ಅಧ್ಯಕ್ಷ ಸ್ಥಾನಕ್ಕೆ ಶಿಕ್ಷಕರಲ್ಲಿ ಪೈಪೋಟಿ
ಪಾ.ಶ್ರೀ. ಅನಂತರಾಮ್
ಕ.ಪ್ರ.ವಾರ್ತೆ ಕೋಲಾರ ಜು. 21
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಈ ಬಾರಿ ಶಿಕ್ಷಕರ ಪ್ರತಿನಿಧಿಯೇ ಆಯ್ಕೆ ಆಗಬೇಕೆಂದು ಶಿಕ್ಷಕರು ಹಠ ಹಿಡಿದು ತೀವ್ರ ಸೆಣಸಾಟ ನಡೆಸುತ್ತಿರುವುದರಿಂದ ಸರ್ಕಾರಿ ನೌಕರರ ಸಂಘದ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
ಕಳೆದ ಹತ್ತಾರು ವರ್ಷಗಳಿಂದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆರೇಳು ಇಲಾಖೆಗಳ ಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದು, ಈ ಬಾರಿ ಅತಿ ಹೆಚ್ಚು ಮತದಾರರನ್ನು ಒಳಗೊಂಡಿರುವ ಶಿಕ್ಷಕರ ಸಂಘಟನೆಗಳು ಹೇಗಾದರೂ ಮಾಡಿ ಜಿಲ್ಲಾ ನೌಕರರ ಸಂಘದ ಸಾರಥ್ಯ ವಹಿಸಬೇಕೆಂದು ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಜಿಲ್ಲಾದ್ಯಂತ ಶೇ.80 ವಿವಿಧ ಇಲಾಖೆಗಳಲ್ಲಿ ಚುನಾವಣೆ ಪ್ರಕ್ರಿಯೆ ಮುಗಿದು ಬಹುತೇಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ಜು.22 ರಂದು ಸೋಮವಾರ ಶಿಕ್ಷಣ ಇಲಾಖೆ ಸೇರಿದಂತೆ ನಾಲ್ಕೈದು ಇಲಾಖೆಗಳಿಗೆ ಚುನಾವಣೆ ನಡೆಯಲಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ರಾಜಕಾರಣಿಗಳಿಂತ ನಾವೇನು ಕಡಿಮೆ ಎಂಬಂತೆ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಅಧಿಕಾರಕ್ಕಾಗಿ ಕಸರತ್ತು: ಸರ್ಕಾರಿ ನೌಕರರಲ್ಲಿ ಬಹುತೇಕರು ಶಿಕ್ಷಕ ವರ್ಗಕ್ಕೆ ಸೇರಿದೆ. ಈ ಬಾರಿ ತಮ್ಮ ಪ್ರತಿನಿಧಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿಕೊಳ್ಳುವ ಮೂಲಕ ಜಿಲ್ಲಾ ಅಧ್ಯಕ್ಷರನ್ನಾಗಿಯೂ ತಮ್ಮ ಪ್ರತಿನಿಧಿಯನ್ನೇ ಆಯ್ಕೆ ಮಾಡುವುದಕ್ಕೆ ಹರ ಸಾಹಸ ಮಾಡುತ್ತಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನಡೆಯುತ್ತಿದ್ದ ಚುನಾವಣೆಯಲ್ಲಿ ಗುಂಪುಗಾರಿಕೆ ಇದ್ದರೂ ಅಷ್ಟೇನು ಪರಿಣಾಮ ಬೀರುತ್ತಿರಲಿಲ್ಲ, ಆದರೆ, ಈ ಬಾರಿ ಶಿಕ್ಷಕರೇ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾಗಬೇಕೆಂಬ ಪೈಪೋಟಿ ಎದುರಾಗಿರುವುದರಿಂದ ಗುಂಪುಗಾರಿಕೆ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಚುನಾವಣೆ ರಂಗೇರಿದೆ.
