ಲೋಕಸಭಾ ಚುನಾವಣೆಗೆ ಆಕಾಂಕ್ಷಿಗಳ ಲಾಬಿ ಶುರು
ಪಾ.ಶ್ರೀ. ಅನಂತರಾಮ್
ಕ.ಪ್ರ.ವಾರ್ತೆ ಕೋಲಾರ ಜು. 17
ಲೋಕಸಭಾ ಚುನಾವಣೆಗೆ ಇನ್ನು ಒಂದು ಕಾಲು ವರ್ಷ ಬಾಕಿ ಇರುವಾಗಲೇ ಕೋಲಾರ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಆರ್ಭಟ ಹೆಚ್ಚಾಗಿದೆ.
ಕಾಂಗ್ರೆಸ್ನಿಂದ ಕಳೆದ ಏಳೆಂಟು ತಿಂಗಳ ಹಿಂದೆಯೇ ಹಾಲಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪಯವರ ಹೆಸರನ್ನು ಜಿಲ್ಲಾ ಮುಖಂಡರು ಶಿಫಾರಸ್ಸು ಮಾಡಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ಸಿನ ಪ್ರಬಲ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪನವರೇ ಆಗಿರುವುದರಿಂದ ಹೈಕಮಾಂಡ್ ಕ್ಷೇತ್ರದ ಮುಖಂಡರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಸಾಧ್ಯತೆಗಳಿವೆ. ಕಳೆದ ವರ್ಷ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ವಿಚಾರವಾಗಿ ಮಾಹಿತಿ ಸಂಗ್ರಹಣೆಗಾಗಿ ಆಗಮಿಸಿದ್ದ ಕನ್ಯಾಕುಮಾರಿಯ ಕಾಂಗ್ರೆಸ್ ಯುವ ಶಾಸಕಿ, ಎಐಸಿಸಿಯ ವೀಕ್ಷಕಿಯಾದ ವಿಜಯ ಧರಣಿ ಅವರು ಕರೆದಿದ್ದ ಸಭೆಯಲ್ಲಿ ಕೋಲಾರ ಕ್ಷೇತ್ರದ ಎಂಡು ವಿಧಾನಸಭಾ ಕ್ಷೇತ್ರಗಳಿಂದ ಆಗಮಿಸಿದ್ದ ಪ್ರಮುಖ ಕಾಂಗ್ರೆಸ್ ಮುಖಂಡರು ಕೆ.ಹೆಚ್. ಮುನಿಯಪ್ಪನವರ ಹೆಸರನ್ನು ಅವಿರೋಧವಾಗಿ ಅನುಮೋದಿಸಿದ್ದನ್ನು ಸ್ಮರಿಸಬಹುದು. ಇನ್ನು ಬಿಜೆಪಿಯಿಂದ ಸ್ಪರ್ಧಿಸಲು ವಿಧಾನ ಪರಿಷತ್ತಿನ ಹಾಲಿ ಸದಸ್ಯ, ಎರಡು ಬಾರಿ ಎಂಪಿ ಚುನಾವಣೆಯಲ್ಲಿ ಸೋತಿರುವ ಡಿ.ಎಸ್. ವೀರಯ್ಯ ಪ್ರಬಲ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗುವ ನಿರೀಕ್ಷೆಯಿಂದಾಗಿ ಕೋಲಾರದ ಸಿ. ಬೈರೇಗೌಡ ಬಡಾವಣೆಯಲ್ಲಿ ಮನೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯಾದಲ್ಲಿ ಕೋಲಾರ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಿ ಕಾಂಗ್ರೆಸ್ನ್ನು ಸೋಲಿಸಬಹುದೆಂಬ ಲೆಕ್ಕಾಚಾರ ಹಾಕಿರುವ ವೀರಯ್ಯನವರು ಈಗಾಗಲೇ ಕ್ಷೇತ್ರ ಪ್ರವಾಸ ಆರಂಭಿಸಿದ್ದಾರೆ.
