ಶಾಸಕರ ಗದಾಪ್ರಹಾರ; ಸಭೆಯಲ್ಲಿ ಕಣ್ಣೀರಿಟ್ಟ ಎಸಿ
ಕ.ಪ್ರ. ವಾರ್ತೆ ಕೋಲಾರ ಜು.10
ಕಳೆದ ಎಂಟು ದಿನಗಳ ಹಿಂದೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಎದುರು ಬಂಗಾರಪೇಟೆ ಮತ್ತು ಮಾಲೂರು ಶಾಸಕರಿಂದ ಛೀಮಾರಿ ಹಾಕಿಸಿಕೊಂಡಿದ್ದ ಕೋಲಾರ ಉಪವಿಭಾಗಾಧಿಕಾರಿ ಆಯುಷಾ ಫರ್ವೀನ್ ಅವರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಮಕ್ಷಮದಲ್ಲಿ ಜಿಲ್ಲೆಯ ಮೂವರು ಶಾಸಕರಿಂದ ಗದಾಪ್ರಹಾರಕ್ಕೆ ಒಳಗಾದ ವಿಲಕ್ಷಣ ಘಟನೆ ನಡೆಯಿತು.
ಜಿ.ಪಂ. ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಕೋಲಾರ ಶಾಸಕ ಆರ್. ವರ್ತೂರ್ ಪ್ರಕಾಶ್, ಜಿಲ್ಲೆಯಲ್ಲಿ ಕಂದಾಯ, ಅಬಕಾರಿ, ಆರೋಗ್ಯ ಇಲಾಖೆಗಳು ಹದಗೆಟ್ಟಿವೆ. ಲಂಚವಿಲ್ಲದೆ ಯಾವುದೇ ಯಾವುದೇ ಕೆಲಸವಾಗಲ್ಲ, ಸರ್ಕಾರಕ್ಕೆ ಒಳ್ಳೆಯ ಹೆಸರು ಬರಬೇಕೆಂಬ ಉದ್ದೇಶವಿದ್ದರೆ ಭ್ರಷ್ಟ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಇಲಾಖೆಗಳನ್ನು ತೊಳೆದು ಸ್ವಚ್ಛಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.
ಕಾಸು ಕೊಟ್ರೆ ಖಾತೆ- ವರ್ತೂರು: ಸಚಿವರ ಅನುಮತಿ ಪಡೆದು ಮಾತು ಮುಂದುವರೆಸಿದ ವರ್ತೂರ್ ಪ್ರಕಾಶ್, ಕೋಲಾರ ಉಪವಿಭಾಗಾಧಿಕಾರಿ ಆಯುಷಾ ಫರ್ವೀನ್ ವಿರುದ್ಧ ಆರೋಪಗಳು ಸುರಿಮಳೆಗರೆದು ಈ ಅಧಿಕಾರಿಯ ವಿರುದ್ಧ ಸರ್ಕಾರಕ್ಕೆ ದೂರುಗಳು ಹೋಗಿದ್ದರೂ ಕೆಲವರು ಬೆಂಗಳೂರಿಗೆ ಹೋಗಿ ದೊಡ್ಡ ಮಟ್ಟದಲ್ಲಿ ಲಾಬಿ ಮಾಡುತ್ತಿರುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲವೆಂದು ದೂರಿದರು.
