ಕೋಲಾರ

ಶೋಷಿತರ ಪ್ರಗತಿಯಿಂದ ಅಭಿವೃದ್ಧಿ ಸಾಧ್ಯ

Published On :

ಕ.ಪ್ರ.ವಾರ್ತೆಕೋಲಾರಡಿ.21
ಆರ್ಥಿಕವಾಗಿ, ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಪ್ರಗತಿ ಸಾಧಿಸಲಾಗಿದೆ ಎಂದ ಮಾತ್ರಕ್ಕೆ ಅದನ್ನು ದೇಶದ ಒಟ್ಟಾರೆ ಅಭಿವೃದ್ಧಿ ಎಂದು ಪರಿಗಣಿಸಲಾಗದು ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಕುಂದ ಅಭಿಪ್ರಾಯಪಟ್ಟರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಅವರು ಅಧಿಕಾರಿಗಳಿಗೆ ಸುಮಾರು ಒಂದುಕಾಲು ಗಂಟೆ ಮಾನವ ಹಕ್ಕುಗಳ ಬಗ್ಗೆ ಬೋಧನೆ ಮಾಡಿದ ಸಂದರ್ಭದಲ್ಲಿ ಶೋಷಿತರ ಸ್ಥೂಲವಾದ ಪ್ರಗತಿಯೇ ದೇಶದ ನಿಜವಾದ ಪ್ರಗತಿಯ ಅರ್ಥವೆಂದು ಪ್ರತಿಪಾದಿಸಿದರು.
ಸರ್ಕಾರಗಳು ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತರ ಏಳಿಗೆಗಾಗಿ ಸಾಕಷ್ಟು ಒಳ್ಳೆಯ ಕಾರ್ಯಕ್ರಮ, ಅನುದಾನ ನೀಡಿದೆ, ಇದನ್ನು ಅರ್ಹರಿಗೆ ತಲುಪಿಸುವ ಜವಾಬ್ದಾರಿ ಆಡಳಿತ ಯಂತ್ರದ ಮೇಲಿದೆ. ಸೇವೆ ಮತ್ತು ಕರ್ತವ್ಯ ಬೇರೆ ಎಂದು ಪರಿಗಣಿಸದೆ
ನಿಜವಾದ ಅಭಿವೃದ್ಧಿಗಾಗಿ ಶ್ರಮಿಸದಿದ್ದರೆ ಅದು ಮಾನವ ಹಕ್ಕುಗಳ ಉಲ್ಲಂಘನೆ ಎಂದೇ ಭಾವಿಸಬೇಕಾಗುತ್ತದೆ ಎಂದರು. ಜೀವಿಸುವ ಹಕ್ಕು ಕಸಿದುಕೊಳ್ಳುವುದು , ಗುಲಾಮಗಿರಿಗೆ ತಳ್ಳುವುದು, ಶಿಕ್ಷಣದಿಂದ ವಂಚಿಸುವುದು, ಪ್ರಾಮಾಣಿಕತೆ ಇಲ್ಲದಿರುವುದು ಮಾನವ ಹಕ್ಕುಗಳ ವ್ಯಾಪ್ತಿಗೆ ಬರುವುದರಿಂದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ, ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಸೂಚ್ಯವಾಗಿ ನುಡಿದರು.
ಜೈಲಿಗೆ ಸೇರಿದ ಕೂಡಲೇ ಖೈದಿಗಳು ಕಲಿಯಬಾರದೆಂಬ ನಿಯಮವೇನಿಲ್ಲ, ಖೈದಿಗಳು ಕಲಿಯಲು ಆಸೆ ಪಟ್ಟಲ್ಲಿ ಅವರಿಗೆ ಗುರುಗಳನ್ನು ಹುಡುಕಿಕೊಡಬೇಕಾದದ್ದು ಅಧಿಕಾರಿಗಳ ಕರ್ತವ್ಯ. ಕೋಲಾರ ಜೈಲಿನಲ್ಲಿ ಅನೇಕರು ಕಲಿಯಲು ಆಸೆ ಪಟ್ಟಿದ್ದಾರೆ. ಅಂತಹವರ ಆಸೆಗೆ ಭಂಗ ತರಬೇಡಿ, ಕೂಡಲೇ ಶಿಕ್ಷಕರ ಏರ್ಪಟು ಮಾಡಿ ಎಂದು ಜೈಲರ್ ಮತ್ತು ಡಿಡಿಪಿಐ ಅವರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿಷೇಧವಾಗಲೇಬೇಕು. ಇಲ್ಲದಿದ್ದರೆ ಉತ್ತರಖಂಡದ ರೀತಿಯಲ್ಲಿ ಮುಂದೊಂದು ದಿನ ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಮಾರಣ ಹೋಮಕ್ಕೆ ಸಾಕ್ಷಿಯಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಬಾಲ ಮಂದಿರಗಳಲ್ಲಿ ಮಕ್ಕಳಿಗೆ ಊಟ-ಬಟ್ಟೆ ನೀಡಿದರೆ ಸಾಲದು, ಸೂಕ್ತವಾದ ರಕ್ಷಣೆ ಮತ್ತು ಪೋಷಣೆ ಅತ್ಯಗತ್ಯ. ಮಹಿಳಾ ಮತ್ತು ಮಕ್ಕಳ ಅಧಿಕಾರಿ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕೆಂದರು.
ಜಿಲ್ಲೆಯಲ್ಲಿ ದಲಿತರ ಹಾಗೂ ಹಿಂದುಳಿದ ವರ್ಗದ ಮೇಲೆ ದೌರ್ಜನ್ಯ-ದಬ್ಬಾಳಿಕೆ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಆಯೋಗಕ್ಕೆ ದೂರುಗಳು ಬಂದಿವೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣಗಳು ನಡೆಯದಂತೆ ಸಮನ್ವಯತೆ ಮೂಡಿಸಲು ಪ್ರಯತ್ನಿಸಬೇಕೆಂದು ತಿಳಿಸಿದರು. ಘನತ್ಯಾಜ್ಯ ವಿಲೇವಾರಿಗೆ ಸೂಕ್ತವಾದ ಜಮೀನು ಹುಡುಕಿಕೊಡುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯ. ವಸತಿ ಬಡಾವಣೆಯಲ್ಲಿ ಕಸ ವಿಲೇವಾರಿ ಬೇಡ.ಅದೇ ರೀತಿಯಲ್ಲಿ ಕಸ ವಿಲೇವಾರಿ ಜಾಗದಲ್ಲಿ ಬಡಾವಣೆ ರಚನೆಗೆ ಅವಕಾಶ ನೀಡಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಾಲ ಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣ ಕಲ್ಪಿಸದಿದ್ದರೆ ಪ್ರಯೋಜನವಾಗುವುದಿಲ್ಲ, ಸರ್ಕಾರ ಅಕ್ಷರ ದಾಸೋಹ, ಕ್ಷೀರ ಭಾಗ್ಯ, ಸೈಕಲ್ ಮತ್ತಿತ್ತರ ಯೋಜನೆ ನೀಡಿರುವುದರಿಂದ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಪರಿಣಾಮಕಾರಿಯಾಗಿ ತಹಬದಿಗೆ ತರಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿ, ಪ್ರತಿಯೊಬ್ಬರು ಹಕ್ಕುಗಳ ಪ್ರತಿಪಾದನೆಯ ಜೊತೆಗೆ ಕರ್ತವ್ಯದ ಬಗ್ಗೆ ಅರಿತರೆ ಸಮಸ್ಯೆಗಳು ತಾನಾಗಿಯೇ ನಿವಾರಣೆ ಆಗುತ್ತದೆ, ಮಾನವ ಹಕ್ಕುಗಳ ಆಯೋಗ ಜಿಲ್ಲಾ ಆಡಳಿತಕ್ಕೆ ನೀಡಿರುವ ಸಲಹೆ-ಸೂಚನೆಗಳನ್ನು ಚಾಚು ತಪ್ಪದೆ ಪಾಲನೆ ಮಾಡುವುದಾಗಿ ಭರವಸೆ ನೀಡಿದರು. ಮಾನವ ಹಕ್ಕುಗಳ ಆಯೋಗದ ರಿಜಿಸ್ಟ್ರಾರ್ ಮಲ್ಲೇಶಪ್ಪ, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಕೋಲಾರ ಎಸ್ಪಿ ಡಾ. ರಾಮ್ ನಿವಾಸ್ ಸಪೆಟ್, ಕೆಜಿಎಫ್ ಎಸ್ಪಿ ಡಾ. ರೋಹಿಣಿ ಕಚೋಟ್ ಸಪೆಟ್, ಜಿಪಂ ಉಪ ಕಾರ್ಯದರ್ಶಿ ಬದನೂರು ಇದ್ದರು.

