ಕೋಲಾರ

ಸುಧಾಕರ್ ಮತಯಾಚನೆ

Published On :

ಚಿಂತಾಮಣಿ:  ಸ್ಥಳೀಯ ನಗರಸಭೆಗೆ ನಡೆಯಲಿರುವ ಚುನಾವಣೆಗೆ ಶಾಸಕರ ಬೆಂಬಲಿತ ಅಭ್ಯರ್ಥಿ ಚಿಹ್ನೆಯಾದ ದ್ರಾಕ್ಷಿ ಹಣ್ಣಿನ ಗೊಂಚಲುಗೆ ಮತ ಹಾಕಲು ಶಾಸಕ ಎಂ.ಸಿ. ಸುಧಾಕರ್ ಗುರುವಾರ ನಗರದ ವಿವಿಧ ವಾರ್ಡ್‌ಗಳಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ನಗರದ ವೆಂಕಟಗಿರಿಕೋಟೆ, ಆಶ್ರಯ ಬಡಾವಣೆ, ಬಂಬೂಬಜಾರ್, ಕೀರ್ತಿ ನಗರ, ಅಗ್ರಹಾರ, ಶಾಂತಿನಗರ ಪ್ರದೇಶಗಳಲ್ಲಿ ಇಂದು ಶಾಸಕ ಎಂ.ಸಿ. ಸುಧಾಕರ್ ನಗರದಲ್ಲಿ ಪಾದಯಾತ್ರೆ ಮೂಲಕ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳ ಪರವಾಗಿ ಮನೆ-ಮನೆಗೆ ತೆರಳಿ ಮತಯಾಚನೆ ನಡೆಸಿದರು. ಈ ಸಂದರ್ಭ ಶಾಸಕ ಎಂ.ಸಿ. ಸುಧಾಕರ್ ಮಾತನಾಡಿ, ಚಿಂತಾಮಣಿ ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿರುವ ನಗರಸಭೆ 3 ದಶಕಗಳಿಗಿಂತ ಹೆಚ್ಚಾಗಿ ನಮ್ಮ ಆಡಳಿತವೇ ಹೆಚ್ಚು ಹೆಚ್ಚು ಅಭಿವೃದ್ಧಿ ಕೆಲಸಗಳಾದ ಸಿಮೆಂಟ್ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವುದರಿಂದ ಮತದಾರರು ಸಹ ನಮ್ಮ ಮೇಲೆ ಪ್ರೀತಿ ವಿಶ್ವಾಸದಿಂದ ಇದುವರೆಗೂ ಸಹ ಆಡಳಿತ ನಮ್ಮ ಮುಖಂಡರು ನಡೆಸಲು ಸಾಧ್ಯ ಎಂದು ಈ ಚುನಾವಣೆಯಲ್ಲಿಯೂ ಸಹ ಜಯಬೇರಿ ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕರ ಬೆಂಬಲಿತ ನಗರಸಭೆ ಚುನಾವಣೆಯ ಪಕ್ಷೇತರ ಅಭ್ಯರ್ಥಿಗಳಾದ ದೇವರಾಜ್, ಭಾಗ್ಯಮ್ಮ ಶ್ರೀನಿವಾಸ್,ನಾಗರತ್ನಮ್ಮ, ಟಿ.ಶ್ರೀನಿವಾಸ್, ಸುಬ್ಬರಾಮ ಪರ ಮತಯಾಚನೆ ನಡೆಸಿದರು. ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಯುವಕನ
ಶವ ಪತ್ತೆ
ಮಾಲೂರು: ಅಪರಿಚಿತ ಯುವಕನೊಬ್ಬನನ್ನು ಬೇರೆಡೆ ಕೊಲೆಗೈದು ಇಲ್ಲಿನ ಬೆಂಗಳೂರು ರಸ್ತೆಯ ಯಶವಂತಪುರ ಅರಣ್ಯ ಪ್ರದೇಶದಲ್ಲಿ ಬಿಸಾಕಿ ಹೋಗಿರುವ ಘಟನೆ ಗುರುವಾರ ಸಂಭವಿಸಿದೆ. ಪಟ್ಟಣದ 5 ಕೀ.ಮಿ.