ಗನ್ ತೋರಿಸಿ, ಬೆದರಿಸಿದ ಎಸ್ಐ: ಲಾಠಿ ಪ್ರಹಾರ
ಚಿಂತಾಮಣಿ: ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಮಾಲಿಗೆ ಬಿಳಿ ಹಾಳೆಯಲ್ಲಿ ಬಿಲ್ ಬರೆದು ಕೊಟ್ಟಿದ್ದನ್ನು ಪ್ರಶ್ನಿಸಿದ ರೈತ, ಎಪಿಎಂಸಿ ಬಿಲ್ ನೀಡುವಂತೆ ಒತ್ತಾಯಿಸಿದ್ದರಿಂದ ದಲ್ಲಾಳಿ ಮತ್ತು ರೈತನ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ಬುಧವಾರ ಮಧ್ಯಾಹ್ನ 2 ಗಂಟೆಗೆ ಜರುದಿದೆ.
ಅಲ್ಲದೆ, ವೇಳೆ ರೈತರ ಗುಂಪಿನ ಮೇಲೆ ಪೊಲೀಸರ ಲಾಠಿ ಪ್ರಹಾರ ನಡೆಸಿದರು. ಇದರಿಂದ ಹಲವರು ಗಾಯಗೊಂಡರು. ಈ ಸಂದರ್ಭ ರೈತನಿಗೆ ಪೊಲೀಸ್ ಅಧಿಕಾರಿಯೊಬ್ಬ ರೈತನಿಗೆ ಗನ್ ತೋರಿಸಿದ ಬೆದರಿಸಿದ ಪ್ರಕರಣವೂ ನಡೆಯಿತು. ಇದರಿಂದ ರೊಚ್ಚಿಗೆದ್ದ ರೈತರು ಪೊಲೀಸರ ದೌರ್ಜನ್ಯ ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ನ್ಯಾಯ ದೊರಕಿಸಿಕೊಡಲು ಒತ್ತಾಯಿಸಿದರು.
ನಡೆದಿದ್ದೇನು?: ಪಟ್ಟಣದ ಎಪಿಎಂಸಿ ಯಾರ್ಡ್ನ ಊಲವಾಡಿ ಕೃಷ್ಣಪ್ಪ ಎಂಬವರ ಅಂಗಡಿ ಬಳಿ ದಲ್ಲಾಳಿಯೊಬ್ಬ ಹಾಲಪ್ಪಲ್ಲಿಯ ರೈತ ಮುನಿಸ್ವಾಮಿ ಎಂಬವರ ಟೊಮೆಟೋ ವ್ಯಾಪಾರ ಮಾಡಿಸಿದ್ದರು. ಈ ವೇಳೆ ನಕಲಿ ಬಿಲ್ ನೀಡಿದ್ದನ್ನು ಪ್ರಶ್ನಿಸಿ, ಎಪಿಎಂಸಿ ವತಿಯಿಂದ ನೀಡುವ ಬಿಲ್ ನೀಡುವಂತೆ ಪಟ್ಟು ಹಿಡಿದರು. ಇದರಿಂದ ಮಾತಿಗೆ ಮಾತು ಬೆಳೆಯಿತು. ಮುನಿಯಪ್ಪ ಅವರನ್ನು ದಲ್ಲಾಳಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದನು. ಇದರಿಂದ ಕುಪಿತಗೊಂಡ ನೂರಾರು ರೈತರು ಸುಮಾರು 2 ತಾಸು ಎಪಿಎಂಸಿ ಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕ ಮತ್ತು ಬಾಡಿಗೆ ಗೂಂಡಾಗಳ ಕ್ರಮ ಖಂಡಿಸಿದರು.
ಈ ಸಂದರ್ಭ ಗಲಾಟೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ರೈತರ ಗುಂಪು ಚದುರಿಸಲು ಏಕಾಏಕಿ ಲಾಠಿ ಪ್ರಹಾರ ನಡೆಸಿದರು. ಇದರಿಂದ ಹಲವರು ಗಾಯಗೊಂಡರು. ರೈತರನ್ನು ಕುರಿಗಳಂತೆ ನಡೆಸಿಕೊಂಡ ಪೊಲೀಸರ ದೌರ್ಜನ್ಯವನ್ನು ರೈತರು ಒಕ್ಕೊರಲಿನಿಂದ ಖಂಡಿಸಿದರು. ಈ ಸಂದರ್ಭ ನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ಮುರಳಿ ರೈತ ಮುನಿಸ್ವಾಮಿ ಅವರಿಗೆ ಗನ್ ತೋರಿಸಿ ಸುಟ್ಟುಬಿಡುವ ಬೆದರಿಕೆ ಹಾಕಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ತಪ್ಪಿತಸ್ಥರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ರೈತ ಸಂಘ, ಹಸಿರುಸೇನೆ ಕಾರ್ಯಕರ್ತರ ಸಾಥ್: ಹಲವು ಮಧ್ಯವರ್ತಿಗಳು ಬಾಡಿಗೆ ಗೂಂಡಾಗಳನ್ನು ಕರೆಸಿ ರೈತರ ಮೇಲೆ ಹಲ್ಲೆ ಮಾಡಿದ ಘಟನೆ ಖಂಡಿಸಿ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆಗೆ ಸಾಥ್ ನೀಡಿದರು. ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಶೇಖರ್ ಮತ್ತು ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ ರಾಜಿ ಸಂಧಾನಕ್ಕೆ ಮುಂದಾದರು. ಈ ಸಂದರ್ಭ ಬಿಗುವಿನ ವಾತಾವರಣ ಉಂಟಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕೆಂಚಾರ್ಲಹಳ್ಳಿ,ಬಟ್ಲಹಳ್ಳಿ, ಶಿಡ್ಲಘಟ್ಟ, ದಿಬ್ಬೂರಹಳ್ಳಿ ಠಾಣೆಗಳಿಂದ ನೂರಾರು ಪೊಲೀಸರನ್ನು ಕರೆಸಿ, ಬಿಗಿ ಬಂದೋಬಸ್ತ್ ಕೈಗೊಳ್ಳುವ ಮೂಲಕ ಪರಿಸ್ಥಿತಿ ನಿಯಂತ್ರಿಸಲಾಯಿತು.
ಕಿಡಿಗೇಡಿಗಳ ಬಂಧನ: ಡಿವೈಎಸ್ಪಿ ಭರವಸೆ- ಗನ್ ತೋರಿಸಿ ರೈತರನ್ನು ಬೆದರಿಕೆ ಹಾಕಿದ ಪೊಲೀಸರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಮತ್ತು ರೈತರ ಮೇಲೆ ಬಾಡಿಗೆ ಗೂಂಡಾಗಳನ್ನು ತಂದು ಹಲ್ಲೆ ಮಾಡಿದವರ ಮೇಲೆ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು. ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕಲ್ಪಿಸುವುದಾಗಿ ಡಿವೈಎಸ್ಪಿ ಶೇಖರ್ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

