20ರಿಂದ ಕೈವಾರದಲ್ಲಿ ಗುರುಪೂಜೆ, ಸಂಗೀತೋತ್ಸವ
ಕೋಲಾರ: ಚಿಂತಾಮಣಿ ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕೈವಾರದ ಶ್ರೀ ಯೋಗ ನಾರೇಯಣ ಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಇದೇ ಜು.22ರಿಂದ 22ರವರೆಗೆ ಮೂರು ದಿನಗಳ ಕಾಲ ಸಂಗೀತೋತ್ಸವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಮಾರ್ಗದರ್ಶನದಲ್ಲಿ ನಡೆಯಲಿದ್ದು ಸುಮಾರು 72 ಗಂಟೆಗಳ ಕಾಲ ದೇಶದ ಸುಪ್ರಸಿದ್ಧ ಸಂಗೀತ ವಿದ್ವಾಂಸರಿಂದ ಗಾಯನ, ಹರಿಕಥೆ, ಬುರ್ರಕಥೆ, ಭಜನೆ ಏರ್ಪಡಿಸಲಾಗಿದೆ ಎಂದರು.
ಇದೊಂದು ಸಂಗೀತ ಜಾತ್ರೆಯಾಗಿದ್ದು ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸಲಿದ್ದಾರೆ, ಕಾರ್ಯಕ್ರಮದ ಯಶಸ್ವಿಗಾಗಿ ಶ್ರೀ ಯೋಗಿ ನಾರೇಯಣ ಮಠದಿಂದ ಸಕಲ ಸಿದ್ಧತೆ ನಡೆಯುತ್ತಿದ್ದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಹೆಚ್ಚಿನ ಜನರು ಆಗಮಿಸಿ ಶ್ರೀ ಯೋಗಿ ನಾರೇಯಣ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ಕಾಲಜ್ಞಾನಿಗಳು, ಸಂಗೀತ ಸಾಧಕರೂ ಆದ ಶ್ರೀ ಕೈವಾರ ತಾತಯ್ಯನವರು ರಚಿಸಿರುವ ತತ್ವ ಪದಗಳನ್ನು ಭಜನಾ ತಂಡಗಳು ವಿಭಿನ್ನ ರೀತಿಯಲ್ಲಿ ಹಾಡಲಿದ್ದಾರೆ, ಸುಮಾರು 3 ಸಾವಿರ ಭಜನ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪ್ರತಿ ದಿನ ಸುಮಾರು 25 ರಿಂದ 30 ಸಾವಿರ ಮಂದಿ ಭಕ್ತರು ಶ್ರೀ ಕ್ಷೇತ್ರಕ್ಕೆ ಬರುವ ನಿರೀಕ್ಷೆ ಇದೆ ಎಂದು ಭಾಗವತರ್ ತಿಳಿಸಿದರು.
ಜು.20 ರಂದು ಸಂಜೆ 5 ಗಂಟೆಗೆ ಚೆನ್ನೈನ ಪ್ರಸಿದ್ಧ ಕೊಳಲು ವಾದಕ ಸಿ.ಕೆ.ಪತಂಜಲಿ ಅವರಿಂದ ವೇಣುಗಾನ, ಬೆಂಗಳೂರಿನ ಮಾರುತಿ ಪ್ರಸಾದ್ ಗಾಯನ, ಚೆನ್ನೈನ ಎ. ಕನ್ಯಾಕುಮಾರಿ ಅವರಿಂದ ಪಿಟೀಲು ಸೋಲೋ ವಾದನ, ಅಭಿಷೇಕ್ ರಘುರಾಮ್ಗಾಯನ, ಹಾಗೂ ಬೆಂಗಳೂರಿನ ನೂಪುರ ಫೈನ್ ಆರ್ಟ್ಸ್ ಅಕಾಡೆಮಿಯಿಂದ ಹಾಗೂ ಸ್ಥಳೀಯ ಕಲಾವಿದರಿಂದ ಭರತನಾಟ್ಯ ಹಾಗೂ ಹರಿಕಥೆ, ಬುರ್ರಕಥೆ ನಡೆಯಲಿದೆ ಎಂದು ವಿವರಿಸಿದರು.
