272 ಶಾಲೆಗಳಲ್ಲಿ ಪ್ರಿಪರೇಟ್ರಿ ಫಲಿತಾಂಶ ವಿಶ್ಲೇಷಣೆ
ಕೋಲಾರ: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಗುಣಾತ್ಮಕವಾಗಿ ಹೆಚ್ಚಿಸುವ ಉದ್ದೇಶದಿಂದ ಹಾಗೂ ಜಿಲ್ಲೆಯನ್ನು ಮೊದಲ 10 ಸ್ಥಾನದೊಳಗೆ ಬರುವಂತೆ ಮಾಡಲು ಸಾರ್ವಜನಿಕ ಶಿಕ್ಷಕ ಇಲಾಖೆಯು ಜಿಲ್ಲೆಯ 272 ಶಾಲೆಗಳಲ್ಲಿ ಪೂರ್ವಸಿದ್ಧತಾ ಪರೀಕ್ಷೆ ಫಲಿತಾಂಶದ ವಿಶ್ಲೇಷಣೆ ಕಾರ್ಯ ನಡೆಸುತ್ತಿದೆ ಎಂದು ಡಿಡಿಪಿಐ ಎಸ್.ವಿ. ಪದ್ಮನಾಭ್ ತಿಳಿಸಿದ್ದಾರೆ.
2012ರ ಪರೀಕ್ಷೆಗಳಲ್ಲಿ ಶೇ.1.6 ರಷ್ಟು ಫಲಿತಾಂಶದಿಂದಾಗಿ ಜಿಲ್ಲೆಗೆ ಉನ್ನತ ಸ್ಥಾನ ಸಿಗುವುದಕ್ಕೆ ಸಾಧ್ಯವಾಗಿಲ್ಲ. ಇದನ್ನು ಸರಿಪಡಿಸಿ ಈ ಬಾರಿ ಉತ್ತಮ ಸಾಧನೆ ಮಾಡಲು ಶಿಕ್ಷಕರ ಹೆಚ್ಚಿನ ಪರಿಶ್ರಮ ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಗುಣಾತ್ಮಕ ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆ ಉತ್ತಮಪಡಿಸಲು ರಚಿಸಿರುವ ಸ್ಫೂರ್ತಿ ಸೌರಭ ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಶಿಕ್ಷಕರಿಗೆ ಸೂಚಿಸಿದ್ದಾರೆ. ಪೂರ್ವಸಿದ್ಧತಾ ಪರೀಕ್ಷೆಗಳ ಫಲಿತಾಂಶ ವಿಶ್ಲೇಷಣೆಗೆ 3 ತಂಡಗಳನ್ನು ರಚಿಸಲಾಗಿದೆ. ಈ ತಂಡ ಪ್ರತಿ ಶಾಲೆಗೂ ಭೇಟಿ ನೀಡಿ ಫಲಿತಾಂಶ ವಿಶ್ಲೇಷಣೆ ನಡೆಸುತ್ತದೆ. ಈ ಸಂಬಂಧ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಭೆ ನಡೆಸಿ ಪರಿಶೀಲನೆ ನಡೆಸಲಾಗಿದೆ. ಡಿಡಿಪಿಐ ಎಸ್.ವಿ. ಪದ್ಮನಾಭ್ ನೇತೃತ್ವದ ತಂಡದಲ್ಲಿ ಉಪಸಮನ್ವಯಾಧಿಕಾರಿ ದೇವರಾಜ್, ವಿಷಯ ಪರಿವೀಕ್ಷಕ ಬಾಬು ಜನಾರ್ದನ್ ನಾಯ್ಡು, ಬಸವರಾಜ ಚಿಲಕಾಂತಮಠ್ ಅವರನ್ನು ಕೋಲಾರ, ಮಾಲೂರು ತಾಲೂಕುಗಳಿಗೆ ನೇಮಿಸಲಾಗಿದೆ. ಉಳಿದಂತೆ ಬಂಗಾರಪೇಟೆ, ಶ್ರೀನಿವಾಸಪುರ ತಾಲೂಕುಗಳಿಗೆ ಶಿಕ್ಷಣಾಧಿಕಾರಿ ಜಯರಾಮರೆಡ್ಡಿ, ವಿಷಯ ಪರಿವೀಕ್ಷಕ ಕೆ.ಶ್ರೀನಿವಾಸಗೌಡ, ಶಿವಮಾದಯ್ಯ ಹಾಗೂ ಕೆಜಿಎಫ್ ಮತ್ತು ಮುಳಬಾಗಿಲು ತಾಲೂಕಿಗೆ ಶಿಕ್ಷಣಾಧಿಕಾರಿ ಹಾಗೂ ಸದರಿ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ವಿಷಯ ಪರಿವೀಕ್ಷಕ ಸಿ.ಆರ್. ಅಶೋಕ್, ವೆಂಕಟಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
ತಾಲೂಕುವಾರು ಸಭೆ ನಡೆಸಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಪೂರ್ವಸಿದ್ಧತಾ ಪರೀಕ್ಷೆಗಳ ಫಲಿತಾಂಶದ ವಿಶ್ಲೇಷಣೆ ನಡೆಸಲಾಗಿದೆ. ಹಿನ್ನಡೆ ಇರುವ ಶಾಲೆಗಳ ಫಲಿತಾಂಶ ಸುಧಾರಣೆಗೆ ಅಗತ್ಯ ಸಲಹೆಗಳನ್ನು ನೀಡಲಾಗಿದೆ.
