ವರ್ತೂರ್ ಓಡಿಸಲು ನಗರಸಭೆ 'ಕೈ' ವಶ ಆಗಲಿ
ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್ ಪ್ರಕಾಶ್ ಅವರಿಗೆ ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲದಿರುವುದರಿಂದ ಜನರನ್ನು ನಿರಂತವಾಗಿ ದಾರಿ ತಪ್ಪಿಸುತ್ತಿದ್ದಾರೆ. ಹಣದ ಮೂಲಕ ರಾಜಕಾರಣ ಮಾಡಿ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದ್ದಾರೆ. ಇಂತಹ ನೀಚ ರಾಜಕಾರಣಿಯನ್ನು ಕೋಲಾರ ಕ್ಷೇತ್ರದಿಂದ ಓಡಿಸಬೇಕಾದರೆ ಕೋಲಾರ ನಗರಸಭೆ ಕಾಂಗ್ರೆಸ್ ವಶವಾಗುವುದು ಅತ್ಯವಶ್ಯಕ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಕೋಲಾರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಾ.7 ರಂದು ನಡೆಯುವ ಕೋಲಾರ ನಗರಸಭೆ ಚುನಾವಣೆ ಹಿನ್ನೆಲೆ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕೋಲಾರ ಕ್ಷೇತ್ರದಲ್ಲಿ ಅನೇಕ ಹಿರಿಯರು ರಾಜಕಾರಣ ಮಾಡಿದ್ದಾರೆ. ಆದರೂ ಸಚಿವ ವರ್ತೂರ್ ಪ್ರಕಾಶ್ ರೀತಿ ಯಾವೊಬ್ಬ ಜನಪ್ರತಿನಿಧಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಲಿಲ್ಲ. ಕೋಲಾರವನ್ನು ಉದ್ಧಾರ ಮಾಡ್ತೀನಿ ಎಂದು ಹೇಳಿದ ಈ ಅಸಾಮಿ ತನ್ನ ಸ್ವಾರ್ಥಕ್ಕಾಗಿ ಜನರನ್ನು ತಪ್ಪು ದಾರಿಗೆ ಏಳೆಯುತ್ತಿದ್ದಾರೆ. ಮತದಾರರಿಗೆ ಹಣದ ರುಚಿ ತೋರಿಸಿ ಗೆದ್ದ ಮೇಲೆ ಇದೇ ಮತದಾರರನ್ನು ನಾಯಿಗಳಿಗಿಂತ ಕಡೆಯಾಗಿ ನೋಡುತ್ತಿದ್ದಾರೆ. ಈ ವ್ಯಕ್ತಿ ಕ್ಷೇತ್ರದಲ್ಲಿ ಇನ್ನಷ್ಟು ಕಾಲ ಇದ್ದರೆ ಸಭ್ಯ ರಾಜಕಾರಣಿಗಳಿಗೆ ಉಳಿಗಾಲ ಇರುವುದಿಲ್ಲ ಹಾಗೂ ಕ್ಷೇತ್ರಕ್ಕೂ ಮಾನ ಸಿಗಲ್ಲವೆಂದು ಹೇಳಿದರು.
ವರ್ತೂರ್ ಪ್ರಕಾಶ್‌ಗೆ ಪಕ್ಷ ನಿಷ್ಟೆ ಇಲ್ಲ. ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ನಾನು ಮುಖ್ಯಮಂತ್ರಿ ಆಗುತ್ತೇನೆ. ಉಪ ಮುಖ್ಯಮಂತ್ರಿ ಆಗುತ್ತೇನೆಂದು ಬಡಾಯಿಕೊಚ್ಚಿಕೊಳ್ಳುವ ಈ ಆಸಾಮಿ ಶಾಸಕ, ಸಚಿವರಾದ ಮೇಲೆ ಕ್ಷೇತ್ರದಲ್ಲಿ ಆಗಿರುವ ಅವಾಂತರಗಳು ಲೆಕ್ಕವಿಲ್ಲದಷ್ಟಾಗಿದೆ. ಕೋಲಾರ ನಗರಸಭೆ ಹಾಳಾಗುವುದಕ್ಕೆ ಈ ವ್ಯಕ್ತಿಯೇ ಕಾರಣ, ಜನತೆಗೆ ಮೂಲ ಸೌಕರ್ಯ ಕಲ್ಪಿಸಬೇಕಾದ ನಗರಸಭೆ ಇಂದು ಲಗಾಮು ಇಲ್ಲದ ಬಂಡಿಯಂತಾಗಿದೆ. ನಗರಸಭೆಗೆ ಮೇಜರ್ ಸರ್ಜರಿ ಆಗಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ವರ್ತೂರ್ ಪ್ರಕಾಶ್ ಮತ್ತೆ ಶಾಸಕರಾದರೆ ಕೋಲಾರ ನಗರಸಭೆ ಉದ್ಧಾರವಾಗಲ್ಲ, ಮಾ.7ರಂದು ನಡೆಯುವ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಗೇರಿಸಿದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರ್ತೂರ್ ಪ್ರಕಾಶ್ ಅವರನ್ನು ಸೋಲಿಸುವುದಕ್ಕೆ ಸುಲಭವಾಗುವುದರಿಂದ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ತರಲು ಶ್ರಮಿಸಬೇಕೆಂದರು ಕರೆ ನೀಡಿದರು.
