ಕೋಲಾರ

ಕಳಪೆ ರಸ್ತೆ, ಚರಂಡಿ ಕಾಮಗಾರಿ ಆರೋಪ: ತಪಾಸಣೆ

Published On :

ಕ.ಪ್ರ. ವಾರ್ತೆ, ಕೋಲಾರ, ಜು.11
ನಗರಸಭೆಗೆ ಸೇರಿದ ವಾರ್ಡ್ ನಂ.2ರ ಗಾಂಧಿನಗರದಲ್ಲಿ 2010-11ರಲ್ಲಿ ನಡೆದಿರುವ ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಗುಣಮಟ್ಟವಿಲ್ಲದೆ ಹಾಳಾಗಿರುವುದರಿಂದ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿದಾರರೊಬ್ಬರು ದೂರಿದ್ದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ತಾಂತ್ರಿಕ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಇಲಾಖೆಯ ಕಾಮಗಾರಿಗಳ ತಾಂತ್ರಿಕ ಅಧಿಕಾರಿಗಳಾದ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಾಲಾಜಿ ಹಾಗೂ ಎಇಇ ಶ್ರೀಕಾಂತ್ ಹಾಗೂ ಸಿಬ್ಬಂದಿ ವರ್ಗದವರು ಗಾಂಧಿನಗರದ 7ನೇ ತಿರುವಿನ ರಸ್ತೆಯಲ್ಲಿ ಪರಿಶೀಲನೆ ನಡೆಸಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದರು.
ಸಿಮೆಂಟ್ ರಸ್ತೆಯ ಕಾಮಗಾರಿಯನ್ನು ಪರಿಶೀಲಿಸಿದಾಗ ಕಂಡು ಬಂದ ಲೋಪಗಳನ್ನು ಅಧಿಕಾರಿಗಳು ದಾಖಲಿಸಿಕೊಂಡರು. ರಸ್ತೆ ನಿರ್ಮಾಣಕ್ಕೆ ಬಳಿಸಿರುವ ಕಬ್ಬಿಣ, ಸಿಮೆಂಟ್, ಜಲ್ಲಿಕಲ್ಲುಗಳನ್ನು ಪತ್ತೆ ಮಾಡಲು ಅಧಿಕಾರಿಗಳು ಕೋರ್ ಕಟ್ಟಿಂಗ್ ಯಂತ್ರ ಬಳಸಿ ಮೂರು ಕಡೆಗಳಲ್ಲಿ ಸ್ಯಾಂಪಲ್ ಲೀಸ್ ತೆಗೆದು ಪರಿಶೀಲಿಸಿದಾಗ, ನಿಗದಿತ ಗಾತ್ರಕ್ಕಿಂತ ಕಡಿಮೆ ಇರುವುದು ಕಂಡುಬಂತು.
ಕಾಮಗಾರಿ ಸಂದರ್ಭದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಅಗತ್ಯ ಪ್ರಮಾಣದಲ್ಲಿ ಸಿಮೆಂಟ್, ಜಲ್ಲಿ ಹಾಗೂ ಮರಳು ಮಿಶ್ರಣ ಮಾಡದೆ ಇರುವುದರಿಂದ ಕೇವಲ ಒಂದು ವರ್ಷದ ಅವಧಿಯ ಒಳಗೆ ಚರಂಡಿ ಹಾಳಾಗಿರುವುದನ್ನು ಅಧಿಕಾರಿಗಳು ಕಂಡು ಹಿಡಿದು ಗುತ್ತಿಗೆದಾರನಿಂದ ಅಗತ್ಯ ಮಾಹಿತಿ ಸಂಗ್ರಹಣೆ ಮಾಡಿದರು.
2010-11ರಲ್ಲಿ ನಡೆದ ಕಾಮಗಾರಿ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡಿ ಪ್ರಸ್ತುತ ಕೊಳ್ಳೇಗಾಲದಲ್ಲಿ ಕಾರ್ಯನಿರ್ವಹಿಸುತ್ತಿರುವ ನಟರಾಜ್ ಅವರು ಸಹ ಸ್ಥಳದಲ್ಲಿ ಹಾಜರಿದ್ದರು. ಕಾಮಗಾರಿ ಬಗ್ಗೆ ಲೋಕಾಯುಕ್ತ ತಾಂತ್ರಿಕ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಜಾರಿಕೆಯ ಉತ್ತರ ನೀಡಿ ಅನುಮಾನ ಮೂಡಿಸಿದರು.
ಕಾಮಗಾರಿಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಅಧಿಕಾರಿಗಳು ಕೇಳಿದಾಗ ಅವು ಅವು ಇನ್ನೂ ಗುತ್ತಿಗೆದಾರರಿಂದ ನನ್ನ ಕೈ ಸೇರಿಲ್ಲವೆಂದಾಗ ನಟರಾಜ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು ತಕ್ಷಣ ದಾಖಲೆಗಳನ್ನು ನೀಡುವಂತೆ ತಾಕೀತು ಮಾಡಿದರು.
ನಗರಸಭೆಯ ಆಯುಕ್ತ ಮಹೇಂದ್ರಕುಮಾರ್, ನಗರಸಭೆ ಇಂಜಿನಿಯರ್ ಚಂದ್ರಶೇಖರ್, ನಗರ ಯೋಜನಾ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಗೋಪಿನಾಥ್ ಹಾಗೂ ನಗರಸಭೆಯ ಸಿಬ್ಬಂದಿ ಹಾಜರಿದ್ದು ತನಿಖೆಗೆ ಸಹಕಾರ ನೀಡಿದರು.
ಗಾಂಧಿನಗರದ 7ನೇ ತಿರುವಿನಲ್ಲಿ ಕಳಪೆ ಕಾಮಗಾರಿ ನಡೆದಿರುವುದಾಗಿ 2012ರ ಏಪ್ರಿಲ್ 5 ರಂದು ಕೆ. ಮುನಿಸ್ವಾಮಿ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಕಳಪೆ ಕಾಮಗಾರಿಗೆ ಆಗಿನ ನಗರಸಭೆ ಆಯುಕ್ತ ಡಿ.ಹೆಚ್. ರಾಯ್, ಕಾರ್ಯಪಾಲಕ ಅಭಿಯಂತರ ಗೋಪಿನಾಥ್, ನಟರಾಜ್, ನಗರಸಭೆ ಸದಸ್ಯ ವಿ.ಕೆ. ರಾಜೇಶ್, ಗುತ್ತಿಗೆದಾರರಾದ ಶಂಕರ್ ರೆಡ್ಡಿ, ಪ್ರಭಾಕರ ರೆಡ್ಡಿ ಮತ್ತು ಮೂರನೇ ವ್ಯಕ್ತಿಯಾಗಿ ಕಾಮಗಾರಿ ಪರಿಶೀಲಿಸಿದ ಕೋಲಾರದ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಲೋಕಾಯುಕ್ತ ತಾಂತ್ರಿಕ ವಿಭಾಗದ ಅಧಿಕಾರಿಗಳು ಪರಿಶೀಲನೆ ದೂರುದಾರರಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.