ಸಣ್ಣ ಪುಟ್ಟ ವ್ಯತ್ಯಾಸಗಳಿಂದಾಗಿ ಖಾತೆಗಳಲ್ಲಿ ಕೆಲವರ ಹೆಸರುಗಳು ಬದಲಾಗಿದ್ದು ತಿದ್ದುಪಡಿ ಮಾಡಲು ಅರ್ಜಿಗಳನ್ನು ನೀಡಿ ಅನೇಕ ದಿನಗಳಾದರೂ ಎಸಿಯವರು ಕಡತಗಳ ವಿಲೇವಾರಿ ಮಾಡುತ್ತಿಲ್ಲ, ಕಾಸು ಕೊಟ್ರೆ ಮಾತ್ರ ಖಾತೆ ತಿದ್ದುಪಡಿ ಮಾಡುತ್ತಾರೆಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಎಸಿ ವಿರುದ್ಧ ಸರ್ಕಾರಕ್ಕೆ ನಾಲ್ಕು ಪತ್ರಗಳನ್ನು ಬರೆದಿದ್ದರೂ ಪ್ರಯೋಜನವಾಗಿಲ್ಲ, ಅರ್ಜಿದಾರರಿಗೆ ಬೆದರಿಕೆ ಹಾಕುತ್ತಾರೆ, ಖಾತೆ ತಿದ್ದುಪಡಿಗೆ ಅರ್ಹರಾಗಿರುವವರಿಗೂ ತೊಂದರೆ ನೀಡುತ್ತಿದ್ದಾರೆ, ನಾವು ಪ್ರಶ್ನೆ ಮಾಡಿದರೆ ಇಲ್ಲದ ಸಬೂಬು ಹೇಳುವುದಲ್ಲದೆ ಕಣ್ಣೀರು ಹಾಕಿ ನಮ್ಮನ್ನೇ ತಪ್ಪಿತಸ್ಥರಂತೆ ಬಿಂಬಿಸುತ್ತಾರೆಂದು ಸಚಿವರ ಗಮನಕ್ಕೆ ತಂದರು.
ಎಸಿ ಅವರು ತುಂಬಾ ಜಾಣರಿದ್ದಾರೆ, ತಪ್ಪು ಮಾಡಿದರೂ ಸಿಕ್ಕಿ ಹಾಕಿಕೊಳ್ಳುವುದಿಲ್ಲ, ತಮ್ಮ ಮಧ್ಯವರ್ತಿಗಳ ಬ್ಯಾಂಕ್ ಖಾತೆಯನ್ನು ಕೋಲಾರ ಮತ್ತು ಇ ನ್ನಿತರ ಕಡೆ ಮಾಡಿಸಿ ಲಂಚದ ಹಣ ಆ ಖಾತೆಗಳಿಗೆ ಜಮಾ ಮಾಡಿಸುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಶಾಸಕ ನಾರಾಯಣಸ್ವಾಮಿ ಬೆಂಬಲ: ಇದಕ್ಕೆ ಧನಿಗೂಡಿಸಿದ ಬಂಗಾರಪೇಟೆ ಶಾಸಕ ಕೆ.ಎಂ. ನಾರಾಯಣಸ್ವಾಮಿ, ಕೇವಲ ಕೋಲಾರ ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲಿ ಈ ಅಧಿಕಾರಿಯ ವರ್ತನೆಯಿಂದ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ, ಲಂಚ ಕೊಟ್ಟರೆ ಮಾತ್ರ ಎಸಿ ಕಚೇರಿಯಲ್ಲಿ ಕಡತಗಳು ವಿಲೇವಾರಿ ಆಗುತ್ತದೆ, ಇಲ್ಲದಿದ್ದರೆ ಕಡತಗಳು ಹಾಗೆಯೇ ಉಳಿಯುತ್ತವೆ ಎಂದು ಸಚಿವರ ಗಮನಕ್ಕೆ ತಂದರು.
ಮಾಲೂರು ಶಾಸಕ ಕೋಡಿಹಳ್ಳಿ ಮಂಜುನಾಥ್ ಮಧ್ಯಪ್ರವೇಶ ಮಾಡಿ, ಖಾತೆಗಳ ತಿದ್ದುಪಡಿ ಅಧಿಕಾರಿವನ್ನು ಎಸಿಯಿಂದ ಆಯಾ ತಾಲೂಕಿನ ತಹಸೀಲ್ದಾರ್ ಅವರಿಗೆ ವಹಿಸಿದರೆ ನಾವು ಅಲ್ಲೇ ನಮ್ಮ ಕೆಲಸ ಮಾಡಿಸಿಕೊಳ್ಳುತ್ತೇವೆ. ಈ ಎಸಿ ಇರುವ ತನಕ ನಮಗೆ ತೊಂದರೆ ತಪ್ಪಿದ್ದಲ್ಲವೆಂದು ಹೇಳಿದರು.