ಈ ಸಭೆಯಲ್ಲಿ ಜಿ.ಪಂ. ಸಿಇಒ ಝಲ್ಫಿಖರ್ ಉಲ್ಲಾ ಅವರು ಭಾಗವಹಿಸಿ ಜಿಲ್ಲೆ 10 ಸ್ಥಾನಗಳ ಒಳಗಿರಲು ಶ್ರಮಿಸುವಂತೆ ಸೂಚಿಸಿದ್ದಾರೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಮತ್ತು ಭಾನುವಾರವೂ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ, ಸ್ಫೂರ್ತಿ ಸೌರಭ ಮಾರ್ಗಸೂಚಿಯಲ್ಲಿ ತಿಳಿಸಿರುವ ಅಂಶಗಳ ಪರಿಣಾಮಕಾರಿ ಅನುಷ್ಠಾನ ಮಾಡಬೇಕು. ಮಕ್ಕಳ ಕಲಿಕೆ ಕುರಿತು ದೃಢೀಕರಣ, ಚಟುವಟಿಕೆ ಆಧಾರಿತ ಬೋಧನೆಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಎಲ್ಲಾ ಸೇರಿದಂತೆ ಒಟ್ಟಾರೆ ಪರೀಕ್ಷೆಗೆ ಕುಳಿತ 22553 ವಿದ್ಯಾರ್ಥಿಗಳಲ್ಲಿ 13715 ಮಂದಿ ತೇರ್ಗಡೆ ಹೊಂದುವ ಮೂಲಕ ಶೇ.60.81 ಫಲಿತಾಂಶ ಬಂದಿದೆ. ಇದರಲ್ಲಿ ಬಾಲಕರು- ಶೇ.57.33 ಬಾಲಕಿಯರು-64.22ರಷ್ಟು ತೇರ್ಗಡೆ ಹೊಂದಿದ್ದಾರೆ. ಇದುವರೆಗೂ ನಡೆದಿರುವ ಪೂರ್ವಭಾವಿ ಪರೀಕ್ಷೆಗಳಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯಗಳಲ್ಲೇ ವಿದ್ಯಾರ್ಥಿಗಳು ಹೆಚ್ಚು ಅನುತ್ತೀರ್ಣರಾಗುತ್ತಿರುವುದು ಕಂಡುಬಂದಿರುವುದರಿಂದ ಈ ವಿಷಯಗಳ ಕಡೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಥಮ ಭಾಷೆ ಕನ್ನಡದಲ್ಲಿ- ಶೇ.12.1ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರೆ, ಇಂಗ್ಲೀಷ್ನಲ್ಲಿ-ಶೇ.18.8, ತೃತೀಯ ಭಾಷೆ ಹಿಂದಿಯಲ್ಲಿ- ಶೇ.15ರಷ್ಟು, ಗಣಿತದಲ್ಲಿ- ಶೇ.20ರಷ್ಟು, ವಿಜ್ಞಾನ- ಶೇ.18.1 ಸಮಾಜ ವಿಜ್ಞಾನ- 15.9 ಮಂದಿ ಅನುತ್ತೀರ್ಣರಾಗಿದ್ದಾರೆ.
ಈ ಬಾರಿ ಜಿಲ್ಲೆ ಫಲಿತಾಂಶ ಪಟ್ಟಿಯಲ್ಲಿ 10ರೊಳಗಿನ ಸ್ಥಾನದಲ್ಲಿ ಕಂಡುಬರುವ ಮೂಲಕ ಶೈಕ್ಷಣಿಕ ಘನತೆ ಹೆಚ್ಚಲು ಶಿಕ್ಷಣ ಇಲಾಖೆಯವರು ಪ್ರಯತ್ನ ನಡೆಸುತ್ತಿದ್ದು, ವಿದ್ಯಾರ್ಥಿಗಳು ಸಹ ಶ್ರದ್ಧೆ ಮತ್ತು ಏಕಾಗ್ರತೆಯಿಂದ ಓದಿದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