ಕೇಂದ್ರ ಸರ್ಕಾರದಿಂದ ಕೋಲಾರ ನಗರಸಭೆಗೆ ಸಾಕಷ್ಟು ಅನುದಾನ ಬಿಡುಗಡೆ ಆಗಿದೆ, ಈ ಹಣವನ್ನು ಶಾಸಕರ ಬೆಂಬಲಿಗರು ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸದ್ಬಳಕೆ ಮಾಡಿಲ್ಲ, ನಗರಸಭೆಗೆ ಮುಕ್ತಿ ಕಲ್ಪಿಸಬೇಕೆಂದು ನಾನು ಮತ್ತು ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರುಗಳು ಚಿಂತನೆ ನಡೆಸಿ ನಾಜೀಯಾ ಬಾಬಾಜಾನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ ನಂತರ ಸುಧಾರಣೆ ತರಲು ಪ್ರಯತ್ನಿಸಲಾಗಿತ್ತು. ಆದರೆ, ಶಾಸಕರ ಕಡೆಯವರು ನಗರಸಭೆಯ ಆಡಳಿತ ಉತ್ತಮ ರೀತಿಯಲ್ಲಿ ನಡೆಯುವುದಕ್ಕೆ ಅವಕಾಶ ನೀಡಲಿಲ್ಲ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಶಾಸಕರ ಬೆಂಬಲಿಗರು ನನ್ನ ಜತೆ ನಡೆದುಕೊಂಡ ರೀತಿಯಿಂದ ಮನನೊಂದಿದ್ದೇನೆ. ಕೇಂದ್ರ ಸರ್ಕಾರದಿಂದ 200 ಕೋಟಿ ರು. ಬಿಡುಗಡೆ ಮಾಡಿಸಿ ಕೋಲಾರವನ್ನ ಮಾದರಿ ನಗರವನ್ನಾಗಿ ಮಾಡಬೇಕೆಂಬ ಆಸೆಗೆ ವರ್ತೂರ್ ಪ್ರಕಾಶ್ ಮತ್ತು ಬೆಂಬಲಿಗರು ತಣ್ಣಿರು ಎರಚಿಸದರೆಂದು ವಿಷಾದ ವ್ಯಕ್ತಪಡಿಸಿದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ನಗರಸಭೆಯಲ್ಲೂ ಕಾಂಗ್ರೆಸ್ ಅಧಿಕಾರ ನಡೆಸುವಂತಾಗಬೇಕು. ಯಾರಿಗೆ ಕಾಂಗ್ರೆಸ್ ಪಕ್ಷದಿಂದ ಕೋಲಾರದ ಶಾಸಕರಾಗಬೇಕೆಂಬ ಆಸೆ ಇದೆಯೋ ಅಂತಹವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು. ಕಾಂಗ್ರೆಸ್ ಪಕ್ಷ ನಗರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಲ್ಲಿ ತಾವು ಮತ್ತು ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರು ಹೆಚ್ಚಿನ ಜವಾಬ್ದಾರಿ ವಹಿಸಿ ಸರ್ಕಾರದಿಂದ ನಗರಸಭೆಗೆ ಹೆಚ್ಚಿನ ಅನುದಾನ ತಂದು ಮಾದರಿ ನಗರವನ್ನಾಗಿ ಮಾಡುತ್ತೇವೆ. ಕುಡಿಯುವ ನೀರು, ಉತ್ತಮವಾದ ರಸ್ತೆ, ಚರಂಡಿ, ಪರಿಸರ, ಪಾರ್ಕ್‌ಗಳ ನಿರ್ಮಾಣ ಮಾಡಿ ಜನತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

