ಕೋಲಾರ

ಜಿಲ್ಲಾ 3ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಯಾರು?

Published On :

 ಪಾ.ಶ್ರೀ.ಅನಂತರಾಮ್
ಕೋಲಾರ: ಕನ್ನಡದ ಆಸ್ತಿ, ಜ್ಞಾನಪೀಠ ಪುರಸ್ಕೃತ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ತವರು ತಾಲೂಕಾದ ಮಾಲೂರಿನಲ್ಲಿ ಇದೇ 23 ಮತ್ತು 24ರಂದು ನಡೆಯಲಿರುವ ಜಿಲ್ಲಾ 3ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಸರತ್ತು ನಡೆಸಿದ್ದಾರೆ.
ಹಿರಿಯ ಪತ್ರಕರ್ತ ಕೆ.ಪ್ರಹ್ಲಾದರಾವ್ ಅವರು  ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೋಲಾರ ನಗರದಲ್ಲಿ ನಡೆದ ಮೊದಲ ಸಮ್ಮೇಳನಕ್ಕೆ ಹಾಸ್ಯ ಸಾಹಿತಿ, ಕಲಾವಿದ ಎಂ.ಎಸ್.ನರಸಿಂಹಮೂರ್ತಿ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಬಂಗಾರಪೇಟೆಯಲ್ಲಿ ನಡೆದ ಎರಡನೇ ಸಮ್ಮೇಳನಕ್ಕೆ ರಂಗ ಕರ್ಮಿ, ಸಾಹಿತಿ ಕೋಟಗಾನಹಳ್ಳಿ ರಾಮಯ್ಯನವರನ್ನು ಅಧ್ಯಕ್ಷ ಪೀಠದಲ್ಲಿ ಕೂರಿಸಲಾಗಿತ್ತು.
ಲಭ್ಯ ಮಾಹಿತಿ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಪದಾಧಿಕಾರಿಗಳು ಜಿಲ್ಲೆಯ ಸಾಹಿತ್ಯಾಸಕ್ತರ ಅಭಿಪ್ರಾಯ ಪಡೆದು ನಾಲ್ಕೈದು ಸಂಭವನೀಯರ ಹೆಸರುಗಳನ್ನು ಸಂಗ್ರಹ ಮಾಡಿದ್ದು, ಈ ವಾರದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಿ ಆಯ್ಕೆಯಾಗುವ ಅಧ್ಯಕ್ಷರಿಗೆ ಅಧಿಕೃತ ಆಹ್ವಾನ ನೀಡಲು ಉದ್ದೇಶಿಸಿದ್ದಾರೆ.
ಜಿಲ್ಲೆಯ ಹಿರಿಯ ಸಾಹಿತಿ, ಪ್ರಸ್ತುತ ಶ್ರೀನಿವಾಸಪುರ ತಾಲೂಕಿನ ಕಾಶೆಟ್ಟಿಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಸ.ರಘುನಾಥ್ ಅವರನ್ನು 3ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕಸಾಪ ಪದಾಧಿಕಾರಿಗಳಲ್ಲಿ ಕೆಲವರು ಸಲಹೆ ನೀಡಿದ್ದಾರೆ.
ಕವಿ, ಅನುವಾದಕ, ಲೇಖಕ, ಮಕ್ಕಳ ಕತೆಗಾರರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಸ.ರಘುನಾಥ್ ನೇರ ನಡೆ ನುಡಿಯ ವ್ಯಕ್ತಿ ಆಗಿದ್ದಾರೆ. ಅಭಿಮುಖ ಎಂಬ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡ ಇವರು, ವಿಪ್ಲವ ಕವನಗಳನ್ನು, ಕೈವಾರ ತಾತಯ್ಯನವರ ಪದ್ಯಗಳನ್ನು ಅನುವಾದಿಸಿದ್ದಾರೆ.
 ಗತಿ ಎಂಬ ಕವನ ಸಂಕಲನಕ್ಕೆ ಪುರಸ್ಕಾರ ಪಡೆದಿದ್ದಾರೆ. ಜಿಲ್ಲೆಯ ಇನ್ನೊಬ್ಬ ಸಾಹಿತಿ, ವಿಮರ್ಶಕ ವಿ.ನಂಗಲಿ ಚಂದ್ರಶೇಖರ್ ಅವರ ಹೆಸರನ್ನು ಸಹ ಕೆಲವರು ಸೂಚಿಸಿದ್ದಾರೆ. ಪರಿಸರ ಪ್ರೇಮಿ ಆಗಿರುವ ಇವರು ಚಾರಣ, ಕಾಡುಮೇಡುಗಳ ಸಾಹಸಯಾತ್ರೆ ಕುರಿತು ಬರೆದಿರುವ ಲೇಖನಗಳು ನಾಡಿನ ಜನತೆಯ ಮೆಚ್ಚುಗೆ ಗಳಿಸಿವೆ.
