ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಿಯಂತ್ರಿಸಿ
ಕ.ಪ್ರ.ವಾರ್ತೆ ಕೋಲಾರ ಜು.15
ಇಲ್ಲಿನ ತಾಲೂಕು ಕಚೇರಿಯಲ್ಲಿ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಬಡ ಜನರಿಂದ ಲಂಚ ಪಡೆದು ಕೆಲಸ ಮಾಡುತ್ತಿರುವುದನ್ನು ತಪ್ಪಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ(ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಬಣ) ಒತ್ತಾಯಿಸಿದೆ.
ಸೋಮವಾರ ಈ ಸಂಬಂಧ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ ಅವರಿಗೆ ಮನವಿ ಸಲ್ಲಿಸಿದ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ಹಾಗೂ ಪದಾಧಿಕಾರಿಗಳು ಪ್ರತಿನಿತ್ಯ ಸಾರ್ವಜನಿಕರು ದಲ್ಲಾಳಿಗಳ ಮೂಲಕ ಲಂಚ ನೀಡಿ ತಮ್ಮ ಕೆಲಸ ಮಾಡಿಕೊಳ್ಳುವಂತಾಗಿರುವುದರಿಂದ ಕೂಡಲೇ ಕಡಿವಾಣ ಹಾಕಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ನಾರಾಯಣ ಗೌಡ ಕೋಲಾರ ತಾಲೂಕು ಕಚೇರಿಯಲ್ಲಿ ಪ್ರತಿ ನಿತ್ಯದ ಕೆಲಸಗಳಿಗೂ ಬಡವರಿಂದ ಹಣ ಪಡೆಯುತ್ತಿದ್ದಾರೆ, ಲಂಚವಿಲ್ಲದೆ ಯಾವುದೇ ಕೆಲಸವಾಗುತ್ತಿಲ್ಲವೆಂದು ದೂರಿದರು.
ರೈತನ ಜಮೀನಿನ ಮಹತ್ವ ದಾಖಲೆಗಳು ಆರ್.ಆರ್.ಟಿ ವಿಭಾಗದಲ್ಲಿದ್ದು ಇಲ್ಲಿ ದಾಖಲೆ ಪಡೆಯಲು ಸರ್ಕಾರದ ದರ 6 ಗಳಿಗಿಂತ ಹೆಚ್ಚಿನ ಹಣ ಪಡೆಯಲಾಗುತ್ತಿದೆ.
ಹಣ ಪಾವತಿಸಿದ ನಂತರ ಮೂರು ದಿನಗಳೊಳಗಾಗಿ ಜಮೀನಿನ ಪತ್ರ ನೀಡಬೇಕೆಂದು ಸರ್ಕಾರದ ನಿಯಮವಿದ್ದರೂ ಲಂಚಕ್ಕಾಗಿ ಕೆಲಸ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಹಳೆಯ ಪಹಣಿಗೆ 100ರು. ಆರ್.ಆರ್.ಐ.ಎಲ್ಗೆ 250 ರು. ಮ್ಯೂಟೇಶನ್ಗೆ 150 ರು. ಕೊಟ್ಟರೆ ಮಾತ್ರ ಯಾವುದೇ ಅರ್ಜಿ ಇಲ್ಲದಿದ್ದರೂ ಅಂದೇ ದಾಖಲೆ ನೀಡುತ್ತಾರೆ. ದಲ್ಲಾಳಿಗಳ ಕಾಟ ಹೆಚ್ಚಾಗಿದೆ. ಹಳೆಯ ಪಹಣಿ ಪುಸ್ತಕಗಳಲ್ಲಿ ಒಬ್ಬೊರ ಜಮೀನಿನಲ್ಲಿ ಇನ್ನೊಬ್ಬರ ಹೆಸರನ್ನು ನಮೂದಿಸುತ್ತಾರೆಂಬ ದೂರುಗಳಿದ್ದು ತಕ್ಷಣ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಆರ್.ಆರ್.ಟಿ ವಿಭಾಗದಲ್ಲಿ ಸರ್ಕಾರದ ಕಾನೂನಿನನ್ವಯ ಒಂದು ಕಾಗದಕ್ಕೆ 6 ರು. ಮಾತ್ರ ಶುಲ್ಕ ಪಾವತಿಸಿಕೊಂಡು ರೈತರಿಗೆ ಹಳೆ ಪಹಣಿ ಮತ್ತು ಮ್ಯೂಟೇಶನ್ಗಳನ್ನು ಮೂರು ದಿನಗಳೊಳಗಾಗಿ ನೀಡುವುದು, ತಾಲೂಕು ಕಚೇರಿಯಲ್ಲಿ ಜೆರಾಕ್ಸ್ ಮಾಡಲು ವ್ಯವಸ್ಥೆ ಮಾಡಬೇಕು.
