ಸಚಿವ ವರ್ತೂರ್ ಗೆಲ್ಲಲು ನಾನು ಕಾರಣವಲ್ಲ: ಸ್ಪಷ್ಟನೆ
ಕೋಲಾರ: ವರ್ತೂರ್ ಪ್ರಕಾಶ್ ಕೋಲಾರಕ್ಕೆ ಬಂದಿದ್ದು ಸಮಾಜ ಸೇವೆಗಾಗಿ, ಈ ಅಸಾಮಿ ಶಾಸಕನಾಗಲು ನಾನು ಕಾರಣನಲ್ಲ. ಮಾಜಿ ಸಚಿವ ಕೆ.ಶ್ರೀನಿವಾಸಗೌಡರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಕಾರ್ಯಕರ್ತರೊಂದಿಗೆ ವಿಶ್ವಾಸ ಹೊಂದಿರಲಿಲ್ಲ. ಆದ್ದರಿಂದ 2008ರ ಚುನಾವಣೆಯಲ್ಲಿ ಸೋತರು ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ ನೀಡಿದರು.
ಅವರು ಭಾನುವಾರ ತಮ್ಮ ನಿವಾಸದಲ್ಲಿ ಮಾ.7ರಂದು ನಡೆಯುವ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಶ್ರೀನಿವಾಸಗೌಡರು ಚುನಾವಣೆಯಲ್ಲಿ ಸೋತ ನಂತರ ನನ್ನ ವಿರುದ್ಧ ಅನಗತ್ಯ ಆರೋಪ ಮಾಡಿದ್ದಾರೆ. ಪಕ್ಷ ತೊರೆದು ಜೆಡಿಎಸ್ ಸೇರಿದ ಬಳಿಕವೂ ವರ್ತೂರ್ ಪ್ರಕಾಶ್ ಅವರನ್ನು ಕೆ.ಎಚ್. ಮುನಿಯಪ್ಪ ಕೋಲಾರಕ್ಕೆ ಕರೆತಂದು ನನ್ನ ಸೋಲಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಆರೋಪದಲ್ಲಿ ಹುರುಳಿಲ್ಲ, ಶ್ರೀನಿವಾಸಗೌಡರು ಸೋಲುವುದಕ್ಕೆ ನಾನು ಕಾರಣ ಎಂಬುದು ಸರಿಯಲ್ಲ, ಇವರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಇರಲಿಲ್ಲವಾದ್ದರಿಂದ ಸೋತರೆಂದು ಹೇಳಿದರು.
ಕಾಂಗ್ರೆಸ್ ಬೆಂಬಲ ಇಲ್ಲದೆ ಜೆಡಿಎಸ್‌ನಿಂದ ಸ್ಪರ್ಧಿಸಿ ರಾಜ್ಯಭಾರ ಮಾಡುವೆ ಎಂದು ಶ್ರೀನಿವಾಸಗೌಡರು ಭಾವಿಸಿದ್ದಾರೆ. ವರ್ತೂರ್ ಪ್ರಕಾಶ್ ಬಣವೇ ಮುಖ್ಯ ಎಂದು ಪ್ರಜಾಪ್ರಭುತ್ವದ ನೀತಿ-ನಿಯಮಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಈ ಮನುಷ್ಯನ ಯೋಗ್ಯತೆ ಗೊತ್ತಾದ ಮೇಲೆ ನಾನು ಆತನಿಂದ ದೂರವಿರಲು ಯತ್ನಿಸಿದೆ. ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್ ಒಂದು ಸಾರಿ ದೆಹಲಿಯಲ್ಲಿ ವರ್ತೂರ್ ಪ್ರಕಾಶ್ ಅವರನ್ನು ಕರೆ ತಂದು ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಅವರನ್ನು ಪರಿಚಯಿಸಿ ಕಾಂಗ್ರೆಸ್‌ಗೆ ಬರುವುದಕ್ಕೆ ಯತ್ನಿಸಿದ್ದರು.
ದೆಹಲಿಯಿಂದ ವಾಪಸ್ ಬಂದ ನಂತರ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕಾದರೆ ನನಗೆ ಆರ್ಥಿಕ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಇದರಿಂದ ಹಣದ ಸಮಸ್ಯೆ ಇರಬಹುದು ಎಂದು ಭಾವಿಸಿ 20 ಲಕ್ಷ ಕೊಡಿಸಲು ಹಣ ಸಹಾಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ವರ್ತೂರ್ ಪ್ರಕಾಶ್ ಅವರು ಜೆಡಿಎಸ್ ಬೆಂಬಲಿತ ವಿಜಯ ಮಲ್ಯ ಅವರಿಗೆ ಓಟು ಹಾಕಲು ಎಚ್.ಡಿ. ಕುಮಾರಸ್ವಾಮಿ ಜತೆ ಸೇರಿಕೊಂಡರು.
ಕಾಂಗ್ರೆಸ್ ಬೆಂಬಲ ಅಭ್ಯರ್ಥಿಗೆ ಓಟು ಹಾಕುವುದಾಗಿ ಭರವಸೆ ನೀಡಿದ್ದ ವರ್ತೂರ್ ಪ್ರಕಾಶ್ ವಿಜಯ ಮಲ್ಯಗೆ ಮತ ಹಾಕಿದ ವಿಷಯ ನಮ್ಮ ಪಕ್ಷದ ಶಾಸಕ ವಿ.ಮುನಿಯಪ್ಪ ಅವರಿಂದ ಗೊತ್ತಾದ ಮೇಲೆ ಹಣ ನೀಡುವ ಪ್ರಸಂಗ ಉಂಟಾಗಲಿಲ್ಲ. ವರ್ತೂರ್ ಪ್ರಕಾಶ್ ನಂಬಿಕೆ ಅನರ್ಹ ವ್ಯಕ್ತಿ. ಈ ವ್ಯಕ್ತಿಯ ರೀತಿಯಲ್ಲಿ ನಾವು ಹಣ ತಂದು ರಾಜಕಾರಣ ಮಾಡುತ್ತಿಲ್ಲ. ಜನತೆಯ ಪ್ರೀತಿ, ವಿಶ್ವಾಸದಿಂದ ಚುನಾವಣೆಯಲ್ಲಿ ಜಯ ಸಾಧಿಸುತ್ತಿದ್ದು, ಈ ಬಾರಿ ಕೋಲಾರದಿಂದ ವರ್ತೂರ್ ಪ್ರಕಾಶ್ ಅವರನ್ನು ಖಾಲಿ ಮಾಡಿಸಲು ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