7ನೇ ಬಾರಿಗೆ ಸಂಸತ್ ಪ್ರವೇಶ: ತಮಗೆ ಕಾಂಗ್ರೆಸ್ ಹೊರತುಪಡಿಸಿ ಬೇರೆ ಪಕ್ಷಗಳ ಮುಖಂಡರ ಹಾಗೂ ಕಾರ್ಯಕರ್ತರ ಸಹಕಾರ ಸಿಗುವುದರಿಂದ 7ನೇ ಬಾರಿಗೆ ಸಂಸತ್ ಪ್ರವೇಶಕ್ಕೆ ಯತ್ನಿಸಿರುವ ಕೆ.ಹೆಚ್. ಮುನಿಯಪ್ಪನವರ ಕನಸು ಭಗ್ನಗೊಳಿಸಬಹುದೆಂದು ಭಾವಿಸಿರುವ ವೀರಯ್ಯ, ಬಿಜೆಪಿ ಜಿಲ್ಲೆಯಲ್ಲಿ ಒಡೆದು ಹೋಳಾಗಿರುವುದರಿಂದ ಕೊಂಚ ನಿರಾಸೆಗೊಳ್ಳಗಾಗಿದ್ದಾರಲ್ಲದೆ, ಕಳೆದ ಎರಡು ಚುನಾವಣೆಗಳಲ್ಲಿ ಸ್ವಪಕ್ಷದವರೇ ಕೈಕೊಟ್ಟು ಸೋಲಿಸಿರುವುದರಿಂದ ಈ ಬಾರಿ ಎಚ್ಚರಿಕೆಯಿಂದ ಜೆಜ್ಜೆ ಇಡಲು ನಿರ್ಧರಿಸಿದ್ದಾರೆ.
ಬಿಜೆಪಿಯಿಂದ 2014ರ ಲೋಕಸಭಾ ಚುನಾವಣೆಗೆ ತಾವೇ ಸ್ಪರ್ಧಿಸಬೇಕೆಂದು ಕೆಜಿಎಫ್ ಮಾಜಿ ಶಾಸಕ ವೈ. ಸಂಪಂಗಿ ಮೇಲೆ ಅಲ್ಲಿನ ಕಾರ್ಯಕರ್ತರು ಹಾಗೂ ಜಿಲ್ಲೆಯಲ್ಲಿನ ಹಿಂದುಳಿದ,ದಲಿತ, ಅಲ್ಪಸಂಖ್ಯಾತರ ಒಕ್ಕೂಟದವರು ಒತ್ತಾಯಿಸುತ್ತಿದ್ದಾರೆ.
ವರಿಷ್ಠರ ನಿರ್ಧಾರಕ್ಕೆ ಬದ್ಧ: ಸಂಪಂಗಿನನ್ನನ್ನು ಈಗಲೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದಲ್ಲಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರ ವಕ್ರ ದೃಷ್ಟಿಗೆ ಬೀಳಬೇಕಾಗುತ್ತದೆ ಹಾಗೂ ಬಿಜೆಪಿಯಲ್ಲೂ ಪರ-ವಿರೋಧ ಉಂಟಾಗುವುದರಿಂದ ಇನ್ನಷ್ಟು ದಿನ ಕಾದು ನಂತರ ಪಕ್ಷದ ವರಿಷ್ಠರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧನಾಗುತ್ತೇನೆಂದು ಸಂಪಂಗಿ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಇತ್ತ ಬಂಗಾರಪೇಟೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿಯ ಕೆಲ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಮಾಜಿ ಗೃಹ ಸಚಿವ ಆರ್. ಅಶೋಕ್ ಅವರು ನಾರಾಯಣಸ್ವಾಮಿ ಅವರಿಗೆ ಅಪ್ತರಾಗಿರುವುದರಿಂದ ಅವರ ಮೂಲಕ ವರಿಷ್ಠರಿಗೆ ಶಿಫಾರಸ್ಸು ಮಾಡಲು ಚಿಂತನೆ ನಡೆಸಿದ್ದಾರೆ.