ಜು.21 ರಂದು ಬೆಂಗಳೂರಿನ ಶ್ರೀಯಸ್ ಕೃಷ್ಣ, ಶ್ವೇತ ಕೇಶವ್, ರಂಜನಿ ವಾಸುಕಿ, ಆಂಧ್ರಪ್ರದೇಶದ ಕಾಕಿನಾಡದ ಆಕೊಂಡಿ ಶ್ರೀನಿವಾಸರಾಜಾರಾವು , ಹೈದ್ರಾಬಾದಿನ ಶ್ರೀನಿಧಿ ತಂಡ, ಚೆನ್ನೈನ ಎನ್.ವಿಶ್ವೇಶ್ವರ್ ತಂಡದಿಂದ ಸಂಗೀತ ಸಿರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ದೆಹಲಿಯ ಸರಸ್ವತಿ ರಾಜಗೋಪಾಲನ್ ಅವರಿಂದ ವೀಣಾವಾದನ, ವಿಜಯವಾಡ ಮಲ್ಲಾದಿ ಸಹೋದರರಿಂದ ಗಾಯನ, ಡಾ.ಕದ್ರಿ ಗೋಪಾಲನಾಥ್ ಸ್ಯಾಕ್ಸೋಪೋನ್, ಬೆಂಗಳೂರಿನ ಚೇತನ ಸುಂದರೇಶ್ ತಂಡ ಭರತನಾಟ್ಯ, ರಾತ್ರಿ ತವಿಲ್ ವಿದ್ವಾನ ಪದ್ಮಶ್ರೀ ಡಾ. ಹೊಳೆಪಟ್ಟಿ ಎ.ಆರ್. ಸುಬ್ರಮಣ್ಯಂ ತಂಡದವರಿಂದ ನಾದಸ್ವರ ವಾದನ ಏರ್ಪಡಿಸಲಾಗಿದೆ ಎಂದರು. ಜು.22 ರಂದು ಗುರುಪೂರ್ಣಿಮೆ ಅಂಗವಾಗಿ ಬೆಳಗ್ಗೆ 10.30ಕ್ಕೆ ಶ್ರೀ ಯೋಗಿ ನಾರೇಯಣ ತಾತಯ್ಯನವರ ಗುರುಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುವುದು ಎಂದರು.
ಅಂದು ಸಂಜೆ ಬೆಂಗಳೂರು ವಿದ್ಯಾಭೂಷಣ, ಆರ್.ಕೆ. ಪದ್ಮನಾಭ್, ಗರಿಮೇಳ್ಳ ಬಾಲಕೃಷ್ಣ ಪ್ರಸಾದ್ ಅವರಿಂದ ಗಾಯನ, ಚೆನ್ನೈನ ಡಾ.ಎ.ಕೆ.ಸಿ ನಟರಾಜನ್ ತಂಡದವರಿಂದ ಕ್ಲಾರೊನೇಟ್ ವಾದನ, ಮುಂಬೈನ ಲಾವಣ್ಯ ಸುಬ್ಬಲಕ್ಷ್ಮಿ ತಂಡದವರಿಂದ ಸಾಕ್ಸೊಪೋನ್ ವಾದನ ಕಾರ್ಯಕ್ರಮವಿರುತ್ತದೆ ಎಂದು ವಿವರಿಸಿದರು.
ಶ್ರೀ ಕ್ಷೇತ್ರ ಕೈವಾರ ಶ್ರೀ ಯೋಗಿ ನಾರೇಯಣ ಮಠದ ವ್ಯವಸ್ಥಾಪಕ ಲಕ್ಷ್ಮೀನಾರಾಯಣ, ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ, ಸಂಗೀತಕಾರರಾದ ವೀರಪ್ಪ, ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

