ಶಾಶ್ವತ ನೀರಾವರಿ ಪ್ರಸ್ತಾಪ ಇಲ್ಲದೆ ನಿರಾಶೆ
ಪಾ.ಶ್ರೀ. ಅನಂತರಾಮ್
ಕೋಲಾರ: ಬಿಜೆಪಿ ನೇತೃತ್ವ ಸರ್ಕಾರದ ತನ್ನ ಅವಧಿಯ ಕಡೆಯ ಬಜೆಟ್ನಲ್ಲಿ ಕೋಲಾರದ ಹಿತಕ್ಕಾಗಿ ಹೆಚ್ಚಿನ ಸಹಾಯ ನೀಡಬಹುದೆಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕೋಲಾರ ಜಿಲ್ಲೆಯ ಜನತೆಗೆ ನಿರಾಸೆ ಉಂಟಾಗಿದೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶುಕ್ರವಾರ ಮಂಡಿಸಿದ ಬಜೆಟ್ ವಿವರ ಪಡೆಯಲು ಜಿಲ್ಲೆಯ ಜನತೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ದೃಶ್ಯ ಮಾಧ್ಯಮಗಳ ಮುಂದೆ ಮಧ್ಯಾಹ್ನ 12.30 ರಿಂದ ಸಂಜೆ 4.30ರವರೆಗೆ ಕಾದು ಕುಳಿತಿದ್ದರಾದರೂ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ನಲ್ಲಿ ಕಾರ್ಯಕ್ರಮಗಳು ಘೋಷಣೆ ಆಗದಿರುವುದರಿಂದ ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯಕ್ಕಾಗಿ ನೀರಾವರಿ ತಜ್ಞ ಡಾ. ಪರಮಶಿವಯ್ಯ ರೂಪಿಸಿರುವ ಯೋಜನೆಯನ್ನು ಯತ್ತಾವತ್ತಾಗಿ ಜಾರಿಗೆ ತರಬೇಕೆಂದು ಕಳೆದ 15 ವರ್ಷಗಳಿಂದ ಜನಾಂದೋಲನ ನಡೆಯುತ್ತಿದ್ದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಕಳೆದ ಡಿಸೆಂಬರ್ನಲ್ಲಿ ಜನಪ್ರತಿನಿಧಿಗಳು, ಹೋರಾಟಗಾರರನ್ನು ಬರಮಾಡಿಕೊಂಡು ಬಯಲು ಸೀಮೆಗೆ ನೀರು ಕುಡಿಸಲು ನಾನಿದ್ದೇನೆ. ನಿಮಗೆ ನೀರು ಕುಡಿಸುವುದೇ ನನ್ನ ಕರ್ತವ್ಯ, ಎತ್ತಿನಹೊಳೆ ಯೋಜನೆಯ ಜತೆಗೆ ಪರಮಶಿವಯ್ಯ ವರದಿಯನ್ನು ಅನುಷ್ಠಾನಕ್ಕೆ ತರುವೆ ಎಂದು ಭರವಸೆ ನೀಡಿ ಬಜೆಟ್ನಲ್ಲಿ ಈ ಬಗ್ಗೆ ಚಕಾರ ಎತ್ತದಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಎತ್ತಿನಹೊಳೆ ಯೋಜನೆಯನ್ನು ಕೇಂದ್ರ ಸಚಿವ ವೀರಪ್ಪಮೊಯ್ಲಿ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಮರ್ಜಿಯಿಂದ ಅನುಷ್ಠಾನಕ್ಕೆ ತರಲು ಸರ್ಕಾರ ನಿರ್ಧರಿಸಿದ್ದು, ಪರಮಶಿವಯ್ಯ ಯೋಜನೆಯ ಭಾಗವಾಗಿ ಎತ್ತಿನಹೊಳೆ ಯೋಜನೆ ಜಾರಿಗೆ ತರುವುದಾಗಿ ಹೇಳುತ್ತಿರುವ ಸರ್ಕಾರ ಗಡಿ ಭಾಗದ ನಂಗಲಿ ಗ್ರಾಮದ ವರೆಗೆ ಇರುವ ಕೆರೆಗಳಿಗೆ ನೀರು ಹರಿಸಲು ಬದ್ಧ ಎಂದು ಹೇಳದಿರುವುದು ಹಾಗೂ ಕೋಲಾರಕ್ಕೆ ಎಷ್ಟು ಟಿಎಂಸಿ ನೀರು ಹರಿಯುತ್ತದೆ ಎಂದು ನಿಖರವಾಗಿ ಭರವಸೆ ನೀಡದಿರುವುದರಿಂದ ಜಿಲ್ಲೆಯ ಜನತೆ ಅನುಮಾನ ಪಡುವಂತಾಗಿದೆ.
