ಕೋಲಾರ

ನೀರು, ಉದ್ಯೋಗ, ಮೂಲ ಸೌಕರ್ಯಗಳಿಗೆ ಆದ್ಯತೆ ಸಿಗಲಿ

Published On :

 ಪಾ.ಶ್ರೀ. ಅನಂತರಾಮ್
ಕೋಲಾರ:  ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಕಡೆಯ ಬಜೆಟ್ ಮಂಡಿಸುತ್ತಿದ್ದು ಜಿಲ್ಲೆಯ ಜನತೆ ನೀರು, ಉದ್ಯೋಗ, ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಲಿ ಎಂದು ಆಶಿಸಿದ್ದಾರೆ.
ಯಾವುದೇ ನದಿ, ನಾಲೆ ಇಲ್ಲದೆ ಮಳೆಯನ್ನು ನಂಬಿ ಬದುಕಿನ ಬಂಡಿ ಎಳೆಯುತ್ತಿರುವ ಜಿಲ್ಲೆಯ ರೈತರು, ಕೃಷಿ ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಸಣ್ಣ ಪ್ರಮಾಣದ ಉದ್ದಿಮೆದಾರರು ಜಿಲ್ಲೆಯನ್ನು ಕಾಪಾಡಲು ನೀರೊಂದೇ ಸಾಕು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಅಲ್ಲದೆ, ಹಲವಾರು ವರ್ಷಗಳಿಂದ ಜನತೆ ನೀರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ಜನತೆಯ ಬಯಕೆ ಈಡೇರಿಸಬೇಕಾಗಿದೆ.
ವಿಶ್ವಕ್ಕೆ ಚಿನ್ನ ನೀಡುತ್ತಿದ್ದ ಕೆಜಿಎಫ್ ಗಣಿ ಮುಚ್ಚಿರುವುದರಿಂದ ನೂರಾರು ಬಡ ಕಾರ್ಮಿಕರು ವಲಸೆ ಹೋಗಿದ್ದಾರೆ. ಪ್ರತಿದಿನ ಸಾವಿರಾರು ಕಾರ್ಮಿಕರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಅಲೆಯುತ್ತಿದ್ದಾರೆ. ನೀರು ಮತ್ತು ವಿದ್ಯುತ್ ಸಮಸ್ಯೆಯಿಂದ ಹಾಗೂ ಹೀಗೂ ಉಳಿದುಕೊಂಡಿದ್ದ ಸಣ್ಣ ಕಾರ್ಖಾನೆಗಳು ಬಂದ್ ಆಗಿವೆ. ರಾಜ್ಯ ಸರ್ಕಾರ ಜಿಲ್ಲೆಯ ನಿರುದ್ಯೋಗಿಗಳಿಗೆ ಭರವಸೆ ಮೂಡಿಸುವ ಯೋಜನೆಗಳನ್ನು ಪ್ರಸಕ್ತ ಬಜೆಟ್ನಲ್ಲಿ ಘೋಷಣೆ ಮಾಡಿ ಅದನ್ನು ಕನಿಷ್ಠ ಇನ್ನು ಎರಡು-ಮೂರು ತಿಂಗಳಲ್ಲಿ ಅನುಷ್ಟಾನಕ್ಕೆ ತಂದಲ್ಲಿ ಜಿಲ್ಲೆಯ ಜನತೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿ ಹೆಚ್ಚುತ್ತದೆ.
ಜಿಲ್ಲೆಯಲ್ಲಿ ನೀರಿನ ಅಭಾವವಿದ್ದರೂ ರೈತರು ಆತ್ಮಹತ್ಯೆಗೆ ಯತ್ನಿಸದೆ, ಲಭ್ಯವಿರುವ ಅಂತರ್ಜಲ ನಂಬಿ ತರಕಾರಿ, ಹೂವು, ಹಣ್ಣು ಬೆಳೆದು ತಮ್ಮ ಮಡದಿ ಮಕ್ಕಳನ್ನು ಸಾಕುತ್ತಿದ್ದಾರೆ. ಮಳೆಯಿಲ್ಲದೆ ಪ್ರತಿವರ್ಷ ಬೆಳೆ ನಷ್ಟವಾಗುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 2055 ಕೆರೆಗಳಿದ್ದರೂ ಮಳೆಯಿಲ್ಲದೆ ಬಹುತೇಕ ಎಲ್ಲಾ ಕೆರೆಗಳು ಬರಡು ಭೂಮಿಯಾಗಿ ಕಾಣುತ್ತಿದೆ. ಈ ಕೆರೆಗಳಲ್ಲಿ ತುಂಬಿರುವ ಹೂಳು ತೆಗೆಯುವುದಕ್ಕೆ, ಕೆರೆಗಳ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಮುಂದಿನ ಪೀಳಿಗೆಯ ಹಿತವನ್ನಾದರೂ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡದಿದ್ದರೆ ಕೆರೆಗಳು ಭೂಗಳ್ಳರ ಪಾಲಾಗುವುದರಲ್ಲಿ ಅನುಮಾನವಿಲ್ಲ.
