್ಟಭದ್ರ ಹಿತಾಸಕ್ತಿಗಳು ಬಡವರ ಕೂಲಿಯನ್ನು ನುಂಗುವ ಬಕಾಸುರರಾಗಿದ್ದರು.
ಕೇಂದ್ರ ಸರ್ಕಾರ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್‌ಠಾನಕ್ಕೆ ಕಾಯಿದೆ ತಿದ್ದುಪಡಿ ಮಾಡಿದ ನಂತರ ಜನತೆ ಈಗ ನಾ ಮುಂದು, ನೀ ಮುಂದು ಎನ್ನುವ ರೀತಿಯಲ್ಲಿ ಪ್ರಯೋಜನ ಪಡೆಯಲು ಪೈಪೋಟಿ ನಡೆಸುವಂತಾಗಿದೆ.
ಕಾಯಕ ಸಂಘ, ಕಾಯಕ ಬಂಧು ಯೋಜನೆಯಿಂದಾಗಿ ಫಲಾನುಭವಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಕೂಲಿ ಹಣ ವಿಳಂಬಕ್ಕೆ ಅವಕಾಶವಿಲ್ಲದಂತೆ ಕೈ ಸೇರುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ.
100 ದಿನ ಇದ್ದ ಕೆಲಸ ಅವಧಿಯನ್ನು ಕೇಂದ್ರ ಸರ್ಕಾರ ಮತ್ತೆ ಹೆಚ್ಚಿಸಿದೆ, ಕೂಲಿ ಹಣದಲ್ಲೂ ಏರಿಕೆ ಆಗಿದೆ, ಫಲಾನುಭವಿಗಳಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ, ಕಾರ್ಯಾಗಾರ, ವೈಯುಕ್ತಿಕ ಫಲಾನುಭವಿಗಳ ಸಮಾವೇಶದಿಂದಾಗಿ ನರೇಗಾ ಯೋಜನೆಯಲ್ಲಿ ಹಿಂದೆ ಉಳಿದಿದ್ದ ಜಿಲ್ಲೆ ಈಗ ಚೇತರಿಕೆ ಕಂಡು ಸರ್ಕಾರದ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳುವಂತಾಗಿದೆ.
ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ ಅವರು ಜಿಲ್ಲೆಯ ತಾಪಂ ಇಒಗಳನ್ನು, ಗ್ರಾಪಂ ಪಿಡಿಒಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನರೇಗಾ ಯೋಜನೆಯ ಅನುಷ್ಠಾನದಲ್ಲಿ ಸಕ್ರಿಯವಾಗುವ ಮೂಲಕ ಸರ್ಕಾರದಿಂದ ಮೆಚ್ಚುಗೆ ಪಡೆದಿದ್ದಾರೆ.
ಮುಳಬಾಗಲು ತಾಲೂಕಿನ ತಾಯಾಲೂರು, ಕುಪ್ಪಂಪಾಳ್ಯಂ, ಊರುಕುಂಟಿ ಮಿಟ್ಟೊರು, ಟಿ.ಅಗರದಲ್ಲಿ ನರೇಗಾ ವತಿಯಿಂದ ನಡೆದಿರುವ ಕಲ್ಯಾಣಿ, ರಾಜಕಾಲುವೆಗಳ ದುರಸ್ಥಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಪತ್ರಕರ್ತರಿಗೆ ತೋರಿಸಲು ಮಂಗಳವಾರ ಜಿ.ಪಂ.ವತಿಯಿಂದ ಹಮ್ಮಿಕೊಂಡಿದ್ದ ಪ್ರವಾಸದ ಸಂದರ್ಭದಲ್ಲಿ ನರೇಗಾ ಯೋಜನೆ ಜಿಲ್ಲೆಯಲ್ಲಿ ಆಶಾದಾಯಕವಾಗಿರುವುದು ಕಂಡು ಬಂದಿತು.
ತಾಯಾಲೂರು ಗ್ರಾಮದಲ್ಲಿ 450 ಕುಟುಂಬಗಳಿಗೆ ಶೌಚಾಲಯವಿರಲಿಲ್ಲ, ಇವರಿಗೆ ನಿರ್ಮಲ ಭಾರತ ಅಭಿಯಾನದಲ್ಲಿ ಅರ್ಜಿಗಳನ್ನು  ಆಹ್ವಾನಿಸಿ ನರೇಗಾ ಯೋಜನೆಯಲ್ಲಿ 178 ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ, ಉಳಿದ ಶೌಚಾಲಯಗಳು ಪ್ರಗತಿಯಲ್ಲಿದೆ. ಹರಿಜನ ಕಾಲೋನಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಜಾಗವಿಲ್ಲದೆ ಜನತೆ ಪರದಾಡುವಂತಾಗಿತ್ತು. ಅಧಿಕಾರಿಗಳು ಜನತೆಯ ವಿಶ್ವಾಸಗಳಿಸಿ 14 ಸಾಮೂಹಿಕವಾಗಿ ಶೌಚಾಲಯಗಳನ್ನು ನಿರ್ಮಿಸಿ ತಲಾ ಒಂದು ಕುಟುಂಬಕ್ಕೆ ನೀಡಿದ್ದಾರೆ. ಇದರಿಂದ ನಮ್ಮ ಆರೋಗ್ಯ ಸುಧಾರಿಸುತ್ತಿದೆ. ಸೊಳ್ಳೆಗಳ ಕಾಟದಿಂದ ಮುಕ್ತಿ ಹೊಂದಿರುವುದಾಗಿ ಜನತೆ ತಿಳಿಸಿದರು.
ಮೋತಕಪಲ್ಲಿ ಗ್ರಾ.ಪಂ.ಯ ಕುಪ್ಪಂಪಾಳ್ಯದಲ್ಲಿರುವ 112 ಕುಟುಂಬಗಳ ಪೈಕಿ 6 ಮಂದಿ ಊರನ್ನು ಬಿಟ್ಟು ಹೋಗಿದ್ದು, ಉಳಿದ 106 ಕುಟುಂಬಗಳು ಶೌಚಾಲಯನ್ನು ನಿರ್ಮಿಸಿಕೊಂಡಿದ್ದು, ಶೇ.100 ರಷ್ಟು ಗುರಿಯನ್ನು ಸಾಧಿಸಿದೆ. ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಪ್ರೋತ್ಸಾಹ ಧನ ಹೆಚ್ಚಿಸಿದ್ದು ಹಾಗೂ ಜನತೆಯಲ್ಲಿ ಉಂಟಾದ ಅರಿವು ಕಾರಣವೆಂದು ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ  ಹಳ್ಳಿಗಳು ಅಭಿವೃದ್ಧಿ ಆಗಿರಲಿಲ್ಲ. ನರೇಗಾ ಬಂದ ಮೇಲೆ ಹಳ್ಳಿಗಳ ಚಿತ್ರಣ ಬದಲಾಗಿದೆ ಎಂದು ಗ್ರಾಮದ ಮುಖಂಡ ತೇಜೋಮೂರ್ತಿ ಸಂತಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.