ಕೆಲಸ ಸ್ಥಗಿತಗೊಳಿಸಿ ಪೌರ ಕಾರ್ಮಿಕರ ಪ್ರತಿಭಟನೆ
ಚಿಕ್ಕಬಳ್ಳಾಪುರ: ಪೌರಾಯುಕ್ತರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದರಿಂದ ಕರ್ತವ್ಯವನ್ನು ನಿರ್ವಹಿಸಲು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಪೌರ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಕೆಲ ಸಮಯ ಸ್ಥಗಿತಗೊಳಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಪೌರಾಯುಕ್ತರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ತಮ್ಮನ್ನು ಪೌರಾಯುಕ್ತರೇ ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯ ಕಚೇರಿಯ ಮುಂದೆ ಧರಣಿ ಕುಳಿತು ಪೌರಾಯುಕ್ತರ ವಿರುದ್ಧ ಘೋಷಣೆಗಳನ್ನು ಕೂಗಿದ ಪೌರ ಕಾರ್ಮಿಕರು, ನಗರದ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ತಮಗೆ ಅನುಕೂಲ ಮಾಡಿಕೊಡಿ, ಸುಮ್ಮನೆ ಕಿರುಕುಳವನ್ನು ನೀಡಬೇಡಿ, ಸವಲತ್ತುಗಳನ್ನು ಒದಗಿಸಲು ಸತಾಯಿಸಬೇಡಿ. ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಒತ್ತಾಯಿಸಿದರು.
ಪೌರ ಕಾರ್ಮಿಕರ ಆರೋಪ: ಕಳೆದ ಕೆಲ ದಿನಗಳಿಂದ ಪೌರ ಕಾರ್ಮಿಕರು ಕೆಲಸ ಮಾಡಲು ನಗರಸಭೆಯಲ್ಲಿ ತೊಂದರೆಯಾಗುತ್ತಿದೆ. ನಗರದಲ್ಲಿ ಸ್ವಚ್ಛತೆ ಕಾಪಾಡಲು ಪೌರ ಕಾರ್ಮಿಕರಿಗೆ ಗ್ಲೌಸ್, ಬೂಟುಗಳು, ಪೊರಕೆ ಸೇರಿದಂತೆ ಕೆಲ ಸಲಕರಣೆಗಳ ಅಗತ್ಯವಿದ್ದು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುತ್ತಿದ್ದರೂ 10 ತಿಂಗಳಿಂದ ನಿರ್ಲಕ್ಷ್ಯವಹಿಸಿಕೊಂಡು ಬರಲಾಗುತ್ತಿದೆ.
ಇದರಿಂದ ಅನಿವಾರ್ಯವಾಗಿ ಕೆಲ ನೌಕರರು ಹಾಗೆಯೇ ಕಸ ವಿಲೇವಾರಿ ಕೆಲಸವನ್ನು ಮಾಡುತ್ತಿದ್ದು ಇನ್ನೂ ಕೆಲವರು ಸಲಕರಣೆಗಳನ್ನು ತಮ್ಮ ಸ್ವಂತ ಹಣದಿಂದ ಕೊಂಡುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಪೌರಸೇವಾ ನೌಕರರ ಸಂಘದ ರಾಜ್ಯ ಪರಿಷತ್ ಅಧ್ಯಕ್ಷ ಮುರಳಿ, ಕಳೆದ ನಾಲ್ಕೈದು ವರ್ಷಗಳಲ್ಲಿ ಮೃತಪಟ್ಟ ನೌಕರರ ಕುಟುಂಬದವರಿಗೆ ಇದುವರೆಗೂ ಪರಿಹಾರವನ್ನು ನೀಡಿಲ್ಲ.
ಕೆಲ ನೌಕರರಿಗೆ ನಿವೃತ್ತಿ ವೇತನ ನೀಡಿಲ್ಲ. ಹೀಗೆ ನೌಕರರ ಸಮಸ್ಯೆಗೆ ಸ್ಪಂದಿಸುವ ಕೆಲಸವಾಗುತ್ತಿಲ್ಲ.
ಇದಕ್ಕೆ ಪೌರಾಯುಕ್ತರ ನಿರ್ಲಕ್ಷ್ಯವೇ ಕಾರಣವಾಗಿದ್ದು ಅಗತ್ಯವಿರುವ ದಾಖಲೆಗಳಿಗೆ ಸಹಿ ಹಾಕದೇ ಸತಾಯಿಸಲಾಗುತ್ತಿದೆ. ನಮ್ಮ ಕೆಲಸವನ್ನು ಮಾಡಿಕೊಡಲು ದಿನಗಳನ್ನು ಮುಂದೂಡಲಾಗುತ್ತಿದೆ ಎಂದು ಟೀಕಿಸಿದರು.
ಈಗಲಾದರೂ ಪೌರಾಯುಕ್ತರ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲು ಅಗತ್ಯವಿರುವ ಸಲಕರಣೆಗಳನ್ನು ವಿತರಣೆ ಮಾಡುವುದಲ್ಲದೇ ಮೃತಪಟ್ಟ ನೌಕರರ ಕುಟುಂಬಕ್ಕೆ ಪರಿಹಾರ ಮತ್ತು ನಿವೃತ್ತರಿಗೆ ನಿವೃತ್ತಿ ವೇತನವನ್ನು ನೀಡಬೇಕೆಂದು ಆಗ್ರಹಿಸಿದರು.
ಪೌರ ಕಾರ್ಮಿಕರ ಪ್ರತಿಭಟನೆಯ ಬಗ್ಗೆ ತಿಳಿದುಕೊಂಡ ಪೌರಾಯುಕ್ತ ರುದ್ರಮುನಿ, ಪ್ರತಿಭಟನಾಕಾರರೊಂದಿಗೆ ಚರ್ಚಿಸಿ 15 ದಿನಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪೌರ ಕಾರ್ಮಿಕರಾದ ಮುನಿಕೃಷ್ಣ, ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

