ಜೆಡಿಎಸ್ ಭದ್ರಕೋಟೆ ಒಡೆದ ಡಿ.ಕೆ. ಶಿವಕುಮಾರ್
ಕನಕಪುರ: ಎರಡು ದಶಕಗಳ ಕಾಲ ನಿರಂತರವಾಗಿ ಜೆಡಿಎಸ್ ಭದ್ರಕೋಟೆಯಾಗಿದ್ದ ಕನಕಪುರ ಪುರಸಭೆ ಕಳೆದ ಚುನಾವಣೆಯಲ್ಲಿ ಬಹುಮತವಿದ್ದರೂ ಡಿ.ಕೆ. ಶಿವಕುಮಾರ್ ಮ್ಯಾಜಿಕ್ನಿಂದಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು.
27 ಸದಸ್ಯಬಲದ ಪುರಸಭೆಯಲ್ಲಿ 14 ಜೆಡಿಎಸ್, 12 ಕಾಂಗ್ರೆಸ್ ಹಾಗೂ 1 ಬಿಎಸ್ಪಿ ಅಭ್ಯರ್ಥಿಗಳಿದ್ದು ಆಪರೇಷನ್ ಕೈ ಹಿಡಿತಕ್ಕೆ ಸಿಲುಕಿ 7 ಮಂದಿ ಕಾಂಗ್ರೆಸ್ಗೆ ಸೇರ್ಪಡೆಗೊಂಡು ಜೆಡಿಎಸ್ ಅಧಿಕಾರ ವಂಚಿತರಾಗಬೇಕಾಯಿತು. ಮೊದಲ ಎರಡೂವರೆ ವರ್ಷಗಳು ಹಿಂ.ಜಾತಿ ಮೀಸಲಾತಿಯ ವೈ. ಶ್ರೀನಿವಾಸ್, ನಂತರದ ಅವಧಿಯನ್ನು ಬಿಸಿಎಂ ಎ ವರ್ಗದ ಆರ್.ಕೃಷ್ಣಮೂರ್ತಿ ಯಶಸ್ವಿಯಾಗಿ ಪೂರೈಸಿದ್ದಾರೆ.
ರಾಜ್ಯ ಸರ್ಕಾರದ ಯಾವುದೇ ವಿಶೇಷನುದಾನ, ಸಹಾಯಗಳಿಲ್ಲದೆ ಸೊರಗಿದ್ದ ಕನಕಪುರ ಪುರಸಭೆಗೆ ಕ್ಷೇತ್ರಕ್ಕೆ ನೂತನವಾಗಿ ಅಡಿಯಿರಿಸಿದ ಶಾಸಕ ಡಿ.ಕೆ. ಶಿವಕುಮಾರ್ ಕೇಂದ್ರಸರ್ಕಾರದ ಅನುದಾನಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಪ್ರಮುಖವಾಗಿ ನಿರಂತರ ವಿದ್ಯುತ್, ಉಪನಗರ ಯೋಜನೆ, ಪಟ್ಟಣವ್ಯಾಪ್ತಿಯಲ್ಲಿ 1 ಸಾವಿರ ಕಾಂಕ್ರೀಟ್ ಮನೆಗಳ ನೀಡಿಕೆ, ನಿವೇಶನ ರಹಿತರಿಗೆ 3 ಸಾವಿರ ನಿವೇಶನಗಳ ವಿತರಣೆ, ಪರಿಶುದ್ಧ ನೀರುಘಟಕಗಳ ಸ್ಥಾಪನೆಗಳು ಜನರ ಕಣ್ಣಮುಂದಿದೆ.
ಸಮಸ್ಯೆಗಳಿವೆ: ಅಂದಹಾಗೆ ಕನಕಪುರ ಪುರಸಭೆಯಲ್ಲಿ ಸಮಸ್ಯೆಗಳೇ ಇಲ್ಲ ಎನ್ನುವ ಹಾಗಿಲ್ಲ, 13 ವರ್ಷ ಕಳೆದರೂ ಪೂರ್ಣಗೊಳ್ಳದ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ನಾಗರಿಕರ ಬಗಲ ಮುಳ್ಳಾಗಿ ಕಾಡುತ್ತಿದೆ. ಇಂದಿಗೂ ಪಟ್ಟಣದ ರಸ್ತೆಗಳು ಹದಗೆಡಲು ಈ ಒಳ ಚರಂಡಿ ಅದ್ವಾನಗಳೇ ಕಾರಣ. ಈ ಜಾಲವನ್ನು ಸೀಳಿ ಹತ್ತಾರು ಕಡೆ ಮಲಿನ ನೀರನ್ನು ಅರ್ಕಾವತಿ ಒಡಲಿಗೆ ಹರಿಸುತ್ತಿರುವುದು, ಶುದ್ಧೀಕರಣ ಸ್ಥಾವರ ಪೂರ್ಣಗೊಳ್ಳದಿರುವುದು, ತಲೆ ನೋವನ್ನು ಹೆಚ್ಚಾಗಿಸಿವೆ.
