ಕೋಲಾರ

ಜೆಡಿಎಸ್ ಒಗ್ಗಟ್ಟು ಪ್ರದರ್ಶನ (ಸುದ್ದಿ ಸಂಕ್ಷೇಪ )

Published On :

ಬಂಗಾರಪೇಟೆ: ಇತ್ತೀಚಿಗಷ್ಟೇ ಬಿಜೆಪಿ ತೊರೆದು ಜೆಡಿಎಸ್ ಸೇರಿದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮತ್ತು ಮುಂದಿನ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿರುವ ಮಾಜಿ ಜಿಪಂ ಸದಸ್ಯ ಎಂ.ರಾಮಚಂದ್ರ ಒಟ್ಟಾಗಿ ಕಾಣಿಸಿಕೊಂಡು ಪುರಸಭೆ ಚುನಾವಣೆಯಲ್ಲಿ ಪಕ್ಷ ಎಲ್ಲಾ 23ವಾರ್ಡ್‌ಗಳಲ್ಲಿ ಸ್ವರ್ದಿಸಿ ಅಧಿಕಾರ ಗದ್ದುಗೆ ಏರುವುದು ಖಚಿತ ಎಂಬ ಸಂದೇಶ ನೀಡಿದ್ದಾರೆ. ರಾಮಚಂದ್ರ ಹಾಗೂ ವೆಂಕಟಮುನಿಯಪ್ಪ ಈಗ ಒಂದೇ ಪಕ್ಷದವರಾಗಿದ್ದರೂ ಒಂದಾಗಿ ಎಲ್ಲೂ ಕಾಣಿಸಿಕೊಳ್ಳದೆ ಇದ್ದುದ್ದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು. ಅಲ್ಲದೆ ಪುರಸಭೆ ಚುನಾವಣೆ ಬೇರೆ ಘೋಷಣೆಯಾಗಿರುವುದರಿಂದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಪಕ್ಷಕ್ಕೆ ಬಲ ಬರುವುದು ಇಲ್ಲದಿದ್ದರೆ ಗೆಲುವು ಕಷ್ಟ ಎಂಬ ಸತ್ಯವನ್ನು ಅರಿತು ಪಕ್ಷದ ಜಿಲ್ಲಾ ಕಾರ್ಯಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಇಬ್ಬರು ಮುಖಂಡರನ್ನು ಒಂದು ಗೂಡಿಸಿ ನಾವಿಬ್ಬರೂ ಒಂದೇ ಎಂದು ಸಾರಲು ಶುಕ್ರವಾರ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಮಾಜಿ ಶಾಸಕ ವೆಂಟಕಮುನಿಯಪ್ಪ ಮಾತನಾಡಿ, ಬಿಜೆಪಿ ತೊರೆದು ಜೆಡಿಎಸ್  ಸೇರಿರುವುದು ನನಗೆ ಹೆಮ್ಮೆಯಾಗಿದೆ. ಪುರಸಭೆ ಚುನಾವಣೆಯಲ್ಲಿ ಪಕ್ಷದಲ್ಲಿ ಗೊಂದಲಗಳಿಲ್ಲದೆ ಎಲ್ಲರೂ ಒಂದಾಗಿ ಶ್ರಮಿಸುವುವ ಮೂಲಕ ಮೊದಲ ಬಾರಿ ಪುರಸಭೆಯಲ್ಲಿ ಜೆಡಿಎಸ್ ಬಾವುಟ ಹಾರಿಸಲು ಪ್ರಮಾಣಿಕವಾಗಿ ದುಡಿಯುವುದಾಗಿ ಭರವಸೆ ನೀಡಿದರು.
ಎಂ.ರಾಮಚಂದ್ರ ಮಾತನಾಡಿ, ಕ್ಷೇತ್ರದಲ್ಲಿ ಈ ಹಿಂದೆ ಪಕ್ಷಕ್ಕೆ ಅಷ್ಟಾಗಿ ಬಲವಿರಲಿಲ್ಲ ಈಗ ನಾನು ಮತ್ತು ವೆಂಕಟಮುನಿಯಪ್ಪ ಪಕ್ಷಕ್ಕೆ ಆಗಮನದಿಂದಾಗಿ ಪಕ್ಷಕ್ಕೆ ಆನೆ ಬಲಬಂದಿದೆ ಅಲ್ಲದೆ ಮಂಕಾಗಿದ್ದ ಕಾರ್ಯಕರ್ತರಿಗೆ ನವ ಚೈತನ್ಯ ಬಂದಂತಾಗಿದೆ  ಈ ಬಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ರಾಜಕೀಯ ಬದಲಾವಣೆಯಾಗುವುದರಲ್ಲಿ ಅನುಮಾನವಿಲ್ಲ ಎಂದರಲ್ಲದೆ ಪುರಸಭೆ ಹಾಗೂ ವಿಧಾನಸಭೆಯಲ್ಲಿ ಈ ಬಾರಿ ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಕಾರ್ಯಕರ್ತರು ವದಂತಿಗಳಿಗೆ ಕಿವಿಗೊಡದೆ ಒಗ್ಗಟ್ಟು ಪ್ರದರ್ಶಿಸಬೇಕೆಂದು ಮನವಿ ಮಾಡಿದರು. ಜಿಲ್ಲಾ ಜೆಡಿಎಸ್ ಕಾರ್ಯಧ್ಯಕ್ಷ ಬ್ಯಾಲಹಳ್ಲಿ ಗೋವಿಂದೇಗೌಡ, ತಾಲೂಕು ಅಧ್ಯಕ್ಷ ರಾಮಪ್ಪ, ಮುಖಂಡರಾದ ಸಿ.