ಅಧಿಕಾರಿ ವರ್ಗ ಕಂಪ್ಯೂಟರ್ನಲ್ಲಿ ಮಾಡುವ ದೋಷಕ್ಕೆ ರೈತರನ್ನು ಹೊಣೆಗಾರರನ್ನಾಗಿ ಮಾಡಿ ತಿಂಗಳುಗಟ್ಟಲೆ ಎ.ಸಿ ಕಚೇರಿಗೆ ತಿದ್ದುಪಡಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು, ಕಂಪ್ಯೂಟರ್ ಪಹಣಿ ನೀಡಲು ಒಂದೇ ಕೇಂದ್ರವಿದ್ದು ಇನ್ನೊಂದು ಕೇಂದ್ರವನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದ್ದಾರೆ.
ಕೋಲಾರ ನಗರದ ಸುತ್ತ ಮುತ್ತಲಿರುವ ಸರ್ಕಾರಿ ಜಮೀನುಗಳಿಗೆ ತಮ್ಮ ಅಧಿಕಾರಿ ವರ್ಗ ಮತ್ತು ಭೂ ಮಾಫಿಯಾ ದವರ ಜೊತೆ ಸೇರಿ ಸರ್ಕಾರಿ ಜಮೀನುಗಳನ್ನು ಈಗಾಗಲೇ ಕಬಳಿಸಲು ಮುಂದಾಗಿದ್ದು, ಕೋಲಾರ ಸುತ್ತ ಮುತ್ತಲಿರುವ ಸರ್ಕಾರಿ ಜಮೀನುಗಳ ಬಗ್ಗೆ ಸಂಪೂರ್ಣ ವಿವರವನ್ನು ಕಚೇರಿಯ ಮುಂದೆ ಪ್ರಕಟಿಸಿ ಸರ್ಕಾರಿ ಜಮೀನು ಅನ್ಯರ ಪಾಲಾಗದಂತೆ ಕಟ್ಟಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಜಮೀನಿನ ಪೋಡಿ ಮತ್ತು ಸರ್ವೆ ಸ್ಕೆಚ್ಗೆ ಜನರ ರಕ್ತ ಹೀರುತ್ತಿದ್ದು, ಈ ಸ್ಕೆಚ್ನ್ನು 15 ದಿನಗಳ ಒಳಗೆ ರೈತರ ಸಿಗುವ ರೀತಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ವಿದ್ಯಾರ್ಥಿ ಮುಖಂಡ ಹೂವಳ್ಳಿ ನಾಗರಾಜ್, ಕೆಂಬೋಡಿ ಕೃಷ್ಣೇಗೌಡ, ಮೂರಂಡಹಳ್ಳಿ ಶಿವಾರೆಡ್ಡಿ, ಕ್ಯಾಸಂಬಳ್ಳಿ ಪ್ರತಾಪ್, ನೀಲಟೂರು ರಮೇಶ್, ತೆರ್ನಹಳ್ಳಿ ಆಂಜಿನಪ್ಪ, ಬಂಗನಾದಿ ನಾಗರಾಜ್ಗೌಡ, ನೀಲಕಂಠಪುರ ಮುನೇಗೌಡ, ಐತಂಡಹಳ್ಳಿ ಉದಯ್, ಮರಗಲ್ ಶ್ರೀನಿವಾಸ್ ಮತ್ತಿತ್ತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