ಗೋಳು ಕೇಳುವವರಿಲ್ಲ: ನಾಲ್ಕು ವರ್ಷಗಳ ಹಿಂದೆ ಪಟ್ಟಣದ ಮುಖ್ಯರಸ್ತೆ ಅಗಲೀಕರಣದ ವೇಳೆಯಲ್ಲಿ ಮನೆ, ನಿವೇಶನ, ಮಳಿಗೆ ಕಳೆದುಕೊಂಡ ಬಡಪಾಯಿ ವರ್ತಕರ ಗೋಳು ಕೇಳುವವರೇ ಇಲ್ಲವಾಗಿದೆ. ನಿಯಮಬಾಹಿರವಾಗಿ ಕಟ್ಟಡಗಳನ್ನು ಕೆಡವಿದ ನಂತರ ಪರಿಹಾರಕ್ಕೆ ಶಾಸಕರ ಆಶ್ವಾಸನೆಯನ್ನೇ ನಂಬಿಕುಳಿತ ಸಂತ್ರಸ್ಥರಿಗೆ ಇದುವರೆಗೂ ಚಿಕ್ಕಾಸೂ ದೊರೆತಿಲ್ಲ. ಪೇಟೆಕೆರೆಯಲ್ಲಿ ನಿರ್ಮಿಸಲಾಗುವ ಲೇಔಟ್ನಲ್ಲಿ ನಿವೇಶನ ಹಂಚಿಕೆ ಆಶ್ವಾಸನೆ ಸಂತ್ರಸ್ಥರಿಗೆ ಇನ್ನೂ ಕನ್ನಡಿಯ ಗಂಟಾಗಿದೆ.
ಬಾಲಗ್ರಹ ಪೀಡೆ: ಎಸ್ಎಫ್ಸಿ ಅನುದಾನದಲ್ಲಿ ಎರಡು ವರ್ಷಗಳಲ್ಲಿ ಹತ್ತಾರು ಕೋಟಿ ಪಟ್ಟಣದ ಅಭಿವೃದ್ಧಿಗೆ ಬಿಡುಗಡೆಯಾಗಿದ್ದರೂ ಟೆಂಡರ್ ಪ್ರಕ್ರಿಯೆ ದಾಟಿ ಅನುಷ್ಠಾನಗೊಳ್ಳುವುದರಲ್ಲಿಯೇ ಬಾಲಗ್ರಹ ಪೀಡೆ ಎದುರಿಸುತ್ತಿದೆ. ಮುಂದೆ ಆಯ್ಕೆಗೊಳ್ಳುವ ಪ್ರತಿನಿಧಿಗಳಿಗೆ ಇವುಗಳೇ ಪ್ರಾಥಮಿಕ ಸಮಸ್ಯೆಗಳಾಗಿ ಉಳಿಯಲಿವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಶಾಸಕರ ಯೋಜನೆಗಳ ಮಹಾಪೂರದಿಂದ ಗೆಲವಿನ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಆದರೆ ಪರಿಸ್ಥಿತಿ ವಿಭಿನ್ನವಾಗಿದೆ. ಜೆಡಿಎಸ್ ಮತ್ತೆ ತನ್ನ ಸಾಮರ್ಥ್ಯ ತೋರಲು ಸಜ್ಜಾಗಿ ಕಾರ್ಯತಂತ್ರ ರೂಪಿಸಿದೆ.
ಮತ್ತೆ ಪುರಸಭೆ ಅಧಿಕಾರ ಹೊಂದಲು ಸಕಲ ಹೋರಾಟ ನಡೆಸಲು ಮಾಜಿ ಸಚಿವ ಸಿಂಧ್ಯಾ ಹಾಗೂ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಡಿ.ಎಂ. ವಿಶ್ವನಾಥ್ ನೇತೃತ್ವದಲ್ಲಿ ಸಜ್ಜಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ಗಳು ಎಲ್ಲಾ 27 ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೆ, ಬಿಜೆಪಿ, ಬಿಎಸ್ಪಿ, ಬಿಎಸ್ಆರ್ ಕಾಂಗ್ರೆಸ್ತಲಾ 10 ವಾರ್ಡ್ಗಳಲ್ಲಿ ಅದೃಷ್ಟ ಪರೀಕ್ಷಿಸಲು ಹೊರಟಿವೆ. ಕೆಜೆಪಿ ಕೂಡಾ 6 ವಾರ್ಡ್ಗಳ್ಳಿ ಅಭ್ಯರ್ಥಿಗಳನ್ನು ಹೂಡಿ ಪಕ್ಷವನ್ನು ಜನರಿಗೆ ಪರಿಚಯಿಸುತ್ತಿದೆ. ಕನಕಪುರ ಪುರಸಭೆಯ ನೇರ ಹಣಾಹಣಿ ಹೋರಾಟದಲ್ಲಿ ಹಣಬಲ,ಅಧಿಕಾರ ಬಲಗಳೇ ಪ್ರಮುಖ ಪಾತ್ರ ವಹಿಸಲಿದ್ದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ರಣಭೂಮಿಯಾಗಿ ಮಾರ್ಪಟ್ಟಿದೆ.
-ಜಿ.ಎನ್. ಸತೀಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

