ಮಾರಾಟದ ಸರಕನ್ನಾಗಿಸುವ ಹುನ್ನಾರ
ಕ.ಪ್ರ.ವಾರ್ತೆ ಕೋಲಾರ ಡಿ.17
ರಾಜ್ಯ ಸರ್ಕಾರ ಸಿಇಟಿಯನ್ನು ರದ್ದು ಮಾಡಿ ವೃತ್ತಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಲು ಹುನ್ನಾರ ನಡೆಸುತ್ತಿದೆ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಅನುಕೂಲವಾಗುವ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಸರ್ಕಾರದ ವೃತ್ತಿ ಶಿಕ್ಷಣ ಕನಸು ಹೊತ್ತ ವಿದ್ಯಾರ್ಥಿಗಳ ಕನಸಿಗೆ ಭಂಗ ತಂದಿದೆ ಎಂದು ಆರೋಪಿಸಿ ಎಸ್.ಎಫ್.ಐ ಮಂಗಳವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾ ಆಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಎಸ್.ಎಫ್.ಐ ಜಿಲ್ಲಾಧ್ಯಕ್ಷ ಅಂಬರೀಷ್ ನೇತೃತ್ವದಲ್ಲಿ ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿಯ ಸಿಬ್ಬಂದಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಒತ್ತಾಯಿಸಿದರು.
ಇಂಜನಿಯರಿಂಗ್ ಮತ್ತು ಮೆಡಿಕಲ್ ಸ್ಟೋರ್ಸ್ಗಳಿಗೆ ಶುಲ್ಕವನ್ನು ಹೆಚ್ಚಿಸುವುದರ ಜೊತೆಯಲ್ಲಿ ಖಾಸಗಿ ಕಾಲೇಜುಗಳಿಗೆ ಸಿ.ಇ.ಟಿ ಮೂಲಕ ಪ್ರವೇಶ ಪ್ರಕ್ರಿಯೆ ಕೈ ಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನೀತಿಯಿಂದಾಗಿ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಯ್ದೆ ಪ್ರಕಾರ ಶುಲ್ಕ ನಿಗದಿ ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಯು ಕಾಲೇಜಿನ ಮೂಲ ಸೌಲಭ್ಯಗಳ ಆಧಾರದಲ್ಲಿ ಶುಲ್ಕವನ್ನು ನಿಗದಿ ಮಾಡುತ್ತದೆ. ರಾಜ್ಯದಲ್ಲಿ 10 ಸರ್ಕಾರಿ,ಮತ್ತು 13 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. 9 ಡೀಮ್ಡ್ ವಿವಿಗಳಿವೆ. 12 ಸರ್ಕಾರಿ, 9 ಅನುದಾನಿತ 177 ಖಾಸಗಿ ಇಂಜನಿಯರಿಂಗ್ ಕಾಲೇಜುಗಳಿವೆ. ರಾಜ್ಯದಲ್ಲಿ ಖಾಸಗಿ ಕಾಲೇಜುಗಳೇ ಹೆಚ್ಚಿರುವುದರಿಂದ ಈ ಕಾಯ್ದೆಯಿಂದಾಗಿ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳು ನಿಗದಿ ಪಡಿಸುವ ಶುಲ್ಕವನ್ನು ಭರಿಸಬೇಕಾಗುವುದರಿಂದ ಬಡ ವಿದ್ಯಾರ್ಥಿಗಳಿಗೆ ಹೊರೆ ಆಗುವುದಲ್ಲದೆ, ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರವಿದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್.ಎಫ್.ಐ ಜಿಲ್ಲಾಧ್ಯಕ್ಷ ಅಂಬರೀಷ್ ಅಭಿಪ್ರಾಯಪಟ್ಟರು.
ಈಗಿರುವ ಸರ್ಕಾರದ ಸಿ.ಇ.ಟಿ ಪ್ರವೇಶ ಪರೀಕ್ಷೆಯು ಒಂದಿಷ್ಟು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಸರ್ಕಾರಿ ಸಿ.ಇ.ಟಿ. ವ್ಯವಸ್ಥೆಯನ್ನೇ ನಾಶ ಮಾಡುವ ಈ ಕಾಯ್ದೆ ಖಾಸಗಿ ಕಾಲೇಜುಗಳಿಗೆ ಪರೀಕ್ಷೆ ಹೆಸರಲ್ಲಿ ಅನೇಕ ಅಕ್ರಮಗಳಿಗೆ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು.