ಶಿಕ್ಷಕರು ಜಿಲ್ಲಾ ಸರ್ಕಾರಿ ನೌಕಕರ ಸಂಘದ ಅಧ್ಯಕ್ಷರಾಗುವುದನ್ನು ತಪ್ಪಿಸಲೆಂದು ಈ ಬಾರಿ 1473 ಶಿಕ್ಷಕ ಮತದಾರರ ಪೈಕಿ ಕೋಲಾರ ಕ್ಷೇತ್ರದಲ್ಲಿ 43 ಶಿಕ್ಷಕರನ್ನು ಸಂಘ ವಿರೋಧಿ ಚಟುವಟಿಕೆ ನೆಪದಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ರದ್ದು ಮಾಡಿರುವುದು ಹಾಗೂ ಕೆಲ ಶಿಕ್ಷಕರು ಸದಸ್ಯತ್ವ ಶುಲ್ಕ ಪಾವತಿಸಿಲ್ಲವೆಂಬ ನೆಪ ಹೇಳಿ ಮತದಾನದ ಹಕ್ಕು ಕಸಿದುಕೊಂಡಿರುವುದರಿಂದ ಕುಪಿತರಾಗಿರುವ ಶಿಕ್ಷಕರು ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ವಿರೋಧಿಗಳಿಗೆ ತಕ್ಕಪಾಠ ಕಲಿಸಲು ನಿರ್ಧರಿಸಿದ್ದಾರೆ. ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಪ್ರಧಾನಕಾರ್ಯದರ್ಶಿಗಳ ನಡುವೆ ಎರಡು ಗುಂಪುಗಳಾಗಿರುವುದಲ್ಲದೆ, ತೃತೀಯ ರಂಗದ ಹೆಸರಿನಲ್ಲಿ ಒಂದು ಗುಂಪು ಚುನಾವಣೆ ಎದುರಿಸುತ್ತಿರುವುದರಿಂದ ಜು.22 ರಂದು ನಡೆಯಲಿರುವ ಚುನಾವಣೆ ಎಲ್ಲರ ಗಮನ ಸೆಳೆದಿದೆ.
ಶಿಕ್ಷಕರಲ್ಲೇ ಮೂರು ಗುಂಪು: ಪ್ರಾಥಮಿಕ ಶಾಲೆಯಿಂದ ನಾಲ್ವರು ಆಯ್ಕೆ ಆಗಬೇಕಾಗಿದ್ದು, ಒಂದು ಗುಂಪಿನಲ್ಲಿ ನಾಗರಾಜು, ಶ್ರೀನಿವಾಸಮೂರ್ತಿ, ಸೋಮಶೇಖರ್ ಹಾಗೂ ಯೂನಸ್ ಖಾನ್, 2ನೇ ಗುಂಪಿನಿಂದ ಶ್ರೀಧರ್, ಚಂದ್ರಪ್ಪ, ರಾಜೇಶ್ ಮತ್ತು ಬಷೀರ್ ಖಾನ್, 3ನೇ ಗುಂಪಿನಿಂದ ಮುನಿರಾಜು, ಮಾಗೇರಿ ಶ್ರೀನಿವಾಸ್, ಇಬ್ರಾಹಿಂ ಹಾಗೂ ರತ್ನಮ್ಮ ಸ್ಪರ್ಧಿಸಿದ್ದಾರೆ.