       ಕೋಲಾರ ಜಿಲ್ಲೆಯ ಮಾಹಿತಿ

ವರ್ಷ      ದಾಖಲಾದ ಪ್ರಕರಣಗಳು     ಇತ್ಯರ್ಥವಾದ ಪ್ರಕರಣ    ಬಾಕಿ
2007       21     20      01
2008      81      80      01
2009     107      88     19
2010     179     111    68
2011      204     103     101
2012     170      70     100
2013      140     52      88

ಒಟ್ಟು     902      524     378

ರಾಜ್ಯದಲ್ಲಿ 15,494 ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ಬಾಕಿ
ಕೋಲಾರ ಜಿಲ್ಲೆಯಲ್ಲಿ 378 ಪ್ರಕರಣಗಳು ಇತ್ಯರ್ಥವಾಗಿಲ್ಲ
ಕೋಲಾರ: ರಾಜ್ಯದಲ್ಲಿ ಕಳೆದ ನವೆಂಬರ್ 13ರ ವೇಳೆಗೆ ಒಟ್ಟು 43,099 ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ದಾಖಲು ಆಗಿದ್ದು ಈ ಪೈಕಿ 27,605 ಪ್ರಕರಣಗಳು ಇತ್ಯರ್ಥವಾಗಿ ಪ್ರಸ್ತುತ 15,494 ಪ್ರಕರಣಗಳು ಬಾಕಿ ಉಳಿದಿದೆ ಎಂದು ಮಾನವ ಹಕ್ಕುಗಳ ಆಯೋಗದ ರಿಜಿಸ್ಟ್ರಾರ್ ಮಲ್ಲೇಶಪ್ಪ ತಿಳಿಸಿದರು.
ನಗರದ ಜಿಪಂನಲ್ಲಿ ಶನಿವಾರ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಲ್ಲೇಶಪ್ಪ ರಾಜ್ಯದ ಮಾಹಿತಿ ನೀಡಿದರು. ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ನಮ್ಮಲ್ಲಿ ದಾಖಲು ಆಗುತ್ತಿದ್ದು ಇವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಕೋಲಾರ ಜಿಲ್ಲೆಯಲ್ಲಿ ಒಟ್ಟು 902 ಪ್ರಕರಣಗಳು ದಾಖಲಾಗಿ ಈ ಪೈಕಿ ನವೆಂಬರ್ ಅಂತ್ಯಕ್ಕೆ 524 ಪ್ರಕರಣಗಳು ಇತ್ಯರ್ಥವಾಗಿ 378 ಪ್ರಕರಣಗಳು ವಿವಿಧ ಹಂತದಲ್ಲಿ ಬಾಕಿ ಇದೆ ಎಂದು ಮಲ್ಲೇಶಪ್ಪ ವಿವರಿಸಿದರು.

       ರಾಜ್ಯದ ಮಾಹಿತಿ                  ವಿಲೇವಾರಿ ಪ್ರಕರಣಗಳು

ವರ್ಷ     ಸಾಮಾನ್ಯ     ಸು-ಮೊಟೋ     ಒಟು    ಸಾಮಾನ್ಯ ವಿಲೇವಾರಿ     ಸು-ಮೊಟೋ     ಒಟ್ಟು  
2007     857     33     890     435     435
2008     3871     1034     4905     2172     89     2261
2009     5975     2204     8179      3764     561     4325
2010     7076     1835     8911     5767     1398     7165
2011     7457     797     8254     5083     884     5967
2012     6199     420     6619     4036     414     4450
2013     4772     569     5341     2942     60     3002
ಒಟ್ಟು     36207     6892     43099     24199     3406     27605

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.