ಕಾಲೇಜುವಾರು ಶುಲ್ಕ ನಿಗದಿ ಮಾಡಲು ಹೊರಟಿರುವುದು ಸಾಮಾಜಿಕ, ಶೈಕ್ಷಣಿಕ ಅಸಮಾನತೆಗೆ ದಾರಿ ಮಾಡಿಕೊಡಲಿದೆ. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ವಣತ್ತಿ ಶಿಕ್ಷಣವನ್ನು ಉಳ್ಳವರಿಗೆ ಮಾತ್ರ ನೀಡಲು ಮುಂದಾಗಿರುವುದು ಶಿಕ್ಷಣ ವಿರೋಧಿ ನೀತಿಯಾಗಿದ್ದು ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಖಂಡಿಸುತ್ತದೆ ಎಂದರು.
ಈಗಿರುವ ಶುಲ್ಕಗಳನ್ನು ಭರಿಸಲಾಗದೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಸುಮಾರು 22 ಸಾವಿರ ಇಂಜಿನಿಯರಿಂಗ್- ಮೆಡಿಕಲ್ ಸೀಟುಗಳು ಖಾಲಿ ಬಿದ್ದಿವೆ. ಈಗ ಮತ್ತೆ ಶುಲ್ಕ ಏರಿಸಲು ಹೊರಟಿರುವ ಸರ್ಕಾರದ ನಿರ್ಧಾರ ಭಾರೀ ಅಪಾಯಕಾರಿಯಾಗಿದೆ ಎಂದು ತಿಳಿಸಿದರು.
ಸರ್ಕಾರಿ ಸಿ.ಇ.ಟಿ ಮೂಲಕವೇ ವೃತ್ತಿ ಶಿಕ್ಷಣ ಸೀಟು ಹಂಚಿಕೆ ಹಾಗೂ ಶುಲ್ಕ ನಿಗದಿ ಮಾಡಬೇಕು, ಈಗಾಗಲೇ ಏರಿಕೆ ಮಾಡಿರುವ ಶುಲ್ಕಗಳನ್ನು ತಕ್ಷಣ ಬಡ ವಿದ್ಯಾರ್ಥಿಗಳ ಕೈಗೆಟುಕುವಂತೆ ನಿಗದಿಗೊಳಿಸಿ, ಸರ್ಕಾರಿ ಸೀಟುಗಳ ಸಂಖ್ಯೆ ಹೆಚ್ಚಿಸಬೇಕು. ಸೀಟುಹಂಚಿಕೆ 75-25ರ ಅನುಪಾತದಲ್ಲಿರಬೇಕು, ಸಿ.ಇ.ಟಿ ಅಕ್ರಮ ಸೀಟು ಮಾರಾಟ ದಂಧೆ ಜಾಲವನ್ನು ತಕ್ಷಣ ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಕಠಿಣ ಕಾನೂನು ಶಿಕ್ಷೆಗೊಳಪಡಿಸಿ, ಇರುವ ಎಲ್ಲಾ ಸರ್ಕಾರಿ ಕಾಲೇಜುಗಳಿಗೆ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಒದಗಿಸಿ, ಹೊಸ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿ, ಖಾಸಗೀ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುವ ಕೇಂದ್ರೀಯ ಶಾಸನವನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಎಸ್.ಎಫ್.ಐ.ತಾಲೂಕು ಅಧ್ಯಕ್ಷ ಮೊಹಮದ್ ಮಸ್ತಾಫ್, ಕಾರ್ಯದರ್ಶಿ ಪುನೀತ್, ಸದಸ್ಯರಾದ ಮನ್ಸೂರ್ಪಾಷ, ರಾಜಶೇಖರ್, ಮಲ್ಲಿಕಾರ್ಜುನ, ಕೃಷ್ಣಮೂರ್ತಿ, ಮುನಿಸ್ವಾಮಿಗೌಡ, ಅರವಿಂದಪ್ರಸಾದ್, ಅರುಣ್ ಕುಮಾರ್, ಅಮರ್ನಾಥ್, ಕಾರ್ತಿಕ್, ಮನೋಜ್, ಸುರೇಶ್, ಕುಮಾರ್ ಇದ್ದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಎಸಿಯಿಂದ ಕ್ಲಾಸ್...