ಹನಿ ನೀರಾವರಿಗೆ ಸಬ್ಸಿಡಿ ಹೆಚ್ಚಲಿ:  ಮಳೆಯ ಕೊರತೆಯಿಂದ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿರುವುದರಿಂದ ರೈತರು ತೋಟಗಾರಿಕೆ ಬೆಳೆಗಳತ್ತ ಗಮನ ಹರಿಸಿದ್ದಾರೆ. ಹನಿ ನೀರಾವರಿ ಮೂಲಕ ಆಲೂಗಡ್ಡೆ, ಟೊಮೋಟೋ, ಈರುಳ್ಳಿ ಹಾಗೂ ಮಾವು ಬೆಳೆಯುತ್ತಿದ್ದಾರೆ. ಅದೇ ರೀತಿ ವಿವಿಧ ಹೂವುಗಳನ್ನು ಬೆಳೆದು ಅದರಲ್ಲಿ ಬರುವ ಆದಾಯದಿಂದ ಬದುಕು ನಡೆಸುತ್ತಿದ್ದು, ಸರ್ಕಾರ ಜಿಲ್ಲೆಯ ರೈತರಿಗೆ ಬಜೆಟ್ನಲ್ಲಿ ಹನಿ ನೀರಾವರಿ ಸೌಕರ್ಯಕ್ಕಾಗಿ ಶೇ.100 ಸಬ್ಸಿಡಿ ನೀಡುವ ಮೂಲಕ ರೈತರು ಜಿಲ್ಲೆ ಬಿಟ್ಟು ಹೋಗದಂತೆ ತಡೆಯಬೇಕಾಗಿದೆ. ಸರ್ಕಾರ ಈಗಾಗಲೇ ಹನಿ ನೀರಾವರಿಗೆ ಶೇ.75ರಷ್ಟು ಸಬ್ಸಿಡಿ ನೀಡುತ್ತಿದ್ದು, ಇದನ್ನು ಶೇ.100 ಮಾಡಿದಲ್ಲಿ ರೈತರು ತಮ್ಮ ಭೂಮಿ ಮಾರುವ ಪರಿಸ್ಥಿತಿ ಉದ್ಭವಿಸುವುದಿಲ್ಲ.
ಕೋಲಾರ ಜಿಲ್ಲೆ ರೇಷ್ಮೆ ಬೆಳೆಯಲ್ಲಿ ರಾಜ್ಯದ ಮತ್ತು ರಾಷ್ಟ್ರದ ಗಮನ ಸೆಳೆದಿದೆ. 1687 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯಲಾಗುತ್ತಿದೆ. 11725 ಮೆಟ್ರಿಕ್ ಟನ್ ರೇಷ್ಮೆಗೂಡು ಉತ್ಪಾದಿಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರದ ರೇಷ್ಮೆ ಆಮದು ನೀತಿಯಿಂದ ರೈತರಿಗೆ ದೊಡ್ಡ ಹೊಡೆತ ಬಿದ್ದಿದ್ದು, ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷ ಪ್ಯಾಕೇಟ್ ಪ್ರಕಟಿಸಿದಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ.
