ಬಿಜೆಪಿಯತ್ತಲೇ ಅಲ್ಪಸಂಖ್ಯಾತರ ಒಲವು
ಚಿಕ್ಕಬಳ್ಳಾಪುರ: ಬೇರೆಲ್ಲಾ ಪಕ್ಷಗಳಿಗಿಂತಲೂ ಬಿಜೆಪಿ ಕಡೆಗೇನೇ ಅಲ್ಪಸಂಖ್ಯಾತರು ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆನಡಿ ಶಾಂತಕುಮಾರ್ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಸೋಲಿನ ಭೀತಿಯಿಂದ ಬಿಜೆಪಿ ಕೋಮುವಾದಿ ಪಕ್ಷ. ಅದು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ರಕ್ಷಣೆ ಇರುವುದಿಲ್ಲ ಎಂದೆಲ್ಲಾ ಟೀಕಿಸಿಕೊಂಡು ಬರುತ್ತಿವೆ. ಆದರೆ,ಅಲ್ಪಸಂಖ್ಯಾತರ ಪರವಾಗಿ ನಿಜವಾದ ಕಾಳಜಿಯನ್ನು ಬಿಜೆಪಿ ಹೊಂದಿದೆ.ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರು ಬಿಜೆಪಿ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ನಾಮಕಾವಸ್ತಗೆ ಇದ್ದ ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ ಮೊದಲ ಸರ್ಕಾರ ಎಂಬ ಕೀರ್ತಿ ಬಿಜೆಪಿ ಪಕ್ಷಕ್ಕೆ ಸಲ್ಲಬೇಕು.45 ಕೋಟಿ ರೂಗಳಿಂದ 95 ಕೋಟಿ ರೂ, ಆ ನಂತರ 400 ಕೋಟಿ ರೂಗಳ ನೆರವನ್ನು ಒದಗಿಸಿತು.ಅಲ್ಪಸಂಖ್ಯಾತರ ರಕ್ಷಣೆಗಾಗಿ ಮುಂದಾಯಿತು.ಆದರೆ,ಕಾಂಗ್ರೆಸ್ ವೋಟ್ ಬ್ಯಾಂಕ್ಗಾಗಿ ಒಡೆದು ಆಳುವ ನೀತಿಯನ್ನು ಅನುಸರಿಸಿಕೊಂಡು ಬರುತ್ತ ಕೋಮು ಭಾವನೆಯನ್ನು ಮೂಡಿಸುತ್ತಿದೆ ಎಂದು ನುಡಿದರು.
ದೇಶದಲ್ಲಿ ಈಗ ನರೇಂದ್ರ ಮೋದಿ ಅಲೆ ಎಲ್ಲೆಡೆ ಕಂಡು ಬರುತ್ತಿದೆ.ಇವರ ಆಡಳಿತವನ್ನು,ದೂರದೃಷ್ಟಿಯನ್ನು ಅಲ್ಪಸಂಖ್ಯಾತರು ಸಹ ಮೆಚ್ಚಿಕೊಳ್ಳುತ್ತಿದ್ದಾರೆ ಎಂದು ನುಡಿದರು.
ಭ್ರಷ್ಟಾಚಾರ ನಡೆಸಿದ್ದೇ ದೊಡ್ಡ ಸಾಧನೆ: ಕೇಂದ್ರ ಯುಪಿಎ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ.ಕೇವಲ ಲಕ್ಷಾಂತರ ರೂ ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ನಡೆಸಿರುವುದೇ ಅದರ ದೊಡ್ಡ ಸಾಧನೆ. ಇದನ್ನು ಜನರು ಸರಿಯಾಗಿ ತಿಳಿದುಕೊಳ್ಳುತ್ತಿಲ್ಲ.ನಾವು ಸರಿಯಾಗಿ ಮನವರಿಕೆ ಮಾಡಿಕೊಟ್ಟರೆ ಜನರೇ ಕಾಂಗ್ರೆಸ್ ಮುಖಂಡರನ್ನು ದೇಶದಿಂದ ಒದ್ದೊಡಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಪ್ರಸ್ತುತ ಇತರೆ ಪಕ್ಷಗಳು ಚಿಂತಾಜನಕ ಸ್ಥಿತಿಯಲ್ಲಿದ್ದು ಬಿಜೆಪಿ ಪಕ್ಷ ಸುಭದ್ರವಾಗಿದೆ ಎಂದ ಅವರು,ಬೇರು ಮಟ್ಟದಿಂದ ಪಕ್ಷವನ್ನು ಅಭಿವೃದ್ಧಿ ಪಡಿಸಲು ಸಂಘಟನೆಯನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ, ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆಯ ಬಗ್ಗೆ ಕಾಂಗ್ರೆಸ್ ಶಾಸಕರುಗಳೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಬ್ಬರು ಫಲಾನುಭವಿಗಳಿಗೆ ಮಾತ್ರ ಸವಲತ್ತು ಸಿಗುತ್ತದೆ ಎಂದೇಳಿದಾಗ ಗಲಾಟೆಯಾಗುತ್ತದೆ.ಯಾರಿಗೆ ಕೊಡಿಸಬೇಕು, ಯಾರಿಗೆ ಬಿಡಬೇಕೆಂಬ ಗೊಂದಲದಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ ಎನ್ನುತ್ತಿದ್ದಾರೆ. ಇದೇ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಮೇಲಿರುವ ಕಾಳಜಿ ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾಧ್ಯಕ್ಷ ಉಸ್ಮಾನ್ ಖಾನ್, ಮುಖಂಡರಾದ ಸೈಯದ್ ಇಬ್ರಾಹಿಂ, ಚಾಂದ್ ಪಾಷಾ, ಅಬ್ಬಾಸ್, ಚೌಡರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