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕರ್ನಾಟಕ ವೃತ್ತಿಪರ ಶಿಕ್ಷಣ 2006 ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಮಂಗಳವಾರ ಎಸ್ಎಫ್ಐ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲು ಬಂದ ವಿದ್ಯಾರ್ಥಿಗಳನ್ನು ಉಪ ವಿಭಾಗಾಧಿಕಾರಿಗಳು ತರಾಟೆ ತೆಗೆದುಕೊಂಡು ಪ್ರತಿಭಟನಾ ನಿರತರನ್ನು ಬೆಚ್ಚಿ ಬೀಳಿಸಿದರು.
ತರಗತಿಯಲ್ಲಿ ಪಾಠ ಪ್ರವಚನಗಳನ್ನು ಕೇಳುವುದು ಬಿಟ್ಟು ಹೊರಗಡೆ ಪ್ರತಿಭಟನೆ ಮತ್ತು ಹೋರಾಟಗಳೆಂದು ತಿರುಗಾಡಿಕೊಂಡಿದ್ದರೆ ಮುಂದಿನ ಗತಿ ಏನು ಮುಖಂಡರು ಬಂದು ಮನವಿ ಪತ್ರವನ್ನು ಸಲ್ಲಿಸುತ್ತಾರೆ. ಅದನ್ನು ಸರ್ಕಾರಕ್ಕೆ ನಾವು ಸಲ್ಲಿಸಿ ಗಮನ ಸೆಳೆದು ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಸುಮ್ಮನೆ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಳ್ಳವರ ಪರ ಲಾಬಿ: ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟ ಎಸ್ಎಫ್ಐ ಮುಖಂಡರು ಮತ್ತು ವಿದ್ಯಾರ್ಥಿಗಳು ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಧರಣಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಂಚಾಲಕ ಕುಂದಲಗುರ್ಕಿ ಮುನೀಂದ್ರ,ಜನ ವಿರೋಧಿ ನೀತಿ ಆಡಳಿತವನ್ನು ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇದೀಗ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಬೀದಿಪಾಲು ಮಾಡುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವಂತಹ ಕರ್ನಾಟಕ ವೃತ್ತಿಪರ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತಂದಿದ್ದು ಖಾಸಗೀ ಕಾಲೇಜುಗಳಲ್ಲಿ ಕಾಮೆಡ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾತಿ ಸಿಗಲಿದ್ದು ಸರ್ಕಾರಿ ಕೋಟಾದಡಿ ದಾಖಲಾಗಲು ಅವಕಾಶವಿರುವುದಿಲ್ಲ ಎಂದು ಆರೋಪಿಸಿದರು.
ಸರ್ಕಾರದೊಂದಿಗೆ ಸಂಬಂಧವನ್ನು ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಚಿವ ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತರೆ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳಿಂದ ದಾಖಲಾತಿ ಶುಲ್ಕದ ರೂಪದಲ್ಲಿ ಹಣವನ್ನು ವಸೂಲಿ ಮಾಡಲು ಮುಂದಾಗಿರುವ ಇವರ ಲಾಭಿಗೆ ಮಣಿದು ಹೊಸ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಕೂಡಲೇ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆದು ಖಾಸಗೀ ವೃತ್ತಿಪರ ಕಾಲೇಜುಗಳಲ್ಲಿ ಡೊನೇಷನ್ ಹಾವಳಿ, ಸರ್ಕಾರಿ ಕೋಟಾ ವಿದ್ಯಾರ್ಥಿಗಳಿಗೆ ಕಿರುಕುಳ ಸೇರಿದಂತೆ ಅನೇಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು.ಇಲ್ಲದಿದ್ದಲ್ಲಿ ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಸಿ ವರ್ತನೆಗೆ ಧಿಕ್ಕಾರ: ಪ್ರತಿಭಟನಾ ನಿರತ ಮುಖಂಡರು ವಿದ್ಯಾರ್ಥಿಗಳಿಗೆ ನೀತಿ ಪಾಠ ಹೇಳಿದ ಉಪ ವಿಭಾಗಾಧಿಕಾರಿಗಳ ವರ್ತನೆಯನ್ನು ಖಂಡಿಸಿದರು. ಕರ್ನಾಟಕ ವೃತ್ತಿ ಶಿಕ್ಷಣ ಕಾಯ್ದೆ ಬಡ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್ ಎಫ್ ಐ ಮುಖಂಡರಾದ ಬಾಬುರೆಡ್ಡಿ, ರವಿ, ಶ್ರೀನಿವಾಸ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