ದಯವಿಟ್ಟು ವರ್ಗಾವಣೆ ಮಾಡಿ: ಎಸಿ: ಮೂವರು ಶಾಸಕರ ಗದಾಪ್ರಹಾರದಿಂದ ಗದ್ಗದಿತರಾದ ಎಸಿ ಆಯುಷಾ ಫರ್ವೀನ್, ನಾನು ಕಾನೂನು ಪ್ರಕಾರ ಹಾಗೂ ಪಾರದರ್ಶಕ ಕಾಯಿದೆಯಡಿ ಕೆಲಸ ನಿರ್ವಹಿಸುತ್ತಿದ್ದೇನೆ. ಶಾಸಕರು ತೇಜೋವಧೆಗಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ, ನನ್ನ ವರ್ಚಸ್ಸು ಹಾಳು ಮಾಡುವುದು ಇವರ ಉದ್ದೇಶವಾಗಿದೆ. ನನ್ನ ಕಚೇರಿಯಲ್ಲಿ ಖಾತೆಗಳ ತಿದ್ದುಪಡಿಗೆ ಸಂಬಂಧಿಸಿದ ಯಾವುದೇ ಕಡತಗಳು ಬಾಕಿ ಉಳಿದಿಲ್ಲ, ಶಾಸಕರು ಯಾರು ನನಗೆ ದೂರವಾಣಿ ಮೂಲಕ ಕಡತಗಳ ಬಗ್ಗೆ ಚರ್ಚಿಸಿಲ್ಲ, ಮಾನಸಿಕ ಕಿರುಕುಳ ತಡೆಯಲಾಗುತ್ತಿಲ್ಲ ದಯವಿಟ್ಟು ವರ್ಗಾವಣೆ ಮಾಡಿ ಎಂದು ಕಣ್ಣೀರು ಹಾಕಿ ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಂಗಾರಪೇಟೆ ಶಾಸಕ ಕೆ.ಎಂ. ನಾರಾಯಣಸ್ವಾಮಿ, ನಿಮ್ಮ ಮೇಲೆ ನಮಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಸಣ್ಣ ತಪ್ಪುಗಳಿಂದ ಆಗಿರುವ ಸಮಸ್ಯೆ ನಿವಾರಣೆ ಮಾಡಿ ಎಂದು ಸಂಬಂಧಪಟ್ಟ ವ್ಯಕ್ತಿಯೇ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೂ ತಾವು ಅದನ್ನು ವಿಲೇವಾರಿ ಮಾಡುತ್ತಿಲ್ಲ ಅದಕ್ಕಾಗಿ ನಿಮ್ಮ ವಿರುದ್ಧ ಮಾತನಾಡುತ್ತಿದ್ದೇವೆ.
ನೀವು ಶಾಸಕರೇ ತಪ್ಪಿತಸ್ಥರು ಎಂದು ಹೇಳುವುದಾರೆ ನಿಮ್ಮ ಬಣ್ಣ ಬಯಲು ಮಾಡಬೇಕಾಗುತ್ತದೆ, ಜಿಲ್ಲೆಗೂ ನಿಮ್ಮ ವಿಚಾರ ಗೊತ್ತಾಗಿದೆ ಎಂದು ಎಸಿ ಬಾಯಿ ಮುಚ್ಚಿಸಲು ಯತ್ನಿಸಿದರು. ತಾವು ನನಗೆ ಒಂದು ಸಾರಿಯೂ ದೂರವಾಣಿ ಮೂಲಕ ಮಾತನಾಡಿಲ್ಲ, ಸಮಸ್ಯೆ ಇದ್ದಲ್ಲಿ ಹೇಳ ಬಹುದಾಗಿತ್ತು, ನಾನು ನಿಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದೇನೆಂದು ಹೇಳುವ ಮೂಲಕ ಸಭೆಯಲ್ಲಿದ್ದವರು ಬೆಚ್ಚಿಬೀಳುವಂತೆ ಮಾಡಿದರು.
