ಜನಪರ ಬಜೆಟ್ ಮಂಡಿಸದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ
ಕೋಲಾರ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದ ನಂತರ ಮಂಡಿಸಿರುವ ಬಜೆಟ್ನಿಂದ ರೈತರಿಗೆ, ಬಡವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಅವಧಿ ಮುಗಿಯುತ್ತಾ ಬಂದಿರುವ ಸಂದರ್ಭದಲ್ಲಿ ಫೆ.8 ರಂದು ಮಂಡನೆಯಾಗಲಿರುವ ಬಜೆಟ್ನಲ್ಲಾದರೂ ಜನಪರವಾದ ಕಾರ್ಯಕ್ರಮಗಳನ್ನು ಘೋಷಣೆಯಾಗದಿದ್ದರೆ ಫೆ.13 ರಂದು ಮುಖ್ಯಮಂತ್ರಿಗಳ ನಿವಾಸದ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಬಯ್ಯಾರೆಡ್ಡಿ ಎಚ್ಚರಿಕೆ ನೀಡಿದರು.
ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಪ್ರಧಾನವಾದ ಕರ್ನಾಟಕದಲ್ಲಿ ಕೃಷಿ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಸರ್ಕಾರ ಈ ಸಾಲಿನ ಬಜೆಟಟ್ನಲ್ಲಿ ಬಗರ್ಹುಕುಂ ಸಾಗುವಳಿ ಸಕ್ರಮಗೊಳಿಸುವುದಾಗಿ ಘೋಷಣೆ ಮಾಡಿ ತನ್ನ ಬದ್ಧತೆ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಶೇ. 63.57ರಷ್ಟು ಜನ ಕೃಷಿಯನ್ನು ಅವಲಂಭಿಸಿದ್ದಾರೆ, ಕೃಷಿಯಿಂದ ರೈತರಿಗೆ ಸಿಗುತ್ತಿರುವ ತಲಾದಾಯ ಶೇ.30ರಷ್ಟು ಮಾತ್ರ. ದುಡಿಯುವ ಕೈಗಳಿಗೆ ಭೂಮಿ ಕೊಡುವುದಕ್ಕೆ ಆದ್ಯತೆ ನೀಡದಿದ್ದರೆ ಕರ್ನಾಟಕ ಕಲ್ಯಾಣ ರಾಜ್ಯವಾಗುವುದಕ್ಕೆ ಸಾಧ್ಯವಿಲ್ಲವೆಂದು ಹೇಳಿದರು. ರಾಜ್ಯದಲ್ಲಿ 40 ಲಕ್ಷ ಎಕರೆ ಭೂಮಿ ಸುಮಾರು 21 ಲಕ್ಷ ರೈತ ಕುಟುಂಬಗಳ ಸ್ವಾಧೀನದಲ್ಲಿದ್ದು, ಈ ಎಲ್ಲ ಭೂಮಿಯನ್ನು ಸಕ್ರಮ ಮಾಡಿ ರೈತರಿಗೆ ಹಕ್ಕುಪತ್ರ ನೀಡಲು ಈ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡದಿದ್ದರೆ, ಮುಖ್ಯಮಂತ್ರಿಗಳ ಮನೆಯ ಮುಂದೆ ಫೆ.13 ರಂದು ಹೋರಾಟ ನಡೆಸುವುದಾಗಿ ತಿಳಿಸಿದರು.
ಶಾಶ್ವತ ನೀರಾವರಿ ಕಡೆಗಣನೆ: ರಾಜ್ಯ ಸರ್ಕಾರ ಡಾ. ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆಯನ್ನು ಕಡೆಗಣಿಸುತ್ತಿದೆ, ಫೆ.4 ರಂದು ರಾಜ್ಯಪಾಲರು ಬಜೆಟ್ ಅಧಿವೇಶನಕ್ಕೆ ಸಂಬಂಧಿಸಿದ ಜಂಟಿ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಿಲ್ಲ, ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.
ಜಿಲ್ಲೆಯಲ್ಲಿ ಹೋರಾಟದ ಹಾದಿಯನ್ನು ದಿಕ್ಕು ತಪ್ಪಿಸಲು ಸರ್ಕಾರ ಪರಮಶಿವಯ್ಯ ವರದಿ ಜಾರಿ ಮಾಡುವುದಾಗಿ ಹೇಳಿ ಬಯಲುಸೀಮೆ ಪ್ರದೇಶಗಳ ಜನತೆಯನ್ನು ಮೋಸ ಮಾಡಲು ಹೊರಟಿದೆ.
ಎತ್ತಿನ ಹೊಳೆ ಯೋಜನೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಸೂರಿನಾರಾಯಣ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ಕೃಷ್ಣೇಗೌಡ ಇದ್ದರು.
ಹಾಲಿನ ದರ ಏರಿಕೆ ಮಾಡಲಿ
ಹಾಲಿನ ಖರೀದಿ ದರವನ್ನು ಸರ್ಕಾರ ಒಂದು ಲೀಟರ್ ಹಾಲಿನ ದರ ಕನಿಷ್ಠ 25 ರು.ಗಳಿಗೆ ನಿಗದಿಪಡಿಸಬೇಕು. ಆದರೆ, ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಹೊರೆ ಹಾಕಬಾರದೆಂದು ಒತ್ತಾಯಿಸಿದ ಬಯ್ಯಾರೆಡ್ಡಿ, ಬೇರೆ ರಾಜ್ಯಗಳಿಗೆ ಹೊಲಿಕೆ ಮಾಡಿದರೆ ನಮ್ಮ ರೈತರಿಗೆ ಲೀಟರ್ ಹಾಲಿಗೆ 7 ರಿಂದ 8 ರು. ಕಡಿಮೆ ಸಿಗುತ್ತಿದೆ. ಕೆಎಂಎಫ್ ಮತ್ತು ಸರ್ಕಾರ ಈ ವಿಚಾರವಾಗಿ ಗಂಭೀರ ಚಿಂತನೆ ಮಾಡಿ, ರೈತರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದ ರೀತಿಯಲ್ಲಿ ಹಾಲು ಖರೀದಿ ದರ ನಿಗದಿ ಮಾಡಬೇಕೆಂದು ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿನ ಪೌಡರ್ ತಯಾರಿಕಾ ಘಟಕ ಸ್ಥಾಪನೆಗೆ ಬಜೆಟ್ನಲ್ಲಿ ಅನುಮೊದನೆ ನೀಡಬೇಕು, ಅಂಗನವಾಡಿ ಕೇಂದ್ರದಲ್ಲಿ ಪ್ರತಿ ಮಗುವಿಗೆ ಕನಿಷ್ಠ 150 ಎಂಎಲ್ ಹಾಲು ನೀಡಿದಲ್ಲಿ 12 ಲಕ್ಷ ಹಾಲು ವಿಲೇವಾರಿ ಆಗುವುದಕ್ಕೆ ಅನುಕೂಲವಾಗುತ್ತದೆ ಹಾಗೂ 21 ಲಕ್ಷ ಹಾಲು ಉತ್ಪಾದಕರಿಗೂ ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

