ಕೋಲಾರ

'ಸರ್ಕಾರಿ ಐಟಿಐ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸಿ'

Published On :

ಶಿಡ್ಲಘಟ್ಟ:  ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಹನುಮಂತಪುರದ ಬಳಿಯ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ, ಭಾರತ ವಿದ್ಯಾರ್ಥಿ ಫೆಡರೇಶನ್‌ನ ಸಂಚಾಲಕ ಮುನೀಂದ್ರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧರಣಿ ನಡೆಸಿದರು. ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿವಿಧ ವಿಭಾಗಗಳಲ್ಲಿ 300ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 'ಡಿ' ಗ್ರೂಪ್ ನೌಕರರು, ಅಧ್ಯಾಪಕ ವರ್ಗದವರು ಸೇರಿದಂತೆ 30 ಮಂದಿ ಸಿಬ್ಬಂದಿ ಅಗತ್ಯವಿದೆ.  ಆದರೆ, ಪ್ರಸ್ತುತ 7 ಜನ ಸಿಬ್ಬಂದಿ ಮಾತ್ರ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವು ವಿಷಯಗಳನ್ನು ಬೋಧಿಸಲು ಹಲವು ವರ್ಷಗಳಿಂದ ಬೋಧಕರೇ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸಿಬ್ಬಂದಿ ವರ್ಗದವರು ಗಮನಹರಿಸದ ಕಾರಣ ವಿದ್ಯಾರ್ಥಿಗಳು ಮೈಲು ದೂರದಿಂದ ಕುಡಿಯುವ ನೀರು ತರಬೇಕಾದ ಪರಿಸ್ಥಿತಿ ಇದೆ.  ಕಾಲೇಜಿನಲ್ಲಿ ನೀರಿಗೋಸ್ಕರ ಸಂಪು ಕಟ್ಟಿಸಲಾಗಿದೆ. ಆದರೆ, ಸಂಪಿನಲ್ಲಿ ಕಸ-ಕಡ್ಡಿ, ಹುಳಹುಪ್ಪಟೆ ಬೀಳುತ್ತಿದೆ. ಇದರಿಂದ ನಿರುಪಯುಕ್ತವಾಗಿದೆ. ವಿದ್ಯಾಥರ್‌ಗಳಿಗೆ ನೀಡಿರುವ ಶೌಚಾಲಯ ಯೋಗ್ಯ ಸ್ಥಿತಿಯಲ್ಲಿಲ್ಲ. ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ. ಕಾಲೇಜಿನಲ್ಲಿ ಶುಚಿತ್ವವಿಲ್ಲದೆ ಬಹುತೇಕ ಕಡೆಗಳಲ್ಲಿ ಧೂಳು ಆವರಿಸಿ, ಶಿಕ್ಷಣ ಕಲಿಕೆಯ ವಾತಾವರಣವನ್ನೇ ಹಾಳು ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಲೇಜಿಗೆ ನೂತನವಾಗಿ 30 ಲಕ್ಷ ವೆಚ್ಚದ ಉಪಕರಣಗಳು ಬಂದಿದ್ದರೂ ಸಹ ಅದನ್ನು ಸ್ಥಾಪಿಸಲು ಹಾಗೂ ಬೋಧಿಸಲು ಶಿಕ್ಷಕ ವರ್ಗದ ಕೊರತೆ ಇದೆ. ಕಾಲೇಜಿನಲ್ಲಿ ಕುಳಿತುಕೊಳ್ಳಲು ಡೆಸ್ಕ್‌ಗಳಿಲ್ಲ, ವಿದ್ಯಾರ್ಥಿಗಲು ನೆಲದ ಮೇಲೆಯೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಈಗಿರುವ ಸರ್ಕಾರಿ ಐಟಿಐ ಕಾಲೇಜನ್ನು ಬಾಡಿಗೆಗೆ ಪಡೆಯಲಾಗಿದೆ.  ತಿಂಗಳಿಗೆ 33000 ಬಾಡಿಗೆ ನೀಡುತ್ತಿದೆ. ಕಟ್ಟಡ ಮಾಲೀಕರು ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಬೇರೆ ಕಡೆ ಕಟ್ಟಡ ಸಿಕ್ಕಲಿ ಸದ್ಯಕ್ಕೆ ವರ್ಗಾವಣೆ ಮಾಡುವ ಆಲೋಚನೆ ಇದೆ. ಕಾಲೇಜಿಗೆ ಸ್ಥಳ ಮಂಜೂರಾಗಿದೆ.  ಕಟ್ಟಡ ನಿರ್ಮಾಣವಾದ ಮೇಲೆ ಕಾಲೇಜನ್ನು ಬದಲಾಯಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದರು. ಎಸ್‌ಎಫ್‌ಐ ಸಂಚಾಲಕ ಗ್ರೇಡ್ 2 ತಹಸಿಲ್ದಾರ್ ರಮೇಶ್ ಅವರಿಗೆ ಮನವಿ ಪತ್ರ ಅರ್ಪಿಸಿದರು. ನೀರನ ತೊಟ್ಟಿ ಶುದ್ಧಗೊಳಿಸಿ ಬಳಕೆಗೆ ಯೋಗ್ಯಗೊಳಿಸಲಾಗುವುದು. ಕಾಲೇಜು ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸಮಸ್ಯೆ ಶೀಘ್ರವೇ ಬಗೆಹರಿಸದಿದ್ದರೆ ಪುನಃ ಧರಣಿ ನಡೆಸುವ ಎಚ್ಚರಿಕೆ ನೀಡಿದರು. ಗ್ರಾಮಂತರ ಠಾಣೆಯ ಪಿಎಸ್‌ಐ ಹನುಮಂತಪ್ಪ ಪ್ರತಿಭಟನೆ ವೇಳೆ ಭದ್ರತೆ ಒದಗಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.