ಅಕ್ರಮ ದಂಧೆಗೆ ಜನ ಬೀದಿಪಾಲು: ಕೇಳೋರಿಲ್ಲ ಗೋಳು
ಬಾಗೇಪಲ್ಲಿ: ನಾಯಿ ಕೊಡೆಗಳಂತೆ ದಿನಕ್ಕೊಂದರಂತೆ ಪ್ರಾರಂಭವಾಗುತ್ತಿರುವ ಕ್ಲಬ್ಗಳಿಂದ ಕೆಲವರು ಹುಚ್ಚರಾಗುತ್ತ, ಮತ್ತೆ ಕೆಲವರ ಕುಟುಂಬಗಳು ಬೀದಿ ಪಾಲಾಗುತ್ತಿದ್ದರೂ ಸಹ ನಮಗೂ ಆ ದಂಧೆಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ಇಲ್ಲಿನ ಸ್ಥಳೀಯ ಪೊಲೀಸರು ವರ್ತಿಸುತ್ತಿರುವುದರ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.
ಮನರಂಜನೆಯ ಹೆಸರಿನಲ್ಲಿ ಕ್ಲಬ್ಗಳು ನಿತ್ಯವೂ ಹಗಲು, ರಾತ್ರಿಯೆನ್ನದೇ ಸಾವಿರಾರು ರು.ಗಳನ್ನು ಜೂಜಾಟದಲ್ಲಿ ಪಣಕ್ಕಿಡಿಸಿ ಹಲವರನ್ನು ಮುಳುಗಿಸುತ್ತಿವೆ. ಒಂದು ತಾಲೂಕು ಕೇಂದ್ರದಲ್ಲಿ ಮನರಂಜನೆಗಾಗಿ ಸರ್ಕಾರವು 4-5 ಕ್ಲಬ್ಗಳಿಗೆ ಪರವಾನಗಿ ನೀಡಬಹುದು. ಆದರೆ, ನಂಜುಂಡಪ್ಪ ವರದಿಯ ಪ್ರಕಾರ ಈ ತಾಲೂಕು ಬರಪೀಡಿತ ಪ್ರದೇಶವೆಂದು ಸರ್ಕಾರವು ಘೋಷಿಸಿದ್ದು ಇಂತಹ ತಾಲೂಕು ಕೇಂದ್ರವೊಂದರಲ್ಲಿಯೇ 10-12 ಕ್ಲಬ್ಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಸಹ ಕೇಳುವವರೇ ಇಲ್ಲ. ತಾಲೂಕು ಕೇಂದ್ರದಲ್ಲಿಯೇ ಇಷ್ಟು ಕ್ಲಬ್ಗಳಿದ್ದರೆ ಇನ್ನೂ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಹಾಗೂ ಪರವಾನಗಿ ಇಲ್ಲದೇ ಅಕ್ರಮವಾಗಿ ಕ್ಲಬ್ಗಳು ಇನ್ನಷ್ಟು ಇರಬಹುದೆನ್ನುವುದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ನಿಯಮಗಳ ಉಲ್ಲಂಘನೆ: ಜನಸಾಮಾನ್ಯರ ಮನರಂಜನೆಗಾಗಿ ಕ್ಲಬ್ಗಳನ್ನು ನಡೆಸುತ್ತಿದ್ದರೆ ನಷ್ಟವಾದರೂ ಏನು ಎಂಬ ಪ್ರಶ್ನೆ ಸಹಜವಾಗಿ ಪ್ರತಿಯೊಬ್ಬರಿಗೂ ಬರುತ್ತೆ. ಸರ್ಕಾರವು ಜನರ ಮನರಂಜನೆಗಾಗಿ ಕಾನೂನಿನ ಪ್ರಕಾರ ಪರವಾನಗಿ ನೀಡಬೇಕಾದರೆ ಸಾಕಷ್ಟು ನಿಯಮಗಳಿವೆ. ಒಂದು ಕ್ಲಬ್ನಲ್ಲಿ ಕೇರಂ, ಚೇಸ್, ಇಸ್ಪೇಟ್, ಸೆಟಲ್ಕಾಕ್ ಮುಂತಾದ ಕ್ರೀಡೆಗಳು ಇರಬೇಕು.