ಎತ್ತಿನ ಹೊಳೆಯಿಂದ 24 ಟಿಎಂಸಿ ನೀರು ಶೇಖರಣೆ ಮಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ನೀಡುವುದಾಗಿ ಹೇಳಿರುವ ಸರ್ಕಾರ ಹಾಸನ ಜಿಲ್ಲೆಯ ಸಕಲೇಶಪುರದಿಂದ ಹರಿಯುವ ನೀರು ಕೋಲಾರ ತಲುಪುವವರೆಗೆ ಉಳಿದ ಭಾಗದ ಜನ ಸುಮ್ಮನೆ ಇರುತ್ತಾರೆಂದು ಭಾವಿಸಿದರೆ ಅದು ಸರ್ಕಾರದ ಮೂರ್ಖತನವಾಗಿತು ಎಂದು ಬಜೆಟ್ನಲ್ಲಿ ಪರಮಶಿವಯ್ಯ ವರದಿ ಬಗ್ಗೆ ಸ್ಪಷ್ಟ ಚಿತ್ರಣ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ತಾಲೂಕಿಲ್ಲ: ಮುಖ್ಯಮಂತ್ರಿಗಳು ಹೊಸದಾಗಿ 43 ತಾಲೂಕುಗಳ ರಚನೆ ಮಾಡಿರುವುದನ್ನು ಬಜೆಟ್ನಲ್ಲಿ ಘೋಷಣೆ ಮಾಡಿದ್ದು ಅನೇಕ ವರ್ಷಗಳಿಂದ ಕೆಜಿಎಫ್ ನಗರವನ್ನು ತಾಲೂಕಾಗಿ ಮಾಡುವುದಕ್ಕಾಗಿ ಕೆಜಿಎಫ್ ಜನತೆ ನಡೆಸಿರುವ ಹೋರಾಟಕ್ಕೆ ಮಾನ್ಯತೆ ನೀಡದಿರುವುದು ಸಹ ಜನತೆಯಲ್ಲಿ ನಿರಾಸೆ ಮೂಡಿಸಿದೆ.
ಕೋಲಾರ ತಾಲೂಕಿನ ವೇಮಗಲ್, ಕೆಜಿಎಫ್ ಇಲ್ಲವೇ ಬೇತಮಂಗಲವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಅಲ್ಲಿನ ಜನತೆ ಸರ್ಕಾರದ ಮೇಲೆ ಅನೇಕ ಸಾರಿ ಒತ್ತಡಗಳನ್ನು ತಂದಿದ್ದರೂ ಪ್ರಯೋಜನವಾಗಿಲ್ಲ.
ಇನ್ನು ಶ್ರೀನಿವಾಸಪುರದಲ್ಲಿ ಮಾವು ಅತಿ ಹೆಚ್ಚು ಬೆಳೆಯುವುದರಿಂದ ಇಲ್ಲಿ ಮಾವು ಮಂಡಳಿ ಸ್ಥಾಪನೆ ಆಗುವುದು ಉತ್ತಮವೆಂಬ ಅಭಿಪ್ರಾಯದ ಹಿನ್ನಲೆಯಲ್ಲಿ ಈ ಹಿಂದೆಯೇ ಮಾವು ಮಂಡಳಿ ಸ್ಥಾಪನೆಯ ಪ್ರಸ್ತಾಪವಾಗಿತ್ತಾದರೂ ಈ ಸಾಲಿನ ಬಜೆಟ್ನಲ್ಲೂ ಇದರ ಬಗ್ಗೆ ಚಕಾರ ಎತ್ತಿಲ್ಲ.
ಮಾವು ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಬಜೆಟ್ನಲ್ಲಿ ಯಾವುದೇ ಭರವಸೆ ನೀಡದಿರುವುದರಿಂದ ರೈತರು ಕಂಗಾಲು ಆಗಿದ್ದಾರೆ.ಹುಸಿಯಾದ ಹನಿ ನೀರಾವರಿ:
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವುದರಿಂದ ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗಲು ಹನಿ ನೀರಾವರಿ ಯೋಜನೆಗೆ ಶೇ.100 ಸಬ್ಸಿಡಿ ಸೌಕರ್ಯ ಕಲ್ಪಿಸುವುದಾಗಿ ಬಜೆಟ್ನಲ್ಲಿ ಇದಕ್ಕೆ ಒತ್ತು ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವರ್ತೂರ್ ಪ್ರಕಾಶ್ ಇತ್ತೀಚೆಗಷ್ಟೇ ನಡೆದ ಫಲಪುಷ್ಪ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದರಾದರೂ ಮುಖ್ಯಮಂತ್ರಿಗಳು ಈ ಬೇಡಿಕೆಯನ್ನು ಸಹ ಈಡೇರಿಸಿಲ್ಲ.