ಆನೇಕಲ್ ಮಾಜಿ ಶಾಸಕ ಎ.ನಾರಾಯಣಸ್ವಾಮಿ ಅವರ ಹೆಸರು ಸಹ ಕೇಳಿ ಬರುತ್ತಿದ್ದು, ಬಿಜೆಪಿ ನಾಯಕರು ಯಾರಿಗೆ ಟಿಕೆಟ್ ನೀಡುತ್ತಾರೆಂಬುದನ್ನು ತಿಳಿಯಲು ಇನ್ನಷ್ಟು ದಿನ ಕಾಯಲೇಬೇಕಾಗಿದೆ. ಜೆಡಿಎಸ್ನಲ್ಲೂ ಕೆಲ ಅಕಾಂಕ್ಷಿಗಳು ಈಗಾಗಲೇ ತಾವೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಅವರು ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿ ಪಕ್ಷದಿಂದ ಇನ್ನು ಯಾವುದೇ ಅಭ್ಯರ್ಥಿ ಇತ್ಯರ್ಥವಾಗಿಲ್ಲವೆಂದು ಹೇಳಿದ್ದರೂ ಆಕಾಂಕ್ಷಿಗಳು ಮಾತ್ರ ಅತ್ಯಂತ ಉತ್ಸಾಹದಿಂದ ಕಾರ್ಯಕರ್ತರ ಜೋಡಣೆಗೆ ಮುಂದಾಗಿದ್ದಾರೆ.
ದೇವೇಗೌಡರ ಬಳಿ ಲಾಬಿ: ಜೆಡಿಎಸ್ ಮುಖಂಡ ಸಿ.ಎಂ. ಮುನಿಯಪ್ಪ, ಜಿ.ಪಂ ಸದಸ್ಯರಾದ ಎಸ್.ಬಿ. ಮುನಿವೆಂಕಟಪ್ಪ, ಮಂಗಮ್ಮ ಮುನಿಸ್ವಾಮಿ, ಕಳೆದ ಚುನಾವಣೆಯಲ್ಲಿ ಸೋತ ಚಂದ್ರಣ್ಣ, ಶ್ರೀನಿವಾಸಪುರ ಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಸೇರಿದಂತೆ ಹತ್ತಾರು ಮಂದಿ ಆಕಾಂಕ್ಷಿಗಳಾಗಿದ್ದು ಈ ಪೈಕಿ ಕೆಲವರು ಮಾಜಿ ಪ್ರಧಾನಿ ದೇವೇಗೌಡರ ಬಳಿ ಹೋಗಿ ಲಾಬಿ ನಡೆಸಲಾರಂಭಿಸಿದ್ದಾರೆ. ಬೆಂಗಳೂರು ಮಹಾನಗರಪಾಲಿಕೆಯ ಆಯುಕ್ತ ಸಿದ್ದಪ್ಪ, ಬೆಂಗಳೂರು ವಿವಿಯ ಮಾಜಿ ಕುಲಸಚಿವ ಹಾಲಿ ಪ್ರೊಫೆಸರ್ ಮೈಲಾರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಭರಣಿ ಅವರ ಹೆಸರು ಸಹ ಕೇಳಿ ಬರುತ್ತಿದ್ದು, ಜೆಡಿಎಸ್ನಿಂದ ಯಾರಿಗೆ ಟಿಕೆಟ್ ಸಿಗುತ್ತದೆ ಎಂದು ಈಗಲೇ ಹೇಳುವುದಕ್ಕೆ ಪೈಪೋಟಿ ಮತ್ತು ಲಾಬಿ ಅಡ್ಡಿಯಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