ನಂಗಲಿಯವರು ಮಾರ್ಕ್ಸ್‌ವಾದಿ ವಿಮರ್ಶೆ, ನಾ ನಿಲ್ಲುವವಳಲ್ಲ, ನಾ ನಿಮ್ಮೊಳಗು, ಹೊಗೆ ಹಗೆಯಾದಾಗ, ಕುವೆಂಪು ಕಾದಂಬರಿಯಲ್ಲಿ ಜೈವಿಕ ಜಾಲ ಇತ್ಯಾದಿ ಕೃತಿಗಳನ್ನು ರಚಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸಮ್ಮೇಳನಾಧ್ಯಕ್ಷರಾಗಲು ಈ ಇಬ್ಬರೂ ಅರ್ಹರಾಗಿದ್ದು, ಪದಾಧಿಕಾರಿಗಳು ಯಾರಿಗೆ ಅವಕಾಶ ನೀಡುತ್ತಾರೆಂಬುದು ಕುತೂಹಲ ಮೂಡಿಸಿದೆ.
ಮಾಸ್ತಿಯ ಕೆ.ವಿ.ನಾರಾಯಣಸ್ವಾಮಿ ಅವರಿಗೆ ಈ ಬಾರಿ ಅವಕಾಶ ನೀಡಬೇಕೆಂದು ಸಮ್ಮೇಳನದ ಆತಿಥ್ಯ ವಹಿಸಿಕೊಂಡಿರುವ ಇಲ್ಲಿನ ಕಸಾಪ ಪದಾಧಿಕಾರಿಗಳ ಒತ್ತಾಸೆಯಾಗಿದೆ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಇವರು ಸಾಹಿತಿ ಮಾತ್ರವಲ್ಲದೆ ವಿಮರ್ಶಕರೂ ಹೌದು.  ಉತ್ತಮ ನಾಟಕಕಾರರಾಗಿಯೂ ಹೆಸರು ಪಡೆದಿದ್ದಾರೆ. ಸಾಹಿತಿ ದಿವಂಗತ ಬೆಸಗರಹಳ್ಳಿ ರಾಮಣ್ಣನವರ ಪ್ರತಿಷ್ಠಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಓದುಗ ಎಂಬ ವೇದಿಕೆ ರಚಿಸಿ ಕನ್ನಡ ಸಾಹಿತ್ಯದ ಬಗ್ಗೆ ಜನತೆಯಲ್ಲಿ ಪ್ರೀತಿ ಮೂಡಿಸುತ್ತಿದ್ದಾರೆ.
ಕೋಲಾರ ತಾಲೂಕಿನವರಾದ ಪರಿಸರ ವಾದಿ, ಸಾಹಿತಿ ಕೋಟಗಾನಹಳ್ಳಿ ಗಣೇಶಯ್ಯ,  ವಿಧಾನ ಪರಿಷತ್ ಸದಸ್ಯೆ ಎಸ್.ಆರ್.ಲೀಲಾ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅರವಿಂದಕಟ್ಟಿ, ಕೆ.ಆರ್.ನರಸಿಂಹನ್, ಪುರೋಗಾಮಿ ಪ್ರಭಾಕರ್ ಸೇರಿದಂತೆ ಇನ್ನಿತರರ ಹೆಸರು ಪ್ರಸ್ತಾಪವಾಗಿದ್ದು ಯಾವುದೇ ವಿವಾದ, ಗೊಂದಲ, ಅಪಸ್ವರಕ್ಕೆ ಅವಕಾಶವಾಗದ ರೀತಿಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲು ಗಂಭೀರ ಚಿಂತನೆ ಮತ್ತು ಪ್ರಯತ್ನ ನಡೆದಿದೆ.
ಫೆ.6 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಪೂರ್ವಭಾವಿ ಸಭೆಯ ನಂತರ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಚುರುಕುಗೊಳಿಸಿ ಫೆ.15ರೊಳಗೆ ಇಲ್ಲವೇ ಅದಕ್ಕೂ ಮುನ್ನ ಅಧಿಕೃತ ಪ್ರಕಟಣೆ ಹೊರಡಿಸಲು ಕಸರತ್ತು ನಡೆದಿದೆ.
ಸಮ್ಮೇಳನದ ಅಧ್ಯಕ್ಷರು ಯಾರೇ ಆಗಲಿ ತಮ್ಮ ಸ್ವಂತ ಅಭಿಪ್ರಾಯಗಳನ್ನು ಜನತೆಯ ಮೇಲೆ ಹೇರುವುದಕ್ಕೆ ಅವಕಾಶ ನೀಡಬಾರದು. ಊಟ-ಉಪಚಾರಗಳಿಗೆ ಮಾನ್ಯತೆ ಸಿಗಬೇಕೆಂದು ಹಠ ಮಾಡಿ ಮುಜುಗರ ಉಂಟು ಮಾಡುವವರಿಗೆ, ಸಾಹಿತ್ಯ ಯಾತ್ರೆಯನ್ನು ಜಾತ್ರೆ ಮಾಡಿ ಸರ್ಕಾರ, ಕೇಂದ್ರ ಕಸಾಪ ಹಾಗೂ ಸಾರ್ವಜನಿಕರು ನೀಡುವ ವಂತಿಗೆಯನ್ನು ದುರುಪಯೋಗ ಮಾಡುವ ಜನರ ಬಗ್ಗೆ ದನಿ ಎತ್ತದೆ, ಮುಲಾಜಿಗೆ ಒಳಗಾಗುವ ವ್ಯಕ್ತಿಗಳಿಗೆ ಅವಕಾಶ ನೀಡದೆ, ನೇರ ನಡೆ ನುಡಿಗೆ ಹೆಸರಾಗಿರುವವರನ್ನು ಆಯ್ಕೆ ಮಾಡಬೇಕೆಂಬುದು ಸಾಹಿತ್ಯ ಪ್ರೇಮಿಗಳ ಆಶಯವಾಗಿದೆ.
ಇದಕ್ಕೆ ಜಿಲ್ಲಾ ಕಸಾಪ ಪದಾಧಿಕಾರಿಗಳು ಎಷ್ಟರ ಮಟ್ಟಿಗೆ ಗಮನ ನೀಡುತ್ತಾರೆಂಬುದು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.