ಕೆಜಿಎಫ್ನಲ್ಲಿ ಚಿನ್ನದ ಗಣಿ ಮುಚ್ಚಿದ ನಂತರ ಅಲ್ಲಿನ ಬಡವರ ಜೀವನಕ್ಕೆ ತೊಂದರೆ ಆಗಿದ್ದು, ಹೊಸ ಕಾರ್ಖಾನೆ ಇಲ್ಲವೇ ಜನತೆಗೆ ಉಪಯುಕ್ತವಾಗುವ ಬೇರೆ ಏನಾದರೂ ಉದ್ದಿಮೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಬೇಕಾಗಿದ್ದ ಸರ್ಕಾರ ಕೆಜಿಎಫ್ನಲ್ಲಿ ಕೊಳಚೆ ಪ್ರದೇಶದ ಅಭಿವೃದ್ಧಿಗೆ ಬಜೆಟ್ನಲ್ಲಿ 5 ಕೋಟಿ ರು. ಪ್ರಕಟಿಸಿದ್ದು ಇದರಿಂದ ಕೆಜಿಎಫ್ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವೇ ಎಂದು ಜನತೆ ಪ್ರಶ್ನಿಸಿದ್ದಾರೆ.ಯರಗೋಳ್ ಯಾವಾಗ? ಕುಡಿಯುವ ನೀರಿಗಾಗಿ ರೂಪಿಸಿರುವ ಯರಗೋಳ್ ಯೋಜನೆ ಜಾರಿಗೆ ಇದ್ದ ಅಡಚಣೆಗಳು ನಿವಾರಣೆಯಾಗಿದ್ದರೂ ಯೋಜನೆ ಅನುಷ್ಠಾನ ಯಾವಾಗ ಆರಂಭವಾಗಲಿದೆ ಎಂಬುದನ್ನು ಸಹ ಬಜೆಟ್ನಲ್ಲಿ ಪ್ರಕಟಿಸದಿರುವುದು ಜನತೆಯಲ್ಲಿ ಸರ್ಕಾರದ ಧೋರಣೆ ಬಗ್ಗೆ ಅನುಮಾನ ಮೂಡವಂತೆ ಮಾಡಿದೆ.
ಬಯಲು ಸೀಮೆ ಅಭಿವೃದ್ಧಿಗಾಗಿ ಮಂಡಳಿ ರಚನೆ ಮಾಡುವುದಕ್ಕೆ 75 ಕೋಟಿ ರು. ಮೀಸಲಿಟ್ಟಿರುವುದು ಸ್ವಾಗರ್ತಾಹ. ಆದರೆ, ಈ ಮಂಡಳಿಯನ್ನು ಅತ್ಯಂತ ಹಿಂದುಳಿದ ಜಿಲ್ಲೆಯಾದ ಕೋಲಾರದಲ್ಲಿ ಸ್ಥಾಪನೆ ಮಾಡಿದಲ್ಲಿ ಕೊಂಚ ಮಟ್ಟಿಗಾದರೂ ಅಭಿವೃದ್ಧಿ ನಿರೀಕ್ಷೆ ಮಾಡಬಹುದೆಂದು ಜನತೆ ಅಭಿಪ್ರಾಯಿಸಿದ್ದಾರೆ.
ಉತ್ತರ ಕರ್ನಾಟಕದ ಕ್ಷೇತ್ರಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಮೇಲೆ ರಾಜಕೀಯವಾಗಿ, ವ್ಯಕ್ತಿಗತವಾಗಿ ಒತ್ತಡ ತಂದು, ಲಾಬಿ ಮಾಡಿ ತಮಗೆ ಬೇಕಾದ ಕೆಲಸ ಕಾರ್ಯಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಿಸಿಕೊಂಡಿದ್ದು, ಜಿಲ್ಲೆಯ ಶಾಸಕರು ಅಂತಹ ಲಾಬಿ ಮಾಡುವುದಕ್ಕೆ ಇಚ್ಛಾಶಕ್ತಿ ತೋರದಿರುವುದರಿಂದ ಜಿಲ್ಲೆಗೆ ಅನ್ಯಾಯವಾಗಲು ಕಾರಣವಾಗಿದೆ ಎಂದು ಜನತೆ ರಾಜ್ಯ ಬಜೆಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

