ಕೂಡಲೇ ನೀರಿನ ಸಮಸ್ಯೆ ನಿವಾರಿಸಿ: ಅಶ್ವತ್ಥಪ್ಪ
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈಗಿನಿಂದಲೇ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಗಳನ್ನು ಜರೂರಾಗಿ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿ.ಪಂ ಉಪಾಧ್ಯಕ್ಷ ಅಶ್ವತ್ಥಪ್ಪ ಆತಂಕ ವ್ಯಕ್ತಪಡಿಸಿದರು.
ಜಿ.ಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 314 ಕೊಳವೆ ಬಾವಿಗಳನ್ನು ಕೊರೆದಿದ್ದು ಇದರಲ್ಲಿ 209 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆ. ಆದರೆ 105 ಕೊಳವೆ ಬಾವಿಗಳು ವಿಫಲವಾಗಿವೆ. ಅದೇ ರೀತಿ ಬಹಳಷ್ಟು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲೂಕುಗಳಲ್ಲಿ ಸಮಸ್ಯೆ ಇನ್ನೂ ಹೆಚ್ಚಾಗಿದೆ ಎಂದು ಅಧಿಕಾರಿ ತಿಳಿಸಿದರು.
ಕೊಳವೆ ಬಾವಿಗಳು ವಿಫಲವಾಗಿ ಜಿಲ್ಲಾದ್ಯಂತ ಸಮಸ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ಸುಮ್ಮನಾಗುವಂತಾಗಿದೆ. ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಇದರಿಂದ ಶೇ.60 ರಷ್ಟಾದರೂ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಜಿ.ಪಂ ಉಪಾಧ್ಯಕ್ಷ ಅಶ್ವತ್ಥಪ್ಪ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳೇ ಇರುವುದಿಲ್ಲ: ಗ್ರಾಮಗಳಲ್ಲಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿ ಒಂದು ವರ್ಷ ಕಳೆದು ಹೋದರೂ ಪಂಪ್ ಮೋಟಾರ್ ಅಳವಡಿಸುವ ಕೆಲಸವೂ ಆಗುವುದಿಲ್ಲ. ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಸುಮ್ಮನಿರುತ್ತಾರೆ. ಗ್ರಾ.ಪಂ.ಕಾರ್ಯದರ್ಶಿಗಳು ಮತ್ತು ಪಿಡಿಓಗಳು ಕೇಂದ್ರ ಸ್ಥಾನದಲ್ಲಿಯೇ ಇರುವುದಿಲ್ಲ. ಜತೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಬಹಳಷ್ಟು ಅಧಿಕಾರಿಗಳು ಸಹ ಇರುವುದಿಲ್ಲ. ಇವರೇಕೆ, ಜಿಲ್ಲಾಧಿಕಾರಿಗಳು ಸಹ ಸಂಜೆಯ ತನಕ ಇದ್ದು ಬೆಂಗಳೂರಿಗೆ ಹೊರಟು ಹೋಗುತ್ತಾರೆ ಎಂದರು.
ಎರಡನೇ ಶನಿವಾರ ಬಂತೆಂದರೆ ಶುಕ್ರವಾರ ಮಧ್ಯಾಹ್ನವೇ ಕೇಂದ್ರ ಸ್ಥಾನವನ್ನು ಬಿಟ್ಟು ತೆರಳಿರುತ್ತಾರೆ. ಎಷ್ಟು ಜನ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುತ್ತಾರೆ ಎನ್ನುವುದನ್ನು ಹೇಳಲಿ ನೋಡೋಣ ಎಂದು ಪ್ರಶ್ನಿಸಿದರು. ಏನಾದರೂ ಜಿ.ಪಂ.ಸದಸ್ಯರು ಕೊಳವೆ ಬಾವಿಗಳ ದುರ್ಬಳಕೆಯ ಬಗ್ಗೆ ಗಮನ ಸೆಳೆದರೆ ಅಟ್ರಾಸಿಟಿ ಕೇಸ್ ಹಾಕಿಸಿಕೊಳ್ಳಬೇಕು. ಅಧಿಕಾರಿಗಳು ಮಾತ್ರ ಸಂಬಂಧಪಡದವರಂತೆ ಸುಮ್ಮನೆ ಇದ್ದು ನಮ್ಮನ್ನು ಸಿಕ್ಕಿಸುತ್ತಾರೆ ಎಂದು ಆರೋಪಿಸಿದರು.
ಮುಷ್ಕರ ಜನ ತತ್ತರ: ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರದಿಂದ ಜನ ಸಾಮಾನ್ಯರು ಆರೋಗ್ಯ ಸೇವೆ ಸಿಗದೇ ತೊಂದರೆಯನ್ನು ಅನುಭವಿಸುತ್ತಿರುವುದರ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು. ಮುಷ್ಕರದಿಂದ ಶಿಡ್ಲಘಟ್ಟ ಮತ್ತು ಚಿಂತಾಮಣಿಯಲ್ಲಿ ದುರ್ಘಟನೆಗಳು ನಡೆಯುತ್ತಿದ್ದರೂ ಏಕೆ ಗಮನಹರಿಸಿಲ್ಲ. ಪರ್ಯಾಯ ವ್ಯವಸ್ಥೆಯನ್ನಾದರೂ ಕೈಗೊಂಡು ರೋಗಿಗಳ ಪರದಾಟವನ್ನು ತಪ್ಪಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಭಕ್ತವತ್ಸಲಂ ಅವರಿಗೆ ಸೂಚನೆ ನೀಡಲಾಯಿತು.
ಅದೇ ರೀತಿ ಅಂಗವಿಕಲರಿಗೆ ಪ್ರಮಾಣ ಪತ್ರವನ್ನು ವಿತರಿಸಲು ಬೇಕಂತಲೇ ಸತಾಯಿಸಲಾಗುತ್ತಿದೆ. ಅರ್ಜಿಯನ್ನು ಹಾಕಿ ಒಂದು ವರ್ಷವಾಗಿದ್ದರೂ ಸಹ ಪ್ರಮಾಣ ಪತ್ರ ನೀಡಿಲ್ಲ ಎಂದು ಅಂಗವಿಕಲರಿಂದ ದೂರುಗಳು ಬರುತ್ತಿವೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಯಿತು. ಪ್ರತಿ ಇಲಾಖೆಗಳಲ್ಲೂ ಸಹ ಶೇ.3 ರಷ್ಟು ಅನುದಾನವನ್ನು ಮೀಸಲಿಟ್ಟು ಅಂಗವಿಕಲರಿಗೆ ಸವಲತ್ತುಗಳನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಲಾಯಿತು. ಅಮರಾವತಿ, ಮಂಜುಳಾರವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ನರಸಿಂಹಮೂರ್ತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