ಈ ಬಾರಿ ಜಿಲ್ಲಾ ಅಧ್ಯಕ್ಷರಾಗಬೇಕೆಂದು ಆಶಯ ಹೊಂದಿರುವ ಶಿಕ್ಷಕರ ಮುಖಂಡರು ಶನಿವಾರ ಸಂಜೆ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ ಎನ್ನಲಾಗಿದೆ. ಅದೇ ರೀತಿ ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು ತಾಲೂಕಿನ ಶಿಕ್ಷಕರು ಸಹ ಆಯಾ ಕ್ಷೇತ್ರದ ಶಾಸಕರು ಹಾಗೂ ರಾಜಕಾರಣಿಗಳ ಬೆಂಬಲ ಪಡೆಯಲು ಯತ್ನಿಸಿದ್ದಾರೆ. ಅಲ್ಲದೆ, ಶಿಕ್ಷಕ ಮತದಾರರಿಗೆ ಭರ್ಜರಿ ಗಿಫ್ಟ್, ಕೈ ತುಂಬ ಕ್ಯಾಷ್ ನೀಡುವ ಮೂಲಕ ಮತದಾರರನ್ನು ಒಲಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆನ್ನಲಾಗಿದೆ.
ಕಾರಾಗೃಹ, ಕೆಜಿಐಡಿಗಳಲ್ಲೂ ಚುನಾವಣೆಯ ಕಾವು ಹೆಚ್ಚಾಗಿದೆ. ಆರೋಗ್ಯ ಇಲಾಖೆಯಿಂದ ನಡೆಯಬೇಕಾಗಿದ್ದ ಚುನಾವಣೆ ರದ್ದಾಗಿದೆ. ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಬೈರಪ್ಪ ಅವರು ಬೇರೆ ಇಲಾಖೆಗಳ ಚುನಾವಣೆ ನಂತರ ಆರೋಗ್ಯ ಇಲಾಖೆಗೆ ಚುನಾವಣೆ ನಡೆಸಲು ಸೂಚಿಸಿದ್ದಾರೆ. ಇದರಿಂದ ಸಂಘದಲ್ಲಿ ಎಲ್ಲವೂ ನೆಟ್ಟಗಿಲ್ಲವೆಂಬುದು ರುಜುವಾತಾದಂತಾಗಿದೆ.
ಶಿಕ್ಷಕರ ಪ್ರತಿನಿಧಿಗಳ ಆಯ್ಕೆ ಸುಸೂತ್ರವಾಗಿ ಆಗಿ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಮಹತ್ತರವಾದ ಪಾತ್ರ ವಹಿಸುವಂತಾದಲ್ಲಿ ಶಿಕ್ಷಕರ ಆಶಯ ಈಡೇರುವುದರಲ್ಲಿ ಸಂಶಯವಿಲ್ಲ. ಆದರೆ, ಸಂಘದ ಅಧಿಪತ್ಯಕ್ಕೆ ಲಾಬಿ ನಡೆಸುತ್ತಿರುವ ಇನ್ನಿತರ ಇಲಾಖೆಯ ಪ್ರತಿನಿಧಿಗಳು ಶಿಕ್ಷಕರಲ್ಲೇ ಒಡಕುಂಟು ಮಾಡಿ ಕೆಲವರನ್ನು ತಮ್ಮ ಗುಂಪಿಗೆ ಸೆಳೆದುಕೊಂಡಿರುವುದರಿಂದ ಚುನಾವಣೆ ಎಲ್ಲರ ಗಮನ ಸೆಳೆಯುವಂತಾಗಿದೆ.
ಮಕ್ಕಳ ಗತಿ ಏನು?: ಜು.22ರಂದು ನಡೆಯುವ ಸರ್ಕಾರಿ ನೌಕರರ ಸಂಘದ ಚುನಾವಣೆಗಾಗಿ ಶಿಕ್ಷಕ ಮತದಾರರಿಗೆ ಒಒಡಿ ನೀಡಲಾಗಿರುವುದರಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ತೊಂದರೆಯಾಗುವ ಸಾಧ್ಯತೆಗಳಿದ್ದು, ಡಿಡಿಪಿಐ ಹಾಗೂ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಯಾವ ರೀತಿ ಸಮಸ್ಯೆ ನಿವಾರಣೆ ಮಾಡುತ್ತಾರೆಂಬುದು ಸಹ ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