ಹೈನುಗಾರಿಯಿಂದಾಗಿ ಕೋಲಾರ ರೈತರ ಜೀವನ ಇನ್ನು ಗಟ್ಟಿಯಾಗಿರುವುದಕ್ಕೆ ಕಾರಣವಾಗಿದೆ. ಸರ್ಕಾರ ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲದ ಜತೆಗೆ ಹಾಲು ಉತ್ಪನ್ನ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಿ ರೈತ ಮತ್ತು ಗ್ರಾಹಕ ಇಬ್ಬರಿಗೂ ನ್ಯಾಯ ದೊರಕಿಸಿಕೊಡಬೇಕು.
ಕೈಗಾರಿಕೆಗಳಿಗೆ ಪ್ರೋತ್ಸಾಹ:  ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಉದ್ದಿಮೆಗಳ ಸ್ಥಾಪನೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ, ನೀರಿನ ಸಮಸ್ಯೆ ಇರುವುದರಿಂದ ಆಟೋಮೊಬೈಲ್ ಉಪಕರಣಗಳ ತಯಾರಿಕಾ ಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಲು ಅವಕಾಶಗಳಿವೆ.  ಇದಕ್ಕೆ ಉದ್ದಿಮೆದಾರರನ್ನು ಆಕರ್ಷಿಸಲು ಕೋಲಾರ ಜಿಲ್ಲೆಯಲ್ಲೇ ಒಂದು ಮಿನಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮುಂದಿನ ವರ್ಷ ನಡೆಸುವುದಕ್ಕೆ ಬಜೆಟ್ನಲ್ಲಿ ಘೋಷಣೆ ಮಾಡಿದಲ್ಲಿ ಕೈಗಾರಿಕೆಗಳ ಸ್ಥಾಪನೆಯ ಜತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ.
ಶಾಸಕರು ಒತ್ತಡ ತರಲಿ:  ಕುಡಿವ ನೀರಿನ ಯೋಜನೆಗಾಗಿ ರೂಪಿಸಿರುವ ಯರಗೋಳ್ ಯೋಜನೆ ಕಾಮಗಾರಿ ಆರಂಭಕ್ಕೆ ಚಾಲನೆ, ದೊಡ್ಡ ಹಳ್ಳಿಯಂತೆ ಕಾಣುವ ಕೋಲಾರ ನಗರವನ್ನು ಅಭಿವೃದ್ಧಿಪಡಿಸಿ ಜನತೆಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ಮುಳಬಾಗಿಲು, ಮಾಲೂರು, ಬಂಗಾರಪೇಟೆ ತಾಲೂಕಿನಲ್ಲಿ ಪ್ರವಾಸಿಗರ ಜಾತ್ರೆ ಅಥವಾ ಉತ್ಸವ ನಡೆಸಿ ಈ ತಾಲೂಕಿನ ಹತ್ತಾರು ಪ್ರವಾಸಿ ತಾಣಗಳಿಗೆ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಿದಲ್ಲಿ ಸ್ಥಳಿಯರಿಗೆ ಉದ್ಯೋಗ, ವ್ಯಾಪಾರಕ್ಕೆ ಅನುಕೂಲವಾಗುತ್ತದೆ.
ಗಡಿ ಮತ್ತು ಹಿಂದುಳಿದ ಜಿಲ್ಲೆಯಾದ ಕೋಲಾರ ಜಿಲ್ಲೆಗೆ ಸೇರಿದ ಮುಳಬಾಗಿಲು, ಮಾಲೂರಿನಲ್ಲಿ ಡಿವಿಜಿ ಮತ್ತು ಮಾಸ್ತಿಯವರ ನೆನಪು ಉಳಿಸುವ ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಅನುಷ್ಟಾನಕ್ಕೆ ತರಬೇಕು. ಕನ್ನಡ ಭವನ ನಿರ್ಮಾಣ, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ರಸ್ತೆ ಅಗಲೀಕರಣ, ಒಳಚರಂಡಿಗಳ ಅಭಿವೃದ್ಧಿ, ಉದ್ಯಾನವನ, ಪಾರ್ಕಿಂಗ್ ವ್ಯವಸ್ಥೆ, ಫುಟ್ಪಾತ್ಗಳ ನವೀಕರಣ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಜಿಲ್ಲೆ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಬಜೆಟ್ನಲ್ಲಿ ಹೆಚ್ಚಿನ ಅನುದಾನ ಸಿಗುವಂತೆ ಮಾಡಲಿ ಎಂಬುದು ಜನತೆ ನಿರೀಕ್ಷೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.