ಕೋಲಾರ

ಚಂದ ಕಾಣುತ್ತಿದ್ದ ಚೆನ್ನಯ್ಯಪಾರ್ಕ್ ಮಂಕು!

Published On :

ಚಿಕ್ಕಬಳ್ಳಾಪುರ: ಯಾವುದೇ ದೂರದೃಷ್ಟಿ ಯೋಜನೆಯಿಲ್ಲದೆ, ನಿರ್ಲಕ್ಷ್ಯದಿಂದ ಕೆಲಸ ಕೈಗೊಂಡ ಇಲ್ಲಿನ ಅಧಿಕಾರಿಗಳು, ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಹೃದಯ ಭಾಗದಲ್ಲಿರುವ ಚೆನ್ನಯ್ಯ ಪಾರ್ಕಿನ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಹಣ ರು. 52 ಲಕ್ಷ ರು. ಪೋಲು ಮಾಡಿದ್ದು, ಈ ನಿಟ್ಟಿನಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಇದೀಗ ಮತ್ತೆ ರು. 11 ಲಕ್ಷ ವೆಚ್ಚದಲ್ಲಿ ಉದ್ಯಾನವನ ನವೀಕರಣಕ್ಕೆ ಮುಂದಾಗಿದ್ದಾರೆ.
ಈ ಹಿಂದೆ ಕೋಲಾರ ಜಿಲ್ಲೆಯ ಭಾಗವಾಗಿದ್ದ ಸಂದರ್ಭದಲ್ಲಿ ಮಾಜಿ ಸಚಿವ ದಿ. ಟಿ.ಚೆನ್ನಯ್ಯ ಅವರ ಹೆಸರಿನಲ್ಲಿ 'ಚೆನ್ನಯ್ಯಪಾರ್ಕ್‌' ಅನ್ನು ಚಿಕ್ಕಬಳ್ಳಾಪುರದಲ್ಲಿ ನಿರ್ಮಿಸಿದ್ದು, ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ದಿನಗಳೆದಂತೆ ಸಮರ್ಪಕ ನಿರ್ವಹಣೆಯಿಲ್ಲದ ಕಾರಣ, ಉದ್ಯಾನವನ ಸೊರಗಿ ಹೋಗಿತ್ತು. ಮಳೆ ಬಂದಾಗಲೆಲ್ಲಾ ಕುಂಟೆಯಾಗಿ, ಬೇಸಿಗೆಯಲ್ಲಿ ತ್ಯಾಜ್ಯ ಸಂಗ್ರಹ ತಾಣ, ಜತೆಗೆ ಟೆಂಪೋ ನಿಲ್ದಾಣವಾಗಿ ಪರಿವರ್ತನೆಯಾಗಿತ್ತು.
ಈ ಪರಿ ಚೆನ್ನಯ್ಯಪಾರ್ಕ್ ಹಾಳಾಗುತ್ತಿದ್ದರೂ, ಸಹ ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಇದಕ್ಕೆ ಆಗ ಜನರಿಂದ ಟೀಕೆಗಳು ಕೇಳಿ ಬಂದಿತ್ತು.
ಪಾರ್ಕಿನ ನವೀಕರಣ: ಕೋಲಾರದಿಂದ ವಿಭಜನೆಗೊಂಡು ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾದ ನಂತರ ಚೆನ್ನಯ್ಯ ಪಾರ್ಕಿನ ನವೀಕರಣದ ಕೆಲಸವನ್ನು ಕೈಗೊಳ್ಳಲಾಯಿತು. ಹಾಳಾಗುತ್ತಿದ್ದ ಪಾರ್ಕನ್ನು ಸರಿಪಡಿಸಬೇಕೆಂದು ಒತ್ತಾಯಿಸುತ್ತಿದ್ದ ಜನರ ಆಶಯವನ್ನು ಅರಿತು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮುಮ್ತಾಜ್ ಅಲಿಖಾನ್ ಮುತುವರ್ಜಿ ವಹಿಸಿ ಆಕರ್ಷಕವಾಗಿ ಉದ್ಯಾನವನ ನಿರ್ಮಾಣ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.
ರು. 52 ಲಕ್ಷ ಬಿಡುಗಡೆ: ಈ ಹಿನ್ನೆಲೆಯಲ್ಲಿ ಆಗಿನ ಜಿಲ್ಲಾಧಿಕಾರಿ ಅನ್ವರ್‌ಪಾಷಾ ರು. 