ಈ ಕ್ಲಬ್ಗಳಲ್ಲಿ ಕ್ಲಬ್ಗೆ ಸಂಬಂಧಿಸಿರುವ ಸದಸ್ಯರು ಮಾತ್ರ ಆಡಬೇಕಾಗಿರುತ್ತದೆ. ಆದರೆ, ಪಟ್ಟಣದಲ್ಲಿ ನಡೆಯುತ್ತಿರುವ ಕ್ಲಬ್ಗಳಲ್ಲಿ ಸರ್ಕಾರದ ಹಾಗೂ ನ್ಯಾಯಾಲಯದ ಕಾನೂನಿನ ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿ ಇವೆ ಎನ್ನುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.
ಹೆಚ್ಚಿದ ಅಪರಾಧಗಳು: ಸುಮಾರು 10-12 ಕ್ಲಬ್ಗಳಲ್ಲಿರುವ ಈ ಪಟ್ಟಣದಲ್ಲಿ ಸಾವಿರಾರು ರೂ.ಗಳ ಹಣವನ್ನು ಪಣಕ್ಕಿಟ್ಟು ಕಾನೂನನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಅಂದರ್ಬಾಹರ್, ಮೂರು ಎಲೆ ಮುಂತಾದ ಆಟಗಳನ್ನು ಆಡಿಸಲಾಗುತ್ತದೆ. ಬಹುತೇಕ ಎಲ್ಲಾ ಕ್ಲಬ್ಗಳಿಗೆ ನೆರೆಯ ಆಂಧ್ರಪ್ರದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿ ಹಗಲು ರಾತ್ರಿ ಎನ್ನದೇ ತಂಡೋಪ ತಂಡವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳಲ್ಲಿ ಕೊಲೆ, ಸುಲಿಗೆ, ದೌರ್ಜನ್ಯ ಮುಂತಾದ ಅಪರಾಧಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇದರಿಂದ ಯಾವ ಸಮಯದಲ್ಲಿ ಏನು ಅಪಾಯ ಸಂಭವಿಸುತ್ತೋ ಎಂಬ ಭೀತಿಯಲ್ಲಿ ಜನ ಇರುವಂತಾಗಿದೆ.
ಶಾಲಾ ಕಾಲೇಜು, ಸರ್ಕಾರಿ ವಿದ್ಯಾರ್ಥಿ ನಿಲಯ, ಸಾರ್ವಜನಿಕರ ವಾಸವಿರುವ ಸ್ಥಳ ಸೇರಿದಂತೆ ಪಟ್ಟಣದ ತಾಲೂಕು ಕಚೇರಿ ಮತ್ತು ಪೊಲೀಸ್ ಠಾಣೆಯ ಎದುರಿನಲ್ಲಿಯೇ ಇರುವಂತಹ ಕೊಠಡಿಗಳನ್ನು ಬಾಡಿಗೆಗೆ ಪಡೆದು ಜೂಜಾಟ ಕೇಂದ್ರಗಳನ್ನು ರಾಜಾರೋಷವಾಗಿ ನಡೆಸುತ್ತಿದ್ದಾರೆಂದರೆ ಈ ಕ್ಲಬ್ಗಳನ್ನು ನಡೆಸುತ್ತಿರುವವರು ಎಷ್ಟು ಬಲಾಢ್ಯರಿರಬಹುದೆನ್ನುವುದನ್ನು ಊಹಿಸಬೇಕಷ್ಟೇ. ಈ ವಿಚಾರದಲ್ಲಿ ರಾಜಕೀಯ ಹಾಗೂ ಪೊಲೀಸರ ಪಾತ್ರವೂ ಬಹಳ ಮಹತ್ವದ್ದಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ನೆರೆಯ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿರುವ ತಾಲೂಕಿನಲ್ಲಿ ಇತ್ತೀಚೆಗೆ ಜನಸಾಮಾನ್ಯರು ಸೇರಿದಂತೆ ಬಹುತೇಕ ಕೂಲಿ ಕಾರ್ಮಿಕರು ಈ ಕ್ಲಬ್ಗಳಲ್ಲಿ ಜೂಜಾಟವನ್ನು ಆಡಿ ಸಾಕಷ್ಟು ಹಣವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸುಮಾರು ಮಂದಿ ಬೀದಿಪಾಲಾಗಿದ್ದಾರೆ. ಈ ದಂಧೆಯಲ್ಲಿ ಸರ್ಕಾರಿ ನೌಕರರು, ವ್ಯಾಪಾರಸ್ಥರು, ವಿವಿಧ ವಾಹನಗಳ ಚಾಲಕರು,ರೈತರು, ಕೂಲಿ ಕಾರ್ಮಿಕರು ಹೆಚ್ಚಿನ ಹಣವನ್ನು ಗಳಿಸಿ ಶ್ರೀಮಂತರಾಗುವ ಹಗಲಗನಸಿನಲ್ಲಿ ಕ್ಲಬ್ಗಳೆಂಬ ಹೆಬ್ಬಾವಿನ ಬಾಯಿಗೆ ಕೈ ಹಾಕುತ್ತಿದ್ದಾರೆ.
