ಕೋಲಾರ

'ದೇಶಾದ್ಯಂತ 25 ಕೋಟಿ ಮೂಳೆ-ಕೀಲು ರೋಗಿಗಳು'

Published On :

ಕ.ಪ್ರ.ವಾರ್ತೆ  ಕೋಲಾರ  ಜು.8
ದೇಶದಲ್ಲಿ ಸುಮಾರು 25 ಕೋಟಿಗೂ ಹೆಚ್ಚು ಜನ ಮೂಳೆ-ಕೀಲು ನೋವಿನಿಂದ ಬಳಲುತ್ತಿದ್ದಾರೆಂದು ಆಸ್ಟೇಲಿಯಾದ ಗೌಲ್ಬರ್ನ್ ಆಸ್ಪ್ರೆತೆಯ ವೈದ್ಯ ಡಾ.ನಿರಂಜನ್ ಸರ್ಜಾಪುರ ತಿಳಿಸಿದರು.
ನಗರದ ಹೊರವಲಯದ ಶ್ರೀದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾಲಯ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂಳೆ ಮತ್ತು ಕೀಲು ಸಮಸ್ಯೆಯಿಂದ ಅನೇಕರು ಮೊಣಕಾಲು ಹಾಗೂ ಸೊಂಟ ನೋವಿನಿಂದ ಶಾಶ್ವತವಾಗಿ ಹಾಸಿಗೆ ಹಿಡಿಯುವಂತಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಪೈಕಿ ಶೇ.50ರಷ್ಟು ಮಂದಿ ನೋವು ನಿರೋಧಕ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಕೇವಲ 5.4ರಷ್ಟು ಮಂದಿ ಮಾತ್ರ ಚಿಕಿತ್ಸೆಗಾಗಿ ಬರುತ್ತಿದ್ದಾರೆ ಎಂದು ಹೇಳಿದರು.
ಮೊಣಕಾಲುಗಳ ನೋವಿಗೆ ಈಗ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಲು ತಂತ್ರಜ್ಞಾನ ಅನುಷ್ಟಾನದಲ್ಲಿದೆ. ಕೆಲವೇ ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ಮುಗಿಯುವುದರಿಂದ ರೋಗಿಯು ಅದೇ ದಿನವೇ ಆರಾಮವಾಗಿ ಕುಳಿತುಕೊಳ್ಳಬಹುದು. ಎರಡನೇ ದಿನ ಓಡಾಡಬಹುದು. 5 ದಿನದ ನಂತರ ಮನೆಗೆ ಹೋಗಬಹುದು ಹಾಗೂ 6 ವಾರಗಳ ನಂತರ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಡಾ.ನಿರಂಜನ್ ಸರ್ಜಾಪುರ ತಿಳಿಸಿದರು.
ಹುಟ್ಟಿದ ಊರಿನ ಋಣ ತೀರಿಸುವ ಉದ್ದೇಶದಿಂದ ಡಿಸೆಂಬರ್ ಮೊದಲ ವಾರದಿಂದ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಮೊಣಕಾಲು ಹಾಗೂ ಸೊಂಟದ ಕೀಲು ಕೃತಕ ಮರು ಜೋಡಣೆಯ ಶಸ್ತ್ರಚಿಕಿತ್ಸೆಯನ್ನು ಮಾಡಲು ಶಿಬಿರ ನಡೆಸಲಾಗುತ್ತಿದೆ. ದೇಶದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು ಕೋಲಾರದಲ್ಲಿ ಎರಡನೇಯ ಆಸ್ಪತ್ರೆಯಾಗಲಿದೆ ಎಂದರು.
ಕೋಲಾರದಲ್ಲಿ ಹುಟ್ಟಿ ಬೆಳೆದು ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಈಗ ಪ್ರಸ್ತುತ ಆಸ್ಟ್ರೇಲಿಯಾದ ಗೌಲ್ಬರ್ನ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಿದ ಅವರು, ತಾವು ಕೈಗೊಂಡಿರುವ ಕೆಲಸಕ್ಕೆ ಆಸ್ಟೇಲಿಯಾದ ಡಾ.ಆಂಡ್ರೋಲೆಸಿಟರ್ ಅವರು ತಂಡದ ನಾಯಕರಾಗಿ ಆಗಮಿಸಲಿದ್ದು, ಜತೆಗೆ ತಜ್ಞ ವೈದ್ಯರು ಶಿಬಿರದಲ್ಲಿರುತ್ತಾರೆ ಎಂದರು.
ತಾವು ಪ್ರತಿ 6 ತಿಂಗಳಿಗೊಮ್ಮೆ ಕೋಲಾರಕ್ಕೆ ಆಗಮಿಸಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಿದ್ದು, ರೋಗಿಗಳಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಕೇವಲ ರೋಗಿಗಳು ಶಸ್ತ್ರಚಿಕಿತ್ಸೆಗೆ ಆಗುವಂತಹ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ತಿಳಿಸಿದರು.
ಮೊಣಕಾಲು ಮತ್ತು ಸೊಂಟದ ಕೀಲು ಕೃತಕ ಮರುಜೋಡಣೆಗೆ ಒಳಗಾಗುವರು ಸೆ.30 ರೊಳಗೆ ತಮ್ಮ ಹೆಸರುಗಳನ್ನು ನೋಂದಣಿಯನ್ನು ಮಾಡಿಕೊಳ್ಳಬೇಕು. ಶಸ್ತ್ರಚಿಕಿತ್ಸೆಗೆ ಮುನ್ನ ರೋಗಿಗಳನ್ನು ತಪಾಸಣೆ ನಡೆಸಿ ಅಗತ್ಯವಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.
ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಮೂಳೆ ಕೀಲು ವಿಭಾಗದ ಮುಖ್ಯಸ್ಥ ಡಾ. ಪಿ.ವಿ. ಮನೋಹರ್ ಮಾತನಾಡಿ, ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ 4 ಶಸ್ತ್ರಚಿಕಿತ್ಸಾ ಕೊಠಡಿಗಳಿವೆ ಎಂದು ಹೇಳಿದರು.
ಶ್ರೀದೇವರಾಜ್ ಅರಸು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಸಾಣಿಕೊಪ್ಪ, ಆರ್.ಎಲ್. ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವಿ.ಲಕ್ಷ್ಮಯ್ಯ, ಡಾ. ಎಚ್.ಎಸ್. ಅರುಣ್, ಡಾ.ಚಂದ್ರಪ್ಪ, ಡಾ.ಅನಿಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.