52 ಲಕ್ಷ ಬಿಡುಗಡೆ ಮಾಡಿ, ಭೂ ಸೇನಾ ನಿಗಮಕ್ಕೆ ಉದ್ಯಾನವನ ನವೀಕರಣದ ಜವಾಬ್ದಾರಿ ವಹಿಸಿದ್ದರು. ಅದರಂತೆ ನಿಗಮದ ಅಧಿಕಾರಿಗಳು ಪಾರ್ಕ್‌ನ ಅಂದ ಹೆಚ್ಚಿಸುವ ರೀತಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡರು. ನಂತರ ಸುತ್ತಲು ಕಂಗೊಳಿಸುವ ರೀತಿಯಲ್ಲಿ ಹುಲ್ಲು, ಜತೆಗೆ ಕಣ್ಮನ ಸೆಳೆಯುವ ಅಲಂಕಾರಿಕ ಗಿಡಗಳನ್ನು ಬೆಳೆಸಲಾಯಿತು. ಹಾಗೆಯೇ ಉದ್ಯಾನವನದ ಮಧ್ಯೆ ನಾನಾ ಬಣ್ಣಗಳಲ್ಲಿ ಚಿಮ್ಮುವ ನೀರಿನ ಕಾರಂಜಿಯನ್ನು ನಿರ್ಮಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಮತ್ತು ಹಳೆಯ ಬಸಸ್ನಿಲ್ದಾಣಕ್ಕೆ ಹೊಂದಿಕೊಂಡಂತಿದ್ದ ಕಾರಣ ಹೆಚ್ಚಿನ ಗಮನ ಸೆಳೆಯುತ್ತಿದ್ದ ಪಾರ್ಕ್ ನವೀಕರಣಗೊಂಡ ಹಿನ್ನೆಲೆಯಲ್ಲಿ ಹೆಚ್ಚಿಗೆ ಜನರು ಇಲ್ಲಿಗೆ ಆಗಮಿಸುತ್ತಿದ್ದರು. ಚೆನ್ನಯ್ಯ ಪಾರ್ಕ್ ಆಕರ್ಷಕವಾಗಿ ನಿರ್ಮಾಣಗೊಂಡಿದ್ದು, ಸಾರ್ವಜನಿಕರ ಸಂತಸಕ್ಕೆ ಕಾರಣವಾಗಿತ್ತು. ಆದರೆ, ಇದು ಜಾಸ್ತಿ ದಿನ ಉಳಿಯಲಿಲ್ಲ.
ಸೊರಗಿದೆ ಉದ್ಯಾನ: ಇದೀಗ ಚೆನ್ನಯ್ಯ ಪಾರ್ಕ್ ಸೊರಗಿದೆ.ನವೀಕರಣಗೊಂಡಿದ್ದ ಒಂದೇ ವರ್ಷದಲ್ಲಿ ಉದ್ಯಾನವನದಲ್ಲಿದ್ದ ಅಲಂಕಾರಿಕ ಹುಲ್ಲಿನ ಹೊದಿಕೆ ಮತ್ತು ಗಿಡಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ನೀರಿನ ಕಾರಂಜಿ ಬತ್ತಿ ಹೋಗಿದೆ. ಇದರಿಂದ ನಿರಾಶೆಗೊಂಡಿರುವ ಜನರು ಪಾರ್ಕಿಗೆ ಬರುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಇದಕ್ಕೆಲ್ಲಾ ಹಿಂದೆ ಕೈಗೊಂಡ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪಗಳು ಕೇಳಿ ಬಂದಿದೆ. ಗುಣಮಟ್ಟವಿಲ್ಲದ ಹುಲ್ಲಿನ ಹೊದಿಕೆ ಹಾಕಿ, ಸಮರ್ಪಕವಾಗಿ ಗಿಡ
ಬೆಳೆಸಲು ಒತ್ತು ಕೊಡದ ಕಾರಣ ಪಾರ್ಕ್ ಹಾಳಾಗಿದ್ದು ರು. 52 ಲಕ್ಷ ಖರ್ಚು ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎನ್ನುವುದು ಸಾರ್ವಜನಿಕರ ಟೀಕೆಯಾಗಿದೆ. ಮತ್ತೊಂದೆಡೆ ಅಧಿಕಾರಿಗಳು ಇದೀಗ ಎಚ್ಚೆತ್ತುಕೊಂಡಿದ್ದು 11 ಲಕ್ಷ ರೂ ವೆಚ್ಚದಲ್ಲಿ ಹೊಸದಾಗಿ ನವೀಕರಣ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ಹಾಳಾಗಿರುವ ಪಾರ್ಕ್ ಅನ್ನು ಸರಿಪಡಿಸಲು ಮುಂದಾಗಿದ್ದಾರೆ.
ಈಗಲಾದರೂ ಎಚ್ಚೆತ್ತುಕೊಳ್ಳಿ: ಚೆನ್ನಯ್ಯ ಪಾರ್ಕ್ ನವೀಕರಣದ ವಿಷಯದಲ್ಲಿ ಅಧಿಕಾರಿಗಳು ಮೊದಲೇ ಮುಂದಾಲೋಚನೆ ಮಾಡಿ ಕೆಲಸವನ್ನು ಕೈಗೊಂಡಿದ್ದರೆ ಸರ್ಕಾರದ ಹಣ 52 ಲಕ್ಷ ರೂ ವ್ಯರ್ಥವಾಗುತ್ತಿರಲಿಲ್ಲ. ಕೇವಲ ಹಣವನ್ನು ಖರ್ಚು ಮಾಡಬೇಕೆಂಬ ಭಾವನೆಯಲ್ಲಿ ಕೆಲಸವನ್ನು ಮಾಡಿದ್ದಾರೆ. ಈಗ ರು. 11 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವ ವೈಖರಿಯೂ ಸಹ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಜವಾಬ್ದಾರಿ ಯಿಂದ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಒತ್ತಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.