ಎಂ.ಮುನಿಯಪ್ಪ ,ಹೊಸೂರು ಕೃಷ್ಣಪ್ಪ,ರಘುಪತಿಗೌಡ, ವಡಗೂರು ನಾಗರಾಜ್,ದೇವರಾಜ್,ಮುರಳಿ, ಮತ್ತಿತರರು ಇದ್ದರು.
'ಗ್ರಾಮೀಣ ಮಹಿಳೆಸ್ವಾವಲಂಬಿಯಾಗಲಿ'
ಮಂಡ್ಯ: ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಜಿಲ್ಲಾ ಪಂಚಾಯ್ತಿ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಮತ್ತು ಕೈಗಾರಿಕೆ ಇಲಾಖೆ ವತಿಯಿಂದ ತಗ್ಗಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ಹೊಲಿಗೆ ಯಂತ್ರ ಹಾಗೂ ಕುಶಲಕರ್ಮಿಗಳ ಉಪಕರಣಗಳನ್ನು ಜಿಪಂ ಸದಸ್ಯೆ ಜಯಕಾಂತ ವಿತರಿಸಿದರು. ತರಬೇತಿ ಪಡೆದ ಮಹಿಳೆಯರು ತಮ್ಮ ಮನೆಗಳಲ್ಲೇ ಕುಳಿತು ಬಟ್ಟೆ ಹೊಲೆಯುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು.ಈ ನಿಟ್ಟಿನಲ್ಲಿ ಮನೆಗೆ ಆಗುವಂತಹ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಳ್ಳಬಹುದು. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲ ಕಲ್ಪಿಸಿಕೊಡಬಹುದು ಎಂದು ಜಯಕಾಂತ ಹೇಳಿದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ರಮೇಶ್ ಚಿತ್ರ, ಕೈಗಾರಿಕಾ ವಿಸ್ತರಣಾಧಿಕಾರಿ ಪುಟ್ಟಸ್ವಾಮಿ, ರಾಮಚಂದ್ರು, ರುದ್ರಪ್ಪ, ಅಂಕರಾಜು ಭಾಗವಹಿಸಿದ್ದರು.
ಇಂದು ಪ್ರತಿಭಟನೆ
ಮಂಡ್ಯ: ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿನ ಬಿಪಿಎಲ್ ಕಾರ್ಡ್ ವಿತರಣೆ ವಿಳಂಬ ನೀತಿ, ನಿಗದಿತ ದರಕ್ಕಿಂತ ಮಳಿಗೆಗಳಲ್ಲಿ ಹೆಚ್ಚು ಹಣ ಪಡೆಯುತ್ತಿರುವುದು, ಸೀಮೆಎಣ್ಣೆ, ಸಕ್ಕರೆ ವಿತರಣೆ ಸಂಬಂಧ ಹೆಚ್ಚು ಹಣ ಪಡೆಯುತ್ತಿರುವುದನ್ನು ಖಂಡಿಸಿ ಫೆ.16 ರಂದು ನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿ ಎದುರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಅಧ್ಯಕ್ಷ ಎಂ.ಎಸ್.ಚಿದಂಬರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.