ದೂರದಲ್ಲಿರುವ ಬೆಂಗಳೂರು ರಸ್ತೆಯ ಯಶವಂತಪುರ ಅರಣ್ಯ ಪಾಲಕರು ಗುರುವಾರ ಬೆಳಿಗ್ಗೆ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಪೇಪರ್‌ನಲ್ಲಿ ಸುತ್ತಿದ್ದ ರೀತಿಯಲ್ಲಿ ಶವ ಬಿದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವದ ಮೈಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಗಾಯಗಳಿದ್ದು, ಗುರುತು ಸಿಗಬಾರದು ಎಂಬ ಉದ್ದೇಶದಿಂದ ಮುಖವನ್ನು ಕಲ್ಲಿನಿಂದ ಜಜ್ಜಿ ಲುಂಗಿಯಲ್ಲಿ ಸುತ್ತಲಾಗಿತ್ತು. ದೇಹವನ್ನು ನೀಲಿ ಬಣ್ಣದ ಪ್ಲಾಸ್ಟಿಕ್ ಪೇಪರ್ ನಲ್ಲಿ ಸುತ್ತಲಾಗಿತ್ತು. ಜೀನ್ಸ್ ಪ್ಯಾಂಟ್ ಹಾಗೂ ಬಿಳಿ ಟೀ ಶರ್ಟ್ ಧರಿಸಿರುತ್ತಾನೆ. ವಯಸ್ಸು ಸುಮಾರು 30 ಎಂದು ಗುರುತಿಸಲಾಗಿದೆ. ಎಸ್‌ಐ ಶಿವಸ್ವಾಮಿ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಜಿಲ್ಲಾಸ್ಪತ್ರೆ  ಶವಾಗಾರದಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ರೈತರ ವಿರೋಧಿ ಬಜೆಟ್: ಆರೋಪ
ಕೋಲಾರ:  ರೇಷ್ಮೆ ಆಮದು ಸುಂಕವನ್ನು ಕನಿಷ್ಠ 25 ರಿಂದ 30ಕ್ಕೆ ಏರಿಕೆ ಮಾಡುವ ಬದಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಶೇ.15ಕ್ಕೆ ನಿಗದಿ ಮಾಡಿರುವುದರಿಂದ ರೈತರಿಗೆ ಯಾವುದೇ ರೀತಿಯಲ್ಲೂ ಪ್ರಯೋಜನವಾಗುವುದಿಲ್ಲ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಶೇ.31 ರಷ್ಟಿದ್ದ ರೇಷ್ಮೆ ಆಮದು ಸುಂಕವನ್ನು ಶೇ.5ಕ್ಕೆ ಇಳಿಸಿ ರೇಷ್ಮೆ ಬೆಳೆಗಾರರು ಆತ್ಮಹತ್ಯೆ ಹಾದಿ ಹಿಡಿಯುವಂತೆ ಮಾಡಲಾಗಿತ್ತು. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ರೇಷ್ಮೆ ಆಮದು ಸುಂಕವನ್ನು ಶೇ.15ಕ್ಕೆ ಏರಿಸಿರುವುದು ಕೇವಲ ಗಿಮಿಕ್ ಆಗಿದೆ ಎಂದು ಕೇಂದ್ರ ಬಜೆಟ್ ಅನ್ನು ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ವಿತ್ತ ಸಚಿವರು ತಿಳಿಸಿದ್ದಾರೆ. ಆದರೆ, ಶಾಶ್ವತ ಬರದಿಂದ ತತ್ತರಿಸುತ್ತಿರುವ ಪ್ರದೇಶಗಳ ಅಭಿವೃದ್ಧಿಗೆ ಯಾವುದೇ ಯೋಜನೆ ಪ್ರಕಟಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇ.4ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವುದಾಗಿ ಹೇಳಿದ್ದರೂ, ಇದರಿಂದ ರಾಜ್ಯದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.