ಕೆಲ ಸರ್ಕಾರಿ ನೌಕರರು ಕಚೇರಿಯಲ್ಲಿನ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಹೋಗಿ ಕ್ಲಬ್ಗಳಲ್ಲಿ ಕುಳಿತರೆ ಮತ್ತೆ ಕಚೇರಿ ಮತ್ತು ಮನೆಯ ಹಾದಿಯೇ ಕಾಣಸಿಗದು. ಇವರಿಗೆ ಬರುವ ಸಂಬಳಕ್ಕಿಂತ 2-3 ಪಟ್ಟು ಹೆಚ್ಚಾಗಿ ಇಲ್ಲಿ ಕಳೆದುಕೊಂಡು ಸಾಲಗಾರರಾಗುತ್ತಿದ್ದಾರೆ. ಅದೇ ರೀತಿಯಲ್ಲಿ ಅನೇಕರು ದುಪ್ಪಟ್ಟು ಹಣವನ್ನು ಸಂಪಾದನೆಗಾಗಿ ಬಂದು ಮನೆ, ಮಠ ಕೊನೆಗೆ ಹೆಂಡತಿಯ ತಾಳಿಯನ್ನು ಸಹ ಮಾರಿದ ಹಣವನ್ನು ತಂದು ಇಲ್ಲಿ ಕಳೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿರುವ ಅಕ್ರಮ ದಂಧೆಯು ನಡೆಯುತ್ತಿದ್ದರೂ ಯಾವುದೇ ರೀತಿಯ ಸಂಬಂಧವೇ ಇಲ್ಲವನ್ನುವಂತೆ, ಕಣ್ಣಿದ್ದು ಕಾಣದ ಜಾಣ ಕುರುಡರಂತೆ ಸ್ಥಳೀಯ ಪೊಲೀಸರು ವರ್ತಿಸುತ್ತಿದ್ದಾರೆ.
ಕಾಟಾಚಾರದ ದಾಳಿ: ರಾಜಕೀಯ ನಾಯಕರ ಹಾಗೂ ಅಧಿಕಾರಿಗಳ ಒತ್ತಡಕ್ಕೆ ಮಣಿದ ಪೊಲೀಸರು ಕೆಲವೊಮ್ಮೆ ಇಸ್ಪೀಟ್ ಅಡ್ಡೆಗಳ ಮೇಲೆ ಕಾಟಾಚಾರಕ್ಕೆ ದಾಳಿ ನಡೆಸಿ ಅವರಿಂದ ಚಿಕ್ಕ ಮೊತ್ತದಲ್ಲಿನ ನಗದು ಹಣವನ್ನು ವಶಪಡಿಸಿಕೊಂಡು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕೈತೊಳೆದುಕೊಳ್ಳುವುದು ಮಾಮೂಲಿಯಾಗಿ ಹೋಗುತ್ತಿದೆ ಎಂದು ಆರೋಪಿಸುವ ಸಾರ್ವಜನಿಕರು, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಮನರಂಜನೆಯ ಹೆಸರಿನಲ್ಲಿ ಕಾನೂನು ಬಾಹಿರವಾಗಿ ದಂಧೆ ನಡೆಸುತ್ತಿರುವವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