ಇದರಿಂದ ಕಸಿವಿಸಿಗೊಂಡ ಶಾಸಕ ನಾರಾಯಣಸ್ವಾಮಿ, ಮೇಡಂ ತಾವು ನನ್ನ ಗೆಲ್ಲಿಸಿಲ್ಲ, ಕ್ಷೇತ್ರದ ಮತದಾರರು ಗೆಲ್ಲಿಸಿದ್ದಾರೆಂದರು.
ತಾಲೂಕು ಕಚೇರಿಗಳಲ್ಲಿ ಆಗುತ್ತಿರುವ ತಪ್ಪುಗಳನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ, ನನಗೆ ಇಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ, ವರ್ಗಾವಣೆ ಮಾಡಿಸಲು ಇದೆಲ್ಲಾ ನಡೆಯುತ್ತಿದೆ ಎಂದು ಎಸಿ ದೂರಿದರು.
ಪರಿಸ್ಥಿತಿ ಅರಿತ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ತಮ್ಮ ಕಚೇರಿಯಲ್ಲಿ ಖಾತೆಗಳ ತಿದ್ದುಪಡಿಗೆ ಸಂಬಂಧಿಸಿದ ಎಷ್ಟು ಕಡತಗಳು ಬಾಕಿ ಇದೆ ಎಂಬ ಮಾಹಿತಿಯನ್ನು ತಕ್ಷಣ ನೀಡಿ, ಒಂದು ವೇಳೆ ಕಡತಗಳು ಉದ್ದೇಶ ಪೂರ್ವಕವಾಗಿ ವಿಲೇವಾರಿ ಮಾಡದಿದ್ದ ಪಕ್ಷದಲ್ಲಿ ತನಿಖೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆಂದು ಹೇಳಿ ಎಸಿ ಮತ್ತು ಶಾಸಕರ ನಡುವಿನ ಜುಗಲ್ಬಂದಿಗೆ ತೆರೆ ಎಳೆದರು.
ಆರೋಗ್ಯ ಇಲಾಖೆಯ ಬಗ್ಗೆಯೂ ಶಾಸಕರು ದೂರಿದಾಗ ನಾನು ಜವಾಬ್ದಾರಿ ಹೊತ್ತಿರುವ ಇಲಾಖೆಯಲ್ಲಿ ಯಾವುದೇ ಲೋಪ ಇರಬಾರದು ತಪ್ಪುಗಳು ಆಗಿದ್ದಲ್ಲಿ ಸರಿಪಡಿಸಿ, ಮುಂದೆ ದೂರುಗಳು ಬದರಂತೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಡಿಹೆಚ್ಒ ಹಾಗೂ ಜಿಲ್ಲಾ ಸರ್ಜನ್ ಅವರಿಗೆ ತಾಕೀತು ಮಾಡಿದರು.
ಮೂವರು ಶಾಸಕರ ಗದಾಪ್ರಹಾರದಿಂದ ಗದ್ಗದಿತರಾದ ಎಸಿ ಆಯುಷಾ ಫರ್ವೀನ್, ನಾನು ಕಾನೂನು ಪ್ರಕಾರ ಹಾಗೂ ಪಾರದರ್ಶಕ ಕಾಯಿದೆಯಡಿ ಕೆಲಸ ನಿರ್ವಹಿಸುತ್ತಿದ್ದೇನೆ. ನನ್ನ ಕಚೇರಿಯಲ್ಲಿ ಖಾತೆಗಳ ತಿದ್ದುಪಡಿಗೆ ಸಂಬಂಧಿಸಿದ ಯಾವುದೇ ಕಡತಗಳು ಬಾಕಿ ಉಳಿದಿಲ್ಲ, ಶಾಸಕರು ಯಾರು ನನಗೆ ದೂರವಾಣಿ ಮೂಲಕ ಕಡತಗಳ ಬಗ್ಗೆ ಚರ್ಚಿಸಿಲ್ಲ, ಮಾನಸಿಕ ಕಿರುಕುಳ ತಡೆಯಲಾಗುತ್ತಿಲ್ಲ ದಯವಿಟ್ಟು ವರ್ಗಾವಣೆ ಮಾಡಿ.
ಟಿ ಆಯೆಷಾ ಫರ್ವೀನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

